
ಬಂಗಾರಪೇಟೆ: ತಾಲ್ಲೂಕಿನ ದೋಣಿಮಡಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಕರಸನಹಳ್ಳಿ ಗ್ರಾಮದ ರೈತರೊಬ್ಬರ ಟೊಮೆಟೊ ತೋಟದ ಮೇಲೆ ಐದು ಕಾಡಾನೆಗಳು ದಾಳಿ ನಡೆಸಿ ಬೆಳೆ ನಾಶಗೊಳಿಸಿವೆ.
ಸಾಕರಸನಹಳ್ಳಿಯ ಬಸಪ್ಪ ಅವರ ಹೊಲದಲ್ಲಿ ಟೊಮೆಟೊ ಬೆಳೆ ಕಟಾವಿಗೆ ಬಂದಿತ್ತು. ಸೋಮವಾರ ರಾತ್ರಿ ಆನೆಗಳು ದಾಳಿ ಮಾಡಿ ಬೆಳೆ ನಾಶ ಮಾಡಿದ ಹಿನ್ನೆಲೆ ಬಸಪ್ಪ ಅವರಿಗೆ ಸುಮಾರು ₹50 ಸಾವಿರ ನಷ್ಟವಾಗಿದೆ.
ಕೆಲವು ತಿಂಗಳಿಂದ ನೆಮ್ಮದಿಯಾಗಿದ್ದ ರೈತರಿಗೆ ಮತ್ತೆ ಆನೆ ದಾಳಿಯಿಂದ ನೆಮ್ಮದಿ ಕೆಡಸಿದೆ. ಜೊತೆಗೆ ಅರಣ್ಯ ಇಲಾಖೆ ಅಧಿಕಾರಿಗಳ ನಿದ್ದೆ ಕೆಡಸಿದೆ.
ಮಂಗಳವಾರ ವಲಯ ಅರಣ್ಯಾಧಿಕಾರಿ ಶ್ರೀ ಲಕ್ಷ್ಮಿ ನೇತೃತ್ವದ ತಂಡ ಆನೆಗಳ ಜಾಡು ಪತ್ತೆ ಮಾಡಿ, ಮತ್ತೆ ತಮಿಳುನಾಡಿನತ್ತ ಹಿಮ್ಮೆಟ್ಟಿಸಲು ಶ್ರಮಿಸುತ್ತಿದ್ದಾರೆ. ಈಗಾಗಲೇ ಆನೆಗಳು ತಮಿಳುನಾಡಿನಿಂದ ರಾಜ್ಯದತ್ತ ಬಾರದಂತೆ ಸುತ್ತಲೂ ಸೋಲಾರ್ ಫೆನ್ಷಿಂಗ್ ಅಳವಡಿಸಲಾಗಿದೆ. ಆದರೂ ಹೇಗೆ ಬಂದವು ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.
ಮಂಗಳವಾರ ರಾತ್ರಿ ಮತ್ತೆ ಆನೆಗಳು ಗ್ರಾಮಗಳತ್ತ ಬಾರದಂತೆ ಸಿಬ್ಬಂದಿ ಕಾವಲು ಕಾಯುತ್ತಿದ್ದಾರೆ. ಹಾಗಾಗಿ ರಾತ್ರಿ ವೇಳೆ ಗ್ರಾಮಸ್ಥರು ಯಾರೂ ಹೊರಗಡೆ ಮತ್ತು ತಮ್ಮ ಜಮೀನುಗಳತ್ತ ಹೋಗಬೇಡಿ ಎಂದು ಜಾಗೃತಿ ಮೂಡಿಸುತ್ತಿದ್ದಾರೆ. ಬೆಳೆ ನಾಶವಾದ ರೈತ ಬಸಪ್ಪ ಅವರಿಗೆ ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.
ಮಲ್ಲಪ್ಪಬೆಟ್ಟದ ತಪ್ಪಲಿನ ಕಾಡಿನಲ್ಲಿ ನಾಲ್ಕು ಆನೆಗಳು ಬೀಡು ಬಿಟ್ಟಿದ್ದು ತಮಿಳುನಾಡಿನ ಕಾಡಿಗೆ ಶೀಘ್ರ ಓಡಿಸಲು ಕ್ರಮ ಕೈಗೊಳ್ಳಲಾಗುವುದು.– ನಾಗೇಶ್, ಉಪವಲಯ ಅರಣ್ಯಾಧಿಕಾರಿ ತೊಪ್ಪನಹಳ್ಳಿ ಉಪವಲಯ
ಟೊಮೆಟೊ ಬೆಳೆಗೆ ಉತ್ತಮ ಬೆಲೆಯಿದೆ. ಆದರೆ ಆನೆ ದಾಳಿಯಿಂದ ಬೆಳೆ ನಾಶವಾಗಿದೆ. ಇದಕ್ಕೆ ಸರ್ಕಾರದಿಂದ ಪರಿಹಾರ ಸಿಗುತ್ತದೆಯಾದರೂ ಸಕಾಲದಲ್ಲಿ ಮಾರುಕಟ್ಟೆ ಬೆಲೆಯಷ್ಟು ನೀಡುವುದಿಲ್ಲ.– ಬಸಪ್ಪ, ರೈತ