ADVERTISEMENT

ಅಕ್ರಮ ಕಲ್ಲು ಗಣಿಗಾರಿಕೆ: ಸಂಸದ ಎಸ್. ಮುನಿಸ್ವಾಮಿ ಸಿಡಿಮಿಡಿ

ಸಭೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ತರಾಟೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2021, 16:41 IST
Last Updated 16 ಜನವರಿ 2021, 16:41 IST
ಕೋಲಾರದಲ್ಲಿ ಶನಿವಾರ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಸಂಸದ ಎಸ್‌.ಮುನಿಸ್ವಾಮಿ ಮಾತನಾಡಿದರು.
ಕೋಲಾರದಲ್ಲಿ ಶನಿವಾರ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಸಂಸದ ಎಸ್‌.ಮುನಿಸ್ವಾಮಿ ಮಾತನಾಡಿದರು.   

ಕೋಲಾರ: ‘ಜಿಲ್ಲೆಯ ಹಲವೆಡೆ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದೀರಾ?’ ಎಂದು ಸಂಸದ ಎಸ್‌.ಮುನಿಸ್ವಾಮಿ ಸಿಡಿಮಿಡಿಗೊಂಡರು.

ಇಲ್ಲಿ ಶನಿವಾರ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿ, ‘ಮಾಲೂರಿನ ಟೇಕಲ್‌ ಮತ್ತು ಕೋಲಾರ ತಾಲ್ಲೂಕಿನ ಕೆ.ಬಿ.ಹೊಸಹಳ್ಳಿ ಕ್ರಷರ್‌ಗಳ ರಹಸ್ಯ ನನಗೆ ಗೊತ್ತು. ಆ ಕ್ರಷರ್‌ಗಳ ಮಾಲೀಕರು ಜತೆ ನೀವು ನಡೆಸುತ್ತಿರುವ ವ್ಯವಹಾರವು ಗೊತ್ತಿದೆ’ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

‘ಹತ್ತಾರು ವರ್ಷದಿಂದ ಕಲ್ಲು ಹೊಡೆಯುತ್ತಾ ಜೀವನ ಸಾಗಿಸುತ್ತಿರುವವರಿಗೆ ಲೈಸನ್ಸ್‌ ಕೊಡುವುದಿಲ್ಲ. ಆದರೆ, ಹಣ ಪಡೆದು ಒಂದೇ ಕುಟುಂಬದ ಏಳೆಂಟು ಮಂದಿಗೆ ಲೀಸ್‌ಗೆ ಕೊಡುತ್ತೀರಿ. ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ನೂರಾರು ಬಡ ಜನರು ಕಲ್ಲು ಸ್ಫೋಟದ ವೇಳೆ ಕೈ ಕಾಲು ಕಳೆದುಕೊಂಡಿದ್ದಾರೆ. ಬಡವರ ಯಂತ್ರೋಪಕರಣ ಜಪ್ತಿ ಮಾಡುವ ನೀವು ಬಲಿಷ್ಠರ ಅಕ್ರಮ ಏಕೆ ತಡೆಯುವುದಿಲ್ಲ’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ADVERTISEMENT

‘ಮುಳಬಾಗಿಲು ಗಡಿ ಭಾಗದಲ್ಲಿ ಕಪ್ಪು ಹಾಗೂ ಬಿಳಿ ಗ್ರಾನೈಟ್ ಕಲ್ಲುಗಳನ್ನು ಅಕ್ರಮವಾಗಿ ಸಾಗಿಸಲಾಗಿದೆ.
ಪಿ- ನಂಬರ್‌ ಜಮೀನಿನಲ್ಲಿ ಕ್ರಷರ್‌ ನಡೆಸಲು ಅನುಮತಿ ನೀಡಬಹುದಾ? ಎಂದು ಗುಡುಗಿದರು.

ಆಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಚೌಡರೆಡ್ಡಿ, ‘ಮುಳಬಾಗಿಲು ಗಡಿ ಭಾಗದಲ್ಲಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವವರು ನಿಯಮಾನುಸಾರ ಸರ್ಕಾರದಿಂದ ಜಮೀನನ್ನು ಭೋಗ್ಯಕ್ಕೆ ಪಡೆದಿದ್ದಾರೆ’ ಎಂದು ಸ್ಪಷ್ಟನೆ ನೀಡಿದರು.

ಇದರಿಂದ ಮತ್ತಷ್ಟು ಕೆಂಡಾಮಂಡಲರಾದ ಸಂಸದರು, ‘ಏಯ್ ಚೌಡರೆಡ್ಡಿ, ಜಿಲ್ಲಾಧಿಕಾರಿ ಜತೆ ಕ್ರಷರ್ ಜಾಗಕ್ಕೆ ಹೋಗೋಣ. ಅಲ್ಲಿ ಪಿ ನಂಬರ್‌ ಜಮೀನಿನಲ್ಲಿ ಕ್ರಷರ್ ನಡೆಯುತ್ತಿರುವುದು ಸಾಬೀತಾದರೆ ನಿನ್ನನ್ನು ಸ್ಥಳದಲ್ಲೇ ಅಮಾನತು ಮಾಡಬಹುದಾ?’ ಎಂದು ಗದರಿದರು. ಇದರಿಂದ ಗಲಿಬಿಲಿಗೊಂಡ ಚೌಡರೆಡ್ಡಿ ಮೌನಕ್ಕೆ ಶರಣಾದರು.

