ADVERTISEMENT

ಕೋಲಾರದ ಆರೂ ಕ್ಷೇತ್ರಗಳಲ್ಲಿ ಬಿಜೆಪಿ ಟಿಕೆಟ್‌ ಕಗ್ಗಂಟು!

ಹೆಚ್ಚಿದ ಆಕಾಂಕ್ಷಿಗಳು; ಕೋಲಾರ ಜಿಲ್ಲೆಯಲ್ಲಿ ಗೊಂದಲದ ಗೂಡಾದ ‘ಕಮಲ’

ಕೆ.ಓಂಕಾರ ಮೂರ್ತಿ
Published 3 ಮಾರ್ಚ್ 2023, 11:11 IST
Last Updated 3 ಮಾರ್ಚ್ 2023, 11:11 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕೋಲಾರ: ಜಿಲ್ಲೆಯಲ್ಲಿ ಕನಿಷ್ಠ ನಾಲ್ಕು ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ ಇಟ್ಟುಕೊಂಡು ಮುಂಬರುವ ಚುನಾವಣೆಗೆ ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಆದರೆ, ಆರೂ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳು ಹೆಚ್ಚಿರುವುದರಿಂದ ಟಿಕೆಟ್‌ ವಿಚಾರ ಕಗ್ಗಂಟಾಗಿದ್ದು, ಪಕ್ಷದಲ್ಲಿ ಗೊಂದಲ ನಿರ್ಮಾಣವಾಗಿದೆ.

ಟಿಕೆಟ್‌ ಘೋಷಣೆಗೆ ಮುನ್ನವೇ ಪಕ್ಷದಲ್ಲಿ ಭಿನ್ನಮತ, ಆಣೆ–ಪ್ರಮಾಣ, ಜಿಲ್ಲಾಧ್ಯಕ್ಷ, ಸಂಸದ, ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಆಕಾಂಕ್ಷಿಗಳ ಮುನಿಸು ಎದ್ದು ಕಾಣುತ್ತಿದೆ. ಇದು ಪಕ್ಷದ ಹೈಕ
ಮಾಂಡ್‌ಗೆ ತಲೆನೋವಾಗಿ ಪರಿಣಮಿಸಿದೆ.

ಈಚೆಗೆ ಜಿಲ್ಲೆಗೆ ಭೇಟಿ ನೀಡಿ ಟಿಕೆಟ್‌ ಆಕಾಂಕ್ಷಿಗಳ ಸಭೆ ನಡೆಸಿದ್ದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಕೆಲವೊಂದು ಸೂಕ್ಷ್ಮವಿಚಾರ ತಿಳಿಸಿ ಎಚ್ಚರಿಕೆ ನೀಡಿದ್ದರು. ‘ಪಕ್ಷ, ಪಕ್ಷದ ಚಿಹ್ನೆ ಮುಖ್ಯವೇ ಹೊರತು ವ್ಯಕ್ತಿಯಲ್ಲ’ ಎಂದಿದ್ದರು.

ADVERTISEMENT

‘ಜಿಲ್ಲೆಯ ಕನಿಷ್ಠ ನಾಲ್ಕು ಕ್ಷೇತ್ರಗಳಲ್ಲಿ ಹೈಕಮಾಂಡ್‌ ಸೂಚಿಸಿದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಬೇಕು’ ಎಂಬ ಜವಾಬ್ದಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹಾಗೂ ಸಂಸದ ಎಸ್‌.ಮುನಿಸ್ವಾಮಿ ಅವರಿಗೆ ನೀಡಲಾಗಿದೆ. ಆದರೆ, ಟಿಕೆಟ್‌ ಆಕಾಂಕ್ಷಿಗಳು ಹೆಚ್ಚುತ್ತಿರುವುದು ಅವರಿಗೂ ತಲೆನೋವು ತಂದಿದೆ.

ಬಂಗಾರಪೇಟೆ ಕ್ಷೇತ್ರವೊಂದರಲ್ಲೇ ಬರೋಬ್ಬರಿ ಆರು ಮಂದಿ ಟಿಕೆಟ್‌ ಆಕಾಂಕ್ಷಿಗಳಿದ್ದಾರೆ. ಅವರವರ ಬೆಂಬಲಿಗರ ಜೊತೆಯಲ್ಲಿ ಪ್ರಚಾರ ಕೂಡ ನಡೆಸುತ್ತಿದ್ದಾರೆ. ಇದೇ ಕಾರಣಕ್ಕೆ ಈಚೆಗೆ ‘ಯಾರನ್ನೇ ಪಕ್ಷದ ಅಭ್ಯರ್ಥಿ ಮಾಡಿದರೂ ಪಕ್ಷಕ್ಕೆ ದ್ರೋಹ ಬಗೆಯ
ಬಾರದು’ ಎಂಬುದಾಗಿ ಮುನಿರತ್ನ ಆರೂ ಮಂದಿಯಿಂದ ಪ್ರಮಾಣ ಮಾಡಿಸಿಕೊಂಡಿದ್ದೂ ನಡೆದಿದೆ.

