ADVERTISEMENT

ತಾತನ ಮನೆ ಶಾಲೆಯಾಗಿ‌ರುವುದು ಖುಷಿಯ ವಿಚಾರ: ಡಿವಿಜಿ ಮೊಮ್ಮಗ ನಟರಾಜನ್

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 8:11 IST
Last Updated 24 ಜನವರಿ 2026, 8:11 IST
ಮುಳಬಾಗಿಲು ನಗರದಲ್ಲಿ ಡಿವಿಜಿ ಶಾಲೆಗೆ ಭೇಟಿ ನೀಡಿದ್ದ ಡಿವಿಜಿ ಮೊಮ್ಮಗ ನಟರಾಜನ್ ದಂಪತಿಯನ್ನು ಶಾಲೆ ವತಿಯಿಂದ ಸನ್ಮಾನಿಸಿದರು.
ಮುಳಬಾಗಿಲು ನಗರದಲ್ಲಿ ಡಿವಿಜಿ ಶಾಲೆಗೆ ಭೇಟಿ ನೀಡಿದ್ದ ಡಿವಿಜಿ ಮೊಮ್ಮಗ ನಟರಾಜನ್ ದಂಪತಿಯನ್ನು ಶಾಲೆ ವತಿಯಿಂದ ಸನ್ಮಾನಿಸಿದರು.   

ಮುಳಬಾಗಿಲು: ‘ಪ್ರತಿಯೊಬ್ಬರಿಗೂ ತಾತನ ಮನೆ, ತೋಟ, ಮತ್ತಿತರ ಸ್ಥಳಗಳ ಮೇಲೆ ತೀವ್ರ ಆಸಕ್ತಿ ಇರುತ್ತದೆ. ಹಾಗೆ ನಮ್ಮ ತಾತನ ಮನೆ ಶಾಲೆಯಾಗಿದ್ದು, ಅದನ್ನು ನವೀಕರಿಸಿ ಸ್ಮಾರಕವನ್ನಾಗಿರಿಸಿರುವುದು ಖುಷಿಯ ವಿಚಾರ’ ಎಂದು ಡಿ.ವಿ.ಗುಂಡಪ್ಪ ಅವರ ಮೊಮ್ಮಗ ಕೆ.ನಟರಾಜನ್ ಅಭಿಪ್ರಾಯಪಟ್ಟರು.

ನಗರದ ಡಿವಿಜಿ ಶಾಲೆಗೆ ಬುಧವಾರ ಗುಂಡಪ್ಪ ಅವರ ಮೊಮ್ಮಗ ನಟರಾಜನ್ ಭೇಟಿ ನೀಡಿ ಮಾತನಾಡಿದರು.

ಶತಮಾನದ ಹಿಂದೆ ನಮ್ಮ ಪೂರ್ವಿಕರು ಈ ಮನೆಯನ್ನು ಶಾಲೆಗೆ ಬಿಟ್ಟು ಕೊಟ್ಟಿದ್ದಾರೆ. ನಮ್ಮ ಮುತ್ತಜ್ಜ (ಡಿವಿಜಿ) ಅವರ ತಂದೆಯವರು ಸಹ ಇಲ್ಲಿನ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ 100 ವರ್ಷಗಳು ಕಳೆದಿವೆ. ಅಂತವರು ಬಾಳಿದ ಮನೆ ಇಂದು ನೂರಾರು ಮಂದಿ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿ ಶಿಕ್ಷಣ ನೀಡುತ್ತಿರುವ ಕೇಂದ್ರವಾಗಿರುವುದು ಸಾರ್ಥಕವಾಗುತ್ತಿದೆ ಎಂದು ಹೇಳಿದರು.

ADVERTISEMENT

ಮಂಕುತಿಮ್ಮನ ಕಗ್ಗ ಮನುಷ್ಯನ ಜೀವನಕ್ಕೆ ಕನ್ನಡಿಯಾಗಿದೆ. ಇದರಲ್ಲಿರುವ ತತ್ವಗಳನ್ನು ಎಲ್ಲರೂ ಬದುಕಿನಲ್ಲಿ ರೂಡಿಸಿಕೊಳ್ಳಿ. ಕಗ್ಗ ಕೇವಲ ಸಾಹಿತ್ಯವಲ್ಲ. ಡಿವಿಜಿ ಅವರು ಜೀವನದಲ್ಲಿ ಅಳವಡಿಸಿಕೊಂಡಿದ್ದ ಸಾರ ಎಂದರು.

ತಹಶೀಲ್ದಾರ್ ವಿ.ಗೀತಾ ಮಾತನಾಡಿ, ಡಿವಿಜಿಯವರು ಹುಟ್ಟಿದ ತಾಲ್ಲೂಕಿನಲ್ಲಿ ನಾವು ಹುಟ್ಟಿರುವುದು ಪುಣ್ಯ. ಹಾಗಾಗಿ ಅವರ ತತ್ವ ಸಿದ್ಧಾಂತಗಳನ್ನು ಎಲ್ಲರೂ ಪಾಲಿಸಿದಾಗ ಮಾತ್ರ ಅವರಿಗೆ ನಾವು ಗೌರವ ನೀಡಿದಂತಾಗುತ್ತದೆ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ರಾಮಚಂದ್ರಪ್ಪ, ಜ್ಯೋತಿ ನಟರಾಜನ್, ಕೌಸರ್ ರಮಾ, ನರಸಿಂಹ ಮೂರ್ತಿ, ಮುಖ್ಯ ಶಿಕ್ಷಕ ಸೊಣ್ಣಪ್ಪ, ಸುಬ್ರಮಣಿ, ಎಸ್.ಕೆ.ಪದ್ಮಾವತಿ, ಶಾರದಮ್ಮ, ವಿ.ಕವಿತ, ಬಿ.ವಿ.ಭಾಗ್ಯಶ್ರೀ, ಎಂ.ದೀಪ್ತಿ, ಪದ್ಮಾವತಿ, ಕೆ.ಬಿ.ಪಾರ್ವತಮ್ಮ, ಭಾರತಿ, ಜಯಂತಿ, ಪುಷ್ಪ, ಪ್ರತಿಭಾ, ಸಲ್ಮಾ, ಅರುಣ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.