ADVERTISEMENT

ಭೂಮಾಫಿಯಾ | ನಕಲಿ ದಾಖಲೆ ಸೃಷ್ಟಿಸಿ ಬೇರೆಯವರ ಜಮೀನು ಮಾರಾಟ; ನಿವೃತ್ತ ಉಪನ್ಯಾಸಕ ಬಂಧನ

​ಪ್ರಜಾವಾಣಿ ವಾರ್ತೆ
Published 23 ಜೂನ್ 2023, 14:24 IST
Last Updated 23 ಜೂನ್ 2023, 14:24 IST
   

ಕೋಲಾರ: ಭೂಮಾಫಿಯಾದಲ್ಲಿ ಭಾಗಿಯಾಗಿದ್ದ ನಿವೃತ್ತ ಸಹಾಯಕ ಪ್ರಾಧ್ಯಾಪಕ ಸೇರಿ ಐವರು ಭೂಗಳ್ಳರನ್ನು ಬಂಧಿಸಿದ್ದು, ಉಳಿದ ನಾಲ್ವರು ಆರೋಪಿಗಳ ಬಂಧನಕ್ಕೆ ತಂಡ ರಚಿಸಿರುವುದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ ತಿಳಿಸಿದರು.

ನಗರ ಪೊಲೀಸ್‌ ಠಾಣೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಮುಳಬಾಗಿಲು ನಗರದ ತ್ಯಾಗರಾಜ ಕಾಲೊನಿಯ ಗೋವಿಂದಪ್ಪ, ಕೋಲಾರ ತಾಲ್ಲೂಕಿನ ಕಾಳಹಸ್ತಿಪುರದ ಜಯರಾಂ, ಕುಂಬಾರಹಳ್ಳಿ ಗ್ರಾಮದ ಸುರೇಶ್‍ ಬಾಬು, ಆಂಧ್ರಪ್ರದೇಶದ ದೂರಿ ಪೆಂಚಲಯ್ಯ, ಆದಿನಾರಾಯಣ ಎಂಬ ಭೂಗಳ್ಳರನ್ನು ನಗರ ಠಾಣೆ ಪೊಲೀಸರು ಜೈಲಿಗಟ್ಟಿದ್ದಾರೆ’ ಎಂದರು.

‘ಉಳಿದ ಆರೋಪಿಗಳಾದ ಅರುಣ್‌ ಕುಮಾರ್, ಬಾಲಯ್ಯ, ಮಂಜುನಾಥಗೌಡ, ಕಾಳಹಸ್ತಿಪುರ ಅಂಬರೀಶ್ ಬಂಧನಕ್ಕೆ ತಂಡ ರಚಿಸಲಾಗಿದೆ. ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಗಡಿಪಾರು ಮಾಡಲಾಗುವುದು. ಇವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ನೊಂದವರಿಗೆ ಸಕ್ಷಮ ಪ್ರಾಧಿಕಾರದಿಂದ ಪರಿಹಾರ ಕಲ್ಪಿಸಲಾಗುವುದು’ ಎಂದು ಹೇಳಿದರು.

ADVERTISEMENT

‘ಗೋವಿಂದಪ್ಪ ಉಪನ್ಯಾಸಕ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾನೆ. ಈಚೆಗೆ ಮುಳಬಾಗಿಲಿನಿಂದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ’ ಎಂದರು.

ನಕಲಿ ದಾಖಲೆ ಸೃಷ್ಟಿ: ‘ಕೋಲಾರ ತಾಲೂಕಿನ ಮಿಟ್ಟಕಲ್ಲಹಳ್ಳಿ ಗ್ರಾಮದ ಸರ್ವೆ ನಂಬರ್‌ 46ರಲ್ಲಿ 2 ಎಕರೆ ಜಮೀನು (ಜಿಲ್ಲಾಧಿಕಾರಿ ಕಚೇರಿಯ ಬಳಿ) ಬೆಂಗಳೂರಿನ ಪ್ರಹ್ಲಾದರಾವ್ ಅವರ ಹೆಸರಿನಲ್ಲಿದೆ. ಆರೋಪಿಗಳು ನಕಲಿ ದಾಖಲೆ ಸೃಷ್ಟಿಸಿ ತಮ್ಮ ಹೆಸರಿಗೆ ಮಾಡಿಕೊಂಡಿರುವ ಬಗ್ಗೆ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಜೂನ್‌ 18ರಂದು ದೂರು ದಾಖಲಾಗಿತ್ತು. ಪೊಲೀಸರು ತನಿಖೆ ಆರಂಭಿಸಿದ್ದರು’ ಎಂದು ಹೇಳಿದರು.