‘ಆಪರೇಷನ್‌ ಕಮಲ’ದಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ 2011ರ ಬಂಗಾರಪೇಟೆ ಉಪಚುನಾ
ವಣೆಯಲ್ಲಿ ಗೆದ್ದಿದ್ದರು. ಈಗ ಅವರು ಮತ್ತೊಮ್ಮೆ ಟಿಕೆಟ್‌ ಆಕಾಂಕ್ಷಿ. ಕ್ಷೇತ್ರದಲ್ಲಿ ಮೊದಲ ಬಾರಿ ಬಿಜೆಪಿ ಖಾತೆ ತೆರೆಯಲು ಕಾರಣರಾಗಿದ್ದ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಹಾಗೂ ಅವರ ಪುತ್ರ ಬಿ.ವಿ.ಮಹೇಶ್‌ ಕೂಡ ಟಿಕೆಟ್‌ ಬಯಸಿದ್ದಾರೆ. ಹೀಗಾಗಿ, ಬಿಜೆಪಿಗೆ ಈ ಕ್ಷೇತ್ರದಲ್ಲಿ ದೊಡ್ಡ ಸವಾಲು ಎದುರಾಗಿದೆ.

ಕೋಲಾರ ಕ್ಷೇತ್ರದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್‌, ಕಳೆದ ಬಾರಿಯ ಅಭ್ಯರ್ಥಿ ಓಂಶಕ್ತಿ ಚಲಪತಿ ನಡುವೆ ‘ಬಿ’ ಫಾರ್ಮ್‌ಗೆ ಪೈಪೋಟಿ ಇದೆ. ಸಿದ್ದರಾಮಯ್ಯ ಸ್ಪರ್ಧೆ ಕಾರಣ ಈ ಕ್ಷೇತ್ರ ಹೈವೋಲ್ಟೇಜ್‌ ಎನಿಸಿದ್ದು, ಬಿಜೆಪಿ ಹೈಕಮಾಂಡ್‌ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ನಿಗೂಢವಾಗಿದೆ. ಅದಕ್ಕೆ ತಲೆಕೆಡಿಸಿಕೊಳ್ಳದ ವರ್ತೂರು ಪ್ರಕಾಶ್‌ ಹಳ್ಳಿಗಳಲ್ಲಿ ಪ್ರಚಾರ ಮುಂದುವರಿಸಿದ್ದಾರೆ. ಇತ್ತ ಓಂಶಕ್ತಿ ಚಲಪತಿ ಪಕ್ಷದ ಪ್ರಮುಖರ ಜೊತೆ ಸಂಪರ್ಕ ಸಾಧಿಸಿ ಟಿಕೆಟ್‌ ಗಿಟ್ಟಿಸುವ ವಿಶ್ವಾಸದಲ್ಲಿದ್ದಾರೆ.

ಮುಳಬಾಗಿಲು ಕ್ಷೇತ್ರದಲ್ಲಿ ಬಿಜೆಪಿಗೆ ಸಮರ್ಥ ಅಭ್ಯರ್ಥಿ ಇಲ್ಲದ ಪರಿಸ್ಥಿತಿ ಇದೆ. ಶೀಗೇಹಳ್ಳಿ ಸುಂದರ್‌ ಹೆಸರು ಮುಂಚೂಣಿಯಲ್ಲಿದೆ. ಶ್ರೀನಿವಾಸಪುರದಲ್ಲಿ ಜಿಲ್ಲಾ ಅಧ್ಯಕ್ಷ ಡಾ.ವೇಣುಗೋಪಾಲ್‌ ಅವರೇ ಟಿಕೆಟ್‌ ಆಕಾಂಕ್ಷಿ. ಕಳೆದ ಬಾರಿಯೂ ಅವರು ಸ್ಪರ್ಧಿಸಿದ್ದರು. ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಗೆ ನೆಲೆ ಇಲ್ಲದ ಕಾರಣ ಅಂಥ ಪೈಪೋಟಿ ಕಂಡುಬರುತ್ತಿಲ್ಲ.

ಕೆಜಿಎಫ್‌ನಲ್ಲಿ ಇಬ್ಬರು ಪ್ರಮುಖ ಆಕಾಂಕ್ಷಿಗಳು ಇದ್ದಾರೆ. ಅವರಲ್ಲಿ ಪ್ರಬಲ ಆಕಾಂಕ್ಷಿ ಮಾಜಿ ಶಾಸಕ ವೈ.ಸಂಪಂಗಿ. ಅವರು 2008ರಲ್ಲಿ ಗೆದ್ದಿದ್ದರು, ಆದರೆ, 2013ರಲ್ಲಿ ಅವರ ತಾಯಿ ರಾಮಕ್ಕ ಸ್ಪರ್ಧಿಸಿ ಜಯ ಗಳಿಸಿದ್ದರು. 2018ರಲ್ಲಿ ಮಗಳು ಅಶ್ವಿನಿ ಸಂಪಂಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇತ್ತ ವಿ.ಮೋಹನ್‌ ಕೃಷ್ಣ ಕೂಡ ಟಿಕೆಟ್‌ಗೆ ಪ್ರಯತ್ನ ನಡೆಸಿದ್ದು, ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದಾರೆ.

