
ಕೋಲಾರ: ಭಕ್ತಿ ಶ್ರೇಷ್ಠ ಕನಕದಾಸರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸದೆ ಅವರನ್ನು ಮನುಕುಲದ ಉದ್ಧಾರಕರೆಂದು ಭಾವಿಸಬೇಕು. ಹಾಗೆಯೇ ಸಿದ್ದರಾಮಯ್ಯ ಅವರು ಕುರುಬ ಜಾತಿಗೆ, ಒಂದು ಧರ್ಮಕ್ಕೆ ಮುಖ್ಯಮಂತ್ರಿಯಲ್ಲ. ರಾಜ್ಯದ ಸಕಲ ಜನಾಂಗದ ನೋವಿಗೂ ಮಿಡಿಯುವ ವ್ಯಕ್ತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಬಣ್ಣಿಸಿದರು.
ನಗರದ ಕನಕ ಮಂದಿರ ಮುಂಭಾಗದ ಕನಕ ವೃತ್ತದಲ್ಲಿ ಜಿಲ್ಲಾ ಕುರುಬರ ಸಂಘ, ಸಮುದಾಯದ ವಿವಿಧ ಸಂಘಗಳು ಹಾಗೂ ಜಿಲ್ಲಾಡಳಿತದ ಆಶ್ರಯದಲ್ಲಿ ಶನಿವಾರ ನಡೆದ 538ನೇ ಕನಕದಾಸರ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆ ಏನಾದರೂ ಬಲ್ಲಿರಾ? ಎಂದು ಹೇಳಿ, ಕನಕದಾಸರು ಜಾತ್ಯತೀತ ದಾರ್ಶನಿಕರು. ಇವರ ಜಯಂತಿಯನ್ನು ನಾಡಿನೆಲ್ಲೆಡೆ ಅದ್ದೂರಿಯಾಗಿ ಆಚರಿಸಲಾಗುತ್ತದೆ ಎಂದರು.
ಜೀವನದಲ್ಲಿ ಬಾಳುವ ರೀತಿ ಮುಖ್ಯವೇ ಹೊರತು ಜಾತಿಯಲ್ಲ. ದೇಶ, ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ. ಎಲ್ಲ ಜಾತಿ ಜನಾಂಗದವರೆಲ್ಲರೂ ಒಂದೇ ಎಂಬುದು ಬಸವಣ್ಣ, ಕನಕದಾಸರು ಹಾಗೂ ಅಂಬೇಡ್ಕರ್ ಬರೆದ ಸಂವಿಧಾನದ ಮೂಲ ಉದ್ದೇಶವಾಗಿದೆ. ಸಂವಿಧಾನದಿಂದಲೇ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಸಾಮಾಜಿಕ ನ್ಯಾಯ ಒದಗಿಸುತ್ತಿದ್ದಾರೆ ಎಂದು ನುಡಿದರು.
ರಾಜ್ಯದ ಜನತೆಗೆ ಐದು ಮಹತ್ವದ ಗ್ಯಾರಂಟಿ ಯೋಜನೆ ಜಾರಿಗೆ ತಂದವರು ಮುಖ್ಯಮಂತ್ರಿ ಸಿದ್ದರಾಮಯ್ಯ. ಈ ಯೋಜನೆಗಳಿಗೆ ಪ್ರತಿ ವರ್ಷ ಸುಮಾರು ₹ 60 ಸಾವಿರ ಕೋಟಿ ವೆಚ್ಚವಾಗುತ್ತಿದೆ. ಯಾವುದೇ ಜಾತಿ, ಜನಾಂಗ ನೋಡದೆ ಪ್ರತಿಯೊಬ್ಬ ಬಡವರಿಗೂ ಈ ಯೋಜನೆ ತಲುಪಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ ಎಂದು ಹೇಳಿದರು.
