
ಬೇತಮಂಗಲ: ಶ್ರೀನಿವಾಸಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡುಗೂರು ಗ್ರಾಮದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ನಿರ್ಮಿಸಿರುವ ಬಸ್ ತಂಗುದಾಣವು ಅನೈತಿಕ ಚಟುವಟಿಕೆಗಳ ಸ್ಥಾನವಾಗಿ ಮಾರ್ಪಟ್ಟಿದೆ.
ಕರಡುಗೂರು ಗ್ರಾಮದಿಂದ ಪ್ರತಿನಿತ್ಯ ಬಸ್ ಸಂಚಾರದ ಮೂಲಕ ಕ್ಯಾಸಂಬಳ್ಳಿ ಮಾರ್ಗವಾಗಿ ಕೆಜಿಎಫ್ ಹಾಗೂ ರಾಜ್ ರೋಡ್ ಮಾರ್ಗವಾಗಿ ಆಂಧ್ರಪ್ರದೇಶಕ್ಕೆ ತೆರಳುವ ಜನರ ಉಪಯೋಗಕ್ಕಾಗಿ ತಂಗುದಾಣ ನಿರ್ಮಿಸಲಾಗಿದೆ. ಆದರೆ, ಈ ತಂಗುದಾಣದಲ್ಲಿ ಕೆಲವರು ಮದ್ಯಪಾನ ಮಾಡುತ್ತಾರೆ. ಹೀಗೆ ಮದ್ಯಪಾನ ಮಾಡಿದ ಬಳಿಕ ಪಾಕೆಟ್‌ಗಳನ್ನು ತಂಗುದಾಣದಲ್ಲೇ ಬಿಟ್ಟು ಹೋಗುತ್ತಾರೆ. ಹೀಗಾಗಿ, ಜನಸಾಮಾನ್ಯರು ಮತ್ತು ವಿದ್ಯಾರ್ಥಿಗಳುಸ ತಂಗುದಾಣದ ಒಳಗೆ ಹೋಗಲು ಹಿಂದೇಟು ಹಾಕುತ್ತಾರೆ ಎಂದು ಸ್ಥಳೀಯರು ಹೇಳುತ್ತಾರೆ.
ಇದರಿಂದಾಗಿ ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರು ಬಿಸಿಲಿನಲ್ಲೇ ನಿಂತು ಬಸ್‌ಗಳಿಗೆ ಕಾಯುವ ಅನಿವಾರ್ಯತೆ ಎದುರಾಗಿದೆ.
ಮಳೆಗಾಲದಲ್ಲಿ ಪ್ರಯಾಣಿಕರ ಆಶ್ರಯಕ್ಕೆ ಆಸರೆ ಆಗಬೇಕಾದ ತಂಗುದಾಣವು, ಕುಡುಕರು ಮತ್ತು ಧೂಮಪಾನ ಮಾಡುವವರಿಗೆ ಆಸರೆಯಾಗಿದೆ. ಈ ತಂಗುದಾಣವು ಸುಮಾರು ವರ್ಷಗಳಿಂದ ಇದೇ ರೀತಿ ಸಾರ್ವಜನಿಕರ ಉಪಯೋಗಕ್ಕೆ ಬಾರದೆ ಕುಡುಕರಿಗೆ ಮಾತ್ರ ಅನುಕೂಲ ಕಲ್ಪಿಸಿದೆ. ಈ ಸಂಬಂಧ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಯ.
ತಂಗುದಾಣವನ್ನು ಸ್ವಚ್ಛಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಜನಪ್ರತಿನಿಧಿಗಳು ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ತಂಗುದಾಣ ನಿರ್ಮಿಸಿ ಸುಮಾರು ವರ್ಷಗಳೇ ಆಗಿದೆ. ಸರಿಯಾಗಿ ನಿರ್ವಹಣೆ ಮಾಡದ ಕಾರಣ ಹದಗೆಟ್ಟಿದೆ. ಕಟ್ಟಡ ತೆರವುಗೊಳಿಸಿ ನೂತನ ತಂಗುದಾಣ ನಿರ್ಮಿಸಬೇಕುಅಭಿಲಾಶ್ ರೆಡ್ಡಿ ಸ್ಥಳೀಯ ಯುವಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.