ADVERTISEMENT

ದೇಶದಲ್ಲಿ ರಾಜ್ಯವೇ ನಂ.1; ಗ್ಯಾರಂಟಿ ಯಶಸ್ಸು ಕಂಡು ಬಿಜೆಪಿಗೆ ಹೊಟ್ಟೆ ಉರಿ: ಲಾಡ್‌

ವಿವಿಧೆಡೆ ಕರ್ನಾಟಕ ಮಾಡೆಲ್‌ ಪಾಲನೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 4:05 IST
Last Updated 11 ಸೆಪ್ಟೆಂಬರ್ 2025, 4:05 IST
ಕೋಲಾರದಲ್ಲಿ ಬುಧವಾರ ನಡೆದ ಕಾರ್ಯಕ್ರಮವನ್ನು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಉದ್ಘಾಟಿಸಿದರು. ಕೆ.ವೈ.ನಂಜೇಗೌಡ, ಕೊತ್ತೂರು ಮಂಜುನಾಥ್‌, ಲಕ್ಷ್ಮಿದೇವಮ್ಮ, ಎಸ್‌.ಎನ್‌.ನಾರಾಯಣಸ್ವಾಮಿ, ಎಂ.ಎಲ್‌.ಅನಿಲ್‌ ಕುಮಾರ್, ಎಂ.ಆರ್.ರವಿ, ಹನೀಫ್‌, ಗೋಪಾಲಕೃಷ್ಣ, ವೈ.ಶಿವಕುಮಾರ್ ಇದ್ದಾರೆ
ಕೋಲಾರದಲ್ಲಿ ಬುಧವಾರ ನಡೆದ ಕಾರ್ಯಕ್ರಮವನ್ನು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಉದ್ಘಾಟಿಸಿದರು. ಕೆ.ವೈ.ನಂಜೇಗೌಡ, ಕೊತ್ತೂರು ಮಂಜುನಾಥ್‌, ಲಕ್ಷ್ಮಿದೇವಮ್ಮ, ಎಸ್‌.ಎನ್‌.ನಾರಾಯಣಸ್ವಾಮಿ, ಎಂ.ಎಲ್‌.ಅನಿಲ್‌ ಕುಮಾರ್, ಎಂ.ಆರ್.ರವಿ, ಹನೀಫ್‌, ಗೋಪಾಲಕೃಷ್ಣ, ವೈ.ಶಿವಕುಮಾರ್ ಇದ್ದಾರೆ   

ಕೋಲಾರ: ರಾಜ್ಯ ಸರ್ಕಾರ ಬರೀ ಗ್ಯಾರಂಟಿ ಯೋಜನೆಗಳಿಗೆ ವರ್ಷಕ್ಕೆ ₹60 ಸಾವಿರ ಕೋಟಿ ಖರ್ಚು ಮಾಡುತ್ತಿದೆ. ಬಿಜೆಪಿಯವರು ಇಂಥ ಯಾವುದೇ ಜನಪರ ಯೋಜನೆ ಕೊಟ್ಟಿಲ್ಲ. ಹೀಗಾಗಿ, ಅವರಿಗೆ ನಮ್ಮ ಗ್ಯಾರಂಟಿ ಕಂಡು ಹೊಟ್ಟೆ ಉರಿಯುತ್ತಿದೆ. ಅವರು ಉದ್ಯಮಿಗಳ ಸಾಲ‌ಮನ್ನಾ ಮಾಡುತ್ತಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಹರಿಹಾಯ್ದರು.

ನಗರದ ನಾರಾಯಣಿ ಕನ್ವೆನ್ಷನ್ ಸಭಾಂಗಣದಲ್ಲಿ ಬುಧವಾರ ಕಾರ್ಮಿಕ ಇಲಾಖೆ ಹಮ್ಮಿಕೊಂಡಿದ್ದ ಜಿಲ್ಲೆಯ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ಮತ್ತು ವಿವಿಧ ಸವಲತ್ತು ವಿತರಣೆ‌ ಕಾರ್ಯಕ್ರಮ ಉದ್ಘಾಟಿಸಿ ಅವರು‌ ಮಾತನಾಡಿದರು.

