
ಕೋಲಾರ: ರೈತರು ಹಾಗೂ ಅರಣ್ಯ ಇಲಾಖೆ ಭೂಮಿಯ ಸಂಘರ್ಷ ವಿಷಯವಾಗಿ ಪ್ರಮುಖರಿಂದ ಬೆಂಗಳೂರಿನ ವಿಧಾನಸೌಧದ ಶಾಸಕರ ಭವನದಲ್ಲಿ ಚರ್ಚಿಸಲಾಗಿದೆ.
ಕಾನೂನು ಬದ್ಧವಾಗಿ ಭೂಮಿಯ ಹಕ್ಕನ್ನು ಪಡೆದುಕೊಂಡಿದ್ದ ರೈತರನ್ನು ಕಳೆದ ನಾಲ್ಕು ವರ್ಷಗಳಿಂದ ಅರಣ್ಯ ಇಲಾಖೆಯು ದೌರ್ಜನ್ಯದಿಂದ ಒಕ್ಕಲೆಬ್ಬಿಸಿ ತೊಂದರೆ ನೀಡುತ್ತಿರುವ ವಿಚಾರದ ಬಗ್ಗೆ ಸಭೆಯಲ್ಲಿ ಅರಣ್ಯ ಇಲಾಖೆಯ ಕಿರುಕುಳಕ್ಕೆ ಒಳಗಾಗಿದ್ದ ರಾಜ್ಯದ ರೈತರು, ರೈತ ಹೋರಾಟಗಾರರು, ಬುದ್ಧಿಜೀವಿಗಳು, ವಕೀಲರು ಪಾಲ್ಗೊಂಡಿದ್ದರು.
ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಮಾತನಾಡಿ, ‘ಭೂಮಿಯ ಒಡೆತನ ರಾಜ್ಯ ಸರ್ಕಾರಕ್ಕೆ ಸೇರಿದ್ದು. ಕಾಲದಿಂದ ಕಾಲಕ್ಕೆ ವಿವೇಚನಾ ದೃಷ್ಟಿಯಿಂದ ಭೂಮಿಯನ್ನು ರೈತರಿಗೆ ಮತ್ತು ಇತರೆ ಅಭಿವೃದ್ಧಿಯ ಭಾಗವಾಗಿ ಹಂಚಿಕೆ ಮಾಡಲಾಗುತ್ತದೆ. ಹಂಚಿಕೆಯಲ್ಲಿ ಅರಣ್ಯದವರು ಒಬ್ಬರಾಗಿರುತ್ತಾರೆ. ಅರಣ್ಯ ಇಲಾಖೆಗೆ ಹಂಚಿಕೆಯಾದ ಭೂಮಿ ನೂರಾರು ವರ್ಷಗಳ ಕಾಲ ಏಕೆ ಮುಟೇಶನ್ ಆಗಿಲ್ಲ? ಮೊದಲ ನೋಟಿಫಿಕೇಷನ್ ಆದ ನಂತರ ಅದರಲ್ಲಿ ಎಷ್ಟು ಸರ್ವೇ ನಂಬರ್ಗಳು, ಎಷ್ಟು ಭೂಮಿಯ ವಿಸ್ತೀರ್ಣ ,ಅದರಲ್ಲಿ ಏನೆಲ್ಲ ಇವೆ? ಫಲಾನುಭವಿಗಳು ಎಷ್ಟಿದ್ದಾರೆ? ಈ ಎಲ್ಲ ವಿವರಗಳಿಗಾಗಿ ಫಾರೆಸ್ಟ್ ಸೆಟಲ್‌ಮೆಂಟ್ ಆಫೀಸರ್ ಅನ್ನು ನೇಮಕ ಮಾಡಿ ಅವರ ಶಿಫಾರಸ್ಸಿನ ಮೇರೆಗೆ ಬಿ ಮತ್ತು ಸಿ ಸ್ಟೇಟ್‌ಮೆಂಟ್ ಆಗಬೇಕಾಗಿತ್ತು .ನೂರಾರು ವರ್ಷಗಳು ಕಳೆದರೂ ಈ ಪ್ರಕ್ರಿಯೆಗಳನ್ನು ನಿರ್ಲಕ್ಷಿಸಿದ್ದ ಅರಣ್ಯ ಇಲಾಖೆಯವರು ಕಂದಾಯ ಮತ್ತು ಅರಣ್ಯ ಇಲಾಖೆಯ ಮೂಲ ನಕಾಶೆಗಳನ್ನು ಬದಿಗಿಟ್ಟು ವರ್ಕ್ ಪ್ಲಾನ್ ನಕಾಶೆಗಳ ಆಧಾರದಲ್ಲಿ ರೈತರನ್ನು ಒಕ್ಕಲುಬ್ಬಿಸುವುದನ್ನು ನೋಡಿ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ’ ಎಂದರು.
