ADVERTISEMENT

ಕೋಲಾರ | ಜಿಲ್ಲೆಯಲ್ಲಿ ಮುಂದುವರಿದ ಮಳೆ ಅಬ್ಬರ

ತಗ್ಗುಪ್ರದೇಶಗಳು ಜಲಾವೃತ, ಉಕ್ಕಿ ಹರಿಯುತ್ತಿರುವ ಕೆರೆಗಳು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 4:15 IST
Last Updated 19 ಅಕ್ಟೋಬರ್ 2025, 4:15 IST
ಭಾರಿ ಮಳೆಯಿಂದ ರಸ್ತೆಯಿಡೀ ಜಲಾವೃತ
ಭಾರಿ ಮಳೆಯಿಂದ ರಸ್ತೆಯಿಡೀ ಜಲಾವೃತ   

ಕೋಲಾರ: ಜಿಲ್ಲೆಯಲ್ಲಿ ಕೋಲಾರ ನಗರ ಸೇರಿದಂತೆ ಹಲವೆಡೆ ಮಳೆ ಅಬ್ಬರ ಮುಂದುವರಿದಿದ್ದು, ಕೆರೆ ಕಾಲುವೆಗಳು ತುಂಬಿ ಹರಿಯುತ್ತಿವೆ.

ಶನಿವಾರ ಮಧ್ಯಾಹ್ನದಿಂದಲೇ ಧಾರಾಕಾರ ಮಳೆ ಸುರಿಯಿತು. ವಾರದಿಂದ ಇದೇ ಪರಿಸ್ಥಿತಿ ಇದ್ದು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಬಡಾವಣೆ ರಸ್ತೆಗಳು ಕೆಸರುಮಯವಾಗಿವೆ. ಇನ್ನು ರಸ್ತೆ ಗುಂಡಿಗಳಲ್ಲಿ ನೀರು ತುಂಬಿಕೊಂಡಿದ್ದು, ವಾಹನ ಸವಾರರ ಪರದಾಟ ಮುಂದುವರಿದಿದೆ.

ಮುಳಬಾಗಿಲು ತಾಲ್ಲೂಕಿನ ಆಲಂಗೂರಿನಲ್ಲಿ 39.5 ಮಿ.ಮೀ (4 ಸೆಂ.ಮೀ.) ಮಳೆಯಾಗಿದ್ದು, ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾದ ಪ್ರದೇಶ ಕೂಡ.

ADVERTISEMENT

ಇದೇ ತಾಲ್ಲೂಕಿನ ಬಲ್ಲದಲ್ಲಿ 38 ಮಿ.ಮೀ., ಊರುಕುಂಟೆಮಿಟ್ಟೂರಿನಲ್ಲಿ 37.5 ಮಿ.ಮೀ., ಗುಮ್ಮಕಲ್ಲಿನಲ್ಲಿ 34 ಮಿ.ಮೀ., ಮೋತಕಪಲ್ಲಿಯಲ್ಲಿ 33.5 ಮಿ.ಮೀ., ಸೊನ್ನವಾಡಿಯಲ್ಲಿ 28.5 ಮಿ.ಮೀ., ಧೂಳಪಲ್ಲಿಯಲ್ಲಿ 28 ಮಿ.ಮೀ., ಬಂಗಾರಪೇಟೆ ತಾಲ್ಲೂಕಿನ ದೊಡ್ಡೂರು ಕರಪನಹಳ್ಳಿಯಲ್ಲಿ 30.5 ಮಿ.ಮೀ., ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರಿನಲ್ಲಿ 22.5 ಮಿ.ಮೀ. ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ.

ಇದು ಶನಿವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಯ ಮಾಹಿತಿಯಾಗಿದ್ದು, ನಂತರವೂ ಜಿಲ್ಲೆಯಲ್ಲಿ ಭಾರಿ ಮಳೆಯಾಗಿದೆ.

ಜಿಲ್ಲೆಯ ಬಹುತೇಕ ಕೆರೆಗಳು ಭರ್ತಿಯಾಗಿ ಕೋಡಿ ಒಡೆದಿದ್ದರೆ, ಇತ್ತ ಕಾಲುವೆಗಳು ಉಕ್ಕಿ ಹರಿಯುತ್ತಿವೆ. ಹಲವು ಉದ್ಯಾನಗಳು, ತಗ್ಗು ಪ್ರದೇಶಗಳು, ಕಾಲೊನಿಗಳು, ದೇಗುಲಗಳು ಜಲಾವೃತವಾಗಿವೆ. ನಗರದ ಅಂತರಗಂಗೆ ರಸ್ತೆಯಲ್ಲಿರುವ ಕುವೆಂಪು ಉದ್ಯಾನ ಕೆಸರುಗದ್ದೆಯಾಗಿದೆ. ಇದೇ ರಸ್ತೆಯಲ್ಲಿ ಪತ್ರಕರ್ತರ ಭವನದ ಎದುರು ರಸ್ತೆಯಲ್ಲಿ ನೀರು ತುಂಬಿಕೊಂಡಿದೆ.

ಬಡಾವಣೆ ರಸ್ತೆಗಳ ಗುಂಡಿಗಳಲ್ಲಿ ನೀರು ತುಂಬಿಕೊಂಡು ಕೆಸರು ಹೊಂಡಳಾಗಿ ಮಾರ್ಪಟ್ಟಿವೆ. ದ್ವಿಚಕ್ರ ವಾಹನ ಸವಾರರು ಪರದಾಡುತ್ತಿರುವುದು ಕಂಡುಬಂತು. ಯುಜಿಡಿಗಳ ಸಮಸ್ಯೆಯಿಂದ ಕಲುಷಿತ ನೀರು ಇಡೀ ರಸ್ತೆಯಲ್ಲಿ ಹರಿಯುತ್ತಿದೆ. ಈ ಪರಿಣಾಮ ವಾಹನ ಸವಾರರು ಹಾಗೂ ಸಾರ್ವಜನಿಕರು ಮೂಗುಮುಚ್ಚಿಕೊಂಡು ರಸ್ತೆಯಲ್ಲಿ ಓಡಾಡುವ ಪರಿಸ್ಥಿತಿ ಉಂಟಾಗಿತ್ತು. ತಿಂಗಳಾನುಗಟ್ಟಲೇ ಚರಂಡಿಗಳನ್ನು ಸ್ವಚ್ಛಗೊಳಿಸದ ಕಾರಣ ಈ ಪರಿಸ್ಥಿತಿ ಬಂದೊದಗಿದೆ.

ರಸ್ತೆ ಜಲಾವೃತಗೊಂಡಿದ್ದರಿಂದ ವಾಹನ ಸವಾರರ ಪರದಾಟ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.