ADVERTISEMENT

ಬಜೆಟ್‌ | ಕೋಲಾರ ಮರೆತ ಉಸ್ತುವಾರಿ ಸಚಿವ, ಶಾಸಕರು!

​ಪ್ರಜಾವಾಣಿ ವಾರ್ತೆ
Published 8 ಜುಲೈ 2023, 8:37 IST
Last Updated 8 ಜುಲೈ 2023, 8:37 IST
ಕೋಲಾರ ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ–75 ದೃಶ್ಯ
ಕೋಲಾರ ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ–75 ದೃಶ್ಯ    

ಕೆ.ಓಂಕಾರ ಮೂರ್ತಿ

ಕೋಲಾರ: ‘ಕಾಂಗ್ರೆಸ್‌ನ ನಾಲ್ವರು ಶಾಸಕರು, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸೇರಿದಂತೆ ಇಬ್ಬರು ವಿಧಾನ ಪರಿಷತ್‌ ಸದಸ್ಯರು ಹಾಗೂ ಜಿಲ್ಲೆಗೆ ಹೊರಗಿನಿಂದ ನಿಯೋಜನೆ ಆಗಿರುವ ಉಸ್ತುವಾರಿ ಸಚಿವರು ಇದ್ದೂ ವ್ಯರ್ಥ. ಅವರೆಲ್ಲಾ ಕೋಲಾರವನ್ನು ಸಂಪೂರ್ಣ ಮರೆತಿದ್ದಾರೆ. ಮುಖ್ಯಮಂತ್ರಿ ಮೇಲೆ ಒತ್ತಡ ಹಾಕಿ ಮನವೊಲಿಸುವಲ್ಲಿ ವಿಫಲರಾಗಿದ್ದಾರೆ. ಮತದಾರರಿಗೆ ಮೋಸ ಮಾಡಿದ್ದಾರೆ’

ಈ ಬಾರಿಯ ಬಜೆಟ್‌ನಲ್ಲಿ ಜಿಲ್ಲೆಯನ್ನು ಮತ್ತೆ ನಿರ್ಲಕ್ಷಿಸಿರುವುದಕ್ಕೆ ರೈತ ಮುಖಂಡರು, ಹೋರಾಟಗಾರರು, ವಿವಿಧ ಸಂಘಟನೆಗಳ ಮುಖಂಡರು, ಪ್ರತಿ ಪಕ್ಷದವರು ಆಕ್ರೋಶ ವ್ಯಕ್ತಪಡಿಸಿದ ರೀತಿ ಇದು.

ADVERTISEMENT

‘ಜಿಲ್ಲೆಗೆ ಸಚಿವ ಸ್ಥಾನವೂ ಸಿಗಲಿಲ್ಲ, ಜಿಲ್ಲೆಯತ್ತ ಕಾಳಜಿ ತೋರುವ ಉಸ್ತುವಾರಿ ಸಚಿವರೂ ಸಿಕ್ಕಿಲ್ಲ. ಈಗ ಬಜೆಟ್‌ನಲ್ಲಿ ಯಾವುದೇ ಯೋಜನೆ ಸಿಕ್ಕಿಲ್ಲ’ ಎಂದೂ ಟೀಕಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ಜಿಲ್ಲೆಯ ಜನರು ಇಟ್ಟುಕೊಂಡಿದ್ದ ನಿರೀಕ್ಷೆ ಸಂಪೂರ್ಣ ಹುಸಿಯಾಗಿದೆ. ‌ಈ ಮೂಲಕ ಹತ್ತಾರು ವರ್ಷಗಳಿಂದ ಜಿಲ್ಲೆಯೆಡೆಗಿನ ತಾರತಮ್ಯ ಮುಂದುವರಿದಿದೆ. ಹೊಸ ಯೋಜನೆ ಬಿಟ್ಟುಬಿಡಿ ನೀಡಿದ ಭರವಸೆಗಳನ್ನೇ ಈಡೇರಿಸಿಲ್ಲ.

ಕೋಲಾರ‌ದಲ್ಲಿ ಸ್ಪರ್ಧಿಸಲು ಮುಂದಾಗಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಕ್ಷೇತ್ರದ ಅಭಿವೃದ್ಧಿ ಸಂಬಂಧ ಹಲವಾರು ಯೋಜನೆ ರೂಪಿಸಿದ್ದರು. ಜೊತೆಗೆ ಪ್ರಚಾರ ಸಭೆಗಳಲ್ಲಿ ಕೋಲಾರ ಹಾಗೂ ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿಗಳ ಪಟ್ಟಿಯನ್ನೇ ನೀಡಿದ್ದರು. ಅವರು ಹಲವಾರು ಲೆಕ್ಕಾಚಾರಗಳೊಂದಿಗೆ ತಮ್ಮ ಪರಮಾಪ್ತ ಬೈರತಿ ಸುರೇಶ್ ಅವರಿಗೆ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ ವಹಿಸಿದ್ದಾರೆ. ಇಷ್ಟಾಗಿಯೂ ಜಿಲ್ಲೆಯತ್ತ ನಿರ್ಲಕ್ಷ್ಯ ಮುಂದುವರಿದಿದೆ. ಸಚಿವರು ತಿಂಗಳಿಂದ ಕೋಲಾರದಲ್ಲಿ ಒಂದು ಸಭೆಯನ್ನೂ ನಡೆಸಲಿಲ್ಲ. ಹೀಗಾಗಿ, ಜನರಿಂದ ಟೀಕೆ ವ್ಯಕ್ತವಾಗುತ್ತಿದೆ.

