
ಕೋಲಾರ: ಕನ್ನಡ ಇವತ್ತು ಭಾಷಿಕ ಹಾಗೂ ಸಾಂಸ್ಕೃತಿಕ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿದೆ. ಕನ್ನಡದ ಮೇಲಿನ ಆತ್ಮವಿಶ್ವಾಸ ಕುಸಿಯುತ್ತಿದೆ. ಈ ಸಮಸ್ಯೆ ಇತ್ಯರ್ಥಕ್ಕೆ ಸರ್ಕಾರ ಮುಂದಾಗಬೇಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಶಿಕ್ಷಣ ಕಾಲೇಜು ಶಿಕ್ಷಣ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ಶುಕ್ರವಾರ ನಡೆದ 70ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಐದು ಸಾವಿರ ಹಳ್ಳಿಗಳಿರುವ ಅಕ್ಕಲಕೋಟೆ ಹೇಗೆ ಮಹಾರಾಷ್ಟ್ರಕ್ಕೆ ಹೋಯಿತು? ಐದು ಸಾವಿರಕ್ಕಿಂತ ಹೆಚ್ಚು ಮನೆಗಳಲ್ಲಿ ಕನ್ನಡ ಮಾತನಾಡುತ್ತಾರೆ. ಆದರೆ, ಈಗ ಅವರು ಮರಾಠಿಗರು. ಅವರು ಅನಾಥರಾಗಿದ್ದಾರೆ. ಕಾಸರಗೋಡಿನ ಬದಿಯಡ್ಕ ಹೇಗೆ ಕೇರಳಕ್ಕೆ ಸೇರಿತು? ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದರು.
ಗಡಿ ಜಿಲ್ಲೆಗಳಲ್ಲಿ ಕನ್ನಡ ಭಾಷೆ ಉಳಿಸುವುದು ಕಷ್ಟ ಎನಿಸುತ್ತಿದೆ. ಬಹುಭಾಷೆ ಇರುವ ಗಡಿಭಾಗದಲ್ಲಿ ಮೊದಲು ಕನ್ನಡ ಭಾಷೆ ಉಳಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಸಲಹೆ ನೀಡಿದರು.
ಕಾಸರಗೋಡಿನಲ್ಲಿ ಕನ್ನಡ ಓದುವವರಿದ್ದರೆ ಅವರಿಗೆ ಉಚಿತವಾಗಿ ಕನ್ನಡ ಪುಸ್ತಕ ಕೊಡಿ. ಇಲ್ಲದಿದ್ದರೆ ಕನ್ನಡ ಉಳಿಯುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ತಮಿಳುನಾಡಿನಲ್ಲಿ 15 ದಿನಗಳಿದ್ದು ನಾವು ತಮಿಳು ಕಲಿತರೆ ಬೇರೆ ರಾಜ್ಯದವರು ಕರ್ನಾಟಕದಲ್ಲಿ 15 ವರ್ಷವಿದ್ದರೂ ಕನ್ನಡ ಕಲಿಯಲ್ಲ. ನಾವು ಅನ್ಯಭಾಷೆ ಮಾತನಾಡಿದರೆ ಪ್ರಶಂಸನಾ ಪತ್ರವನ್ನು ಬೇರೆ ರಾಜ್ಯದವರು ಕೊಡುವಂಥ ಪರಿಸ್ಥಿತಿ ಬಂದಿದೆ. ಬೇರೆ ಭಾಷೆ ಕಲಿಯುವಾಗ ಕನ್ನಡ ಬಲಿ ಕೊಡುವುದು ಸಮಂಜಸವಲ್ಲ. ಭಾಷೆ ಬಳಸಿದ್ದರೆ ಉಳಿಯುವುದಾದರೂ ಹೇಗೆ?ಬೆಂಗಳೂರಿನಲ್ಲಿ ಶೇ 60ರಷ್ಟು ಹೊರ ರಾಜ್ಯಗಳ ಕಾರ್ಮಿಕರು ವಾಸವಿದ್ದು, ಬೇರೆ ಭಾಷೆ ಕಲಿಯುವುದರ ಜತೆಗೆ ಕನ್ನಡವನ್ನು ಕೊಲೆ ಮಾಡುವ ಕೆಲಸ ನಡೆಸುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ವಲಸೆ ತಡೆಯಲು ಕಷ್ಟ. ಆದರೆ, ವಲಸೆ ನೀತಿ ಮಾಡಿ ವಲಸೆ ತಡೆದು ಕನ್ನಡಿಗರಿಗೆ ಹೆಚ್ಚು ಹುದ್ದೆ ಸಿಗುವಂತೆ ಮಾಡಬಹುದು. ಅದಕ್ಕೆ ಬೇರೆ ಸಮಸ್ಯೆಗಳೇ ಇವೆ ಎಂದು ಅಭಿಪ್ರಾಯಪಟ್ಟರು.