ದೇಶದಲ್ಲಿ ಈಗ ಇರುವುದು ಕರ್ನಾಟಕ ‌ಮಾಡೆಲ್ ಮಾತ್ರ. ಗುಜರಾತ್ ಮಾಡೆಲ್ ಇಲ್ಲ. ಇಡೀ ದೇಶದಲ್ಲಿ ಕರ್ನಾಟಕ‌ ರಾಜ್ಯ ಆರ್ಥಿಕವಾಗಿ ನಂಬರ್ 1 ಸ್ಥಾನದಲ್ಲಿದೆ. ತಲಾ ಆದಾಯ, ಜಿಡಿಪಿ ಬೆಳವಣಿಗೆಯಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿದೆ. ಜಿಎಸ್‌ಟಿ ಸಂಗ್ರಹದಲ್ಲಿ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಗ್ಯಾರಂಟಿಗೆ ಖರ್ಚು ಮಾಡುವುದಲ್ಲದೇ, ಅಭಿವೃದ್ಧಿಗೆ ₹83 ಸಾವಿರ ಕೋಟಿ ನೀಡುತ್ತಿದ್ದೇವೆ. ಗ್ಯಾರಂಟಿ ಯೋಜನೆ ಕೊಡದ ಬಿಜೆಪಿ ಏಕೆ ರಾಜ್ಯದಲ್ಲಿ ಈ ಹಿಂದೆ ಅಭಿವೃದ್ಧಿ ಮಾಡಲಿಲ್ಲ ಎಂದು ಪ್ರಶ್ನೆ ಮಾಡಿದರು.

ADVERTISEMENT

ಭಾರತ ನಾಲ್ಕು ಬಿಲಿಯನ್ ಡಾಲರ್ ಎಕಾನಮಿ ಆಗಿದೆ, ಜಪಾನ್ ದೇಶವನ್ನು ಹಿಂದಿಕ್ಕಿದೆ ಎಂಬುದಾಗಿ ಬಿಜೆಪಿಗರು ಹೇಳುತ್ತಿದ್ದಾರೆ. ನಮ್ಮದು 150 ಕೋಟಿ ‌ಜನಸಂಖ್ಯೆ ಇರುವ ದೇಶ. ಅವರೆಲ್ಲಾ ವಹಿವಾಟು ಮಾಡಿದರೆ ಅಷ್ಟು ಆಗಿಯೇ ಆಗುತ್ತದೆ. ಜಪಾನ್‌ನಲ್ಲಿ ಕೇವಲ 12 ಕೋಟಿ ‌ಜನರಿದ್ದಾರೆ. ಬಿಜೆಪಿಯವರು ಮಾತೆತ್ತಿದರೆ ಸುಳ್ಳು ಹೇಳುತ್ತಾರೆ ಎಂದು ಟೀಕಾ ಪ್ರಹಾರ ನಡೆಸಿದರು.

ದೇಶದಲ್ಲಿ ಶೇ 91ರಷ್ಟು ಅಸಂಘಟಿತ ವಲಯದ ಕಾರ್ಮಿಕರನ್ನು ಗುರುತಿಸಲಾಗಿದ್ದು, ಅವರ ಜೀವನ ಭದ್ರತೆಗೆ ನೆರವಾಗುವಂತಹ ಹತ್ತು ಹಲವು ಯೋಜನೆ, ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರ ರೂಪಿಸಿದೆ. ಕರ್ನಾಟಕ ಪ್ಲಾಟ್‌ಫಾರ್ಮ್ ಆಧಾರಿತ ಗಿಗ್‌ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆ–2025 ತಂದಿದ್ದೇವೆ. ಸ್ವಿಗ್ಗಿ, ಜೊಮಾಟೊ, ರೈಡ್‌ ಶೇರಿಂಗ್‌ ಸೇವೆಗಳಾದ ಓಲಾ, ಉಬರ್‌, ಇ–ಕಾಮರ್ಸ್‌ ಸಂಸ್ಥೆಗಳಾದ ಅಮೆಜಾನ್‌, ಪ್ಲಿಪ್‌ಕಾರ್ಟ್‌, ಬಿಗ್‌ ಬಾಸ್ಕೆಟ್‌ ಮತ್ತಿತರ ಕ್ಷೇತ್ರಗಳಲ್ಲಿ ಪೂರ್ಣಕಾಲಿಕ ಅಥವಾ ಅರೆಕಾಲಿಕ ಡೆಲಿವರಿ ನೌಕರರಿಗೆ ಸಾಮಾಜಿಕ ಭದ್ರತೆ ಸಿಗಲಿದೆ. ಸಿನಿ ಮಸೂದೆಯಡಿ ತೆರೆಯ ಹಿಂದೆ ದುಡಿಯುವ ಸಿನಿಮಾ ಕಾರ್ಮಿಕರು, ಇನ್ನಿತರ ಕಲಾವಿದರಿಗೆ ಸೌಲಭ್ಯ ಸಿಗಲಿದೆ. ಸಾರಿಗೆ ಮಸೂದೆಯಡಿ ಖಾಸಗಿ ಬಸ್, ಆಟೋ ಚಾಲಕರು, ಕ್ಲೀನರ್, ಮೆಕಾನಿಕ್‍ಗಳು ಸೇರಿದಂತೆ ಇತರೆ ವರ್ಗಗಳ ಕಲ್ಯಾಣಕ್ಕಾಗಿ ಯೋಜನೆ ರೂಪಿಸಿದ್ದೇವೆ ಎಂದರು.

