ADVERTISEMENT

ದ್ವೇಷ ಬಿತ್ತಿ ವೋಟು; ಆಮೇಲೆ ಲೂಟಿ: ಬಿಜೆಪಿ ವಿರುದ್ಧ ಹರಿಹಾಯ್ದ ಕೃಷ್ಣ ಬೈರೇಗೌಡ

​ಪ್ರಜಾವಾಣಿ ವಾರ್ತೆ
Published 5 ಜನವರಿ 2023, 14:20 IST
Last Updated 5 ಜನವರಿ 2023, 14:20 IST
 ಕೃಷ್ಣ ಬೈರೇಗೌಡ
 ಕೃಷ್ಣ ಬೈರೇಗೌಡ   

ಕೋಲಾರ: ‘ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಪಕ್ಷದ ನಿಜವಾದ ಕಾರ್ಯಸೂಚಿಯನ್ನು ಬಿಚ್ಚಿಟ್ಟಿದ್ದಾರೆ. ಚುನಾವಣೆ ಬಂದಾಗ ಜನರ ಮನಸ್ಸಿನಲ್ಲಿ ದ್ವೇಷ ಬಿತ್ತಿ ವೋಟು ಪಡೆಯುವುದು, ಆಮೇಲೆ ವಿಧಾನಸೌಧ ಮೂರನೇ ಮಹಡಿಯಲ್ಲಿ ಕುಳಿತು 40 ಪರ್ಸೆಂಟ್‌ ಲೂಟಿ ಹೊಡೆಯುವುದು’ ಎಂದು ಶಾಸಕ ಕೃಷ್ಣ ಬೈರೇಗೌಡ ಆರೋಪಿಸಿದರು.

ತಾಲ್ಲೂಕಿನ ಮದ್ದೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಹಣ ಲೂಟಿ ಹೊಡೆಯಲು ಲವ್‌ ಜಿಹಾದ್‌ ಉಪಯೋಗಿಸುತ್ತಿದ್ದಾರೆ. ಈ ಮೂಲಕ ಜನರ ಹೊಟ್ಟೆಗೆ ಬೆಂಕಿ ಹಾಕುತ್ತಿದ್ದಾರೆ. ಮುಂದಕ್ಕೂ ಅಷ್ಟೆ ಅಮಾಯಕರ ಹೆಸರಿನಲ್ಲಿ ಹಿಂದೂಗಳನ್ನು ಬಲಿಕೊಟ್ಟು, ಅವರ ಹೆಸರಿನಲ್ಲಿ ವೋಟು ಪಡೆದು ಲೂಟಿ ಹೊಡೆಯುವುದನ್ನು ಬಿಟ್ಟರೆ ಅಭಿವೃದ್ಧಿಯ ಅ, ಆ ಕೂಡ ಅವರಿಗೆ ಗೊತ್ತಿಲ್ಲ. ಅಧ್ಯಕ್ಷರ ಬಾಯಿಂದಲೇ ಇದು ಹೊರಬಂದು ಬಿಜೆಪಿಯ ನಿಜವಾದ ಬಣ್ಣ ಬಯಲಾಗಿದೆ’ ಎಂದರು.

‘ನಾಲ್ಕು ವರ್ಷಗಳಿಂದ ಜನಪರವಾದ ಒಂದೂ ಕಾರ್ಯಕ್ರಮ ಮಾಡದ ಕಾರಣ ರಸ್ತೆ, ನೀರು ವಿಚಾರ ಎತ್ತುವುದು ಬೇಡ ಎನ್ನುತ್ತಿದ್ದಾರೆ. ನಿರುದ್ಯೋಗ, ಅಗತ್ಯ ವಸ್ತುಗಳ ದರ ಏರಿಕೆ ಜನರನ್ನು ಸುಡುತ್ತಿವೆ. ಕಾಂಗ್ರೆಸ್‌ನ ಐದು ವರ್ಷಗಳ ಅವಧಿಯಲ್ಲಿ ಅನ್ನಭಾಗ್ಯ, ಕೃಷಿ ಭಾಗ್ಯ, ಇಂದಿರಾ ಕ್ಯಾಂಟೀನ್‌ ಸೇರಿ 20 ಕಾರ್ಯಕ್ರಮ ಕೊಟ್ಟೆವು ಎಂಬುದನ್ನು ನಾನು ಹೇಳಬಲ್ಲೆ’ ಎಂದು ತಿರುಗೇಟು ನೀಡಿದರು.

ADVERTISEMENT

‘ಕೋಲಾರ ಜಿಲ್ಲೆ ಅಭಿವೃದ್ಧಿಯಾಗಬೇಕು. ಹೀಗಾಗಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಕೋಲಾರ ಕ್ಷೇತ್ರದಿಂದ ಗೆಲ್ಲಿಸಿ ಕಳುಹಿಸಬೇಕು. ಅವರ ಮೂಲಕ ಜಿಲ್ಲೆಯ ಕೆಲಸ ಮಾಡಿಸಿಕೊಳ್ಳಬೇಕು, ಹೆಚ್ಚು ಅನುದಾನ ತರಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.