ಶಾಸಕರಾದ ಕೊತ್ತೂರು ಜಿ.ಮಂಜುನಾಥ್ ಮಾತನಾಡಿ, ‘ಕನಕದಾಸರ ಆಶೀರ್ವಾದವು ನಮ್ಮ ಜಿಲ್ಲೆಯ ಎಲ್ಲಾ ಜನರ ಮೇಲೆ ಇರಲಿದೆ. ಕನಕದಾಸರು ಮನುಷ್ಯರ ರೂಪದಲ್ಲಿ ಇದ್ದಂತಹ ದೇವರು. ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ. ಅವರ ವಚನ, ತತ್ವಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪಾಲನೆ ಮಾಡಬೇಕಾಗಿದೆ’ ಎಂದರು
ಮುಖ್ಯಮಂತ್ರಿ ಮಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮಾತನಾಡಿ, ‘ಕನಕದಾಸರು ಬಿತ್ತಿದ ದಾರ್ಶನಿಕ ಬೇರುಗಳಿಗೆ ನಾವೆಲ್ಲರೂ ಶಕ್ತಿಯಾಗಬೇಕು. ಜಾತಿ ಜಾತಿಗಳ ನಡುವೆ ಗೊಂದಲ ಮಾಡದೆ ಎಲ್ಲರೂ ಒಂದೇ ಎಂಬ ಭಾವನೆಯಿಂದ ಬಾಳಬೇಕು’ ಎಂದು ತಿಳಿಸಿದರು.
ಕನಕದಾಸರ ಭಕ್ತಿಗೆ ಮೆಚ್ಚಿ ಕೃಷ್ಣ ಪರಮಾತ್ಮ ತಿರುಗಿದಂತೆ ಸಿದ್ದರಾಮಯ್ಯ ಅವರ ಜನಪರ ಯೋಜನೆಗೆ ಮೆಚ್ಚಿ ದೇಶ ಅವರತ್ತ ತಿರುಗಿದೆ ಎಂದರು.
ಮಾಜಿ ಸಚಿವ ವರ್ತೂರು ಪ್ರಕಾಶ್ ಮಾತನಾಡಿ, ‘ಕೋಲಾರದಲ್ಲಿ ವಿದ್ಯಾರ್ಥಿನಿಲಯ ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ಅದನ್ನು ಪೂರ್ಣಗೊಳಿಸುವ ಪ್ರಯತ್ನವನ್ನು ಸಚಿವರು, ಶಾಸಕರು. ವಿಧಾನ ಪರಿಷತ್ ಸೇರಿದಂತೆ ಜನಪ್ರತಿನಿಧಿಗಳ ಮಾರ್ಗದರ್ಶನದಲ್ಲಿ ಮಾಡಲಾಗುವುದು ಎಂದು ಆಶ್ವಾಸನೆ ನೀಡಿದರು.
ಮಳಿಗೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ. ಆರು ತಿಂಗಳಲ್ಲಿ ಕಟ್ಟಡ ನಿರ್ಮಾಣವಾಗಿ ಉದ್ಘಾಟನೆ ಆಗಬೇಕು. ಸಚಿವರು ಈ ಸಂಬಂಧ ಸಮಿತಿ ರಚಿಸಿ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ಸಂಸದ ಎಂ.ಮಲ್ಲೇಶ್ ಬಾಬು, ವಿಧಾನ ಪರಿಷತ್ ಸದಸ್ಯರಾದ ಇಂಚರ ಗೋವಿಂದರಾಜು, ಎಂ.ಎಲ್.ಅನಿಲ್ ಕುಮಾರ್, ವೇಮಗಲ್–ಕುರುಗಲ್ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಸಿ.ಎಸ್.ವೆಂಕಟೇಶ್, ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ವೈ.ಶಿವಕುಮಾರ್, ‘ಕುಡಾ’ ಅಧ್ಯಕ್ಷ ಮೊಹಮದ್ ಹನೀಫ್, ಜಿಲ್ಲಾಧಿಕಾರಿ ಎಂ.ಆರ್.ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ, ಉಪಕಾರ್ಯದರ್ಶಿ ಟಿ.