
ಡ್ರಗ್ಸ್
(ಐಸ್ಟೋಕ್ ಪ್ರಾತಿನಿಧಿಕ ಚಿತ್ರ)
ಕೋಲಾರ: ಕೆಜಿಎಫ್ ಹಾಗೂ ಕೋಲಾರ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ 279 ಪ್ರಕರಣ ದಾಖಲಿಸಿ, 253 ಡ್ರಗ್ಸ್ ಪೆಡ್ಲರ್‌ಗಳ ಹೆಡೆಮುರಿ ಕಟ್ಟಲಾಗಿದೆ.
ತಮಿಳುನಾಡು, ಆಂಧ್ರ ಪ್ರದೇಶ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿರುವ ಹಾಗೂ ರಾಜಧಾನಿ ಬೆಂಗಳೂರಿಗೆ ಹತ್ತಿರವಿರುವ ಜಿಲ್ಲೆಯಲ್ಲಿ ಡ್ರಗ್ಸ್ ಜಾಲ ಯಾವ ರೀತಿ ಇದೆ ಎಂಬುದಕ್ಕೆ ಈ ಅಂಕಿಅಂಶಗಳೇ ಸಾಕ್ಷಿ. ಪೊಲೀಸರೇನೋ ಡ್ರಗ್ಸ್ ಪೆಡ್ಲರ್‌ಗಳ ಬೆನ್ನು ಬಿದ್ದಿದ್ದಾರೆ. ಇಷ್ಟಾಗಿಯೂ ನಶೆಯ ದಂಧೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ, ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್ ಮುಂದೆ ಇರುವ ಸವಾಲುಗಳಲ್ಲಿ ಡ್ರಗ್ಸ್ ದಂಧೆ ನಿಯಂತ್ರಣ ಪ್ರಮುಖವಾದದು.
ಗಾಂಜಾ ಮಾರಾಟ ಮತ್ತು ಸಾಗಾಟ ಅವ್ಯಾಹತವಾಗಿ ಮುಂದುವರಿದಿದೆ. ಎರಡು ದಿನಗಳ ಹಿಂದೆ ಶ್ರೀನಿವಾಸಪುರ ಪೊಲೀಸರು ಆಂಧ್ರದ ನಾಲ್ವರು ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. ಸಿಂಥೆಟಿಕ್ ಡ್ರಗ್ಸ್ ಹಾವಳಿಯೂ ಆಗಾಗ್ಗೆ ಕಂಡುಬರುತ್ತಿದೆ. ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆಯಡಿ (ಎನ್‌ಡಿಪಿಎಸ್) ಪ್ರಕರಣ ದಾಖಲಿಸಿ ಮೂರು ವರ್ಷಗಳಲ್ಲಿ 482 ಕೆ.ಜಿ ಗಾಂಜಾ ಹಾಗೂ 888 ಗ್ರಾಂ ಸಿಂಥೆಟಿಕ್ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.
ಬಹುತೇಕ ಡ್ರಗ್ಸ್ ಪೆಡ್ಲರ್‌ಗಳು ಹೊರರಾಜ್ಯದವರೇ ಆಗಿದ್ದು ಜಿಲ್ಲೆಯೊಳಗೆ ನುಸುಳಿ ವಿದ್ಯಾರ್ಥಿಗಳು, ಯುವಜನತೆ, ಕಾರ್ಮಿಕರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿರುವುದು ಕಂಡುಬರುತ್ತಿದೆ. ಕೈಗಾರಿಕಾ ಪ್ರದೇಶದಲ್ಲಿ ನೆಲೆಸಿರುವ ಹೊರರಾಜ್ಯದ ಕಾರ್ಮಿಕರು ತಮ್ಮ ಊರುಗಳಿಂದ ಖಾಸಗಿ ಟ್ರಾವೆಲ್ಸ್‌ಗಳ ಮೂಲಕ ಗಾಂಜಾ ಪಾರ್ಸೆಲ್ ತರಿಸಿಕೊಳ್ಳುತ್ತಿರುವುದು ಗೊತ್ತಾಗಿದೆ. ಫೋನ್ ಪೇ ಮೂಲಕ ಹಣ ಪಾವತಿಸುತ್ತಾರೆ. ಫ್ಲಿಪ್‌ಕಾರ್ಟ್, ಅಮೆಜಾನ್‌ನಲ್ಲಿ ಬರುವ ಪೊಟ್ಟಣಗಳ ಮಾದರಿಯಲ್ಲಿ ಆ ಪೊಟ್ಟಣ ಇರುತ್ತದೆ. ಹೀಗಾಗಿ, ಯಾರಿಗೂ ಅನುಮಾನ ಬರುವುದಿಲ್ಲ.
