ADVERTISEMENT

ಕೋಲಾರ | ಸಂಘಗಳ ಸುಪರ್ದಿಗೆ ಕೆರೆ ನೀಡಿ: ಅಬ್ಬಣಿ ಶಂಕರ್

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 5:45 IST
Last Updated 22 ಸೆಪ್ಟೆಂಬರ್ 2025, 5:45 IST
ಕೋಲಾರದಲ್ಲಿ ಭಾನುವಾರ ನಡೆದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮೀನುಗಾರರ ಸಹಕಾರ ಸಂಘದ ಕೋಲಾರ ತಾಲ್ಲೂಕು ಅಧ್ಯಕ್ಷ ಅಬ್ಬಣಿ ಶಂಕರ್ ಮಾತನಾಡಿದರು
ಕೋಲಾರದಲ್ಲಿ ಭಾನುವಾರ ನಡೆದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮೀನುಗಾರರ ಸಹಕಾರ ಸಂಘದ ಕೋಲಾರ ತಾಲ್ಲೂಕು ಅಧ್ಯಕ್ಷ ಅಬ್ಬಣಿ ಶಂಕರ್ ಮಾತನಾಡಿದರು    

ಕೋಲಾರ: ಮೀನುಗಾರಿಕೆ ಉದ್ದೇಶಕ್ಕೆ ಈ ಹಿಂದಿನಂತೆ ಕೆರೆಗಳನ್ನು ಮೀನುಗಾರರ ಸಹಕಾರ ಸಂಘಗಳ ಸುಪರ್ದಿಗೆ ನೀಡುವಂತೆ ಮೀನುಗಾರರ ಸಹಕಾರ ಸಂಘ ಕೋಲಾರ ತಾಲ್ಲೂಕು ಅಧ್ಯಕ್ಷ ಅಬ್ಬಣಿ ಶಂಕರ್ ಮನವಿ ಮಾಡಿದರು.

ನಗರದ ರೋಟರಿ ಕ್ಲಬ್‌ನಲ್ಲಿ ಭಾನುವಾರ ನಡೆದ ಮೀನುಗಾರರ ಸಹಕಾರ ಸಂಘದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಮೊದಲಿನಿಂದಲೂ ಕೆರೆಗಳನ್ನು ‌ಮೀನುಗಾರಿಕೆ ಉದ್ದೇಶಕ್ಕೆ ಸಂಘಗಳಿಗೆ ನೀಡಲಾಗುತಿತ್ತು‌. ಸಂಘದಿಂದ ಮೀನುಗಾರಿಕೆ ಮಾಡಲಾಗುತಿತ್ತು. ಇದರಿಂದ ಬಡವರಿಗೆ ಅನುಕೂಲವಾಗಿತ್ತು. ಆದರೆ,‌ ರಾಮನಗರದ ವಿಚಾರದಲ್ಲಿ ಕ್ಷುಲ್ಲಕ ಕಾರಣಕ್ಕೆ ರಾಜ್ಯದಲ್ಲಿ ಯಾವುದೇ ಕೆರೆಯನ್ನು ಸಂಘಕ್ಕೆ ನೀಡುತ್ತಿಲ್ಲ. ಇದೊಂದು ನೋವಿನ ಸಂಗತಿ. ಕೋಲಾರ ಸೇರಿದಂತೆ ರಾಜ್ಯದಾದ್ಯಂತ ಈಚೆಗೆ ಮೀನುಗಾರಿಕೆ ಇಲಾಖೆಯಿಂದ ಟೆಂಡರ್ ಕರೆಯಲಾಗಿದೆ. ಮೀನುಗಾರಿಕೆ ನೆಚ್ಚಿಕೊಂಡಿದ್ದ ಸಂಘಗಳಿಗೆ ತೊಂದರೆ ಆಗಿದೆ. ಬಡವರು ಬೀದಿಗೆ ಬಿದ್ದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಸರ್ಕಾರದ ನಿರ್ಧಾರದಿಂದ ಸಂಘಗಳ ಪರಿಸ್ಥಿತಿ ಹದಗೆಟ್ಟಿದ್ದು, ಹಲವಾರು ಬಾರಿ‌ ಮನವಿ ಮಾಡಿದ್ದರೂ ಸರ್ಕಾರ ತೀರ್ಮಾನ ಕೈಗೊಂಡಿಲ್ಲ‌ ಎಂದು ಹೇಳಿದರು.

