
ಕೋಲಾರ: ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ವ್ಯಂಗ್ಯ ಮಾಡಿದವರೇ ಬೇರೆ ಬೇರೆ ಕಡೆ ಗ್ಯಾರಂಟಿಗಳನ್ನು ಜಾರಿ ಮಾಡಿದ್ದಾರೆ. ಬಿಹಾರ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳಲ್ಲಿ ನಮ್ಮ ಗ್ಯಾರಂಟಿ ಕಾಪಿ ಹೊಡೆದು ಅಲ್ಲಿನ ಜನರಿಗೆ ಕೊಡಲು ಪ್ರಯತ್ನ ಮಾಡುತ್ತಿದ್ದಾರೆ. ನಮಗೆ ಸಿಕ್ಕಿದಷ್ಟು ಯಶಸ್ಸು ಆ ರಾಜ್ಯಗಳಲ್ಲಿ ಪೂರ್ಣಪ್ರಮಾಣದಲ್ಲಿ ಸಿಕ್ಕಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ತಿಳಿಸಿದರು.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ನಡೆದ ಗ್ಯಾರಂಟಿ ಯೋಜನೆಗಳ ಕಾರ್ಯಾಗಾರ ಹಾಗೂ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಯಾವುದೇ ಧರ್ಮ, ಜಾತಿ ನೋಡಿ ಗ್ಯಾರಂಟಿ ಯೋಜನೆ ಜಾರಿಗೊಳಿಸಿಲ್ಲ. ಈ ಯೋಜನೆಗಳು ಎಲ್ಲಾ ಜನರಿಗೂ ತಲುಪುತ್ತಿದ್ದು, ನುಡಿದಂತೆ ನಡೆಯುತ್ತಿರುವ ಸರ್ಕಾರ ನಮ್ಮದು ಎಂದರು.
ಚುನಾವಣಾ ಸಂದರ್ಭದಲ್ಲಿ ರಾಜ್ಯದ ಜನರಿಗೆ ಭರವಸೆ ನೀಡಿದಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ರಾಜ್ಯದ ಎಲ್ಲಾ ಜನರಿಗೆ ಒಂದಲ್ಲ ಒಂದು ಸೌಲಭ್ಯ ತಲುಪುವಂತೆ ಮಾಡುವಲ್ಲಿ ಸರ್ಕಾರ ಶ್ರಮಿಸುತ್ತಿದೆ. ರಾಜ್ಯದಲ್ಲಿ ₹ 56 ಸಾವಿರ ಕೋಟಿಯನ್ನು ವಾರ್ಷಿಕವಾಗಿ ಗ್ಯಾರಂಟಿ ಯೋಜನೆಗೆ ಬಳಸಲಾಗುತ್ತಿದೆ ಎಂದು ಹೇಳಿದರು.
ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿ, ‘ಗೃಹಲಕ್ಷ್ಮಿ ಯೋಜನೆಯಲ್ಲಿ ಯಜಮಾನಿಯರ ಖಾತೆಗೆ ನೇರವಾಗಿ ಡಿಬಿಟಿ ಮೂಲಕ ಹಣ ತಲುಪುತ್ತಿದೆ. ಇಲ್ಲಿ ಮಧ್ಯವರ್ತಿ ಹಾವಳಿ ಇಲ್ಲ. ಯಾವುದೇ ಯೋಜನೆ ಜಾರಿಗೊಳಿಸಲು ಜನ ಬೆಂಬಲ ಇರಬೇಕು. ಬಡವರ, ಶೋಷಿತರ ಆರ್ಥಿಕ ಸಬಲೀಕರಣಕ್ಕೆ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ’ ಎಂದರು.
ಎರಡೂವರೆ ವರ್ಷದಲ್ಲಿ ಗ್ಯಾರಂಟಿ ಯೋಜನೆಗಾಗಿ ₹ 1.5 ಲಕ್ಷ ಕೋಟಿ ನೀಡಲಾಗಿದೆ. ಅನ್ನಭಾಗ್ಯ, ಶಕ್ತಿ, ಗೃಹಜ್ಯೋತಿ, ಗೃಹಲಕ್ಷಿ, ಯುವನಿಧಿ ಗ್ಯಾರಂಟಿ ಯೋಜನೆಗಳು ಸಾಧಾರಣ ಯೋಜನೆಗಳಲ್ಲ. ಬಿಟ್ಟಿ ಭಾಗ್ಯ, ಅಭಿವೃದ್ಧಿ ಕುಂಠಿತ ಎಂದು ಅಪಪ್ರಚಾರ ಮಾಡಿದರೆ ಫಲಾನುಭವಿಗಳೇ ಪ್ರಚಾರ ಮಾಡಿ ಸದುದ್ದೇಶ ಹೇಳಬೇಕು ಎಂದು ಸೂಚಿಸಿದರು.
