ADVERTISEMENT

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚಳ

ಮಕ್ಕಳ ಹಕ್ಕುಗಳ ಸಂಸತ್ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮಂಜುನಾಥ್‌ ಕಳವಳ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2019, 10:09 IST
Last Updated 26 ಡಿಸೆಂಬರ್ 2019, 10:09 IST
ಕೋಲಾರದಲ್ಲಿ ಮಂಗಳವಾರ ನಡೆದ ಮಕ್ಕಳ ಹಕ್ಕುಗಳ ಸಂಸತ್ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡರು.
ಕೋಲಾರದಲ್ಲಿ ಮಂಗಳವಾರ ನಡೆದ ಮಕ್ಕಳ ಹಕ್ಕುಗಳ ಸಂಸತ್ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡರು.   

ಕೋಲಾರ: ‘ಸಮಾಜದಲ್ಲಿನ ಸಮಸ್ಯೆಗಳ ಬಗ್ಗೆ ಮಕ್ಕಳ ಗಮನ ಸೆಳೆದರೆ ಅದಕ್ಕೆ ತ್ವರಿತ ಗತಿಯಲ್ಲಿ ಪರಿಹಾರ ಸಿಗುತ್ತದೆ. ಮಕ್ಕಳ ಶಕ್ತಿಯ ಮುಂದೆ ಎಲ್ಲವೂ ಹಿಂದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅಭಿಪ್ರಾಯಪಟ್ಟರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ನಿಗಾ ಘಟಕ, ಕ್ಯಾನ್ ನೆಟ್‌ವರ್ಕ್‌ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳ ಸಂಸತ್ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸಮಾಜ ಎಚ್ಚರಗೊಂಡಿದ್ದರೂ ಮಕ್ಕಳ ಹಕ್ಕು ಉಲ್ಲಂಘನೆಯಾಗುತ್ತಿವೆ. ಸಂವಿಧಾನದ ಆಶಯದಡಿ ನಾವೆಲ್ಲಾ ಜೀವನ ರೂಪಿಸಿಕೊಳ್ಳುತ್ತಿದ್ದೇವೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ವಿಚಾರದ ಬಗ್ಗೆ ಚರ್ಚಿಸಲು ಈ ಕಾರ್ಯಕ್ರಮ ಪೂರಕವಾಗಿದೆ’ ಎಂದು ಹೇಳಿದರು.

ADVERTISEMENT

‘ಮಕ್ಕಳಿಗೆ ತಮ್ಮ ಸಮಸ್ಯೆ ಹೇಳಿಕೊಳ್ಳಲು ಗ್ರಾಮ ಪಂಚಾಯಿತಿಯಿಂದ ಮಕ್ಕಳ ಗ್ರಾಮಸಭೆ ನಡೆಸಲಾಗುತ್ತಿದೆ. ಶಿಕ್ಷಣ, ಸಾಮಾಜಿಕ ಸಮಸ್ಯೆಗಳನ್ನು ಗ್ರಾಮಸಭೆಯ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ಮಕ್ಕಳ ಹಕ್ಕುಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡರೆ ಸಮಸ್ಯೆ ಕಡಿಯಾಗುತ್ತವೆ’ ಎಂದು ಸಲಹೆ ನೀಡಿದರು.

‘ಮಕ್ಕಳನ್ನು ಜಾಗೃತಗೊಳಿಸುವ ಮೂಲಕ ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ತಡೆಯುವ ಪ್ರಯತ್ನ ಆಗಬೇಕು. ಮಕ್ಕಳು ಸರ್ಕಾರದ ರಚನೆ, ಅಧಿಕಾರಾವಧಿ, ರಾಜ್ಯಸಭೆ, ಲೋಕಸಭೆ ಕಾರ್ಯವೈಖರಿ ಅರಿಯಬೇಕು. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚುತ್ತಿದ್ದು, ಇದರ ವಿರುದ್ಧ ಎಲ್ಲರೂ ಹೋರಾಡಬೇಕು. ಶಾಲಾ ಕಾಲೇಜಿನಲ್ಲಿ ಪೋಷಕರ ಸಭೆ ನಡೆಸುವಾಗ ಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ತಿಳಿವಳಿಕೆ ಮೂಡಿಸಬೇಕು’ ಎಂದು ಸೂಚಿಸಿದರು.

