ಕೋಲಾರ: ಕೋಲಾರದಲ್ಲಿ ಅದರಲ್ಲೂ ನರಸಾಪುರ, ವೇಮಗಲ್ ಹಾಗೂ ಮಾಲೂರು ಕೈಗಾರಿಕಾ ಪ್ರದೇಶದಲ್ಲಿ ಮಾದಕ ವಸ್ತುಗಳ ಘಾಟು ಹೆಚ್ಚುತ್ತಿದೆ.
ಹೊರರಾಜ್ಯಗಳಿಂದ ಪ್ರಮುಖವಾಗಿ ಉತ್ತರ ಭಾರತದಿಂದ ಬಂದು ಈ ಪ್ರದೇಶದ ಕಾರ್ಖಾನೆ, ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಕೆಲ ಕಾರ್ಮಿಕರು ಗಾಂಜಾ ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದೆ.
ನರಸಾಪುರ ಹೋಬಳಿಯ ಬೆಳ್ಳೂರು ಗ್ರಾಮದ ಬಾಡಿಗೆ ಮನೆಯೊಂದರ ಮೇಲೆ ಅಬಕಾರಿ ಇಲಾಖೆ ಸಿಬ್ಬಂದಿ ಸೆ.19ರಂದು ರಾತ್ರಿ ನಡೆಸಿದ ದಾಳಿಯಲ್ಲಿ ಒಡಿಶಾದ ಇಬ್ಬರು ಕಾರ್ಮಿಕರು ಗಾಂಜಾ ಶೇಖರಿಸಿಟ್ಟುಕೊಂಡು ಮಾರಾಟ ಮಾಡುತ್ತಿರುವ ಪ್ರಕರಣ ಬಯಲಾಗಿದೆ. ಈ ಕಾರ್ಮಿಕರು ನರಸಾಪುರ ಕೈಗಾರಿಕಾ ಪ್ರದೇಶದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಮಾರಾಟಕ್ಕೆಂದು ಗಾಂಜಾವನ್ನು ಸಣ್ಣಸಣ್ಣ ಪೊಟ್ಟಣಗಳಲ್ಲಿ ತುಂಬಿಟ್ಟುಕೊಂಡಿದ್ದರು.
ಮೂರು ದಿನಗಳ ಹಿಂದೆ ಕೋಲಾರ ನಗರದ ಹೊರವಲಯದ ಟಮಕ ಕೈಗಾರಿಕಾ ಪ್ರದೇಶದ ಬಾಲಾಜಿ ರೈಸ್ ಮಿಲ್ ಮುಂಭಾಗ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಹರಿಯಾಣ ಹಾಗೂ ರಾಜಸ್ಥಾನದ ಎಂಟು ಮಂದಿಯನ್ನು ವಿಶೇಷ ಪೊಲೀಸ್ ತಂಡ ಬಂಧಿಸಿತ್ತು. ಈ ಖದೀಮರು ಆಯಾಯ ರಾಜ್ಯಕ್ಕೆ ಹೋದಾಗ ವಾಹನದ ನಂಬರ್ ಪ್ಲೇಟ್ ಬದಲಾಯಿಸುತ್ತಿದ್ದರು. ಕೋಲಾರ ಗ್ರಾಮಾಂತರ ಪೊಲೀಸರು ಆಂಧ್ರದ ಮದನಪಲ್ಲಿಯ ವ್ಯಕ್ತಿಯೊಬ್ಬನನ್ನು ಬಂಧಿಸಿ 3 ಕೆ.ಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ. ಈ ಮೂರು ಪ್ರಕರಣಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ 31 ಕೆ.ಜಿಗೂ ಅಧಿಕ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಸಾಗಣೆ, ಮಾರಾಟ, ಬಳಕೆ ಪ್ರಕರಣ ಗಮನಿಸಿದರೆ ಕೆಲ ತಿಂಗಳಿಂದ ಕಡಿಮೆ ಆಗಿದ್ದ ಡ್ರಗ್ಸ್ ಮಾಫಿಯಾ ಜಾಲ ಜಿಲ್ಲೆಯಲ್ಲಿ ಮತ್ತೆ ತಲೆ ಎತ್ತಿರುವಂತಿದೆ.
ಮಾದಕ ವಸ್ತು ಹಾಗೂ ಅಮಲು ಪದಾರ್ಥಗಳ ನಿಯಂತ್ರಣಾ ಕಾಯ್ದೆ (ಎನ್‌ಡಿಪಿಎಸ್) ಅಡಿಯಲ್ಲಿ ದಾಖಲಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ 137 ಪ್ರಕರಣ ದಾಖಲಾಗಿವೆ. 202 ಆರೋಪಿಗಳನ್ನು ಬಂಧಿಸಲಾಗಿದೆ. ₹ 2.35 ಕೋಟಿ ಮೌಲ್ಯದ 260 ಕೆ.ಜಿ ಮಾದಕ ವಸ್ತು ವಶಕ್ಕೆ ಪಡೆದಿದ್ದಾರೆ. 2025ರಲ್ಲಿ ಜುಲೈ ವರೆಗೆ 35 ಪ್ರಕರಣ ದಾಖಲಾಗಿದ್ದು 51 ಮಂದಿಯನ್ನು ಬಂಧಿಸಲಾಗಿದೆ. ಇದರಲ್ಲಿ ಗಾಂಜಾ ಸಂಬಂಧಿ ಪ್ರಕರಣಗಳ ಸಂಖ್ಯೆಯೇ ಹೆಚ್ಚಾಗಿವೆ. ಕಳೆದ ಆಗಸ್ಟ್ ಹಾಗೂ ಈ ತಿಂಗಳಲ್ಲಿ ಮತ್ತಷ್ಟು ಪ್ರಕರಣ ಸೇರ್ಪಡೆಯಾಗಿವೆ.