ಪರಿಶಿಷ್ಟ ಜಾತಿ ಹಾಗೂ ಪಂಗಡದ ಕಾರ್ಮಿಕರನ್ನು‌ ಕೆಲಸಕ್ಕೆ ಸೇರಿಸಿಕೊಂಡು ಸಣ್ಣ ಕೈಗಾರಿಕೆಗಳು ಅರ್ಧ‌ ವೇತನ ಕೊಟ್ಟರೆ, ನಾವು ಇನ್ನರ್ಧ ವೇತನ ಕೊಡುತ್ತೇವೆ ಎಂದು ಹೇಳಿದರು.

ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಾತನಾಡಿ, ‘ಕೆಜಿಎಫ್, ಬಂಗಾರಪೇಟೆಯಿಂದ ನಿತ್ಯ 25 ಸಾವಿರ ಕಾರ್ಮಿಕರು ಬೆಂಗಳೂರಿಗೆ ಪ್ರಯಾಣಿಸುತ್ತಾರೆ. ಅವರಿಗೆ ಕಾರ್ಮಿಕ ಭವನ ನಿರ್ಮಾಣ ಮಾಡಿಕೊಡಬೇಕು. ನಮ್ಮ ಕ್ಷೇತ್ರದಲ್ಲಿ ಕಾರ್ಮಿಕರ ಮಕ್ಕಳಿಗಾಗಿ ‌ಶ್ರಮಿಕ ವಸತಿ ಶಾಲೆ ಸ್ಥಾಪಿಸಲಿದ್ದು, ಅದಕ್ಕೆ 10 ಎಕರೆ‌ ಜಾಗ ಕೂಡ ನೀಡಲಾಗಿದೆ. ಕೋಮುಲ್ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು,‌‌ ಕ್ಷೇತ್ರದ ಕಾರ್ಮಿಕರ ಹಿತ ಕಾಪಾಡಬೇಕು’ ಎಂದು‌ ಮನವಿ ಮಾಡಿದರು.

ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಕೃಷಿ ಕೂಲಿ ಕಾರ್ಮಿಕರಿಗೂ ಕಾರ್ಮಿಕ ಇಲಾಖೆಯಿಂದ ಸೌಲಭ್ಯ ನೀಡಬೇಕು. ಜಿಲ್ಲೆಯಲ್ಲಿ ವ್ಯವಸಾಯ ಹೆಚ್ಚು. ಹೀಗಾಗಿ, ತೋಟ, ಹೊಲ, ಗದ್ದೆಗಳಲ್ಲಿ ಹೆಚ್ಚು ‌ಜನ ಕಾರ್ಮಿಕರು ದುಡಿಯುತ್ತಿದ್ದಾರೆ ಎಂದು ಹೇಳಿದರು.

ಶ್ರಮಿಕ ವಸತಿ ಶಾಲೆ ಆರಂಭಿಸುತ್ತಿರುವ ಲಾಡ್ ಯೋಜನೆ ಚೆನ್ನಾಗಿದೆ. ಈಗಾಗಲೇ ಬಂಗಾರಪೇಟೆಯಲ್ಲಿ ಆರಂಭವಾಗುತ್ತಿದ್ದು, ಮಾಲೂರಿನಲ್ಲೂ ಆರಂಭಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಅಸಂಘಟಿತ ಕಾರ್ಮಿಕರಿಗೆ ಸವಲತ್ತು ವಿತರಿಸಲಾಯಿತು.