ಕೆರೆಗಳನ್ನು ಹರಾಜು ಮಾಡಬಾರದೆಂದು, ಸಂಘಗಳಿಗೆ ನೀಡಬೇಕೆಂದು ನ್ಯಾಯಾಲಯ‌ ಮೊರೆ ಹೋಗಿದ್ದು ತಡೆಯಾಜ್ಞೆ ಲಭಿಸಿದೆ. ಎಲ್ಲವೂ ನ್ಯಾಯಾಲಯದ ತೀರ್ಪಿನ ಮೇಲೆ ಅವಲಂಬಿಸಿದೆ ಎಂದರು.

ಈ ಮಧ್ಯೆ, ಟೆಂಡರ್‌ನಲ್ಲಿ ಸಂಘವೂ ಕೆರೆಗಳಿಗೆ ಬಿಡ್ ‌ಮಾಡಿದ್ದು ‌ಎಷ್ಟು ಸಿಗಲಿದೆ ನೋಡಬೇಕು ಎಂದು ಹೇಳಿದರು.

ಇದಕ್ಕೂ ‌ಮೊದಲು ಅಬ್ಬಣಿ ಶಂಕರ್ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಸಭೆಯಲ್ಲಿ ನಿರ್ದೇಶಕರು ಹಾಗೂ ಸದಸ್ಯರು ಹಲವಾರು ವಿಚಾರಗಳ ಬಗ್ಗೆ ಚರ್ಚಿಸಿದರು. ಈಚೆಗೆ‌ ನಿಧನರಾದ ಸಂಘದ ಸದಸ್ಯರ ಸ್ಮರಣಾರ್ಥ ಮೌನಾಚರಣೆ ಮಾಡಲಾಯಿತು. 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ನಡವಳಿಕೆಗ ಓದಿ ಅಂಗೀಕರಿಸಲಾಯಿತು. 2024-25ನೇ ಸಾಲಿನ ಲೆಕ್ಕ ಪರಿಶೋಧನೆ ವರದಿ ಹಾಗೂ ಹಣಕಾಸಿನ ತಖ್ತೆಗಳನ್ನು ಓದಿ ಅಂಗೀಕರಿಸುವ ಹಾಗೂ 2025-26ನೇ ಸಾಲಿಗೆ ಅಂದಾಜು ಬಜೆಟ್ ಮಂಡಿಸುವ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ಸಂಘದ ನಿರ್ದೇಶಕರಾದ ಮುನಿಯಪ್ಪ, ವಿ.ಶೇಖರ್, ಶ್ರೀರಾಮ್, ಎಸ್.ಬಾಬು, ಎಂ.ವೆಂಕಟರಮಣಪ್ಪ, ಸಿ.ದೇವರಾಜ್‌, ಕೆ.ಯಲ್ಲಪ್ಪ, ವಿ.ಲೋಕೇಶ್, ಗಂಗಮ್ಮ, ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಶ್ರೀನಿವಾಸ್ ಹಾಗೂ ಸದಸ್ಯರು ಇದ್ದರು.

ಮೀನುಗಾರರ ಸಹಕಾರ ಸಂಘದ ವಾರ್ಷಿಕ ಸಭೆ ನ್ಯಾಯಾಲಯ‌ ಮೊರೆ ಹೋಗಿದ್ದು ತಡೆಯಾಜ್ಞೆ: ಅಬ್ಬಣಿ ಶಂಕರ್‌ ಸರ್ಕಾರದ ನಿರ್ಧಾರದಿಂದ ಸಂಘಗಳಿಗೆ, ಬಡವರಿಗೆ ತೊಂದರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.