ADVERTISEMENT

ಪುಷ್ಕರಣಿಯಲ್ಲಿ ಮೀನುಗಳ ಮಾರಣಹೋಮ

ಆಮ್ಲಜನಕ ಕೊರತೆ: ಮೀನುಗಳ ಸಾವಿಗೆ ಕಾರಣ

​ಪ್ರಜಾವಾಣಿ ವಾರ್ತೆ
Published 14 ಜನವರಿ 2020, 8:57 IST
Last Updated 14 ಜನವರಿ 2020, 8:57 IST
ಕೋಲಾರದ ವೇಣುಗೋಪಾಲಸ್ವಾಮಿ ಪುಷ್ಕರಣಿಯಲ್ಲಿ ಸೋಮವಾರ ಮೀನುಗಳು ಸತ್ತು ನೀರಿನ ಮೇಲೆ ತೇಲುತ್ತಿದ್ದ ದೃಶ್ಯ.
ಕೋಲಾರದ ವೇಣುಗೋಪಾಲಸ್ವಾಮಿ ಪುಷ್ಕರಣಿಯಲ್ಲಿ ಸೋಮವಾರ ಮೀನುಗಳು ಸತ್ತು ನೀರಿನ ಮೇಲೆ ತೇಲುತ್ತಿದ್ದ ದೃಶ್ಯ.   

ಕೋಲಾರ: ನಗರದ ಟೇಕಲ್‌ ರಸ್ತೆ ಬಳಿಯ ವೇಣುಗೋಪಾಲಸ್ವಾಮಿ ದೇವಾಲಯದ ಪುಷ್ಕರಣಿಯಲ್ಲಿ ಮೀನುಗಳ ಮಾರಣಹೋಮವಾಗಿದೆ.

ಪುಷ್ಕರಣಿಯಲ್ಲಿ ಭಾನುವಾರ ರಾತ್ರಿಯಿಂದ ಮೀನುಗಳು ಸರಣಿಯಾಗಿ ಸತ್ತು ನೀರಿನ ಮೇಲೆ ತೇಲುತ್ತಿದ್ದು, ಸುತ್ತಮುತ್ತಲ ಪ್ರದೇಶದಲ್ಲಿ ದುರ್ನಾತ ಹೆಚ್ಚಿದೆ. ಪುಷ್ಕರಣಿ ಬಳಿ ಸಾರ್ವಜನಿಕರು ಹಾಗೂ ವಾಹನ ಸವಾರರು ಮೂಗು ಮುಚ್ಚಿಕೊಂಡು ಹೋಗುತ್ತಿದ್ದ ದೃಶ್ಯ ಸೋಮವಾರ ಕಂಡುಬಂತು. ಸತ್ತ ಮೀನುಗಳನ್ನು ನೋಡಲು ಪುಷ್ಕರಣಿ ಸುತ್ತಮುತ್ತ ಜನಜಂಗುಳಿಯೇ ಸೇರಿತ್ತು. ಕೆಲ ವ್ಯಕ್ತಿಗಳು ಸತ್ತ ಮೀನುಗಳನ್ನು ಚೀಲದಲ್ಲಿ ತುಂಬಿಸಿಕೊಂಡು ಹೋದರು.

‘ಕಾಟ್ಲಾ, ರೋಹು, ಮೃಗಾಲ್‌, ಹುಲ್ಲು ಗೆಂಡೆ, ಸಾಮಾನ್ಯ ಗೆಂಡೆ ಮತ್ತು ಬೆಳ್ಳಿ ಗೆಂಡೆ ತಳಿಯ ಮೀನು ಮರಿಗಳನ್ನು ಪುಷ್ಕರಣಿಗೆ ಬಿಡಲಾಗಿತ್ತು. ಮೀನು ಮರಿಗಳು 10 ಕೆ.ಜಿ ಗಾತ್ರದವರೆಗೆ ಬೆಳೆದಿದ್ದವು. ಮೀನುಗಳ ಸಾವಿಗೆ ಆಮ್ಲಜನಕ ಕೊರತೆ ಕಾರಣ’ ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

‘ಸುತ್ತಮುತ್ತಲ ಬಡಾವಣೆ ನಿವಾಸಿಗಳು ಹಾಗೂ ಹೋಟೆಲ್‌ ಕೆಲಸಗಾರರು ಪುಷ್ಕರಣಿಯಲ್ಲಿ ಕಸ ಸುರಿದಿರುವ ಕಾರಣ ನೀರು ಕಲುಷಿತಗೊಂಡು ಹಸಿರು ಬಣ್ಣಕ್ಕೆ ತಿರುಗಿದೆ. ಪ್ಲಾಸ್ಟಿಕ್‌ ಹಾಗೂ ತ್ಯಾಜ್ಯವು ನೀರಿನ ಮೇಲೆ ತೇಲುತ್ತಿದೆ. ತ್ಯಾಜ್ಯ ಹಾಗೂ ವಿಷಕಾರಿ ರಾಸಾಯನಿಕಗಳಿಂದ ನೀರಿನಲ್ಲಿ ಆಮ್ಲಜನಕ ಪ್ರಮಾಣ ಕಡಿಮೆಯಾದ ಕಾರಣ ಮೀನುಗಳ ಉಸಿರಾಟಕ್ಕೆ ಸಮಸ್ಯೆಯಾಗಿ ಮೃತಪಟ್ಟಿವೆ’ ಎಂದು ಹೇಳಿದ್ದಾರೆ.

ಮೀನುಗಳ ತೆರವು: ಮೀನುಗಳ ಸಾವಿನ ಸುದ್ದಿ ತಿಳಿದ ಅಧಿಕಾರಿಗಳು ಸೋಮವಾರ ಪುಷ್ಕರಣಿ ಬಳಿ ಬಂದು ಪರಿಶೀಲನೆ ನಡೆಸಿದರು. ಆ ವೇಳೆಗಾಗಲೇ ಪುಷ್ಕರಣಿಯಲ್ಲಿನ ಅರ್ಧದಷ್ಟು ಮೀನುಗಳು ಮೃತಪಟ್ಟು ನೀರಿನ ಮೇಲೆ ತೇಲುತ್ತಿದ್ದವು. ಮೀನು ಸಾಕಾಣಿಕೆ ಗುತ್ತಿಗೆದಾರರು ದೋಣಿಗಳ ಸಹಾಯದಿಂದ ಪುಷ್ಕರಣಿಗೆ ಇಳಿದು ಸತ್ತ ಮೀನುಗಳನ್ನು ಬಲೆ ಮೂಲಕ ಹೊರ ತೆಗೆದರು.

ಮೀನುಗಾರಿಕೆ ಇಲಾಖೆ ಸಿಬ್ಬಂದಿಯು ತ್ಯಾಜ್ಯ ತೆರವುಗೊಳಿಸಿದರು. ಕಲುಷಿತ ನೀರು ದುರ್ನಾತ ಬೀರುತ್ತಿದ್ದು, ನೀರಿಗೆ ಉಪ್ಪು ಮತ್ತು ಸುಣ್ಣದ ಪುಡಿ ಸುರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.