ADVERTISEMENT

ಶಾಸಕ ಕೆ. ಶ್ರೀನಿವಾಸಗೌಡ ವಿರುದ್ಧ ಜೆಡಿಎಸ್‌ ಕಾರ್ಯಕರ್ತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 3:43 IST
Last Updated 25 ಜನವರಿ 2022, 3:43 IST
ಕೋಲಾರ ತಾಲ್ಲೂಕಿನ ಕಡಗಟ್ಟೂರು ಗ್ರಾಮದಲ್ಲಿ ಸೋಮವಾರ ಜೆಡಿಎಸ್‌ ಮುಖಂಡರ ಸಭೆ ನಡೆಯಿತು. ಮುಖಂಡರಾದ ವಕ್ಕಲೇರಿ ರಾಮು, ರಾಜೇಶ್ವರಿ, ಸಿಎಂಆರ್ ಶ್ರೀನಾಥ್‌, ವಿಜಯಕುಮಾರ್ ಇದ್ದರು
ಕೋಲಾರ ತಾಲ್ಲೂಕಿನ ಕಡಗಟ್ಟೂರು ಗ್ರಾಮದಲ್ಲಿ ಸೋಮವಾರ ಜೆಡಿಎಸ್‌ ಮುಖಂಡರ ಸಭೆ ನಡೆಯಿತು. ಮುಖಂಡರಾದ ವಕ್ಕಲೇರಿ ರಾಮು, ರಾಜೇಶ್ವರಿ, ಸಿಎಂಆರ್ ಶ್ರೀನಾಥ್‌, ವಿಜಯಕುಮಾರ್ ಇದ್ದರು   

ಕೋಲಾರ: ‘ಜೆಡಿಎಸ್‌ ಕಾರ್ಯಕರ್ತರ ಶ್ರಮದಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಕೆ. ಶ್ರೀನಿವಾಸಗೌಡ ಅವರು ಕಾಂಗ್ರೆಸ್ ಜೊತೆ ಸೇರಿ ಪಕ್ಷ ಮತ್ತು ಕಾರ್ಯಕರ್ತರಿಗೆ ಅನ್ಯಾಯ ಮಾಡಿದ್ದಾರೆ’ ಎಂದು ಜೆಡಿಎಸ್‌ ಮುಖಂಡ ವಕ್ಕಲೇರಿ ರಾಮು ದೂರಿದರು.

ತಾಲ್ಲೂಕಿನ ಕಡಗಟ್ಟೂರು ಗ್ರಾಮದಲ್ಲಿ ಸೋಮವಾರ ನಡೆದ ಜೆಡಿಎಸ್‌ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

‘2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠರು ನನಗೆ ಪಕ್ಷದ ಬಿ ಫಾರಂ ಕೊಟ್ಟಿದ್ದರು. ಬದಲಾದ ರಾಜಕೀಯ ಸನ್ನಿವೇಶಗಳಿಂದ ನಾನು ಅದನ್ನು ಶ್ರೀನಿವಾಸಗೌಡರಿಗೆ ಕೊಟ್ಟು ಅವರನ್ನು ಶಾಸಕರನ್ನಾಗಿ ಮಾಡಿದೆವು. ಆದರೆ ಅವರು ನಮ್ಮನ್ನು ನಡೆಸಿಕೊಂಡ ರೀತಿ ನೆನೆದರೆ ನೋವಾಗುತ್ತದೆ. ಗೆದ್ದ ಮೇಲೆ ಅವರು ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ಏನು ಮಾಡಿಲ್ಲ. ಯಾರನ್ನೂ ಗುರುತಿಸಲಿಲ್ಲ’ ಎಂದು ಟೀಕಿಸಿದರು.