ಕನ್ನಡ ಭಾಷೆಯೊಳಗೆ ಕಿಚ್ಚು ಇತ್ತು. ಆದರೆ, ಇತ್ತೀಚಿಗೆ ಆತ್ಮವಿಶ್ವಾಸ ಕಳೆದುಕೊಳ್ಳುತ್ತಿರುವ ಆತಂಕ ಕಾಡುತ್ತಿದೆ. ಕನ್ನಡ ಶಾಲೆಗಳನ್ನು ಮುಚ್ಚುತ್ತಿದ್ದರೂ ಪ್ರಶ್ನೆ ಮಾಡುವ ಸಾಮರ್ಥ್ಯ ಕಳೆದುಕೊಂಡಿದ್ದೇವೆ ಎಂದರು.
ಗಾಯಕ ವೈ.ಹರ್ಷಿತ್ ಹಾಡು ಹಾಡಿದರೆ, ವಿದ್ಯಾರ್ಥಿನಿ ಕೀರ್ತನಾ ಶಾಸ್ತ್ರೀಯ ನೃತ್ಯ ಪ್ರದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಪ್ರೊ.ಮುನಿಶಾಮಪ್ಪ, ಐಕ್ಯೂಎಸ್ಸಿ ಪ್ರೊ.ಶೈಲಜಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೆಶಕಿ ಎನ್.ವಿಜಯಲಕ್ಷ್ಮಿ, ಉಪನ್ಯಾಸಕರಾದ ತ್ಯಾಗರಾಜ್, ಚೆಲುವರಾಜ್, ಶ್ಯಾಮಲಾ, ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.
ಭಾಷೆ ಬಳಸದಿದ್ದರೆ ಭಾಷೆ ಉಳಿಯುವುದಾದರೂ ಹೇಗೆ? ಕನ್ನಡದ ಮೇಲಿನ ಆತ್ಮವಿಶ್ವಾಸ ಕುಸಿಯುತ್ತಿದೆ: ಆತಂಕ ಬೇರೆ ಭಾಷೆ ಕಲಿಯುವಾಗ ಕನ್ನಡ ಬಲಿ ಕೊಡುವುದು ಸಮಂಜಸವಲ್ಲ
ಕನ್ನಡ ನಮಗೆ ಎಲ್ಲೂ ಸುಲಭದಲ್ಲಿ ಸಿಗುವುದಿಲ್ಲ. ಕನ್ನಡವನ್ನು ಹುಡುಕಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ರಾಜ್ಯೋತ್ಸವವೆಂದರೆ ಕನ್ನಡ ಕರ್ನಾಟಕವನ್ನು ಸಂಭ್ರಮಿಸುವುದು
- ಪುರುಷೋತ್ತಮ ಬಿಳಿಮಲೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
ನಾಡಗೀತೆಗೆ ನೂರು ವರ್ಷ ರಾಷ್ಟ್ರಕವಿ ಕುವೆಂಪು ರಚಿಸಿದ ‘ಜಯ ಭಾರತ ಜನನಿಯ ತನುಜಾತೆ ಜಯಯೇ ಕರ್ನಾಟಕ ಮಾತೆ’ ನಾಡಗೀತೆಗೆ ಈಗ 100 ವರ್ಷ. ಇದು ಬಿಕ್ಕಟ್ಟನ್ನು ಬಗೆಹರಿಸಿದ ಗೀತೆ ಕೂಡ. ಇದನ್ನು ನಾವು ಸಂಭ್ರಮಿಸಬೇಕು ಎಂದು ಪುರುಷೋತ್ತಮ ಬಿಳಿಮಲೆ ತಿಳಿಸಿದರು. ಇಷ್ಟಿದ್ದೂ ಭಾಷೆಯ ಗಟ್ಟಿತನ ಎಲ್ಲಿದೆ ಎಂಬುದನ್ನು ಹುಡುಕುವುದು ಕಷ್ಟ. ಭಾಷೆ ಸಮಸ್ಯೆಯನ್ನು ಗಡಿಯಲ್ಲಿ ಪರಿಹರಿಸಿಕೊಳ್ಳಬೇಕಾಗಿದೆ. ರಕ್ಷಿಸಲು ಕಲಿಸಲು ಸರ್ಕಾರ ಕ್ರಮವಹಿಸಬೇಕು
27 ಕಡೆ ಒಡೆದು ಹೋಗಿದ್ದ ಕರ್ನಾಟಕ ಕರ್ನಾಟಕ 27 ಕಡೆ ಒಡೆದು ಹೋಗಿತ್ತು. ಭಾರತದ ಯಾವುದೇ ರಾಜ್ಯ ಇಷ್ಟೊಂದು ಒಡೆದು ಹೋಗಿಲ್ಲ. 1956ರಲ್ಲಿ ಅಖಂಡ ಕರ್ನಾಟಕವಾಗಿ ರೂಪುಗೊಂಡಿತು. ಅದಕ್ಕೆ ನೂರಾರು ವರ್ಷ ತೆಗೆದುಕೊಳ್ಳಲಾಯಿತು. ಎಷ್ಟೊ ಜನ ಬಲಿದಾನ ಮಾಡಿದ್ದಾರೆ ಎಂದು ಪುರುಷೋತ್ತಮ ಬಿಳಿಮಲೆ ಸ್ಮರಿಸಿದರು.
