ಮಾಜಿ ಸಂಸದ ಎಸ್.ಮುನಿಸ್ವಾಮಿ
ಕೋಲಾರ: ಹಿಂದೂ ವಿರೋಧಿ ಮಿಷನರಿಗಳು ಒಟ್ಟಾಗಿ ಸೇರಿಕೊಂಡು ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುತ್ತಿವೆ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಆರೋಪಿಸಿದರು.
ಜಿಲ್ಲಾಡಳಿತದ ಭವನದ ಮುಂದೆ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಿಂದೂ ದೇಗುಲಗಳು, ಮಠಗಳನ್ನು ಗುರಿಯಾಗಿಸಿ ಷಡ್ಯಂತ್ರ ನಡೆಯುತ್ತಿದೆ. ಹಿಂದೂ ವಿರೋಧಿ ಕೃತ್ಯಗಳಿಗೆ ಫಂಡಿಂಗ್ ಬರುತ್ತಿದೆ’ ಎಂದರು.
‘ಈ ಬಗ್ಗೆ ಕೂಡಲೇ ತನಿಖೆ ಮಾಡಬೇಕು. ಮಹೇಶ್ ತಿಮ್ಮರೋಡಿ ಎಂಬಾತನನ್ನು ಕೂಡಲೇ ಬಂಧಿಸಬೇಕು. ಆತನ ಬ್ಯಾಂಕ್ ಖಾತೆಯನ್ನು ಪರಿಶೀಲಿಸಬೇಕು’ ಎಂದು ಒತ್ತಾಯಿಸಿದರು.
‘ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ನೋಡಿದರೆ ಅವರ ಜೊತೆ ಸೇರಿಕೊಂಡು ಪಿತೂರಿ ನಡೆಸುತ್ತಿದೆ ಎಂಬ ಅನುಮಾನ ಬರುತ್ತಿದೆ’ ಎಂದು ಹೇಳಿದರು.
‘ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟಿರುವುದಾಗಿ ಮುಸುಕುಧಾರಿ ವ್ಯಕ್ತಿ ನೀಡಿದ ಹೇಳಿಕೆಯಲ್ಲಿ ಸತ್ಯವಿಲ್ಲ. ಈವರೆಗೆ ಒಂದೆರಡು ಕಡೆ ಬಿಟ್ಟರೆ ಬೇರೆಲ್ಲೂ ಕಳೆಬರಹ ಸಿಕ್ಕಿಲ್ಲ. ಸೌಜನ್ಯ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದರೂ ಶಿಕ್ಷೆಯಾಗಬೇಕೆಂದು ಮೊದಲಿನಿಂದಲೂ ನಾವು ಒತ್ತಾಯ ಮಾಡುತ್ತಿದ್ದೇವೆ. ನಾವು ಸೌಜನ್ಯ ಪರವಾಗಿದ್ದೇವೆ’ ಎಂದರು.
‘ಧರ್ಮಸ್ಥಳದ ಧರ್ಮಾಧಿಕಾರಿ ಮೇಲೆ ದೊಡ್ಡ ಷಡ್ಯಂತ್ರ ನಡೆಯುತ್ತಿದೆ, ಅನಾಥ ಶವಗಳನ್ನು ಧರ್ಮಸ್ಥಳದ ಅವರಣದಲ್ಲಿ ಹೂತ್ತಿಟ್ಟು, ಧರ್ಮಸ್ಥಳದ ಮೇಲೆ ಅಪ್ರಪಚಾರ ಮಾಡಲಾಗುತ್ತಿದೆ. ಇದಕ್ಕೆ ಎಸ್‌ಐಟಿ ಬಿಟ್ಟು ಪ್ರಕರಣವನ್ನು ದಾರಿ ತಪ್ಪಿಸುವ ಕೆಲಸ ಮಾಡಿದರೆ ರಾಜ್ಯದಾದ್ಯಂತ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.
‘ಮುಸುಕುಧಾರಿಯನ್ನು ಕಳುಹಿಸಿದ್ದು ಯಾರು? ಯೂಟ್ಯೂಬರ್‌ನ ಅಲ್ಲಿಗೆ ಕಳುಹಿಸಿದ್ದು ಯಾರು? ಇವರ ಹಿಂದೆ ಯಾರು ಇದ್ದಾರೆ ಎಂಬುದು ಗೊತ್ತಾಗಬೇಕು’ ಎಂದು ಆಗ್ರಹಿಸಿದರು.
ಮತಗಳ್ಳತನ ಕುರಿತು ರಾಹುಲ್ ಗಾಂಧಿ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿ, ‘ಮತಗಳ್ಳತನ ಮಾಡಿ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡಿದ್ದು ಯಾರಾದರೂ ಇದ್ದರೆ ಅದು ಪ್ರಧಾನಿ ಹುದ್ದೆ ಕಳೆದುಕೊಂಡ ಇಂದಿರಾ ಗಾಂಧಿ ಮಾತ್ರ. ರಾಹುಲ್ ಅವರಿಗೆ ಲೋಕಜ್ಞಾನ ಇಲ್ಲ. ಅವರ ಹೋರಾಟಕ್ಕೆ ಕಾವಡೆ ಕಾಸಿನ ಕಿಮ್ಮತ್ತಿಲ್ಲ’ ಎಂದರು.
‘ಮತದಾನ ನಡೆದಾಗ ರಾಜ್ಯದಲ್ಲಿ ಸರ್ಕಾರ ಯಾವುದು ಇತ್ತು? ಚುನಾವಣಾಧಿಕಾರಿಗಳು ಯಾರು ಇದ್ದರು? ಆಕ್ಷೇಪಣೆ ಸಲ್ಲಿಸಲು ಸಮಯವಿದ್ದಾಗ ಏನು ಮಾಡುತ್ತಿದ್ದರು’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.