ಇನ್ನು ಕೋಲಾರ, ಮಾಲೂರು ನಗರಕ್ಕೆ ರಿಂಗ್‌ ರಸ್ತೆ, ಕೋಲಾರದಲ್ಲಿ ವೈದ್ಯಕೀಯ ಕಾಲೇಜು, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ನಗರಪಾಲಿಕೆಯಾಗಿ ಕೋಲಾರ ನಗರಸಭೆ, ಟೊಮೆಟೊ ಮಾರುಕಟ್ಟೆ ಸ್ಥಳಾಂತರ– ಅನುದಾನ ಸಂಬಂಧ ನೀಡಿದ ಭರವಸೆಗಳನ್ನು ಸರ್ಕಾರದ ಪ್ರತಿನಿಧಿಗಳು ಸಂಪೂರ್ಣ ಮರೆತಂತಿದೆ.

ಇನ್ನುಳಿದಂತೆ ಕಳೆದ ಸರ್ಕಾರದ ಬಜೆಟ್‌ನಲ್ಲಿ ಘೋಷಿಸಿದ್ದ ಯೋಜನೆಗಳನ್ನೇ ಮತ್ತೆ ಪ್ರಸ್ತಾಪ ಮಾಡಲಾಗಿದೆ. ಸ್ವಯಂ ಚಾಲಿತಾ ಚಾಲನಾ ಪರೀಕ್ಷಾ ಪಥ ನಿರ್ಮಾಣ ಕಾರ್ಯ, ಪಕ್ಕದ ಜಿಲ್ಲೆಯ ಶಿಡ್ಲಘಟ್ಟದಲ್ಲಿ ₹ 75 ಕೋಟಿ ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣ, ಎತ್ತಿನ ಹೊಳೆ ಯೋಜನೆ ಜಾರಿ, ಶಿಲ್ಪಕಲೆ ತರಬೇತಿ ಕೇಂದ್ರ ಸ್ಥಾಪನೆ, ರೈತರಿಗೆ ನೀಡಲಾಗುತ್ತಿದ್ದ ₹ 3 ಲಕ್ಷ ಬಡ್ಡಿ ರಹಿತ ಸಾಲ ₹ 5 ಲಕ್ಷಕ್ಕೆ ಹೆಚ್ಚಳ ಮಾಡಿರುವುದು ಇರಬಹುದು.

ಇನ್ನು ಕೆಲ ಯೋಜನೆಗಳು ಎಲ್ಲಾ ಜಿಲ್ಲೆಗೆ ಲಭಿಸಿದಂತೆ ಕೋಲಾರಕ್ಕೂ ಸಿಕ್ಕಿವೆ. ರಾಜ್ಯದ 50 ತರಕಾರಿ ಮಾರುಕಟ್ಟೆಗಳಲ್ಲಿ ಮಿನಿ ಶೀತಲ ಗೃಹ, ತೋಟಗಾರಿಕೆ ಬೆಳೆ ಸಂರಕ್ಷಣೆಗೆ ರಾಜ್ಯದ ಎಂಟು ಕಡೆ ಶೀತಲ ಘಟಕ ನಿರ್ಮಿಸುವುದಾಗಿ ಹೇಳಿದ್ದಾರೆ. ಕೋಲಾರಕ್ಕೂ ಸಿಗುವ ಸಾಧ್ಯತೆ ಇದೆ ಅಷ್ಟೆ. 

ಎತ್ತಿನಹೊಳೆ ಯೋಜನೆ ಕಾಂಗ್ರೆಸ್‌ ಸರ್ಕಾರದ ಹಿಂದಿನ ಅವಧಿಯಲ್ಲೇ ಜಾರಿ ಆಗಬೇಕಿತ್ತು. ಆದರೆ, ಹಣ ಹೆಚ್ಚಿಸಲಷ್ಟೇ ಸೀಮಿತ ಮಾಡಿಕೊಂಡಿದ್ದು ಇನ್ನೂ ಆರಕ್ಕೇರಿಲ್ಲ. ಈಗ ಮತ್ತೆ ಯೋಜನೆಯಡಿ ಬಾಕಿ ಇರುವ ಕಾಮಗಾರಿ ಪೂರ್ಣಗೊಳಿಸುವುದಾಗಿ ಪ್ರಸ್ತಾಪಿಸಿದ್ದಾರೆ.