ಶಾಸಕ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಎಂ‌.ಎಲ್‌.ಅನಿಲ್ ‌ಕುಮಾರ್, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ವೈ.ಶಿವಕುಮಾರ್, ‘ಕುಡಾ’ ಅಧ್ಯಕ್ಷ ಮೊಹಮ್ಮದ್ ಹನೀಫ್, ನಗರಸಭೆ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಜಿಲ್ಲಾಧಿಕಾರಿ ಎಂ.ಆರ್.ರವಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ಕಾರ್ಮಿಕ ಇಲಾಖೆಯ ಆಯುಕ್ತ ಎಚ್‌.ಎನ್‌.ಗೋಪಾಲಕೃಷ್ಣ, ರಾಜ್ಯ ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತಾ ಮಂಡಳಿ ಜಂಟಿ ಕಾರ್ಯದರ್ಶಿ ಎಸ್.ಬಿ.ರವಿಕುಮಾರ, ಜಿಲ್ಲಾ ಕಾರ್ಮಿಕ ಅಧಿಕಾರಿ ವರಲಕ್ಷ್ಮಿ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸದಸ್ಯ ಎಚ್.ಜಿ. ರಮೇಶ್, ಕೆ.ಪಿ.ಜಾನಿ, ಆಟೊ ಚಾಲಕರು, ವಿವಿಧ ವಲಯಗಳ ಅಸಂಘಟಿತ ಕಾರ್ಮಿಕರು ಇದ್ದರು.

ವಿವಿಧ ವಲಯಗಳ ಕಾರ್ಮಿಕರು ಪಾಲ್ಗೊಂಡಿದ್ದರು
ರಾಜ್ಯ ಸರ್ಕಾರವು ಪೆಟ್ರೋಲ್‌ ಹಾಗೂ ಡೀಸೆಲ್‌ಗೆ ಪ್ರತಿ ಲೀಟರ್‌ಗೆ 50 ಪೈಸೆಯಿಂದ ₹1 ಹೆಚ್ಚುವರಿ ಸೆಸ್‌ ವಿಧಿಸಿ ಆ ಹಣವನ್ನು ಕಾರ್ಮಿಕರ ಕಲ್ಯಾಣಕ್ಕೆ ನೀಡಬೇಕು. ಈ ಬಗ್ಗೆ ಮನವಿ ಮಾಡಿದ್ದೇನೆ.
– ಸಂತೋಷ್‌ ಲಾಡ್‌, ಸಚಿವ

ಕಾಂಗ್ರೆಸ್ ಕಚೇರಿಗೆ ಗೈರು, ಕಾರ್ಯಕ್ರಮಕ್ಕೆ ಹಾಜರ್‌!

ಕೋಲಾರ ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಪಕ್ಷದ ಕಾರ್ಯಕ್ರಮಕ್ಕೆ ಗೈರಾಗಿದ್ದ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಅಸಂಘಟಿತ ಕಾರ್ಮಿಕರಿಗೆ ಸವಲತ್ತು ವಿತರಿಸುವ ಕಾರ್ಯಕ್ರಮಕ್ಕೆ ಬಂದಿದ್ದರು. ನಾರಾಯಣಸ್ವಾಮಿ ಹಾಗೂ ವಿಧಾನ ಪರಿಷತ್‌ ಸದಸ್ಯ ಅನಿಲ್ ಕುಮಾರ್‌ ಅಕ್ಕಪಕ್ಕ ಕುಳಿತಿದ್ದರು. ಆದರೆ ಪರಸ್ಪರ ಮಾತನಾಡಲಿಲ್ಲ. ನಂಜೇಗೌಡ ಕೊತ್ತೂರು ಮಂಜುನಾಥ್‌ ಜೊತೆಯೂ ಮಾತನಾಡಲಿಲ್ಲ. ಭಾಷಣ ಮಾಡುವಾಗ ಪರಸ್ಪರ ಹೆಸರು ಪ್ರಸ್ತಾಪ ಮಾಡಿದರು. ಶಾಸಕಿ ರೂಪಕಲಾ‌ ಶಶಿಧರ್ ಗೈರಾಗಿದ್ದರು. ಜೆಡಿಎಸ್ ಶಾಸಕರು ಪಾಲ್ಗೊಂಡಿರಲಿಲ್ಲ. ಸಂಸದ ಎಂ.ಮಲ್ಲೇಶ್‌ ಬಾಬು ಕಳಿಸಿದ ಸಂದೇಶವನ್ನು ಸಂಘಟಕರು ಓದಿದರು.

