ADVERTISEMENT

ಕೃಷಿ ಅರಣ್ಯ ಪದ್ದತಿಗೆ ಒತ್ತು ನೀಡಿ: ಸಚಿವ ನಾಗೇಶ್

ಕೃಷಿ ಅರಣ್ಯ ಕಾರ್ಯಾಗಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಸಲಹೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 13:43 IST
Last Updated 5 ಫೆಬ್ರುವರಿ 2020, 13:43 IST
ಕೋಲಾರದಲ್ಲಿ ಬುಧವಾರ ನಡೆದ ಕೃಷಿ ಅರಣ್ಯ ಕಾರ್ಯಾಗಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಮಾತನಾಡಿದರು.
ಕೋಲಾರದಲ್ಲಿ ಬುಧವಾರ ನಡೆದ ಕೃಷಿ ಅರಣ್ಯ ಕಾರ್ಯಾಗಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಮಾತನಾಡಿದರು.   

ಕೋಲಾರ: ‘ಕಡಿಮೆ ನೀರಿನಲ್ಲೂ ಅದಾಯಗಳಿಸುವ ಬೆಳೆಗಳ ಬಗ್ಗೆ ಇಲಾಖಾಧಿಕಾರಿಗಳು ರೈತರಿಗೆ ಮಾಹಿತಿ ನೀಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಸೂಚಿಸಿದರು.

ಜಿಲ್ಲಾಡಳಿತ, ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಇಲ್ಲಿನ ಟಿ.ಚನ್ನಯ್ಯ ರಂಗಮಂದಿರದಲ್ಲಿ ಬುಧವಾರ ರೈತರಿಗಾಗಿ ಆಯೋಜಿಸಿದ್ದ ವೃತ್ತ ಮಟ್ಟದ ಕೃಷಿ ಅರಣ್ಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ‘ಅಂತರ್ ಜಲಮಟ್ಟದ ಮೇಲೆ ಪರಿಣಾಮ ಬೀರುತ್ತಿರುವ ನೀಲಗಿರಿಯನ್ನು ನಿಷೇದಿಸಿದ್ದು, ರೈತರು ಜಮೀನುಗಳಲ್ಲಿ ಬೆಳೆದಿರುವುದನ್ನು ತೆರವುಗೊಳಿಸಬೇಕು’ ಎಂದು ಸಲಹೆ ನೀಡಿದರು.

‘ಜಿಲ್ಲೆಯಲ್ಲಿ ಬಿದಿರು ಬೆಳೆ ಕಡಿಮೆ ಇದೆ. ಬಿದಿರು ಬೆಳೆಯುವವರಿಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ವಾಣಿಜ್ಯವಾಗಿಯೂ ಬಿದಿರಿಗೆ ಉತ್ತಮ ಬೇಡಿಕೆಯಿದೆ ಶ್ರೀಗಂಧ ಮತ್ತು ಇತರೆ ಸಸಿಗಳನ್ನು ಕೃಷಿ ಅರಣ್ಯೀಕರಣದಡಿ ಸಸಿಗಳ್ನು ನಾಟಿ ಮಾಡಿದರೆ ಸರ್ಕಾರದಿಂದ ಸೌಕರ್ಯ ದೊರೆಯುತ್ತದೆ. ಕೆಲ ಬೆಳೆಗೆ ವಿಮಾ ಸೌಲಭ್ಯ ಇಲ್ಲದಿರುವ ಬಗ್ಗೆ ಸರ್ಕಾರದ ಗಮನಕ್ಕೆ ತರುತ್ತೆೇನೆ’ ಎಂದು ಹೇಳಿದರು.

ADVERTISEMENT

‘ಎತ್ತಿನ ಹೊಳೆ ಯೋಜನೆ ಕಾಮಗಾರಿ ಸ್ಥಗಿತಗೊಂಡಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಜಿಲ್ಲೆಯ ಜನ ಪ್ರತಿಧಿನಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಯೋಜನೆ ಸಂಬಂಧ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಸಹಕಾರ ನೀಡುತ್ತಾರೆ ಎಂಬ ವಿಶ್ವಾಸವಿದೆ. ಮುಖ್ಯಮಂತ್ರಿ ಮೇಲೆ ಒತ್ತಡ ಹಾಕಿ ಕೆಲಸ ಪೂರ್ಣಗೊಳಿಸಲು ಒತ್ತಡ ಹಾಕಲಾಗುವುದು’ ಎಂದು ತಿಳಿಸಿದರು.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅಭಿವೃದ್ಧಿ) ಅಜಯ್ ಮಿಶ್ರಾ ಮಾತನಾಡಿ, ‘ಮುಂಗಾರು, ಹಿಂಗಾರು ಮಳೆಗೆ ವ್ಯತ್ಯಾಸ ಇರುವುದರಿಂದ ರೈತರು ಅರಣ್ಯ ಇಲಾಖೆಯಿಂದ ಸಸಿಗಳನ್ನು ಪಡೆದು ನಾಟಿ ಮಾಡಿದರೆ ಆರ್ಥಿಕವಾಗಿ ಸಬಲರಾಗಬಹುದು’ ಎಂದರು.