ಕೆ.ರಮೇಶ್,ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಂ.ಮಂಗಳಾ, ಉಪವಿಭಾಗಾಧಿಕಾರಿ ಡಾ.ಮೈತ್ರಿ, ತಹಶೀಲ್ದಾರ್ ಡಾ.ನಯನಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಎನ್.ವಿಜಯಲಕ್ಷ್ಮಿ, ನಗರಸಭೆ ಮಾಜಿ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ತಂಬಳ್ಳಿ ಮುನಿಯಪ್ಪ, ಗೌರವಾಧ್ಯಕ್ಷ ಕೆ.ಎನ್.ಮಧುಸೂಧನ್, ಮುಖಂಡರಾದ ಸಿಎಂಆರ್ ಶ್ರೀನಾಥ್, ಮುರಳಿಗೌಡ, ಟಿ.ವಿ.ಮುನಿಯಪ್ಪ, ಕಠಾರಿಪಾಳ್ಯ ಗಂಗಣ್ಣ, ಬಂಕ್ ಮಂಜು, ರಾಜಣ್ಣ, ಬೆಗ್ಲಿ ಪ್ರಕಾಶ್, ಗೋಪಾಲಗೌಡ, ತ್ಯಾಗರಾಜ ಮುದ್ದಪ್ಪ, ಜನಾರ್ಧನ್, ಅಮರ್, ಬಾಲು, ಸಿ.ಸೋಮಶೇಖರ್, ಸಿ.ಅಪ್ಪಯ್ಯಗೌಡ ನಡುಪಳ್ಳಿ ಕೃಷ್ಣಮೂರ್ತಿ, ಕೆ.ಎಂ.ವೆಂಕಟಾಚಲಪತಿ, ಬಿ.ಕೆ.ನಾರಾಯಣಸ್ವಾಮಿ,ವಿಜೇಂದ್ರ, ವಿ.ಮಂಜುನಾಥ್, ಅರುಣ್ ಪ್ರಸಾದ್, ಆನಂದ ಮೂರ್ತಿ, ಶಿವಾನಂದ್, ಎಸ್.ನಾಗರಾಜ್, ಬಿ.ಸೋಮಶೇಖರಗೌಡ, ಶಂಕರಪ್ಪ, ನಾಗರಾಜ್, ಭಾನು ಪ್ರಕಾಶ್ ಜಿ.ಎಲ್. ರಾಮಕೃಷ್ಣಪ್ಪ, ಮುನಿಸ್ವಾಮಿ, ಸಿ.ಎನ್.ಗೋವಿಂದಗೌಡ, ನಾಗರಾಜಪ್ಪ, ಜೆ.ಕೆ.ಜಯರಾಂ, ನಾಗೇಶ್, ಜಿಲ್ಲಾ ಕುರುಬರ ಸಂಘದ ಪದಾಧಿಕಾರಿಗಳು ಹಾಗೂ ಸಮುದಾಯದ ಮುಖಂಡರು ಇದ್ದರು.
ಅದ್ದೂರಿ ಮೆರವಣಿಗೆ ಕಲಾವಿದರ ಮೆರುಗು
ಕನಕ ಜಯಂತಿಯ ವೇದಿಕೆ ಕಾರ್ಯಕ್ರಮದ ಬಳಿಕ ಸ್ತಬ್ಧಚಿತ್ರ ಹಾಗೂ ಪಲ್ಲಕ್ಕಿಗಳ ಮೆರವಣಿಗೆಗೆ ಬೈರತಿ ಸುರೇಶ ಹಾಗೂ ವರ್ತೂರು ಪ್ರಕಾಶ್ ಚಾಲನೆ ನೀಡಿದರು. ವಿವಿಧ ಗ್ರಾಮಗಳಿಂದ ಸಮುದಾಯದವರು ಕನಕದಾಸರ ಭಾವಚಿತ್ರ ಹೊತ್ತ ಸ್ತಬ್ಧಚಿತ್ರ ಹಾಗೂ ಪಲ್ಲಕ್ಕಿ ತಂದಿದ್ದರು. ಜೊತೆಗೆ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳೂ ಇದ್ದವು. ನಗರದ ವಿವಿಧ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಚಂಡೆ ವಾದ್ಯ ಕೀಲುಕುದುರೆ ನಾಸಿಕ್ ಬ್ಯಾಂಡ್ ಡೊಳ್ಳು ಕುಣಿತ ದೇವರ ಕುಣಿತ ನಂದಿಕೊಲು ಸೇರಿದಂತೆ ಹತ್ತಕ್ಕೂ ಹೆಚ್ಚು ಕಲಾತಂಡಗಳು ಭಾಗವಹಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.