ಬಿಜೆಪಿಯೊಳಗಿನ ಟಿಕೆಟ್‌ ಕಿತ್ತಾಟ ತಮಗೆ ಲಾಭ ಆಗಬಹುದು ಎಂಬ ಆಸೆಯನ್ನು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಹೊಂದಿವೆ.

ಜಿಲ್ಲೆಯ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳು

l ಮಾಲೂರು: ಮಂಜುನಾಥ್‌ ಗೌಡ, ಹೂಡಿ ವಿಜಯಕುಮಾರ್‌

l ಬಂಗಾರಪೇಟೆ: ಎಂ.ನಾರಾಯಣಸ್ವಾಮಿ, ಬಿ.ವಿ.ಮಹೇಶ್‌, ಬಿ.ಪಿ.ವೆಂಕಟಮುನಿಯಪ್ಪ

l ಕೋಲಾರ: ವರ್ತೂರು ಪ್ರಕಾಶ್‌, ಓಂಶಕ್ತಿ ಚಲಪತಿ

l ಕೆಜಿಎಫ್‌: ವೈ.ಸಂಪಂಗಿ, ವಿ.ಮೋಹನ್‌ ಕೃಷ್ಣ

l ಮುಳಬಾಗಿಲು: ಶೀಗೇಹಳ್ಳಿ ಸುಂದರ್‌, ಗುರುಮೂರ್ತಿ, ಶೋಭಾ ಶ್ರೀನಿವಾಸ್‌

l ಶ್ರೀನಿವಾಸಪುರ: ಡಾ.ಕೆ.ಎನ್‌.ವೇಣುಗೋಪಾಲ್, ಎಸ್‌ಎಲ್ಎನ್‌ ಮಂಜು

ಮಾಲೂರು ಕ್ಷೇತ್ರದಲ್ಲಿ ಕೆಸರೆರಚಾಟ!

ಮಾಲೂರು ಕ್ಷೇತ್ರದ ಬಿಜೆಪಿ ಟಿಕೆಟ್‌ ಗಿಟ್ಟಿಸಲು ಆಕಾಂಕ್ಷಿಗಳ ನಡುವೆ ಕೆಸರೆರಚಾಟ ನಡೆಯುತ್ತಿದೆ. ಆಕಾಂಕ್ಷಿ ಹೂಡಿ ವಿಜಯಕುಮಾರ್‌ ತಮ್ಮ ಪಕ್ಷದ ಸ್ಥಳೀಯ ನಾಯಕರ ವಿರುದ್ಧವೇ ಸಿಡಿದೆದ್ದಿದ್ದಾರೆ. ಇದಕ್ಕೆ ಕಾರಣ ಮುನಿರತ್ನ, ಮುನಿಸ್ವಾಮಿ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್‌ ಮತ್ತೊಬ್ಬ ಟಿಕೆಟ್‌ ಆಕಾಂಕ್ಷಿ ಹಾಗೂ ಈಚೆಗೆ ಪಕ್ಷ ಸೇರಿದ್ದ ಮಾಜಿ ಶಾಸಕ ಕೆ.ಎಸ್‌.ಮಂಜುನಾಥ್‌ ಗೌಡ ಅವರತ್ತ ಒಲವು ತೋರುತ್ತಿದ್ದಾರೆ ಎಂಬುದು.

ಹೂಡಿ ವಿಜಯಕುಮಾರ್‌ ಪ್ರಚಾರಕ್ಕೆ ಇಳಿದು ವಿವಿಧ ಕಾರ್ಯಕ್ರಮ ಹಮ್ಮಿಕೊಂಡು ಮತದಾರರಿಗೆ ಕೊಡುಗೆ ಮೇಲೆ ಕೊಡುಗೆ ನೀಡುತ್ತಿದ್ದಾರೆ.

ಹೊಸದಾಗಿ ನಿರ್ಮಿಸಿದ ತಮ್ಮ ಮನೆಗೆ ‘ಮೋದಿ ನಿವಾಸ’ ಎಂದು ಹೆಸರಿಟ್ಟಿದ್ದಾರೆ.

ಮಾಲೂರು ಕ್ಷೇತ್ರದಲ್ಲಿ ಈ ಹಿಂದೆ ಕೃಷ್ಣಯ್ಯ ಶೆಟ್ಟಿ ಗೆದ್ದಿದ್ದರು. ಬಿಜೆಪಿ ಗೆಲುವಿನ ಅವಕಾಶವಿದ್ದರೂ ಈಗಿನ ಕಿತ್ತಾಟವು ಕಾಂಗ್ರೆಸ್‌ ಅಥವಾ ಜೆಡಿಎಸ್‌ಗೆ ವರದಾನ ಆಗಬಹುದು ಎಂಬ ಮಾತು ಕೇಳಿಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.