
ಕೋಲಾರ: ನಗರದ ಕ್ಲಾಕ್ ಟವರ್ ಸಮೀಪದ ಇದ್ರಿಶಾ ಮೊಹಲ್ಲಾದಲ್ಲಿ ಅಕ್ರಮವಾಗಿ ಎಲ್‌ಪಿಜಿ ಗ್ಯಾಸ್ ರೀಫಿಲ್ಲಿಂಗ್ ನಡೆಸಲಾಗುತ್ತಿದ್ದು, ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ದಂಧೆ ಬಯಲು ಮಾಡಿದ್ದಾರೆ.
ಕೋಲಾರ ಗ್ರಾಮಾಂತರ ತಾಲ್ಲೂಕಿನ ಆಹಾರ ನಿರೀಕ್ಷಕ ಮಂಜುನಾಥ ಸಿ.ವಿ. ನೇತೃತ್ವದಲ್ಲಿ ಪರಿಶೀಲನೆ ನಡೆಸಿದ ವೇಳೆ, ಯಾವುದೇ ಪರವಾನಗಿ ಇಲ್ಲದೇ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್‌ಗಳಿಂದ ರೀಫಿಲ್ಲಿಂಗ್ ಮಾಡುತ್ತಿರುವುದು ಪತ್ತೆಯಾಗಿದೆ.
ಈ ವೇಳೆ ಸ್ಥಳದಿಂದ 25 ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳು, 2 ಗ್ಯಾಸ್ ರೀಫಿಲ್ಲಿಂಗ್ ಪಂಪ್‌ಗಳು, 2 ಎಲೆಕ್ಟ್ರಾನಿಕ್ ತೂಕ ಯಂತ್ರಗಳು ವಶಕ್ಕೆ ಪಡೆಯಲಾಗಿದೆ.
ಮಂಜುನಾಥ್ ನೀಡಿದ ದೂರು ಆಧಾರದ ಮೇಲೆ ಜುಬೈರ್ ಮತ್ತು ಕಟ್ಟಡ ಮಾಲೀಕನ ವಿರುದ್ಧ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 287, ಅಗತ್ಯ ವಸ್ತುಗಳ ಕಾಯ್ದೆ, ಎಲ್‌ಪಿಜಿ ನಿಯಂತ್ರಣ ಮತ್ತು ವಿತರಣಾ ಆದೇಶ–2000ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ.
ಆಹಾರ ಇಲಾಖೆ ಉಪನಿರ್ದೇಶಕಿ ಲತಾ, ತಾಲ್ಲೂಕು ಆಹಾರ ನಿರೀಕ್ಷಕ ಸುಭಾಷ್, ಸಿಬ್ಬಂದಿ ಹರೀಶ್ ಜೊತೆ ನ್ಯಾಯಬೆಲೆ ಅಂಗಡಿಗಳ ತಪಾಸಣೆ ನಡೆಸುತ್ತಿದ್ದಾಗ ಈ ವಿಚಾರ ಗೊತ್ತಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಾರ್ವಜನಿಕರಿಗೆ ಅಪಾಯ ಉಂಟುಮಾಡುವ ರೀತಿಯಲ್ಲಿ ಈ ಅಕ್ರಮ ಚಟುವಟಿಕೆ ನಡೆಯುತ್ತಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.