ದೇವರಿಗೆ ಸಂಸ್ಕೃತ ಬಿಟ್ಟರೆ ಬೇರೆ ಭಾಷೆ ಬರಲ್ಲ ವಚನಕಾರರು ಕನ್ನಡದಲ್ಲಿ ಬರೆಯುವ ಕಾಲಘಟ್ಟದಲ್ಲಿ ಅದೇನು ಗ್ರಹಚಾರವೋ ಏನೋ ದೇವರುಗಳಿಗೆ ಸಂಸ್ಕೃತ ಬಿಟ್ಟರೆ ಬೇರೆ ಭಾಷೆ ಬರುತ್ತಿರಲಿಲ್ಲ. ದೇವರನ್ನು ಸಾಕ್ಷತ್ಕಾರಗೊಳಿಸಲು ನಾವು ಸಂಸ್ಕೃತದಲ್ಲೇ ಹೇಳಬೇಕಿತ್ತು. ನಮಗೆ ಸಂಸ್ಕೃತ ಬರಲ್ಲ ಹೀಗಾಗಿ ಪುರೋಹಿತರ ಬಳಿ ಕಷ್ಟ ಹೇಳುತ್ತಿದ್ದೆವು. ಅವರು ಸಂಸ್ಕೃತದಲ್ಲಿ ಮಂತ್ರ ಹೇಳಿ ದೇವರಿಗೆ ಹೇಳುತ್ತಿದ್ದರು. ಸಮಸ್ಯೆ ಪರಿಹಾರವಾಗಲಿದೆ ಎಂದು ಪ್ರಸಾದ ನೀಡಿ ಕಳಿಸುತ್ತಿದ್ದರು ಎಂದು ಪುರುಷೋತ್ತಮ ಬಿಳಿಮಲೆ ತಿಳಿಸಿದರು. ನನಗೆ ಸಂಸ್ಕೃತ ಭಾಷೆ ಬರಲ್ಲ ದೇವರಿಗೆ ಸಂಸ್ಕೃತ ಬಿಟ್ಟು ಬೇರೆ ಭಾಷೆ ಬರಲ್ಲ. ಈ ಕಾರಣ ಅರ್ಚಕನನ್ನು ಅನಿವಾರ್ಯವಾಗಿ ಸೃಷ್ಟಿಮಾಡಿಕೊಂಡೆವು. ಆದರೆ ವಚನಕಾರರು ದೇವರಿಗೆ ಕನ್ನಡ ಕಲಿಸಿದರು. ಎಂಥ ಪರಂಪರೆ ನೋಡಿ. ನನ್ನ ಭಾಷೆ ಬಾರದಿದ್ದರೆ ನೀನು ದೇವರು ಆಗುವುದು ಹೇಗೆ ಎಂಬ ಪ್ರಶ್ನೆ ಮಾಡುತ್ತಾರೆ. ಇದು ಗಂಭೀರವಾದ ಪ್ರಶ್ನೆ. ಕನ್ನಡಿಗರ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಎಂದರು. ಆದರೆ ಇಂದು ಕನ್ನಡಿಗರಿಗೆ ಆತ್ಮವಿಶ್ವಾಸ ಇಲ್ಲದ ಪರಿಸ್ಥಿತಿ ಬಂದೊದಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.