ADVERTISEMENT

ಕೋಲಾರ | ವಾಹನ ನಿರ್ಬಂಧ: ಮಕ್ಕಳ ಪರದಾಟ

ತೇರಹಳ್ಳಿ ಬೆಟ್ಟದ ಹಾದಿಯಲ್ಲಿ ವಾಹನ ದಟ್ಟಣೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2022, 16:35 IST
Last Updated 21 ಜೂನ್ 2022, 16:35 IST
ಯೋಗಾಸನ ಪ್ರದರ್ಶಿಸಲು ಮ್ಯಾಟ್‌ಗಳೊಂದಿಗೆ ತೇರಹಳ್ಳಿ ಬೆಟ್ಟಕ್ಕೆ ಬಂದ ವಿದ್ಯಾರ್ಥಿನಿಯರು
ಯೋಗಾಸನ ಪ್ರದರ್ಶಿಸಲು ಮ್ಯಾಟ್‌ಗಳೊಂದಿಗೆ ತೇರಹಳ್ಳಿ ಬೆಟ್ಟಕ್ಕೆ ಬಂದ ವಿದ್ಯಾರ್ಥಿನಿಯರು   

ಕೋಲಾರ: ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ವೇದಿಕೆಯಾದ ತೇರಹಳ್ಳಿ ಬೆಟ್ಟದ ಹಾದಿ ತೀರಾ ಚಿಕ್ಕದಾಗಿದ್ದರಿಂದ ಬೆಳಿಗ್ಗೆಯಿಂದಲೇ ವಾಹನ ದಟ್ಟಣೆ ಉಂಟಾಯಿತು.

ಹೀಗಾಗಿ, ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಶಾಲಾ ಬಸ್ಸಿನಲ್ಲಿ ಬಂದಿದ್ದ ವಿದ್ಯಾರ್ಥಿಗಳು ಪರದಾಡಿದರು. ಬೆಟ್ಟಕ್ಕೆ ವಾಹನ ಬಿಡದ ಕಾರಣ ನಡೆದು ಬರಬೇಕಾಯಿತು. ನಗರದಿಂದ ಸುಮಾರು 8 ಕಿ.ಮೀ ದೂರವಿರುವ ಬೆಟ್ಟದ ತಪ್ಪಲಿನಲ್ಲೇ ವಾಹನ ನಿರ್ಬಂಧಿಸಿ ಮಕ್ಕಳನ್ನು ನಡೆದು ಹೋಗುವಂತೆ ಹೇಳಲಾಯಿತು. ವಿದ್ಯಾರ್ಥಿಗಳು,ಶಿಕ್ಷಕರು, ಶಾಲಾ ಸಿಬ್ಬಂದಿ ನಿಧಾನವಾಗಿ ಹೆಜ್ಜೆ ಇಟ್ಟರು.

ಒಂದೊಂದು ಶಾಲೆಯ ಮಕ್ಕಳು ಒಟ್ಟಿಗೆ ತ್ರಿವರ್ಣ ಧ್ವಜ ಹಿಡಿದು ಸಾಗಿದರು. ಸುಸ್ತಾಗಿ ಮಧ್ಯೆ ಮಧ್ಯೆ ಕೂರುತ್ತಿದ್ದರು.ಕೆಲ ಮಕ್ಕಳು ಚಪ್ಪಲಿ, ಶೂಗಳನ್ನು ವಾಹನದಲ್ಲೇ ಬಿಟ್ಟು ಬರಿಗಾಲಿನಲ್ಲೇ ಬೆಟ್ಟ ಹತ್ತಿದರು.‌ ಅವ್ಯವಸ್ಥೆ ಬಗ್ಗೆ ಶಿಕ್ಷಕರು, ಪೋಷಕರು ಆಕ್ರೋಶ ವ್ಯಕ್ತಪಡಿಸಿದರು. ಬಿಸಿಲು ಹೆಚ್ಚುತ್ತಿದ್ದಂತೆ ಬಸವಳಿದರು.

