
ಮುಳಬಾಗಿಲು: ತಾಲ್ಲೂಕಿನ ನಂಗಲಿ ಕೆರೆಯ ದುಗ್ಗೆಮ್ಮ ದೇವಿಗೆ 21 ವರ್ಷಗಳ ನಂತರ ದೀಪೋತ್ಸವ ಹಾಗೂ ತೆಪ್ಪೋತ್ಸವ ಕಾರ್ಯಕ್ರಮ ಭಾನುವಾರ ನಡೆದವು.
ತಾಲ್ಲೂಕಿನ ನಂಗಲಿ ಕೆರೆ ಐದು ವರ್ಷಗಳ ಹಿಂದೆ ತುಂಬಿ ಕೋಡಿ ಹರಿಯುವುದಕ್ಕೂ ಮುನ್ನ ಸುಮಾರು 16 ವರ್ಷಗಳಾದರೂ ಮಳೆಗೆ ಕೆರೆ ತುಂಬಿರಲಿಲ್ಲ. ಐದು ವರ್ಷಗಳ ಹಿಂದೆ ಕೆರೆ ತುಂಬಿ ಕೋಡಿ ಹರಿದರೂ ಕೊರೊನಾ ಲಾಕ್‌ಡೌನ್ ಪರಿಣಾಮ ದೀಪೋತ್ಸವ ಹಾಗೂ ತೆಪ್ಪೋತ್ಸವ ಕಾರ್ಯಕ್ರಮ ಆಚರಿಸಿರಲಿಲ್ಲ.
ಹಾಗಾಗಿ ಭಾನುವಾರ ಸುಮಾರು 21 ವರ್ಷಗಳ ನಂತರ ನಂಗಲಿ, ಎನ್.ಕೊತ್ತೂರು, ಕೆರಸಿಮಂಗಲ ಹಾಗೂ ಮರವೇಮನೆ ಗ್ರಾಮಗಳ ನೂರಾರು ಮಂದಿ ಮಹಿಳೆಯರು ತಂಬಿಟ್ಟಿನ ದೀಪಗಳನ್ನು ತಲೆಗಳ ಮೇಲೆ ಹೊತ್ತು ದುಗ್ಗೆಮ್ಮ ದೇವಿಗೆ ಸಲ್ಲಿಸಿದರು. ಸಂಪ್ರದಾಯದಂತೆ ನಂಗಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಶ್ರೀಧರ್ ನೇತೃತ್ವದಲ್ಲಿ ತೆಪ್ಪೋತ್ಸವ ನಡೆಯಿತು.
ದೀಪೋತ್ಸವ ಹಾಗೂ ತೆಪ್ಪೋತ್ಸವ ಹಿನ್ನೆಲೆ ಗ್ರಾಮಗಳಲ್ಲಿ ಹಬ್ಬದ ವಾತಾವರಣ ಮಾರ್ಪಟ್ಟಿತ್ತು. ನಂಗಲಿ ಕೆರೆ ಕಟ್ಟೆಯ ಮೇಲೆ ಸಾವಿರಾರು ಮಂದಿ ದುಗ್ಗೆಮ್ಮ ದೇವಿ ದರ್ಶನ ಪಡೆದರು.
ದೀಪೋತ್ಸವ ಹಾಗೂ ತೆಪ್ಪೋತ್ಸವ ಅಂಗವಾಗಿ ದುಗ್ಗೆಮ್ಮ ದೇವರ ಮೂಲ ವಿಗ್ರಹವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು ಹಾಗೂ ವಿವಿಧ ಪೂಜಾ ಕಾರ್ತಕ್ರಮಗಳು ನೆರವೇರಿದವು. ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಸಿ.ಶ್ರೀಧರ್, ಶೇಷಾದ್ರಿ, ಲಕ್ಷ್ಮಯ್ಯ, ಮುರುಗ, ಅಶ್ವಿನಿ ಪ್ರಸಾದ್, ಶಿವಾಜಿ, ನಾಗೇಶ್, ರಾಮಣ್ಣ, ವೆಂಕಟರಾಮಪ್ಪ, ತ್ಯಾಗರಾಜ್, ಮೋಹನ್, ರಮೇಶ್, ದೇವರಾಜ್, ನಾಗೇಶ್, ಕೃಷ್ಣಪ್ಪ, ಚಂಗಲರಾಯಪ್ಪ, ಯರ್ರಪ್ಪ, ಬಾಬು, ಮಂಜುನಾಥ್, ನಂದ, ಬಾಲಕೃಷ್ಣ, ಶ್ರೀಧರ್ ಶಾಸ್ತ್ರಿ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.