ADVERTISEMENT

ಶೈಕ್ಷಣಿಕ ಸ್ವಾವಲಂಬನೆಗೆ ಅನುಭವ ಕಲಿಕೆ ಪೂರಕ: ಡೀನ್‌ ಪ್ರಕಾಶ್‌ ಅಭಿಪ್ರಾಯ

ತೋಟಗಾರಿಕೆ ಮಹಾವಿದ್ಯಾಲಯದ ಡೀನ್‌ ಪ್ರಕಾಶ್‌ ಅಭಿಪ್ರಾಯ‌

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2021, 15:05 IST
Last Updated 18 ಮಾರ್ಚ್ 2021, 15:05 IST

ಕೋಲಾರ: ‘ವಿದ್ಯಾರ್ಥಿಗಳು ತೋಟಗಾರಿಕೆಯಲ್ಲಿ ಪ್ರಾಯೋಗಿಕ ಅನುಭವ ಪಡೆದು ರೈತರ ಸಂಕಷ್ಟ ಅರಿಯಲು ಹಾಗೂ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಿ ಪ್ರೇರೇಪಿಸಲು ತೋಟಗಾರಿಕೆ ಅನುಭವ ಕಲಿಕೆ ಕಾರ್ಯಕ್ರಮ ಸಹಕಾರಿ’ ಎಂದು ತೋಟಗಾರಿಕೆ ಮಹಾವಿದ್ಯಾಲಯದ ಡೀನ್‌ ಬಿ.ಜಿ.ಪ್ರಕಾಶ್‌ ಅಭಿಪ್ರಾಯಪಟ್ಟರು.

ತೋಟಗಾರಿಕೆ ಮಹಾವಿದ್ಯಾಲಯವು ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅನುಭವದ ಕಲಿಕೆ ಕಾರ್ಯಕ್ರಮಲ್ಲಿ ಮಾತನಾಡಿ, ‘ಈ ಕಾರ್ಯಕ್ರಮವು ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಸ್ವಾವಲಂಬಿಯಾಗಿಸಲು ಪೂರಕವಾಗಿದೆ’ ಎಂದು ತಿಳಿಸಿದರು.

‘ಅನುಭವ ಕಲಿಕೆ ಕಾರ್ಯಕ್ರಮದಡಿ ವಿದ್ಯಾರ್ಥಿಗಳು ನರ್ಸರಿಯಲ್ಲಿ ನಿಂಬೆಯ ಬಾಲಾಜಿ ತಳಿ ಮತ್ತು ನುಗ್ಗೆ ಗಿಡಗಳನ್ನು ಬೆಳೆದು ಪೋಷಿಸಿ ಮಾರಾಟ ಮಾಡಿದ್ದಾರೆ. ಹಣ್ಣಿನ ಬೆಳೆಗಳಾದ ಮಾವು, ಹಲಸು, ಸೀಬೆ, ನೇರಳೆ ಮತ್ತು ಸೀತಾಫಲ ಬೆಳೆಗಳ ಕಸಿ ಗಿಡಗಳನ್ನು ಬೆಳೆಸಿ ಮಾರಾಟ ಮಾಡಿ ಲಾಭ ಗಳಿಸಿದ್ದಾರೆ’ ಎಂದು ಹೇಳಿದರು.

ADVERTISEMENT

‘ಸಂರಕ್ಷಿತ ಬೇಸಾಯದಲ್ಲಿ ಇಂಗ್ಲೀಷ್ ಸೌತೆಕಾಯಿ ಹಾಗೂ ಕ್ಯಾಪ್ಸಿಕಮ್‌ ಬೆಳೆದು ಮಾರುಕಟ್ಟೆಯಲ್ಲಿ ಉತ್ತಮ ಆದಾಯ ಗಳಿಸಬಹುದು. ಹಲವು ತರಕಾರಿ ಮತ್ತು ಹಣ್ಣುಗಳನ್ನು ಸಂಸ್ಕರಣೆ ಮಾಡುವುದರ ಜತೆಗೆ ಹಲಸಿನ ಮೌಲ್ಯವರ್ಧನೆ, ಕಲ್ಲಂಗಡಿ ಜ್ಯೂಸ್ ಸೇರಿದಂತೆ ಹಲವು ಉತ್ಪನ್ನ ತಯಾರಿಸಿ ಹೆಚ್ಚಿನ ಅನುಭವ ಪಡೆದುಕೊಂಡಿದ್ದಾರೆ’ ಎಂದರು.