ಜಿಲ್ಲೆಯಲ್ಲಿ ಗಾಂಜಾ ಘಾಟು ಇದ್ದರೂ ಸಿಂಥೆಟಿಕ್ ಡ್ರಗ್ಸ್ ಹಾವಳಿ ಇರಲಿಲ್ಲ. ಆದರೆ, ಕಳೆದ ವರ್ಷ 888 ಗ್ರಾಂ ಸಿಂಥೆಟಿಕ್ ಡ್ರಗ್ಸ್ ಪತ್ತೆಯಾಗಿರುವುದು ಆತಂಕಕಾರಿ ವಿಚಾರ.
ಗಾಂಜಾ ಮಾರಾಟ ಮತ್ತು ಸಾಗಾಟ ಮಾಡುವವರ ಮೇಲೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿ ಬಂಧಿಸುತ್ತಿದ್ದಾರೆ. ಕೋಲಾರ, ಮುಳಬಾಗಿಲು, ಶ್ರೀನಿವಾಸಪುರ ತಾಲ್ಲೂಕುಗಳಲ್ಲಿ ಗಾಂಜಾ ಪ್ರಕರಣಗಳು ಹೆಚ್ಚುತ್ತಿವೆ. ಮಾದಕ ವಸ್ತು ಖರೀದಿಸಿ ಬಳಕೆ ಮಾಡುವವರ ಮೇಲೂ ಪೊಲೀಸರು ನಿಗಾ ಇಟ್ಟು ಪ್ರಕರಣ ದಾಖಲಿಸುತ್ತಿದ್ದಾರೆ. ಡ್ರಗ್ಸ್ ಜಾಲವನ್ನು ಬುಡಸಮೇತ ಕಿತ್ತು ಹಾಕಿ, ಡ್ರಗ್ಸ್ ಮುಕ್ತ ಜಿಲ್ಲೆ ಮಾಡಬೇಕೆಂಬುದು ಸಾರ್ವಜನಿಕರ ಒತ್ತಾಯ ಕೂಡ.
ವಿದ್ಯಾರ್ಥಿಗಳ ಸೆಳೆಯಲು ಪೆಡ್ಲರ್‌ಗಳು ಸುತ್ತಾಟ
ವಿದ್ಯಾರ್ಥಿಗಳನ್ನು ವ್ಯಸನಿಗಳನ್ನಾಗಿಸಿ ಹಣ ಮಾಡಲು ಡ್ರಗ್ಸ್ ಪೆಡ್ಲರ್‌ಗಳು ಕಾಲೇಜುಗಳ ಸುತ್ತಮುತ್ತ ಅಲೆಯುತ್ತಿರುವ ವಿಚಾರವನ್ನು ನಗರದ ಕಾಲೇಜುಗಳ ಕೆಲ ಪ್ರಾಂಶುಪಾಲರು, ಅಧ್ಯಾಪಕರು ‘ಪ್ರಜಾವಾಣಿ’ ಜೊತೆ ಹಂಚಿಕೊಂಡಿದ್ದಾರೆ.
ಮೊಬೈಲ್ ಸಿಮ್, ಕೂಲಿಂಗ್ ಗ್ಲಾಸ್ ಮಾರುವ ನೆಪದಲ್ಲಿ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಗಾಂಜಾ ಖರೀದಿಸಲು ಪ್ರೇರೇಪಿಸುತ್ತಿರುವ ಮಾಹಿತಿ ಬಂದಿದೆ.
ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚಿದ ನಶೆ!