ADVERTISEMENT

‘ಎಂಎಲ್‍ಸಿ ಚುನಾವಣೆಯಲ್ಲಿಯೂ ನಾನೇನು ಟಿಕೆಟ್‌ ಆಕಾಂಕ್ಷಿಯಾಗಿರಲಿಲ್ಲ. ನನ್ನ ಸ್ಥಾನದಲ್ಲಿ ಸಿಎಂಆರ್ ಶ್ರೀನಾಥ್ ಇದ್ದರು. ಆದರೆ, ಬಿಜೆಪಿಯ ಕೆಲವು ಮುಖಂಡರು ಮೈತ್ರಿ ವಿಚಾರದಲ್ಲಿ ಮುಂದೆ ಬಂದಿದ್ದರಿಂದ ಕೊನೆ ಗಳಿಗೆಯಲ್ಲಿ ನಾನು ಜೆಡಿಎಸ್ ಅಭ್ಯರ್ಥಿಯಾಗಬೇಕಿತ್ತು. ಆದರೆ, ಬಿಜೆಪಿಯ ಕೆಲವರು ಕೊನೆಯವರೆಗೂ ನಮ್ಮನ್ನು ದಾರಿ ತಪ್ಪಿಸಿ ರಾಜಕೀಯ ಆಟ ಶುರುಮಾಡಿದಾಗಲೇ ನನಗೆ ಸೋಲು ಖಾತ್ರಿಯಾಗಿತ್ತು’ ಎಂದರು.

ಜೆಡಿಎಸ್ ಮುಖಂಡ ವಿಜಯಕುಮಾರ್ ಮಾತನಾಡಿ, ಶಾಸಕ ಶ್ರೀನಿವಾಸಗೌಡ ಅವರು ಪಕ್ಷ ಬಿಟ್ಟು ಹೋದರೆಂದು ನಾವು ಚಿಂತೆ ಮಾಡಬಾರದು. ಇಂದಿನಿಂದಲೇ ಸಂಘಟನೆ ಮಾಡುವುದಕ್ಕೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಮುಂದಿನ ದಿನಗಳಲ್ಲಿ ವೇಮಗಲ್ ಪಟ್ಟಣ ಪಂಚಾಯಿತಿ, ಎಪಿಎಂಸಿ, ಜಿ.ಪಂ, ತಾ.ಪಂ ಚುನಾವಣೆ ಸಮೀಪಿಸುತ್ತಿದೆ. ನಂತರ ವಿಧಾನಸಭೆ ಚುನಾವಣೆ ಬರುತ್ತದೆ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಮುಖಂಡರು ಸಂಘಟಿತರಾಗಬೇಕು ಎಂದರು.

ಜೆಡಿಎಸ್‌ನಲ್ಲಿದ್ದುಕೊಂಡು ಪಕ್ಷಕ್ಕೆ ದ್ರೋಹ ಮಾಡುವ ಕೆಲವು ರಾಜಕಾರಣಿಗಳು ಇನ್ನೂ ಪಕ್ಷದಲ್ಲೇ ಇದ್ದಾರೆ. ಅವರನ್ನು ಗುರುತಿಸಿ ತಿಳಿವಳಿಕೆ ಮೂಡಿಸುವ ಕೆಲಸ ಮಾಡಬೇಕು. ಇಲ್ಲವಾದರೆ ಅಂತಹವರನ್ನು ಹೊರಗಡೆ ಹಾಕುವ ಮೂಲಕ ಪಕ್ಷವನ್ನು ಸ್ವಚ್ಛ ಮಾಡುವ ಕೆಲಸವನ್ನು ಮುಖಂಡರು ಮಾಡಬೇಕು ಎಂದು ಹೇಳಿದರು.

ಜೆಡಿಎಸ್ ತಾಲ್ಲೂಕು ಅಧ್ಯಕ್ಷೆ ಕುರ್ಕಿ ರಾಜರಾಜೇಶ್ವರಿ ಮಾತನಾಡಿ, ‘ನಾನು ಎಪಿಎಂಸಿ ನಿರ್ದೇಶಕಿ, ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದೇನೆ. ಕಳೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಕಡಿಮೆ ಮತಗಳ ಅಂತರದಿಂದ ಸೋತಿದ್ದೇನೆ. ಪಕ್ಷ ನೀಡಿದ ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಬಂದಿದ್ದೇನೆ’ ಎಂದು ಹೇಳಿದರು.

ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್, ಬಣಕನಹಳ್ಳಿ ನಟರಾಜ್ ಮಾತನಾಡಿದರು. ಮುಖಂಡರಾದಸುರೇಶ್, ಪಾಪಣ್ಣ, ಜಯರಾಮ್, ತಿರುಮಲೇಶ್, ಹರೀಶ್‍ಗೌಡ, ಹರೀಶ್, ನಾಗೇಶ್, ನವೀನ್, ಶಂಕರ್, ಭುವನೇಶ್, ಹರ್ಷವರ್ಧನ್, ನಾರಾಯಣಸ್ವಾಮಿ, ರಾಮಾಂಜಿ, ನವೀನ್, ಶಂಕರ್, ಬ್ರಿಜೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.