ಕೆ.ಸಿ.ವ್ಯಾಲಿ ಮತ್ತು ಎಚ್‌.ಎನ್‌.ವ್ಯಾಲಿ ಯೋಜನೆಯ ಎರಡನೇ ಹಂತದಲ್ಲಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ 296 ಕೆರೆ ತುಂಬಿಸಲು ₹ 529 ಕೋಟಿ ಅನುದಾನ ಮೀಸಲಿಡಲಾಗಿದೆ.

ಬಜೆಟ್‌ನಲ್ಲಿ ಕೋಲಾರ ಜಿಲ್ಲೆಗೆ ಸಿಕ್ಕಿದ್ದೇನೆ?

  • ಕೈಗಾರಿಕಾ ಸಂಪರ್ಕಕ್ಕೆ ದೇವನಹಳ್ಳಿ–ವೇಮಗಲ್‌–ಮಾಲೂರು–ಹೊಸೂರು ರಸ್ತೆ ನಿರ್ಮಾಣ

  • ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ 3 ಬೇ ಅಗ್ನಿಶಾಮಕ ಠಾಣೆ ಕಟ್ಟಡ ನಿರ್ಮಾಣ

  • ದೇಗುಲ ನಿರ್ಮಾಣಕ್ಕೆ ಶಿಲ್ಪಿಗಳನ್ನು ತಯಾರಿಸಲು ಮಾಲೂರಿನ ಶಿವಾರಪಟ್ಟಣದಲ್ಲಿ ಶಿಲ್ಪಕಲಾ ತರಬೇತಿ ಕೇಂದ್ರ

  • ಎತ್ತಿನ ಹೊಳೆ ಯೋಜನೆ ಕಾಮಗಾರಿ ಮುಂದುವರಿಸಲು ತೀರ್ಮಾನ

  • ಕೆ.ಸಿ.ವ್ಯಾಲಿ ಎಚ್‌.ಎನ್‌.ವ್ಯಾಲಿ 2ನೇ ಹಂತ: 296 ಕೆರೆ ತುಂಬಿಸಲು ₹ 529 ಕೋಟಿ

  • ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ ನಿರ್ಮಾಣ ಕಾರ್ಯ * ಕೆಜಿಎಫ್‌ನಲ್ಲಿ ಕೈಗಾರಿಕಾ ಟೌನ್‌ಶಿಪ್‌ ಸ್ಥಾಪನೆ

ಸರ್ಕಾರಕ್ಕೆ ನೆನಪಾಗದ ಶುದ್ಧೀಕರಣ ಘಟಕ

ಜಿಲ್ಲೆಯ ಜನ ಜಾನುವಾರುಗಳಿಗೆ ನಿತ್ಯ ವಿಷ ಉಣಿಸುತ್ತಿರುವ ಕೆ.ಸಿ.ವ್ಯಾಲಿನ ನೀರಿನ ಮೂರನೇ ಹಂತದ ಶುದ್ಧೀಕರಣ ವಿಚಾರವೇ ಸರ್ಕಾರಕ್ಕೆ ಮರೆತು ಹೋದಂತಿದೆ. ಕಾಂಗ್ರೆಸ್‌ ಸರ್ಕಾರ ಬಂದರೆ ಶುದ್ಧೀಕರಣ ಘಟಕ ಸ್ಥಾಪಿಸುವ ಬಗ್ಗೆ ಈ ಪಕ್ಷದ ಮುಖಂಡರು ಚುನಾವಣಾ ಪ್ರಚಾರದಲ್ಲಿ ಪ್ರಸ್ತಾಪಿಸದ ದಿನಗಳೇ ಇರಲಿಲ್ಲ. ಬಿಜೆಪಿ ಸರ್ಕಾರದ ಕೊನೆಯ ಬಜೆಟ್‌ನಲ್ಲಿ ಮೂರನೇ ಹಂತದ ಶುದ್ಧೀಕರಣಕ್ಕೆ ಒತ್ತು ನೀಡಲಾಗಿತ್ತು. ಆದರೆ ಅನುದಾನ ಬಿಡುಗಡೆ ಮಾಡಿರಲಿಲ್ಲ. ಕಾಂಗ್ರೆಸ್‌ ಸರ್ಕಾರದಲ್ಲಿ ಆ ವಿಚಾರವೇ ಪ್ರಸ್ತಾಪ ಆಗಿಲ್ಲ. ‘ಸರ್ಕಾರ ಜಿಲ್ಲೆಯ ಜನರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದೆ’ ಎಂದು ಜಿಲ್ಲೆಯ ಜನರು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.