ADVERTISEMENT

ಸ್ವಾವಲಂಬಿ ಬದುಕಿಗೆ ಸ್ವಉದ್ಯೋಗ ಮಾಡಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 15:23 IST
Last Updated 9 ಅಕ್ಟೋಬರ್ 2021, 15:23 IST
ಕೋಲಾರ ತಾಲ್ಲೂಕಿನ ದೊಡ್ಡ ಅಯ್ಯೂರು ಗ್ರಾಮದಲ್ಲಿ ಶನಿವಾರ ನಡೆದ ತರಬೇತಿ ಮುಕ್ತಾಯ ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಮುರಳೀಧರ್‌ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು
ಕೋಲಾರ ತಾಲ್ಲೂಕಿನ ದೊಡ್ಡ ಅಯ್ಯೂರು ಗ್ರಾಮದಲ್ಲಿ ಶನಿವಾರ ನಡೆದ ತರಬೇತಿ ಮುಕ್ತಾಯ ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಮುರಳೀಧರ್‌ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು   

ಕೋಲಾರ: ‘ಗ್ರಾಮೀಣ ಜನತೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮನೆಯಲ್ಲೇ ಲಾಭದಾಯಕ ಸ್ವಉದ್ಯೋಗ ಮಾಡಬಹುದು’ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಮುರಳೀಧರ್‌ ಕಿವಿಮಾತು ಹೇಳಿದರು.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಎಂಎಸ್‌ಎಂಇ ನಿರ್ದೇಶನಾಲಯ, ಕೈಗಾರಿಕೆ ಸಂಸ್ಥೆ ಹಾಗೂ ಕರ್ನಾಟಕ ತಾಂತ್ರಿಕ ಸಲಹಾ ಸೇವಾ ಸಂಸ್ಥೆ ಸಹಯೋಗದಲ್ಲಿ ತಾಲ್ಲೂಕಿನ ದೊಡ್ಡಅಯ್ಯೂರು ಗ್ರಾಮದಲ್ಲಿ ಶನಿವಾರ ಗ್ರಾಮೀಣ ಜನರಿಗೆ ಹಮ್ಮಿಕೊಂಡಿದ್ದ ತರಬೇತಿ ಮುಕ್ತಾಯ ಕಾರ್ಯಕ್ರಮದಲ್ಲಿ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.

‘ಗ್ರಾಮಾಂತರ ಪ್ರದೇಶದ ಜನರ ಮುಖ್ಯ ಕಸುಬು ಹೈನುಗಾರಿಕೆ. ಜತೆಗೆ ಟೈಲರಿಂಗ್, ಅಣಬೆ ಬೇಸಾಯ, ತೋಟಗಾರಿಕೆ, ಕೃಷಿ ಬೇಸಾಯ, ಜೇನು ಕೃಷಿ, ಗುಲಾಬಿ ಬೇಸಾಯ, ರೇಷ್ಮೆ, ಸಿದ್ಧ ಉಡುಪು ತಯಾರಿಕೆ, ಅಗರಬತ್ತಿ ಮತ್ತು ಬ್ಯಾಗ್ ತಯಾರಿಕೆ. ಬೇಕರಿ ಉತ್ಪನ್ನಗಳ ತಯಾರಿಕೆ, ಮೋಟರ್ ರಿವೈಂಡಿಂಗ್, ಗೃಹೋಪಯೋಗಿ ಉಪಕರಣಗಳ ರಿಪೇರಿ, ಛಾಯಾಗ್ರಹಣ, ಜನರೇಟರ್ ರಿಪೇರಿ, ಕಂಪ್ಯೂಟರ್ ರಿಪೇರಿ ಬಗ್ಗೆ ತರಬೇತಿ ನೀಡಲಾಗುತ್ತದೆ’ ಎಂದರು.

ADVERTISEMENT

‘ವೃತ್ತಿಪರ ತರಬೇತಿ ಪಡೆದು ಸ್ವಉದ್ಯೋಗಿಗಳಾಗಿ ಸ್ವಾವಲಂಬಿ ಜೀವನ ನಡೆಸಬಹುದು. ಸರ್ಕಾರಿ ಉದ್ಯೋಗಕ್ಕೆ ಕಾಯದೆ ಇಂತಹ ತರಬೇತಿ ಮೂಲಕ ಸ್ವಂತ ಉದ್ದಿಮೆ ಸ್ಥಾಪಿಸಿ ಸ್ವಾಭಿಮಾನದಿಂದ ಬದುಕಬೇಕು’ ಎಂದು ಸಲಹೆ ನೀಡಿದರು.

ಕುಟುಂಬ ನಿರ್ವಹಣೆ: ‘ಈಗಾಗಲೇ ಸರ್ಕಾರದ ಹಲವು ಜನಪ್ರಿಯ ಕಾರ್ಯಕ್ರಮಗಳು ಜಾರಿಯಲ್ಲಿವೆ. ಹಲವು ಅಭಿವೃದ್ಧಿ ನಿಗಮಗಳಲ್ಲಿ ಸಿಗುವ ಯೋಜನೆಗಳ ಲಾಭ ಪಡೆದು ಕುಟುಂಬ ನಿರ್ವಹಣೆ ಮಾಡಬಹುದು’ ಎಂದು ಶಿಕ್ಷಣ ಸಂಯೋಜಕ ಆರ್‌.ಶ್ರೀನಿವಾಸನ್ ಅಭಿಪ್ರಾಯಪಟ್ಟರು.

‘ಸರ್ಕಾರಗಳು ಸ್ವಉದ್ದಿಮೆ ಮಾಡುವವರ ಅನುಕೂಲಕ್ಕಾಗಿ ಕೋಟ್ಯಂತರ ರೂಪಾಯಿ ಅನುದಾನ ಮೀಸಲಿಟ್ಟಿವೆ. ಸಹಾಯಧನದ ಮೂಲಕ ಬ್ಯಾಂಕ್‌ಗಳಲ್ಲಿ ಹಣಕಾಸು ನೆರವು ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆದು ಸ್ವಉದ್ಯೋಗಿಗಳಾಗಿ ಸಮಾಜದಲ್ಲಿ ಬದುಕಬಹುದು’ ಎಂದು ತಿಳಿಸಿದರು.

ಗ್ರಾ.ಪಂ ಸದಸ್ಯರಾದ ಚಿಕ್ಕಚೆನ್ನಪ್ಪ, ಸುಜಾತಾ, ಕರ್ನಾಟಕ ತಾಂತ್ರಿಕ ಸಲಹಾ ಸೇವಾ ಸಮಿತಿ ವ್ಯವಸ್ಥಾಪಕಿ ಸೌಮ್ಯ, ಸಿಆರ್‌ಪಿ ಸೈಯ್ಯದ್‌ ಖಲೀಮ್‌ ಉಲ್ಲಾ, ಮುಖ್ಯ ಶಿಕ್ಷಕ ವೆಂಕಟೇಶ್‌ಮೂರ್ತಿ, ಕಾರ್ಯಕ್ರಮದ ಆಯೋಜಕಿ ನಾಗಮಣಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.