ADVERTISEMENT

ಉಪ ಚುನಾವಣೆ: ಬಿಜೆಪಿ ಗೆಲುವು ಖಚಿತ

ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 13:36 IST
Last Updated 1 ಡಿಸೆಂಬರ್ 2019, 13:36 IST

ಕೋಲಾರ: ‘ರಾಜ್ಯದಲ್ಲಿ ನಡೆಯಲಿರುವ ವಿಧಾನಸಭೆ ಉಪ ಚುನಾವಣೆಯಲ್ಲಿ 17 ಸ್ಥಾನದಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿ ದಾಖಲೆ ನಿರ್ಮಿಸುತ್ತಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ವಿಶ್ವಾಸವ್ಯಕ್ತಪಡಿಸಿದರು.

ನಗರದಲ್ಲ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಹೊಸಕೋಟೆ, ಚಿಕ್ಕಬಳ್ಳಾಪುರ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಹೋಗುವೆ, ಅವರ ಗೆಲುವಿಗೆ ಹಗಲು ರಾತ್ರಿ ಶ್ರಮಿಸುತ್ತೇನೆ’ ಎಂದರು.

‘ರಾಜ್ಯ ಬಿಜೆಪಿ ಸರ್ಕಾರ ಉರುಳಲು ಬಿಡುವುದಿಲ್ಲ ಎಂದು ಜೆಡಿಎಸ್ ಮುಖಂಡರು ಹೇಳಿಕೆ ನೀಡಿದ್ದಾರೆ. ಅದರೆ ಯಾರನ್ನೂ ನಂಬುವಂತಹ ಪರಿಸ್ಥಿತಿಯಲ್ಲಿಲ್ಲ. ಚುನಾವಣೆಯಲ್ಲಿ ಅವರವರ ವರ್ಚಿಸ್ಸಿನ ಮೇಲೆ ಗೆಲುವು ಸಾಧಿಸಬೇಕಷ್ಟೇ’ ಎಂದು ಹೇಳಿದರು.

ADVERTISEMENT

‘ಈಗ ಯಾರು ಪಕ್ಷದ ಸಿದ್ದಾಂತಗಳನ್ನು ಪಾಲಿಸುವುದಿಲ್ಲ, ಅವೆಲ್ಲ ತಾತಾನ ಕಾಲಕ್ಕೆ ಹೋಯಿತು. ಅವರವರ ಅನುಕೂಲಕ್ಕೆ ತಕ್ಕಂತೆ ಮುಂದುವರೆಯುತ್ತಾರೆ. ಹೊಸಕೋಟೆಯಲ್ಲಿ ಶರತ್‌ಗೌಡ ಅವರ ಅಪ್ಪನ ಮಾತೇ ಕೇಳುತ್ತಿಲ್ಲ. ನಾನು ಎಂ.ಟಿ.ಬಿ.ನಾಗರಾಜ್‌ಗೆ ಬೆಂಬಲ ನೀಡಿ ಪರ ಪ್ರಚಾರಕ್ಕೆ ಹೋಗುತ್ತೇನೆ. ಹೊಸಕೋಟೆಯ ಚರಿತ್ರೆಯಲ್ಲಿ ದಾಖಲಾಗುವ ಚುನಾವಣೆ ಇದಾಗಲಿದೆ’ ಎಂದರು.

‘ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ನಾನು ನೀಡಿದ್ದ ಬೆಂಬಲ ವಾಪಸ್ ಪಡೆದಿದ್ದೆ. ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೆ ನಾನು ಸಹ ಅನರ್ಹ ಶಾಸಕರ ಪಟ್ಟಿಗೆ ಹೋಗಬೇಕಾಗಿತ್ತು. ದೇವರ ಕೃಪೆಯಿಂದ ಬಚಾವ್ ಆದೆ. ಇಲ್ಲದಿದ್ದರೆ ನಾನೂ ಸಹ ಉಪ ಚುನಾವಣೆ ಎದುರಿಸಕೇಕಿತ್ತು’ ಎಂದು ತಿಳಿಸಿದರು.

‘ದೇವರು ಈ ಜಿಲ್ಲೆಯ ಜನರ ಸೇವೆ ಮಾಡಲು ಅವಕಾಶ ನೀಡಿದ್ದಾರೆ. ಸ್ನೇಹಿತ ಶಂಕರ್ ಅನರ್ಹಗೊಂಡಿರುವುದು ನನಗೆ ಬೇಸರ ತಂದಿದೆ. ಬಿಜೆಪಿಯಿಂದ ಅವರಿಗೆ ನ್ಯಾಯ ಸಿಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.