ಶ್ರೀನಿವಾಸಪುರ: ಎತ್ತಿನಹೊಳೆ ಯೋಜನೆಯಡಿ ಜಿಲ್ಲೆಗೆ ಕುಡಿಯುವ ನೀರು ಪೂರೈಸಲು ಪೈಪ್‌ಲೈನ್ ಕಾಮಗಾರಿಯನ್ನು ಶೀಘ್ರವೇ ಪ್ರಾರಂಭಿಸಲಾಗುವುದು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ತಿಳಿಸಿದ್ದಾರೆ.
‘ಗುರುತ್ವ ಪೈಪ್‌ಲೈನ್ ಪ್ಯಾಕೇಜ್-3 ಮತ್ತು 4 ಹಾಗೂ ಕೋಲಾರ ಫೀಡರ್ ಪೈಪ್‌ಲೈನ್ ಪ್ಯಾಕೇಜ್ 4 ಮತ್ತು 5 ಹಾಗೂ ಶ್ರೀನಿವಾಸಪುರ ಫೀಡರ್ ಪೈಪ್‌ಲೈನ್ ಪ್ಯಾಕೇಜ್-1 ರಿಂದ 3ರ ಕಾಮಗಾರಿಗಳನ್ನು ಪ್ರಾರಂಭಿಸಲು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅನುಮತಿ ನೀಡಿ ಆದೇಶ ಹೊರಡಿಸಿದ್ದಾರೆ’ ಎಂದಿದ್ದಾರೆ.
‘ಜೂನ್ ತಿಂಗಳಿನಲ್ಲಿ ಸದರಿ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂಬುದಾಗಿ ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ. ಕೋಲಾರ ಜಿಲ್ಲೆಯ ಬಹು ದಿನಗಳ ಬೇಡಿಕೆಯನ್ನು ಡಿ.ಕೆ.ಶಿವಕುಮಾರ್ ನೆರವೇರಿಸಿದ್ದಾರೆ. ಜಿಲ್ಲೆಯ ಎಲ್ಲಾ ಸಾರ್ವಜನಿಕರ ಪರವಾಗಿ ಜಲಸಂಪನ್ಮೂಲ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಹೇಳಿದ್ದಾರೆ.
ಈ ವಿಚಾರವನ್ನು ಮಾರ್ಚ್ 4ರಂದು ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದ ವೆಂಕಟಶಿವಾರೆಡ್ಡಿ, ಎತ್ತಿನಹೊಳೆ ಯೋಜನೆಯಡಿ ಕೋಲಾರ ಜಿಲ್ಲೆಗೆ ಕುಡಿಯುವ ನೀರನ್ನು ಪೂರೈಸಲು ಶೀಘ್ರವಾಗಿ ಪೈಪ್‌ಲೈನ್ ಕಾಮಗಾರಿಯನ್ನು ಪ್ರಾರಂಭಿಸಲು ಜಲಸಂಪನ್ಮೂಲ ಸಚಿವರಲ್ಲಿ ಪ್ರಸ್ತಾಪಿಸಿದ್ದರು. ಈ ಸಂಬಂಧ ಶೀಘ್ರ ಕ್ರಮವಹಿಸಲಾಗುವುದು ಎಂದು ಶಿವಕುಮಾರ್ ಭರವಸೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.