‘ಜಮೀನು ಕಡೆ ಹೆಚ್ಚಾಗಿ ಮಾಲೀಕರು ಕಾಣಿಸಿಕೊಳ್ಳದೆ ಇದ್ದುದನ್ನು ಮನಗಂಡ ಆರೋಪಿಗಳು ಆಂಧ್ರ ಮೂಲದ ಪೆಂಚಲಯ್ಯ ಅವರ ಆಧಾರ್‌ ನಕಲಿ ಮಾಡಿ ಅದರಲ್ಲಿ ಮೂಲ ಮಾಲೀಕ ಪ್ರಹ್ಲಾದರಾವ್ ಅವರ ಹೆಸರನ್ನು ಸೇರಿಸಿದರು. ಈ ಮೂಲಕ ನಕಲಿ ಮಾಲೀಕನನ್ನು ಸೃಷ್ಟಿಸಿ ಅವರಿಂದ ಮೂಲ ಮಾಲೀಕನ ನಕಲಿ ಸಹಿಯನ್ನು ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಹಾಕಿಸಿ ಗೋವಿಂದಪ್ಪ ತನ್ನ ಹೆಸರಿಗೆ 2019ರಲ್ಲಿ ಕ್ರಯ ಮಾಡಿಕೊಂಡಿದ್ದ’ ಎಂದು ವಿವರಿಸಿದರು.

‘ನಂತರ 2021ರಲ್ಲಿ ಗೋವಿಂದಪ್ಪ ತನಗೆ ಪರಿಚಯವಾದ ಬೆಳಗಾವಿ ಮೂಲದ ಶಿವಲಿಂಗ ಪಾಟೀಲ ಎಂಬುವರಿಗೆ ನೀಡಬೇಕಿದ್ದ ದೊಡ್ಡ ಮೊತ್ತದ ಸಾಲದ ಮರುಪಾವತಿಗಾಗಿ ಇದೇ ಜಮೀನನ್ನು ಅವರಿಗೆ ಕ್ರಯ ಮಾಡಿಕೊಟ್ಟಿದ್ದ’ ಎಂದು ಹೇಳಿದರು.

‘ಗೋವಿಂದಪ್ಪ ಮೇಲೆ 4 ಪ್ರಕರಣಗಳು ಹಾಗೂ 20ಕ್ಕೂ ಹೆಚ್ಚು ಚೆಕ್‍ಬೌನ್ಸ್ ಪ್ರಕರಣಗಳಿವೆ. ಈತ ಹಾಗೂ ಕಾಳಹಸ್ತಿಪುರ ಅಂಬರೀಶ್ ಪ್ರಮುಖ ಆರೋಪಿಗಳಾಗಿದ್ದಾರೆ. ಅಲ್ಲದೇ, ಈ ಆರೋಪಿಗಳು ಹಿಂದೆಯೂ ನಕಲಿ ನೋಂದಣಿ ಮಾಡಿಸುವಾಗ ಸಿಕ್ಕಿಬಿದ್ದಿದ್ದರು’ ಎಂದರು.

ಎಸ್ಪಿ, ಡಿವೈಎಸ್ಪಿ ನೇತೃತ್ವದಲ್ಲಿ ನಗರಠಾಣೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಆರ್.ಹರೀಶ್, ಪಿಎಸ್‍ಐ ಯೋಗೀಶ್‍ಕುಮಾರ್, ಸಿಬ್ಬಂದಿ ಎಎಸ್‍ಐ ವೆಂಕಟಮುನಿಯಪ್ಪ, ಮೋಹನ್, ಶ್ರೀನಾಥ್, ರವಿಚಂದ್ರ, ರವಿಕುಮಾರ್, ಆರ್.ನಾರಾಯಣಸ್ವಾಮಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.