ADVERTISEMENT

ಬಿಜೆಪಿ ಸರ್ಕಾರ ಒಂದು ಮನೆ ಕೊಟ್ಟಿದ್ದರೆ ರಾಜಕೀಯ ನಿವೃತ್ತಿ: ಜಮೀರ್‌ ಅಹ್ಮದ್‌

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 12:39 IST
Last Updated 16 ಜೂನ್ 2025, 12:39 IST
   

ಕೋಲಾರ: ‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಥವಾ ರಾಜೀವ್‌ ಗಾಂಧಿ ವಸತಿ ನಿಗಮದ ಯೋಜನೆಗಳಡಿ ಕನಿಷ್ಠ ಒಂದು ಮನೆ ಕೊಟ್ಟಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಇದು ಬಿಜೆಪಿಗೆ ನನ್ನ ಸವಾಲು’ ಎಂದು ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಕೊಳೆಗೇರಿ ಮಂಡಳಿಗೆ 1.8 ಲಕ್ಷ ಮನೆ ಹಾಗೂ ರಾಜೀವ್‌ ಗಾಂಧಿ ಯೋಜನೆಯಡಿ 47,860 ಮನೆ ನೀಡಲು ಅನುಮೋದನೆ ನೀಡಿದ್ದರು. ನಂತರ ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ, ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದರು. ಒಂದು ಮನೆ ಕೊಡಲೂ ಅವರಿಗೆ ಸಾಧ್ಯವಾಗಲಿಲ್ಲ. ಅವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ’ ಎಂದರು.

‘ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ಮನೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರದವರು ₹ 1.50ಲಕ್ಷ ಕೊಡುತ್ತಾರೆ. ಆದರೆ, ಜಿಎಸ್‌ಟಿ ಹಾಕಿ ₹ 1.38 ಲಕ್ಷ ವಾಪಸ್‌ ಪಡೆಯುತ್ತಾರೆ. ನಾಮಕಾವಸ್ತೆಗೆ ಅವರು ಹಣ ನೀಡುತ್ತಾರೆ. ಬಡವರ ಮನೆ ನಿರ್ಮಾಣಕ್ಕೆ ಶೇ 18ರಷ್ಟು ಜಿಎಸ್‌ಟಿ ಹಾಕುತ್ತಾರೆ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ಮತ್ತೆ ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ಕೊಳೆಗೇರಿ ಮಂಡಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ₹ 500 ಕೋಟಿ ಅನುದಾನ ನೀಡಿದ್ದು, 36,780 ಮನೆ ವಿತರಿಸಲಾಗಿದೆ. ಮುಂದೆ ದೊಡ್ಡಮಟ್ಟದ ಸಮಾವೇಶ ನಡೆಸಿ 42,253 ಮನೆ ನೀಡಲಿದ್ದೇವೆ. ಅದೇ ಯೋಜನೆಯಡಿ ಕೋಲಾರದಲ್ಲೂ ಮನೆ ವಿತರಿಸಲಾಗುವುದು’ ಎಂದರು.

‘ರಾಜ್ಯದಲ್ಲಿ 2.30 ಲಕ್ಷ ಮನೆಗಳ ವಿತರಣೆ ವಿಚಾರವಾಗಿ ಫಲಾನುಭವಿಗಳು ತಮ್ಮ ಪಾಲಿನ ಹಣ ಪಾವತಿಸಿಲ್ಲ. ಹೀಗಾಗಿ, ಕೆಲವೆಡೆ ಮನೆ ವಿತರಣೆ ಬಾಕಿ ಇದೆ’ ಎಂದು ಹೇಳಿದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಐದು ವರ್ಷ ಇರಬೇಕೆಂಬುದು ನನ್ನ ಆಸೆ. ಆದರೆ, ನಮ್ಮದು ಹೈಕಮಾಂಡ್‌ ಪಕ್ಷ. ಅವರು ಹೇಳಿದಂತೆ ನಡೆಯುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.