ವಿವಿಧ ರಾಜ್ಯಗಳಿಂದ ವಲಸೆ ಬಂದಿರುವ ಕಾರ್ಮಿಕರು ಕೂಡ ತಂಬಾಕು ಉತ್ಪನ್ನಗಳು ಸೇರಿದಂತೆ ಮಾದಕ ವಸ್ತುಗಳಿಗೆ ವ್ಯಸನಿಗಳಾಗುತ್ತಿದ್ದಾರೆ.
ನರಸಾಪುರ ಹಾಗೂ ಕೋಲಾರದ ಸುತ್ತಮುತ್ತ ಹಲವೆಡೆ ಹೊರರಾಜ್ಯದ ಕಾರ್ಮಿಕರು ಮನೆಗಳನ್ನು ಬಾಡಿಗೆ ಪಡೆದು ವಾಸಿಸುತ್ತಿದ್ದಾರೆ. ಹಲವರು ಪೇಯಿಂಗ್ ಗೆಸ್ಟ್‌ಗಳಲ್ಲಿ (ಪಿ.ಜಿ) ಇದ್ದಾರೆ. ಆದರೆ, ಸ್ಥಳೀಯರು ಹಿಂದೆಮುಂದೆ ನೋಡದೆ, ಸರಿಯಾಗಿ ವಿಚಾರಿಸದೆ ಬಾಡಿಗೆ ಮನೆ ನೀಡುತ್ತಿದ್ದಾರೆ. ನಂತರವೂ ಏನು ಚಟುವಟಿಕೆ ನಡೆಸುತ್ತಿದ್ದಾರೆ ಎಂಬುದನ್ನು ಗಮನಿಸುತ್ತಿಲ್ಲ. ಹೀಗಾಗಿ, ಪೊಲೀಸರು ಹಾಗೂ ಮನೆ ಮಾಲೀಕರು ಗಮನ ಇಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
‘ಮಾದಕ ವಸ್ತು ಮುಕ್ತ ಜಿಲ್ಲೆ’ಯನ್ನಾಗಿಸಬೇಕೆಂಬ ಪಣ ತೊಟ್ಟಿರುವ ಜಿಲ್ಲಾಧಿಕಾರಿ ಎಂ.ಆರ್.ರವಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಮತ್ತಷ್ಟು ಕಠಿಣ ಕ್ರಮ ಕೈಗೊಂಡು, ಡ್ರಗ್ಸ್ ಮಾಫಿಯಾ ಮಟ್ಟಹಾಕಬೇಕು ಎಂದು ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಡ್ರಗ್ಸ್ ಮಾಫಿಯಾ ಜಾಲ ಮತ್ತೆ ಚುರುಕು? ಮೂರು ದಿನಗಳಲ್ಲಿ 31 ಕೆ.ಜಿಗೂ ಅಧಿಕ ಗಾಂಜಾ ವಶ ಹೊರರಾಜ್ಯಗಳ ಒಟ್ಟು 11 ಮಂದಿ ಆರೋಪಿಗಳ ಬಂಧನ
Cut-off box - ಕೋತಿ ತಾನು ಕೆಡದೆ ಇಡೀ ವನ ಕೆಡಿಸಿತು! ನರಸಾಪುರ ಕೈಗಾರಿಕಾ ಪ್ರದೇಶದ ವಿವಿಧ ಕಂಪನಿ ಕಾರ್ಖಾನೆಗಳಲ್ಲಿ ಹೊರರಾಜ್ಯದ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಹರಿಯಾಣ ರಾಜ್ಯಸ್ಥಾನ ಬಿಹಾರ ಉತ್ತರ ಪ್ರದೇಶ ಮಧ್ಯ ಪ್ರದೇಶ ಒಡಿಶಾ ಪಶ್ಚಿಮ ಬಂಗಾಳ ಅಸ್ಸಾಂ ಸೇರಿದಂತೆ ಹಲವು ರಾಜ್ಯಗಳಿಂದ ಬಂದು ಸ್ಟೋರ್ ಕೀಪಿಂಗ್ ಸ್ವಚ್ಛತೆ ಸೆಕ್ಯೂರಿಟಿ ಸೇರಿದಂತೆ ವಿವಿಧ ಸ್ವರೂಪದ ಕೆಲಸದಲ್ಲಿ ತೊಡಗಿದ್ದಾರೆ. ಇವರಲ್ಲಿ ಕೆಲ ಕಾರ್ಮಿಕರು ಹಣದ ದುರಾಸೆಗೆ ತಮ್ಮ ರಾಜ್ಯದಿಂದ ಗಾಂಜಾ ತಂದು ಇಲ್ಲಿ ಮಾರಾಟ ಮಾಡಿ ತಾವು ಕೆಡುವುದಲ್ಲದೆ ಸ್ಥಳೀಯರನ್ನೂ ಕೆಡಿಸುತ್ತಿದ್ದಾರೆ. ಕೋತಿ ತಾನು ಕೆಡದೆ ಇಡೀ ವನ ಕೆಡಿಸಿತು ಎಂಬ ಮಾತಿನಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.