ತಮ್ಮ ಕಾಲಿಗೆ ಬೀಳುತ್ತೇನೆ: ಕೊತ್ತೂರು

‘ಭಿಕ್ಷಕರು ಗಿಣಿ ಶಾಸ್ತ್ರಗಾರರು ಹಾವಾಡಿಗರು ಬುಡುಬುಡುಕೆಯಂಥ ಸಣ್ಣಸಣ್ಣ ಜಾತಿಯವರನ್ನು ತುಳಿದು ಓಡಿಸಲಾಗುತ್ತಿದೆ. ದಬ್ಬಾಳಿಕೆ ಅನ್ಯಾಯ ನಡೆಯುತ್ತಿದೆ. ಇಂಥ ವರ್ಗದವರನ್ನು ಕಾರ್ಮಿಕ ಇಲಾಖೆಯ ಗುರುತಿಸಿ ಸೌಲಭ್ಯ ನೀಡುತ್ತಿರುವುದಕ್ಕೆ ತಮ್ಮ ಕಾಲಿಗೆ ಬೀಳುತ್ತೇನೆ’ ಎಂದು ಶಾಸಕ ಕೊತ್ತೂರು ಮಂಜುನಾಥ್ ಸಚಿವ ಸಂತೋಷ್‌ ಲಾಡ್‌ ಅವರಿಗೆ ಹೇಳಿದರು.

‘ಎಲ್ಲರಿಗೂ ಮೀಸಲಾತಿ ‌ಸಿಕ್ಕಿದೆ. ಆದರೆ ಇಂಥ ವರ್ಗದವರಿಗೆ ಈವರೆಗೆ ಯಾವುದೇ ಸೌಲಭ್ಯ ಸಿಕ್ಕಿರಲಿಲ್ಲ. ತಹಶೀಲ್ದಾರರ ಕಚೇರಿ ಎಲ್ಲಿದೆ ಎಂಬುದೂ ಅವರಿಗೆ ಗೊತ್ತಿಲ್ಲ. ಕಾರ್ಮಿಕ ಇಲಾಖೆಯ ಜಿಲ್ಲಾ ಅಧಿಕಾರಿಗಳು ಇಂಥವರನ್ನು ಹುಡುಕಿ ಸೌಲಭ್ಯ ತಲುಪಿಸಬೇಕು‌’ ಎಂದು ಸೂಚನೆ‌ ನೀಡಿದರು.

ಹೊರಗುತ್ತಿಗೆ ನೌಕರರಿಗೆ ಸೊಸೈಟಿ

ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿನ ಹೊರಗುತ್ತಿಗೆ ಸಿಬ್ಬಂದಿಯ ಕಲ್ಯಾಣಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಸೊಸೈಟಿಗಳ ಸ್ಥಾಪನೆಯ ಪ್ರಸ್ತಾವ ಸರ್ಕಾರದ ಮಟ್ಟದಲ್ಲಿದೆ. ಇದರಿಂದ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಲು ಸಾಧ್ಯವಾಗಲಿದೆ ಎಂದು ಸಂತೋಷ್‌ ಲಾಡ್‌ ಹೇಳಿದರು.

ರಾಜ್ಯದ ವಿವಿಧ ಇಲಾಖೆಗಳಲ್ಲಿ 3 ಲಕ್ಷಕ್ಕೂ ಅಧಿಕ ಹೊರಗುತ್ತಿಗೆ ನೌಕರರು ಇದ್ದಾರೆ. ಅವರಿಗೆ ಸೊಸೈಟಿ‌ ಮಾಡಲಿದ್ದು ನೇಮಕ ನಡೆಸುವ ಸೌಲಭ್ಯ ಕಲ್ಪಿಸುವ ಪ್ರಕ್ರಿಯೆಯನ್ನು ಇದರ ಮೂಲಕವೇ ನಡೆಸಲಾಗುವುದು. ಈ ವಿಷಯ ಸದ್ಯದಲ್ಲೇ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ‌ ಬರಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.