ಕೋಲಾರ: ಜಿಲ್ಲೆಯಲ್ಲಿ ಅನೇಕ ಕಲ್ಲು ಗಣಿಗಾರಿಕೆಗಳಿದ್ದು, ಬಹುತೇಕ ಕ್ವಾರಿಗಳಿ ನಿಯಮಾವಳಿ ಉಲ್ಲಂಘನೆ ಮಾಡಿವೆ ಎಂದು ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದ್ದಾರೆ.
ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿರುವ ಅವರು, ‘ಸರ್ಕಾರದ ನಿಯಮ ಮೀರಿ, ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮಾಡುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.
‘1981ರ ಪರಿಸರ ನಿಯಮಾವಳಿಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿವೆ. ಇದರಿಂದ ಪರಿಸರದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ. ದೂಳಿನಿಂದ ವಾತಾವರಣ ಹದೆಗೆಡುತ್ತಿದೆ. ಜನ, ಜಾನುವಾರಿಗಳಿಗೂ ತೊಂದರೆ ಉಂಟಾಗಿದೆ’ ಎಂದಿದ್ದಾರೆ.
‘ಕಲ್ಲು ಬಂಡೆ ಸ್ಫೋಟಕದಿಂದ ಉಂಟಾಗುತ್ತಿರುವ ಶಬ್ದದಿಂದ ವೃದ್ಧರು, ಮಕ್ಕಳಿಗೆ ತೊಂದರೆ ಆಗುತ್ತಿದೆ. ಹೃದಯಾಘಾತಕ್ಕೂ ಕಾರಣವಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
‘ಕೇವಲ ಮಾಲೂರು ತಾಲ್ಲೂಕಿನಲ್ಲೇ 23 ಕಲ್ಲು ಗಣಿಗಳಿವೆ. ಟೇಕಲ್ ಹೋಬಳಿ ನನ್ನ ಕ್ಷೇತ್ರಕ್ಕೆ ಕೇವಲ ಅರ್ಧ ಕಿ.ಮೀ ದೂರದಲ್ಲಿದೆ. ಅಲ್ಲಿ 23 ಗಣಿಗಳಿಂದ ಯಥೇಚ್ಛ ಶಬ್ದ ಬರುತ್ತಿದೆ. ಕಲ್ಲು ಗಣಿ ಗುತ್ತಿಗೆಯನ್ನು 5 ಎಕರೆ ನೀಡಲಾಗಿರುತ್ತದೆ. ಆದರೆ, ಆ ಸ್ಥಳದಲ್ಲಿ 10 ಎಕರೆಗೂ ಮೇಲ್ಪಟ್ಟು ಅತಿಕ್ರಮಣ ಮಾಡಲಾಗುತ್ತಿದೆ’ ಎಂದು ದೂರಿದ್ದಾರೆ.
‘ಒಂದು ಕುಟುಂಬದ ಬಳಿಯೇ 15ಕ್ಕೂ ಹೆಚ್ಚು ಗುತ್ತಿಗೆ ಪರವಾನಗಿ ಇವೆ. ಅವರು, ಅವರ ತಮ್ಮ, ತಮ್ಮನ ಹೆಂಡತಿ, ತಂಗಿಯ ಸೊತ್ತಾಗಿ ಬಿಟ್ಟಿದೆ. ಯಾರೆಂದು ಹೆಸರು ಹೇಳುವುದಿಲ್ಲ. ಆದರೆ, ಬಳ್ಳಾರಿ ಸ್ಥಿತಿ ಮಾಲೂರಲ್ಲೂ ನೆಲೆಸಿದೆ’ ಎಂದು ಹರಿಹಾಯ್ದರು.
‘ಅಕ್ರಮ ಗಣಿಗಾರಿಕೆಯಿಂದ ಜಿಲ್ಲೆಯಲ್ಲಿ 80 ಮಂದಿ ಜೀವ ಹೋಗಿದೆ. ಅಲ್ಲಿ ಸರಿಯಾದ ರಕ್ಷಣೆ ಇಲ್ಲ’ ಎಂದೂ ಹೇಳಿದ್ದಾರೆ.
ಈ ವಿಚಾರವನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಗಮನಕ್ಕೆ ತಂದರು. ಅವರ ಅನುಪಸ್ಥಿತಿಯಲ್ಲಿ ಸಚಿವ ಶರಣ ಪ್ರಕಾಶ ಪಾಟೀಲ ಉತ್ತರಿಸಿದರು.
ಗಣಿಗಾರಿಕೆ ವಿಚಾರದಲ್ಲಿ ಮಾಲೂರಿನಲ್ಲೂ ಬಳ್ಳಾರಿ ಸ್ಥಿತಿ ನೆಲೆಸಿದೆ. ಅದೇ ವ್ಯವಸ್ಥೆ ಅದೇ ದೌರ್ಜನ್ಯ. ಅಧಿಕಾರಿಗಳನ್ನು ಕಪಿಮುಷ್ಟಿಯಲ್ಲಿಟ್ಟುಕೊಂಡು ಮನಸೋಇಚ್ಛೆ ಗಣಿಗಾರಿಕೆ ಮಾಡಲಾಗುತ್ತಿದೆಎಸ್.ಎನ್.ನಾರಾಯಣಸ್ವಾಮಿ ಕಾಂಗ್ರೆಸ್ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.