ADVERTISEMENT

ಕೆಜಿಎಫ್‌ |ಶಾಲೆಗಳಲ್ಲಿ ಕನ್ನಡ ಭಾಷೆ ಗೊಂದಲ ನಿವಾರಿಸಿ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 5:18 IST
Last Updated 23 ಆಗಸ್ಟ್ 2025, 5:18 IST
   

ಕೆಜಿಎಫ್‌: ರಾಜ್ಯದ ಶಾಲೆಗಳಲ್ಲಿ ಪ್ರಾದೇಶಿಕ ಭಾಷೆ ಕನ್ನಡವನ್ನು ಯಾವ ಭಾಷೆಯಾಗಿ ಕಲಿಯಬೇಕೆಂಬ ಗೊಂದಲ ಏರ್ಪಟ್ಟಿದ್ದು, ರಾಜ್ಯ ಸರ್ಕಾರ ಕೂಡಲೇ ಗೊಂದಲ ನಿವಾರಿಸಲು ಕ್ರಮ ಕೈಗೊಳ್ಳಬೇಕೆಂದು ಕನ್ನಡ ಶಕ್ತಿ ಕೇಂದ್ರ ಆಗ್ರಹಿಸಿದೆ.

2020ರ ನ್ಯಾಷನಲ್ ಎಜುಕೇಶನ್ ಪಾಲಿಸಿ ಪ್ರಕಾರ ಒಂದರಿಂದ ಐದನೇ ತರಗತಿಯವರೆಗೆ ಪ್ರಾದೇಶಿಕ ಭಾಷೆ ಕಲಿಸಬೇಕಾಗಿದೆ. ಇತ್ತ ಎನ್ಇಪಿ ಜಾರಿಯೂ ಆಗಿಲ್ಲ, ಅತ್ತ ಕನ್ನಡ ಕಲಿಕಾ ಅದಿನಿಯಮ 2015 ಕೂಡ ಜಾರಿಯಲಿಲ್ಲ. ಇದರ ಗೊಂದಲದ ನಡುವೆ ದ್ವಿಭಾಷಾ ನಿಯಮ ಜಾರಿಗೆ ತರಲು ಮುಂದಾಗಿರುವುದು ಪೋಷಕರಿಗೆ ಗೊಂದಲವನ್ನುಂಟು ಮಾಡಿದೆ. ಕೇಂದ್ರ ಸರ್ಕಾರ ಎನ್ಇಪಿ 2020ಅನ್ನು ಅನುಷ್ಠಾನಕ್ಕೆ ತರಲು ಮುಂದಾಗಿರುವ ಸಮಯದಲ್ಲಿ ರಾಜ್ಯ ಸರ್ಕಾರ ಎಸ್ಇಪಿ ಜಾರಿ ಮಾಡಲು ಮುಂದಾಗಿರುವುದು ಇನ್ನಷ್ಟು ಗೊಂದಲ ಉಂಟಾಗಿದೆ ಎಂದು ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಬಾ.ಹಾ.ಶೇಖರಪ್ಪ ಹೇಳಿದ್ದಾರೆ.

ಕರ್ನಾಟಕದಲ್ಲಿ 4,429 ಉರ್ದು ಶಾಲೆ, 110 ತಮಿಳು ಮಾಧ್ಯಮ ಶಾಲೆ, 991 ಮರಾಠಿ ಮಾಧ್ಯಮ ಶಾಲೆ, 49 ಹಿಂದಿ ಮಾಧ್ಯಮ ಶಾಲೆ ಸೇರಿ ಒಟ್ಟು 5,656 ಕನ್ನಡೇತರ ಶಾಲೆಗಳಿವೆ. ಈ ಶಾಲೆಗಳಲ್ಲಿ ಮಾತೃ ಭಾಷೆ ಕನ್ನಡವನ್ನು ಕಲಿಸುತ್ತಿದ್ದಾರೆಯೇ? ಅಲ್ಲದೆ, ಕರ್ನಾಟಕದಲ್ಲಿ 52 ಕೇಂದ್ರೀಯ ವಿದ್ಯಾಲಯಗಳಿವೆ. ಇಲ್ಲಿ ಕನ್ನಡ ಕಲಿಕೆ ಕಡ್ಡಾಯವಿಲ್ಲ ಎಂದರು.

ADVERTISEMENT

ಕರ್ನಾಟಕದಲ್ಲಿರುವ 52 ಕೇಂದ್ರಿಯ ವಿದ್ಯಾಲಯಗಳಲ್ಲಿ ಪ್ರಾದೇಶಿಕ ಭಾಷೆ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲ್ಪಿಸಬೇಕಾಗಿದೆ. ಕರ್ನಾಟಕದಲ್ಲಿ ಸಿಬಿಎಸ್‌ಸಿ ಹಾಗೂ ಐಸಿಎಸ್‌ಸಿ ಪಠ್ಯಕ್ರಮ ಶಾಲೆಗಳಲ್ಲಿ ಕನ್ನಡ ಪಠ್ಯಪುಸ್ತವನ್ನು ವಿತರಿಸಬೇಕು. ಜೊತೆಗೆ ಒಂದೊಂದು ಶಾಲೆಯಲ್ಲಿ ಒಂದೊಂದು ಬಗೆಯ ಪಠ್ಯಪುಸ್ತಕಗಳನ್ನು ಅಳವಡಿಸಿದ್ದರೂ ಶಿಕ್ಷಣ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ವಿವರಿಸಿದರು.

ಇನ್ನೆರಡು ವರ್ಷಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಕನ್ನಡವನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಸರ್ಕಾರವೇ ಸಿದ್ಧಪಡಿಸಿರುವ ಸರ್ಕಾರಿ ಶಾಲೆಗಳ ಸಬಲೀಕರಣ ವರದಿ ಜಾರಿಯಾಗಲಿಲ್ಲ. ಶಾಲೆಗಳಿಗೆ ಮೂಲಭೂತ ಸೌಲಭ್ಯಗಳಿಲ್ಲ. ಸರ್ಕಾರಿ ಶಾಲೆಗಳ ಕೊಠಡಿಗಳು ಸೋರುತ್ತಿವೆ. ಹಲವು ಶಾಲೆಗಳಲ್ಲಿ ನೆಲದ ಮೇಲೆ ಕುಳಿತು ಮಕ್ಕಳು ಪಾಠ ಕೇಳುತ್ತಿದ್ದಾರೆ. ಹಾಗಾಗಿ ಅನೇಕ ಪೋಷಕರು ಅನಿವಾರ್ಯವಾಗಿ ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.