ಸಚಿವರ ಸೂಚನೆ: ‘ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ ಅವರು ಮಾಲೂರು ಮತ್ತು ಕೋಲಾರ ತಾಲ್ಲೂಕಿನ ಕೆಲ ಅನಧಿಕೃತ ಕ್ರಷರ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದರು. ಆ ಕ್ರಷರ್‌ಗಳಿಗೆ ಸದ್ಯದಲ್ಲೇ ಭೇಟಿ ಕೊಟ್ಟು ಪರಿಶೀಲನೆ ನಡೆಸುತ್ತೇವೆ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ತಿಳಿಸಿದರು.

‘ಕೋಲಾರ ತಾಲ್ಲೂಕಿನ ಕೆ.ಬಿ.ಹೊಸಹಳ್ಳಿ ಬಳಿಯ ಕ್ರಷರ್‌ನಲ್ಲಿ ಸುರಕ್ಷತಾ ಮಾರ್ಗಸೂಚಿ ಪಾಲಿಸದೆ ಕಲ್ಲು ಸ್ಫೋಟ ಮಾಡುತ್ತಿದ್ದಾರೆ. ಇದರಿಂದ ಸುತ್ತಮುತ್ತಲ ಗ್ರಾಮಗಳ ಜನರಿಗೆ ತೀವ್ರ ಸಮಸ್ಯೆಯಾಗಿದೆ. ಈ ಕುರಿತು 50ಕ್ಕೂ ಹೆಚ್ಚು ದೂರು ಬಂದಿದ್ದು, ಏಕೆ ಕ್ರಮ ಕೈಗೊಂಡಿಲ್ಲ’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಇದಕ್ಕೆ ಧ್ವನಿಗೂಡಿಸಿದ ಸಂಸದರು, ‘ಕೆ.ಬಿ.ಹೊಸಹಳ್ಳಿ ಸಮೀಪ ಕೆರೆ ಜಾಗದಲ್ಲೂ ಕಲ್ಲು ಗಣಿಗಾರಿಕೆ ನಡೆಸಲಾಗಿದೆ. ಆ ಕ್ರಷರ್‌ ಮಾಲೀಕರೊಂದಿಗೆ ಅಧಿಕಾರಿಗಳು ವ್ಯವಹಾರ ಇಟ್ಟುಕೊಂಡಿದ್ದೀರಾ? ಸಾರ್ವಜನಿಕರು ಗಣಿಗಾರಿಕೆ ಚಟುವಟಿಕೆ ನಿಲ್ಲಿಸಲು ಹೋದರೆ ಕ್ರಷರ್‌ ಮಾಲೀಕರು ಬೆಂಗಳೂರಿನಿಂದ ಡಾನ್‌ಗಳನ್ನು ಕರೆಸುತ್ತಾರೆ. ಸಚಿವರು ಪರಿಶೀಲಿಸಲು ಹೋದರೆ ರಸ್ತೆಗಳನ್ನು ಅಗೆಸುತ್ತಾರೆ. ಆ ಕ್ರಷರ್‌ ಮಾಲೀಕರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಾ?’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸೂಲಗಿತ್ತಿಯರ ತರಬೇತಿ: ‘ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ಜಿಲ್ಲೆಯಲ್ಲಿ ಸಿಜೆರಿಯನ್ ಹೆರಿಗೆ ಪ್ರಕರಣ ಹೆಚ್ಚುತ್ತಿವೆ. ಸಹಜ ಹೆರಿಗೆ ಪ್ರಮಾಣ ಕಡಿಮೆಯಾಗಿದೆ. ಗ್ರಾಮೀಣ ಭಾಗದಲ್ಲಿ ಸೂಲಗಿತ್ತಿಯವರು ಇಂದಿಗೂ ಸಹಜ ಹೆರಿಗೆ ಮಾಡಿಸುತ್ತಿದ್ದು, ಅವರಿಂದ ವೈದ್ಯರಿಗೆ ತರಬೇತಿ ಕೊಡಿಸಬೇಕು. ಸೂಲಗಿತ್ತಿಯರು ನೂರಾರು ಹೆರಿಗೆ ಯಶಸ್ವಿಯಾಗಿ ಮಾಡಿಸಿದ್ದಾರೆ. ಅವರ ವಿಧಾನ ತಿಳಿದು ವೈದ್ಯರು ಅಳವಡಿಸಿಕೊಂಡರೆ ಅನುಕೂಲ’ ಎಂದು ಕಿವಿಮಾತು ಹೇಳಿದರು.

ಶಾಸಕ ಕೆ.ಶ್ರೀನಿವಾಸಗೌಡ, ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಎಂ.ನಾಗರಾಜ್, ಸಮಿತಿ ಸದಸ್ಯರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.