ಜಿಲ್ಲೆಯ ಕೈಗಾರಿಕಾ ಪ್ರದೇಶಗಳಾದ ವೇಮಗಲ್, ನರಸಾಪುರ ಹಾಗೂ ಮಾಲೂರಿನಲ್ಲಿ ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟದ ಹೆಚ್ಚಿನ ಪ್ರಕರಣಗಳು ಕಂಡುಬರುತ್ತಿವೆ. ಹೊರರಾಜ್ಯಗಳಿಂದ ಪ್ರಮುಖವಾಗಿ ಉತ್ತರ ಭಾರತದಿಂದ ಬಂದು ಈ ಪ್ರದೇಶದ ಕಾರ್ಖಾನೆ, ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಕೆಲ ಕಾರ್ಮಿಕರು ಡ್ರಗ್ಸ್ ಮಾರಾಟ ಮಾಡುತ್ತಿದ್ದಾರೆ.
ನರಸಾಪುರ ಹೋಬಳಿಯ ಬೆಳ್ಳೂರು ಗ್ರಾಮದ ಬಾಡಿಗೆ ಮನೆಯೊಂದರ ಮೇಲೆ ಅಬಕಾರಿ ಇಲಾಖೆ ಸಿಬ್ಬಂದಿ ಈಚೆಗೆ ನಡೆಸಿದ್ದ ದಾಳಿಯಲ್ಲಿ ಒಡಿಶಾದ ಇಬ್ಬರು ಕಾರ್ಮಿಕರು ಗಾಂಜಾ ಶೇಖರಿಸಿಟ್ಟುಕೊಂಡು ಮಾರಾಟ ಮಾಡುತ್ತಿದ್ದ ಪ್ರಕರಣ ಬಯಲಾಗಿತ್ತು. ಗಾಂಜಾವನ್ನು ಸಣ್ಣಸಣ್ಣ ಪೊಟ್ಟಣಗಳಲ್ಲಿ ತುಂಬಿಟ್ಟುಕೊಂಡಿದ್ದರು. ಕೈಗಾರಿಕಾ ಪ್ರದೇಶದಲ್ಲಿ ಡ್ರಗ್ಸ್ ಬಳಕೆ ಹೆಚ್ಚುತ್ತಿದ್ದು ನಿಯಂತ್ರಣಕ್ಕೆ ತರಬೇಕೆಂದು ಸ್ಥಳೀಯರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.
ಜಾಲ ಕಡಿತಕ್ಕೆ ಪ್ರಯತ್ನ
ಡ್ರಗ್ಸ್ ಸರಬರಾಜು ಮಾಡುತ್ತಿರುವ ಜಾಲದ ಸಂಪರ್ಕ ಕಡಿತಗೊಳಿಸಲು ಕೋಲಾರ, ಕೆಜಿಎಫ್ ಪೊಲೀಸರು ಪಯತ್ನ ನಡೆಸುತ್ತಿದ್ದಾರೆ. ಡ್ರಗ್ಸ್ ದುಷ್ಪರಿಣಾಮಗಳ ಬಗ್ಗೆ ಶಾಲಾ, ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸುತ್ತಿದ್ದಾರೆ. ಶಾಲಾ ಕಾಲೇಜುಗಳಲ್ಲಿನ ‘ಡ್ರಗ್ಸ್ ನಿಯಂತ್ರಣ ಸಮಿತಿ’ ರಚಿಸಲಾಗಿದೆ. ಕೈಗಾರಿಕಾ ಪ್ರದೇಶದಲ್ಲಿರುವ ಎಲ್ಲಾ ಕೈಗಾರಿಕೆ ಹಾಗೂ ಕಂಪನಿಗಳಲ್ಲಿ ‘ಮಾದಕ ವಸ್ತುಗಳ ನಿಯಂತ್ರಣ ಸಮಿತಿ’ ರಚನೆ ಮಾಡುವಂತೆ ಜಿಲ್ಲಾಧಿಕಾರಿ ಎಂ.ಆರ್.ರವಿ ಸೂಚಿಸಿದ್ದರು. ಆದರೆ, ಅವು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತಿವೆ ಎಂಬುದರ ಬಗ್ಗೆ ಪೊಲೀಸರು ನಿಗಾ ಇಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.