ADVERTISEMENT

ಬೆಳಿಗ್ಗೆ9 ಗಂಟೆ ಸುಮಾರಿಗೆ ಕಾರ್ಯಕ್ರಮಕ್ಕೆ ಬಂದ ವಿಧಾನ ಪರಿಷತ್‌ ಸದಸ್ಯ ವೈ.ಎ. ನಾರಾಯಣಸ್ವಾಮಿ ಕೂಡ ಮಕ್ಕಳು ನಡೆದು ಬರುತ್ತಿದ್ದನ್ನು ಕಂಡು ಗರಂ ಆದರು. ‘ಮಕ್ಕಳಿಗೆ ಏನಾದರೂ ಸಮಸ್ಯೆ ಉಂಟಾದರೆ ಯಾರು ಹೊಣೆ’ ಎಂದುಶಿಕ್ಷಣ ಇಲಾಖೆಯ ಅಧಿಕಾರಿಗಳನ್ನುಪ್ರಶ್ನಿಸಿದರು.

ಬೆಳಿಗ್ಗೆ 7 ಗಂಟೆವರೆಗೆ ವಾಹನಗಳು ಬೆಟ್ಟಕ್ಕೆ ಸಾಗಿದವು. ಆದರೆ, ವಾಹನಗಳ ಸಂಖ್ಯೆ ಹೆಚ್ಚಾದಂತೆ ಮಹಾಲಕ್ಷ್ಮಿ ಬಡಾವಣೆಯಿಂದಲೇ ದಟ್ಟಣೆ ಉಂಟಾಯಿತು. ಅಲ್ಲಿಯೇ ನಿಲುಗಡೆಗೆ ಸೂಚಿಸಲಾಯಿತು. ಪೊಲೀಸರು ಮಾರ್ಗದುದ್ದಕ್ಕೂ ನಿಂತು ಮಾರ್ಗದರ್ಶನ ನೀಡುತ್ತಿದ್ದರು. ವಿವಿಧ ಸಂಘಟನೆಗಳ ಸ್ವಯಂಸೇವಕರು ಮಕ್ಕಳಿಗೆ ಗ್ಲುಕೋಸ್‌ ಪುಡಿ, ಬಾಳೆಹಣ್ಣು, ನೀರು ವಿತರಿಸಿದರು.

ಯೋಗ ಪ್ರದರ್ಶನ ಮುಗಿದ ಮೇಲೂ ವಾಹನವಿಲ್ಲದೆ ಹೆಚ್ಚಿನ ಮಕ್ಕಳು ನಡೆದುಕೊಂಡು ಬೆಟ್ಟ ಇಳಿದರು. ಬಿಸಿಲು ಹೆಚ್ಚಿದ್ದರಿಂದ ಕೆಲ ಮಕ್ಕಳು ಕುಸಿದುಬಿದ್ದರು.

ಪ್ಲಾಸ್ಟಿಕ್‌ ರಾಶಿ: ಮಕ್ಕಳು ನಡೆದು ಹೋಗುವಾಗ ಗ್ರಾಮಗಳ ಅಂಗಡಿಯಿಂದ ಖರೀದಿಸಿದಚಿಪ್ಸ್‌, ಬಿಸ್ಕೆಟ್‌, ಚಾಕೊಲೇಟ್‌ತಿಂದುಪೊಟ್ಟಣವನ್ನು ಬೆಟ್ಟದಲ್ಲಿ ಎಲ್ಲಿಬೇಕೆಂದರಲ್ಲಿ ಎಸೆಯುತ್ತಿದ್ದ ದೃಶ್ಯ ಕಂಡುಬಂತು. ನೀರಿನ ಬಾಟಲಿ, ಮಜ್ಜಿಗೆ ಪೌಚ್‌ಗಳನ್ನು ಕಾಡಿನೊಳಗೆ ಎಸೆದರು.

‘ರಸ್ತೆ ಹಾಗೂ ಯೋಗಾಸನ ನಡೆದ ಸ್ಥಳದಲ್ಲಿ ಬಿದ್ದಿದ್ದ ಕಸ, ಪ್ಲಾಸ್ಟಿಕ್‌ ವಿಲೇವಾರಿ ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಂಡರೂಕಾಡಿನೊಳಗೆ ಎಸೆದ ಪ್ಲಾಸ್ಟಿಕ್‌ ಸ್ವಚ್ಛಗೊಳಿಸುವವರು ಯಾರು’ ಎಂದು ಪರಿಸರವಾದಿಗಳುಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.