‘ವಿದ್ಯಾರ್ಥಿಗಳು ತೋಟಗಾರಿಕೆ ಬೆಳೆಗಳ ರೋಗ ನಿರ್ವಹಣೆಗೆ ಜೈವಿಕ ನಿಯಂತ್ರಕಗಳಾದ ಟ್ರೈಕೋಡರ್ಮ ಮತ್ತು ಸುಡೋಮೋನಾಸ್‌ ಉತ್ಪಾದಿಸಿ ರೈತರಿಗೆ ಕೊಟ್ಟು ಸಲಹೆ ನೀಡಿದ್ದಾರೆ. ರೈತರು ತೋಟಗಾರಿಕೆ ಬೆಳೆಗಳಲ್ಲಿ ಕೀಟಗಳ ನಿರ್ವಹಣೆಗೆ ಮೋಹಕ ಬಲೆಗಳನ್ನು ಬಳಸಬೇಕು’ ಎಂದು ಸಲಹೆ ನೀಡಿದರು.

ಕ್ಷೇತ್ರಾನುಭವ: ‘ಮಹಾವಿದ್ಯಾಲಯದಲ್ಲಿ ಪ್ರತಿ ವರ್ಷ ಅಂತಿಮ ವರ್ಷದ ಸ್ನಾತಕ ಪದವಿ ವಿದ್ಯಾರ್ಥಿಗಳನ್ನು ಸ್ವಉದ್ಯಮದಾರರಾಗಿ ಮಾಡಲು ಕಾರ್ಯತಂತ್ರ ರೂಪಿಸಲಾಗುತ್ತಿದೆ. ಪ್ರಾಯೋಗಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಓದಿನ ಜತೆಗೆ ಕ್ಷೇತ್ರಾನುಭವ ಪಡೆದು ರೈತರು ಕೃಷಿಯಲ್ಲಿ ಅನುಭವಿಸುತ್ತಿರುವ ಸಮಸ್ಯೆಗಳು ಹಾಗೂ ಅವುಗಳಿಗೆ ಪರಿಹಾರೋಪಾಯ ಕಲ್ಪಿಸಲು ನೆರವಾಗುತ್ತದೆ’ ಎಂದು ವಿವರಿಸಿದರು.

‘ಪಠ್ಯಪುಸ್ತಕಗಳಿಗಿಂತ ಈ ಅನುಭವ ಕಲಿಕೆ ಕಾರ್ಯಕ್ರಮವು ತೋಟಗಾರಿಕೆ ಕ್ಷೇತ್ರದಲ್ಲಿ ಪ್ರಾಯೋಗಿಕ ಅನುಭವ ಪಡೆಯಲು ಪೂರಕವಾಗಿದೆ. ಜತೆಗೆ ಬೆಳೆ ಕ್ಷೇತ್ರದ ನಿರ್ವಹಣೆಯಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ’ ಎಂದು ವಿದ್ಯಾರ್ಥಿಗಳು ಅಭಿಪ್ರಾಯಪಟ್ಟರು.

ತೋಟಗಾರಿಕೆ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಅಶ್ವತ್ಥ ನಾರಾಯಣರೆಡ್ಡಿ, ಟಿ.ಬಿ.ಮಂಜುನಾಥರೆಡ್ಡಿ, ಎಚ್.ಸಿ.ಕೃಷ್ಣ, ಎ.ಎಂ.ರಾಜೇಶ್‌, ಕೆ.ಎಸ್.ನಾಗರಾಜ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.