ಸ್ವಾತಂತ್ರ್ಯ ಮೊದಲು ಭೂಮಿ ಹಂಚಿಕೆ, ಸ್ವಾತಂತ್ರ್ಯ ನಂತರ ಭೂ ಮಂಜೂರಾತಿ ಮೂಲಕ ರೈತರಿಗೆ ಭೂಮಿ ಸಿಕ್ಕಿದೆ .1972ರ ತನಕ ಲ್ಯಾಂಡ್ ಗ್ರಾಂಡ್ ಕಮಿಟಿ ಗಳು ಕಾನೂನು ಬದ್ಧವಾಗಿರಲಿಲ್ಲ. 1974ರ ಭೂ ಸುಧಾರಣೆ ಕಾಯ್ದೆ ಪರಿಣಾಮಕಾರಿಯಾದ ತೀರ್ಮಾನಗಳು ಯಾರು ಭೂಮಿಯ ಉಳುಮೆ ಮಾಡುತ್ತಾರೋ ಅವರಿಗೆ ಭೂಮಿಯ ಒಡೆತನ ಸಿಕ್ಕಿತು ಎಂದು ಹೇಳಿದರು.
ಅರಣ್ಯ ಇಲಾಖೆಯವರು ತಮ್ಮಗಿರುವ ಭೂಮಿಯಲ್ಲಿ ಗಿಡ ನೆಟ್ಟು ಅದನ್ನು ಬೆಳೆಸಿ ಪರಿಸರ ಸಂರಕ್ಷಿಸುವ ಕೆಲಸ ಬಿಟ್ಟು ಸರ್ವೆ ಮತ್ತು ರೆವಿನ್ಯೂ ಇಲಾಖೆಯ ಕೆಲಸಗಳನ್ನು ಕೈಗೆತ್ತಿಕೊಂಡಿದ್ದಾರೆ. ಶಾಸನಬದ್ಧವಾಗಿ ಭೂಮಿ ಮಂಜೂರು ಮಾಡಿದ ಅಧಿಕಾರಿಗಳು ರೈತರಿಗೆ ರಕ್ಷಣೆ ನೀಡಬೇಕಾಗಿತ್ತು. ಆದರೆ ಇವತ್ತಿನ ಪರಿಸ್ಥಿತಿಯಲ್ಲಿ ಇವರು ಮತ್ತು ಪೊಲೀಸ್ ನವರು ಅರಣ್ಯ ಇಲಾಖೆಯವರ ನೆರವಿಗೆ ನಿಂತಿರುವುದು ದುರ್ದೈವದ ಸಂಗತಿ ಆಗಿದೆ ಎಂದರು.
ಅರಣ್ಯ ಇಲಾಖೆಯ ಮುಂದೆ ನಾವು ಭಿಕ್ಷೆ ಬೇಡಬೇಕಾಗಿಲ್ಲ. ರೈತರು ಭಿಕ್ಷಕರಲ್ಲ. ನಾವು ಹೋರಾಟ ಮಾಡಬೇಕು. ವ್ಯವಸ್ಥೆ ಹಾಳಾಗಿದ್ದು, ನಾವುಗಳು ರಾಜಕೀಯ ಭ್ರಮೆಯಿಂದ ಹೊರಬರಬೇಕು. ಸುಧಾರಣಾ ಮತ್ತು ಆಡಳಿತ ಇಲಾಖೆ ಕಾಡಿನ ರಕ್ಷಣೆ ಹೆಸರಿನಲ್ಲಿ ರೈತರಿಗೆ ತೊಂದರೆ ಕೊಡುವುದು ಕೈಬಿಡಬೇಕೆಂದು ಹೇಳಿದರು.
ಮುಳಬಾಗಿಲಿನ ಎಂ.ಗೋಪಾಲ್, ಶ್ರೀ ರಾಮ್, ಮಾಜಿ ವಿಧಾನ ಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ, ಪಾಪೇಗೌಡ,ರೈತ ಸಂಘದ ಮುಖಂಡರುಗಳಾದ ಪಿ.ಆರ್.ಸೂರ್ಯನಾರಾಯಣ, ಟಿ.ಎಂ ವೆಂಕಟೇಶ್, ಪಾಪಕೋಟೆ ನವೀನ್ ಕುಮಾರ್, ಶೀಲಿಂಗೆರೆ ಶ್ರೀನಿವಾಸನ್, ಹರಟಿ ಪ್ರಕಾಶ್, ಆನಂದ್, ಕೇತಗಾನಹಳ್ಳಿ ನಾಗರಾಜ್, ಗೋಪಾಲಕೃಷ್ಣ, ಬಿಎಮ್ ಪ್ರಕಾಶ್, ಸಿ. ಮನಿ ವೆಂಕಟಪ್ಪ, ದರ್ಶನ್, ಆನೇಕಲ್ ನ ಮುನಿರಾಜು, ಶ್ರೀನಿವಾಸಪುರ ಮುಳಬಾಗಿಲು ಮತ್ತು ಕೋಲಾರ ತಾಲೂಕಿನ ರೈತರು ಈ ಚರ್ಚೆಯಲ್ಲಿ ಭಾಗವಹಿಸಿದ್ದರು.
ಮುಂದಿನ ಸಭೆ ಜ.18ರಂದು ಸೇರಿ ಮತ್ತಷ್ಟು ವಿಚಾರಗಳನ್ನು ಚರ್ಚೆ ಮಾಡಿ ಮುಂದಿನ ಹೋರಾಟದ ರೂಪರೇಷೆಗಳನ್ನು ರೂಪಿಸಲು ತೀರ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.