‘ಹೆಬ್ಬೇವು, ಶ್ರೀಗಂಧ, ಹುಣಸೆ, ನುಗ್ಗೆ, ಬೆಟ್ಟದ ನೆಲ್ಲಿ ಇನ್ನಿತರೆ ಜಾತಿಯ ಗಿಡಮರಗಳನ್ನು ಬೆಳೆಸುವುದರಿಂದ ಆದಾಯ ಗಳಿಸಬಹುದು. ನರೇಗಾ ಯೋಜನೆಯಡಿ ಪ್ರೋತ್ಸಾಧನ ಲಭ್ಯವಾಗಲಿದ್ದು, ಇದರ ಪ್ರಯೋಜನೆ ಪಡೆದುಕೊಳ್ಳಲು ರೈತರು ಮುಂದಾಗಬೇಕು’ ಎಂದು ಸಲಹೆ ನೀಡಿದರು.

‘ದೇಶದಲ್ಲಿ ಇತ್ತೀಚೆಗೆ ನಡೆದ ಸರ್ವೇಯಲ್ಲಿ ರಾಜ್ಯದಲ್ಲಿ ೧,೦೨೫ ಚದರ ಕಿಮೀ ಅರಣ್ಯ ಹೆಚ್ಚಳವಾಗಿರುವುದು ಕಂಡುಬಂದಿದೆ. ಸಾಮಾಜಿಕ ಅರಣ್ಯ ಇಲಾಖೆಯಿಂದ ಅರಣ್ಯೀಕರಣಕ್ಕೆ ಸಾಕಷ್ಟು ಕಾರ್ಯಕ್ರಮಗಳಿವೆ. ಕೃಷಿ ಬೆಳೆಗಳು ಪ್ರತಿಕೂಲ ವಾತಾವರಣದಿಂದ ಬೆಳೆ, ದರದಲ್ಲಿ ವ್ಯತ್ಯಾಸ ಆಗುವುದರಿಂದ ಕೃಷಿಯನ್ನು ಲಾಭದಾಯಕವನ್ನಾಗಿಸಲು ಸಮಗ್ರ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅನಿತಾ ಆರೇಕಲ್ ಮಾತನಾಡಿ, ‘ರೈತರು ವಾಣಿಜ್ಯ ಬೆಳೆಗಳಿಗೆ ಒತ್ತು ನೀಡುತ್ತಿರುವುದರಿಂದ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತಿಲ್ಲ. ಮಿಶ್ರ ಬೆಳೆ ಪದ್ದತಿಯಲ್ಲಿ ಅರಣ್ಯ ಸಸಿಗಳನ್ನು ನೆಟ್ಟು ಲಾಭಗಳಿಸಬಹುದು’ ಎಂದು ತಿಳಿಸಿದರು.

‘ರಾಜ್ಯದಲ್ಲಿ ೧ ಸಾವಿರ ಚದರ ಕಿಮೀ ಅರಣ್ಯ ಹೆಚ್ಚಳವಾಗಿರುವುದು ರೈತರ ಕೃಷಿ ಜಮೀನಿನಲ್ಲಿ ಮರಗಳನ್ನು ಬೆಳೆಸುವ ಮೂಲಕ ಆದಾಯ ಗಳಿಸಬಹುದು. ೨೦೨೨ಕ್ಕೆ ರೈತರ ಆದಾಯ ದ್ವಿಗುಣಗೊಳಿಸಬೇಕೆಂಬ ಉದ್ದೇಶದಿಂದ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿದ್ದು ಇದರ ಪ್ರಯೋಜನೆ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ತಾ.ಪಂ ಅಧ್ಯಕ್ಷ ಎಂ.ಆಂಜಿನಪ್ಪ, ಜಿ.ಪಂ ಸದಸ್ಯರಾದ ಅರವಿಂದ್, ಅರುಣ್ ಪ್ರಸಾದ್, ಮುಳಬಾಗಿಲು ತಾ.ಪಂ ಅಧ್ಯಕ್ಷ ಎ.ವಿ. ಶ್ರೀನಿವಾಸ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಚಕ್ರಪಾಣಿ, ಸಾಮಾಜಿಕ ಅರಣ್ಯ ಉಪ ಸಂರಕ್ಷಣಾಧಿಕಾರಿ ದೇವರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.