
ಎಚ್.ಎಂ. ರೇವಣ್ಣ
ಕೋಲಾರ: ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ನಿಟ್ಟಿನಲ್ಲಿ ಅಭಿವೃದ್ಧಿ ತುಸು ಕಡಿಮೆ ಆಗಿರಬಹುದು. ಅದನ್ನು ನಾವು ಒಪ್ಪಿಕೊಳ್ಳುತ್ತೇವೆ. ವಿರೋಧ ಪಕ್ಷದವರಂತೆ ರೀತಿ ಮೊಂಡು ವಾದ ಮಾಡುವುದಿಲ್ಲ. ಆದರೆ, ಇಡೀ ದೇಶಕ್ಕೆ ನಮ್ಮ ಗ್ಯಾರಂಟಿ ಮಾದರಿಯಾಗಿದೆ. ಆದರೆ, ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ರಾಜ್ಯ ದೇಶದಲ್ಲೇ 2ನೇ ಸ್ಥಾನ ಹೊಂದಿದೆ, ತಲಾ ಆದಾಯದಲ್ಲಿ ಪ್ರಥಮ ಸ್ಥಾನದಲ್ಲಿದೆ, ಬಜೆಟ್ ಗಾತ್ರ ಹೆಚ್ಚಾಗಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದರು.
ನಗರದ ಹೊರ ವಲಯದ ಅರಣ್ಯ ಅತಿಥಿ ಗೃಹದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ದೇಶದ ಹಲವು ರಾಜ್ಯಗಳಲ್ಲಿ ನಮ್ಮ ಗ್ಯಾರಂಟಿ ಮಾದರಿಯಲ್ಲಿ ಯೋಜನೆ ಅಳವಡಿಸಿಕೊಂಡಿದ್ದಾರೆ. ಆರ್ಥಿಕ ತಜ್ಞರು ಪಂಚ ಗ್ಯಾರಂಟಿಗಳನ್ನು ಶ್ಲಾಘಿಸಿದ್ದಾರೆ. ಗ್ಯಾರಂಟಿಗಳು ಬಿಟ್ಟಿ ಭಾಗ್ಯ ಅಲ್ಲ; ಮಹಿಳಾ ಸಬಕಳೀರಣಕ್ಕೆ ಕಾರಣವಾಗಿರುವ ಯೋಜನೆಗಳು’ ಎಂದರು.
ರಾಜ್ಯ ಸರ್ಕಾರ ಈವರೆಗೆ ₹ 1.17 ಲಕ್ಷ ಕೋಟಿಯಷ್ಟು ಹಣವನ್ನು ಗ್ಯಾರಂಟಿ ಯೋಜನೆಗಳ ಮೂಲಕ ನೇರವಾಗಿ ಫಲಾನುಗಳ ಮನೆಗೆ ತಲುಪಿಸಲಾಗಿದೆ. ಮುಂದಿನ ಚುನಾವಣೆಯಲ್ಲೂ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ ವಿಚಾರ ಜನರಿಗೆ ತಿಳಿಸಿಯೇ ಮತ ಕೇಳುತ್ತೇವೆ ಎಂದು ಹೇಳಿದರು.
ಶಕ್ತಿ ಯೋಜನೆಯಡಿ ಬಸ್ಸಿನಲ್ಲಿ ಮಹಿಳೆಯರು ಉಚಿತವಾಗಿ 665 ಕೋಟಿ ಟ್ರಿಪ್‌ಗಳು ಪ್ರಯಾಣ ಮಾಡಿದ್ದಾರೆ. ₹ 17,858 ಕೋಟಿ ಖರ್ಚಾಗಿದೆ. ಇದು ಗಿನ್ನಿಸ್ ದಾಖಲೆಗೂ ಸೇರಿದೆ. ಮಹಿಳೆಯರು ಪುಣ್ಯ ಕ್ಷೇತ್ರಗಳಿಗೆ ಹೋಗಿ ಬರುತ್ತಿದ್ದಾರೆ. ಕೋಲಾರ ಜಿಲ್ಲೆಯಲ್ಲಿ 13.59 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ₹ 400 ಕೋಟಿ ಖರ್ಚಾಗಿದೆ ಎಂದರು.
ಒಳ್ಳೆಯ ಕಾರ್ಯಕ್ರಮಗಳನ್ನು ನಾವು ನೀಡಿದ್ದೇವೆ, ಆದರೆ, ಹಿಂದಿನ ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ ಕಾರ್ಯಕ್ರಮಗಳನ್ನೇ ನಿಲ್ಲಿಸಿದ್ದರು. ಹಿಂದೆ ಬೆಂಗಳೂರಿನಲ್ಲಿ ಬಿಜೆಪಿ ಶಾಸಕರಿಗೆ ₹ 100 ಕೋಟಿ ನೀಡಿದ್ದರು. ಆದರೆ, ನಾವು ಅಂತಹ ತಾರತಮ್ಯ ಮಾಡಿಲ್ಲ ಎಂದು ತಿಳಿಸಿದರು.
ಮಹಿಳೆಯರಿಗೆ ಉಚಿತ ಸಾರಿಗೆ ನೀಡಿದ್ದು, ಹಳೆ ಬಸ್ಸುಗಳು ಎಲ್ಲೆಂದರಲ್ಲಿ ನಿಲ್ಲುತ್ತವೆ ಎಂಬ ವಿಚಾರಕ್ಕೆ, ಈಗಾಗಲೇ ಮೂರೂವರೆ ಬಸ್ ಖರೀದಿಸಿ ವಿತರಿಸಲಾಗಿದೆ. ಇನ್ನೂ 900 ಹೊಸ ಬಸ್ ಹಾಕಲಾಗುವುದು ಎಂದರು.
ಪ್ರಾಧಿಕಾರದ ಉಪಾಧ್ಯಕ್ಷರಾದ ಪುಷ್ಪಾ ಅಮರನಾಥ, ಸೂರಜ್ ಹೆಗ್ಡೆ, ಜಿಲ್ಲಾಧ್ಯಕ್ಷ ವೈ.ಶಿವಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.