ಉತ್ತಮ ಪ್ರತಿಕ್ರಿಯೆ: ‘ಮಕ್ಕಳನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ರಾಜ್ಯದ 28 ಜಿಲ್ಲೆಯಲ್ಲಿ ಈಗಾಗಲೇ ಮಕ್ಕಳ ಹಕ್ಕುಗಳ ಸಂಸತ್ ನಡೆಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಇಬ್ಬರು ಮಕ್ಕಳಿಗೆ ರಾಜ್ಯ ಮಟ್ಟದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುತ್ತೇವೆ’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ನಿಗಾ ಘಟಕದ ಅಧ್ಯಕ್ಷ ವಾಸುದೇವ ಶರ್ಮಾ ವಿವರಿಸಿದರು.

‘ನ್ಯಾಯಾಲಯಗಳು ಮಕ್ಕಳ ಹಕ್ಕುಗಳ ರಕ್ಷಣೆ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿವೆ. ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಕಾನೂನು ಜಾರಿಗೆ ತರಲು ಸರ್ಕಾರದ ಮೇಲೆ ಒತ್ತಡ ಹಾಕಲು ಅವಕಾಶ ಕಲ್ಪಿಸಲಾಗಿದ್ದು, ಇದರ ಸದುಪಯೋಗ ಪಡೆಯಬೇಕು’ ಎಂದು ಕಿವಿಮಾತು ಹೇಳಿದರು.

ಕೈಜೋಡಿಸಬೇಕು: ‘ಮಕ್ಕಳು ಪ್ರಬುದ್ಧತೆಯಿಂದ ಇರುವುದಿಲ್ಲ ಹಾಗೂ ಉತ್ತಮ ಜೀವನ ರೂಪಿಸಿಕೊಳ್ಳಲು ಅವರಿಗೆ ಸಾಧ್ಯವಾಗುವುದಿಲ್ಲ. ಆದ ಕಾರಣ ಬಾಲ್ಯವಿವಾಹ ತಡೆಗೆ ಸಾರ್ವಜನಿಕರು ಕೈಜೋಡಿಸಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ಮನವಿ ಮಾಡಿದರು.

‘ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸಿದರೆ ಉತ್ತಮ ಪ್ರಜೆಯಾಗಲು ಸಾಧ್ಯವಿಲ್ಲ. ಇದರೊಂದಿಗೆ ಸಾಮಾಜಿಕ ವ್ಯವಸ್ಥೆ, ಸಾಮಾಜಿಕ ಪಿಡುಗು, ಮಕ್ಕಳ ಹಕ್ಕುಗಳ ಉಲ್ಲಂಘನೆ ವಿರುದ್ಧ ಧ್ವನಿ ಎತ್ತುವ ಗುಣ ಮೈಗೂಡಿಸಿಕೊಳ್ಳಬೇಕು’ ಎಂದು ಹೇಳಿದರು.

ಮಕ್ಕಳ ಬೇಡಿಕೆ ಹಾಗೂ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಿ ಬೇಡಿಕೆ ಪಟ್ಟಿಯನ್ನು ಮುಖ್ಯಮಂತ್ರಿಗೆ ತಲುಪಿಸುವ ಬಗ್ಗೆ ಮಕ್ಕಳ ಹಕ್ಕುಗಳ ಸಂಸತ್‌ನಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಎಂ.ಜಿ.ಪಾಲಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಚೌಡಪ್ಪ, ಮಕ್ಕಳ ರಕ್ಷಣಾ ಘಟಕದ ಸದಸ್ಯ ರೂಸ್‍ಲಿನ್, ಕ್ಯಾನ್ ನೆಟ್‌ವರ್ಕ್‌ ಅಧ್ಯಕ್ಷ ನಾರಾಯಣಸ್ವಾಮಿ, ಉಪಾಧ್ಯಕ್ಷೆ ಎಂ.ಯಲ್ಲಮ್ಮ, ಸಲಹೆಗಾರ ರಾಮಕೃಷ್ಣೇಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.