
ಬಂಗಾರಪೇಟೆ ತಾಲ್ಲೂಕಿನ ಕೇತಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗೇದಿಗಲ್ ವೃತ್ತದಲ್ಲಿ ನಿರ್ಮಾಣವಾಗಿರುವ ಸಮುದಾಯ ಶೌಚಾಲಯಕ್ಕೆ ಬೀಗ ಜಡಿದಿರುವುದು
ಬಂಗಾರಪೇಟೆ: ಗ್ರಾಮೀಣ ಭಾಗದಲ್ಲಿ ನೈರ್ಮಲ್ಯ ಕಾಪಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದೆ. ಆದರೆ, ತಾಲ್ಲೂಕಿನ ಕೇತಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೇದಿಗಲ್ ವೃತ್ತದಲ್ಲಿ ನಿರ್ಮಿಸಲಾದ ಸಮುದಾಯ ಶೌಚಾಲಯವು ಸಾರ್ವಜನಿಕರ ಬಳಕೆಗೆ ಲಭ್ಯವಾಗದೆ, ವರ್ಷಗಳಿಂದ ಬೀಗ ಹಾಕಲ್ಪಟ್ಟಿದೆ.
2020-21ನೇ ಸಾಲಿನಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಸಮುದಾಯ ಶೌಚಾಲಯವನ್ನು ನಿರ್ಮಿಸಲಾಗಿತ್ತು. ಗೇದಿಗಲ್ ವೃತ್ತವು ಸದಾ ವಾಹನ ಸವಾರರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಿಂದ ಕೂಡಿರುವ ಪ್ರಮುಖ ಜಂಕ್ಷನ್ ಆಗಿದೆ. ಇಲ್ಲಿ ಶೌಚಾಲಯದ ಅವಶ್ಯಕತೆ ಹೆಚ್ಚಿರುವುದರಿಂದ ಸರ್ಕಾರ ಅನುದಾನ ಬಿಡುಗಡೆ ಮಾಡಿ ಸುಸಜ್ಜಿತ ಕಟ್ಟಡ ನಿರ್ಮಿಸಿತು. ಆದರೆ ಕಟ್ಟಡ ಉದ್ಘಾಟನೆಯಾದ ದಿನದಿಂದಲೂ ಇಲ್ಲಿಯವರೆಗೆ ಸಾರ್ವಜನಿಕರಿಗೆ ಮಾತ್ರ ಮುಕ್ತವಾಗಿಲ್ಲ. ಶೌಚಾಲಯದ ಬಾಗಿಲಿಗೆ ಹಾಕಲಾಗಿರುವ ತುಕ್ಕು ಹಿಡಿದ ಬೀಗಗಳು ಅಧಿಕಾರಿಗಳ ನಿರ್ಲಕ್ಷ್ಯವನ್ನು ಸಾರುತ್ತಿದೆ.
ನಗರದಲ್ಲಿ ಸಮುದಾಯ ಶೌಚಾಲಯವಿದ್ದರೂ ಪ್ರಯೋಜನಕ್ಕೆ ಬಾರದೆ ಅನಿವಾರ್ಯವಾಗಿ ಸಾರ್ವಜನಿಕರು ಬಯಲನ್ನೇ ಆಶ್ರಯಿಸುವಂತಾಗಿದೆ. ನಿರ್ವಹಣೆ ಇಲ್ಲದೆ ಶೌಚಾಲಯದ ಸುತ್ತಮುತ್ತ ಗಿಡಗಂಟಿಗಳು ಬೆಳೆದು ನಿಂತು ವಿಷಜಂತುಗಳ ವಾಸಸ್ಥಾನವಾಗಿ ಮಾರ್ಪಟ್ಟಿದೆ.
ಲಕ್ಷಾಂತರ ರೂಪಾಯಿ ವೆಚ್ಚದ ಈ ಕಾಮಗಾರಿ ಪೂರ್ಣಗೊಂಡಿದ್ದರೂ, ನೀರು ಮತ್ತು ವಿದ್ಯುತ್ ಸಂಪರ್ಕದ ನೆಪ ಹಾಗೂ ನಿರ್ವಹಣೆಯ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಅಧಿಕಾರಿಗಳು ಶೌಚಾಲಯಕ್ಕೆ ಬೀಗ ಜಡಿದಿದ್ದಾರೆ ಎಂಬುದು ಸಾರ್ವಜನಿಕರ ಆರೋಪ.
ಗೇದಿಗಲ್ ವೃತ್ತದಲ್ಲಿ ಸಂಚರಿಸುವ ಮಹಿಳೆಯರು ಮತ್ತು ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದೆ. ಹಾಗಾಗಿ ಕೂಡಲೇ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗಮನಹರಿಸಿ, ಶೌಚಾಲಯದ ಬೀಗ ತೆರೆಸಿ ಸಾರ್ವಜನಿಕರ ಉಪಯೋಗಕ್ಕೆ ಮುಕ್ತವಾಗಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಸಮುದಾಯ ಶೌಚಾಲಯವನ್ನು ಪರಿಶೀಲನೆ ಮಾಡಿ ಸಾರ್ವಜನಿಕರ ಬಳಕೆಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡುತ್ತೇವೆ.ಯಶ್ವಂತ್, ಪಿಡಿಓ, ಕೇತಗಾನಹಳ್ಳಿ ಗ್ರಾಮ ಪಂಚಾಯಿತಿ
ಶೌಚಾಲಯವನ್ನು ಯಾರು ಸ್ವಚ್ಛಗೊಳಿಸಬೇಕು. ಅದರ ಮೇಲ್ವಿಚಾರಣೆ ಯಾರದ್ದು ಎಂಬ ಸ್ಪಷ್ಟತೆ ಗ್ರಾಮ ಪಂಚಾಯಿತಿಯಿಂದ ಸಿಕ್ಕಿಲ್ಲ.ಶಿವಕುಮಾರ್ ಕೆ., ರೈತ ಕಂತೇಪುರಮಠ
ಸರ್ಕಾರದ ಯೋಜನೆಗಳು ಕೇವಲ ಅಂಕಿ-ಅಂಶಗಳಿಗೆ ಸೀಮಿತವಾಗದೆ ಜನಸಾಮಾನ್ಯರಿಗೆ ತಲುಪಬೇಕಿದೆ. ಕೇತಗಾನಹಳ್ಳಿ ಪಂಚಾಯಿತಿ ಕೂಡಲೇ ಎಚ್ಚೆತ್ತು ಶೌಚಾಲಯದ ಬೀಗ ತೆಗೆಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.ಮುದುಗುಳಿ ಕೃಷ್ಣಪ್ಪ, ಸಾರ್ವಜನಿಕರು
ಸ್ವಚ್ಛ ಭಾರತದ ಹೆಸರಿನಲ್ಲಿ ಕೋಟಿಗಟ್ಟಲೆ ಹಣ ಖರ್ಚು ಮಾಡಲಾಗುತ್ತಿದೆ. ಆದರೆ ಗೇದಿಗಲ್ ವೃತ್ತದಂತಹ ಆಯಕಟ್ಟಿನ ಜಾಗದಲ್ಲೇ ಶೌಚಾಲಯಕ್ಕೆ ಬೀಗ ಹಾಕಿರುವುದು ಯೋಜನೆಯ ಉದ್ದೇಶಕ್ಕೆ ತಣ್ಣೀರೆರಚಿದಂತಾಗಿದೆ.ನರಸಿಂಹಮೂರ್ತಿ, ರಾಜ್ಯಾಧ್ಯಕ್ಷ, ಜೈ ಭುವನೇಶ್ವರಿ ಕನ್ನಡ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.