ಗ್ಯಾರಂಟಿ ಯೋಜನೆಗಳ ಬಗ್ಗೆ ಉಪನ್ಯಾಸ ನೀಡಿದ ವಾಸು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಎಲ್ಲಾ ಜನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಈ ಯೋಜನೆಗಳು ರಾಜ್ಯವನ್ನು ಅಭಿವೃದ್ಧಿ ಪ್ರಥದತ್ತ ಕರೆದೊಯ್ಯಲು ಸಹಕಾರಿಯಾಗಿವೆ’ ಎಂದರು.
ಪ್ರಾಧಿಕಾರದ ಉಪಾಧ್ಯಕ ಸೂರಜ್ ಹೆಗಡೆ ಮಾತನಾಡಿ, ‘ಪಕ್ಷತೀತ, ಜಾತ್ಯತೀತವಾಗಿ ಸರ್ವರಿಗೂ ಈ ಗ್ಯಾರಂಟಿ ಯೋಜನೆಗಳನ್ನು ನೀಡಲಾಗುತ್ತಿದೆ. ಇದರಿಂದ ಮುಖ್ಯವಾಗಿ ಮಹಿಳೆಯರು ಸ್ವಾಬಿಮಾನದಿಂದ, ಘನತೆಯಿಂದ ತಮ್ಮ ಜೀವನವನ್ನು ಕಟ್ಟಿಕೊಳ್ಳುತ್ತಿದ್ದಾರೆ. ಮಧ್ಯವರ್ತಿಗಳ ಹಾವಳಿ ಇಲ್ಲದೆ ರಾಜ್ಯದ ಕಟ್ಟಕಡೆ ವ್ಯಕ್ತಿಗೂ ತಲುಪುತ್ತಿವೆ’ ಎಂದು ಹೇಳಿದರು.
ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ‘ಗ್ಯಾರಂಟಿ ಯೋಜನೆಗಳ ಬಗ್ಗೆ ತಳಮಟ್ಟದಲ್ಲಿ ಮತ್ತಷ್ಟು ಜಾಗೃತಿ ಮೂಡಿಸಬೇಕು. ಗ್ಯಾರಂಟಿ ಯೋಜನೆ ಪಡೆಯಲು ತಲಾದಾಯ ಮತ್ತಿತರ ಕಾರಣಗಳಿಂದ ಸಮಸ್ಯೆಯಾಗಿದ್ದ ಕುಟುಂಬಗಳಿಗೆ ಸರಿಪಡಿಸಲು ಕ್ರಮವಹಿಸಲಾಗಿದೆ. ಆ ನಿಟ್ಟಿನಲ್ಲಿ ₹ 1.20 ಲಕ್ಷ ಕುಟುಂಬಗಳಲ್ಲಿ 59 ಸಾವಿರ ಕುಟುಂಬಗಳ ಜಿಎಸ್‍ಟಿ ಮತ್ತಿತರ ಸಂಬಂಧ ಸರಿಪಡಿಸಲು ಶ್ರಮಿಸಲಾಗಿದೆ. ರಾಜ್ಯದಲ್ಲಿ 7 ರಿಂದ 8 ಸಾವಿರ ಕುಟುಂಬಗಳಿಗೆ ಗ್ಯಾರಂಟಿ ಯೋಜನೆ ತಲುಪುತ್ತಿದೆ’ ಎಂದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭ್ಯವೃದ್ಧಿ ಇಲಾಖೆ, ಆಹಾರ, ಇಂಧನ, ಸಾರಿಗೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಆಶ್ರಯದಲ್ಲಿ ಈ ಕಾರ್ಯಾಗಾರ ಆಯೋಜಿಸಲಾಗಿತ್ತು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಚಿಕ್ಕರೆಡ್ಡಪ್ಪ ಮತ್ತು ತಂಡದವರು ಗ್ಯಾರಂಟಿ ಯೋಜನೆ ಕುರಿತು ಬೀದಿನಾಟಕ ಪ್ರದರ್ಶಿಸಿದರು. ಗ್ಯಾರಂಟಿ ಯೋಜನೆಗಳ ಕಿರು ಹೊತ್ತಿಗೆ ಹಾಗೂ ಜಿಲ್ಲಾ ಪಂಚಾಯಿತಿ ದಿನಚರಿಯನ್ನು ಸಚಿವರು ಬಿಡುಗಡೆಗೊಳಿಸಿದರು. ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ ಸ್ವಾಗತಿಸಿದರು.
ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಹಾಗೂ ಯುವನಿಧಿ ಕಾರ್ಯಕ್ರಮಗಳ ಕುರಿತ ವಸ್ತುಪ್ರದರ್ಶನ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಳಿಗೆ ಗಮನ ಸೆಳೆದೆವು. ಎಲ್ಲಾ ತಾಲ್ಲೂಕುಗಳಿಂದ ಫಲಾನುಭವಿಗಳನ್ನು ಕರೆತರಲಾಗಿತ್ತು. ಕೆಲ ಫಲಾನುಭವಿಗಳು ತಮ್ಮ ಅನುಭವ ಹಂಚಿಕೊಂಡರು.
ಶಾಸಕರಾದ ಕೆ.ವೈ.ನಂಜೇಗೌಡ, ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್.ಅನಿಲ್ ಕುಮಾರ್, ಡಿ.ಟಿ.ಶ್ರೀನಿವಾಸ್, ರಾಜ್ಯ ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧ್ಯಕ್ಷರಾದ ಕೃಷ್ಣಪ್ಪ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವೈ.ಶಿವಕುಮಾರ್, ಉಪಾಧ್ಯಕ್ಷ ಅಶ್ವತ್ಥರೆಡ್ಡಿ, ಇತರ ಉಪಾಧ್ಯಕ್ಷರು, ಜಿಲ್ಲಾಧಿಕಾರಿ ಎಂ.ಆರ್.ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್, ಎಡಿಸಿ ಎಸ್.ಎಂ.ಮಂಗಳಾ, ಜಿ.ಪಂ ಉಪಕಾರ್ಯದರ್ಶಿ ಟಿ.ಕೆ.ರಮೇಶ್, ಉಪವಿಭಾಗಾಧಿಕಾರಿ ಜಂಬಗಿ ರೇಣುಕಪ್ರಸಾದ್ ದಿಲೀಪ್, ತಾಲ್ಲೂಕು ಗ್ಯಾರಂಟಿ ಅಧ್ಯಕ್ಷರು, ಸದಸ್ಯರು ಇದ್ದರು.
ಕೆಲಸ ಉಳಿಯುತ್ತವೆ ಟೀಕೆ ಸಾಯುತ್ತವೆ
ಸರ್ಕಾರದ ಅಭಿವೃದ್ಧಿ ಕೆಲಸಗಳು ಉಳಿಯುತ್ತವೆ ಟೀಕೆಗಳು ಸಾಯುತ್ತವೆ. ಆದ್ದರಿಂದ ಯಾವುದೇ ಟೀಕೆಗೆ ಎದೆ ಗುಂದದೆ ರಾಜ್ಯ ಸರ್ಕಾರದ ಗ್ಯಾರಂಟಿ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲಾಗುತ್ತಿದೆ ಎಂದು ಬೈರತಿ ಸುರೇಶ್ ಹೇಳಿದರು. ಚುನಾವಣೆಗೂ ಮುನ್ನ ಗ್ಯಾರಂಟಿ ಜಾರಿಯ ಭರವಸೆ ನೀಡಿದ್ದೆವು. ಆದರೆ ವಿರೋಧ ಪಕ್ಷದವರು ಈ ಯೋಜನೆ ಅನುಷ್ಠಾನ ಅಸಾಧ್ಯ ಎಂದು ಹೇಳಿದ್ದರು. ಸರ್ಕಾರ ದಿವಾಳಿ ಆಗುತ್ತದೆ ಎಂದಿದ್ದರು. ಆದರೆ ನಾವು ಅಧಿಕಾರಕ್ಕೆ ಬಂದ ಮೂರೇ ತಿಂಗಳಲ್ಲಿ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದೆವು ಎಂದರು. ಜಿಲ್ಲೆಯಲ್ಲಿ ಲಕ್ಷಾಂತರ ಮಹಿಳೆಯರು ಉಚಿತವಾಗಿ ಬಸ್ಸಿನಲ್ಲಿ ಸಂಚರಿಸುತ್ತಿದ್ದಾರೆ. ಉಚಿತ ವಿದ್ಯುತ್ ಸಿಗುತ್ತಿದೆ. ಮನೆ ಯಜಮಾನಿಗೆ ತಿಂಗಳಿಗೆ ₹ 2 ಸಾವಿರ ಸಿಗುತ್ತಿದೆ. ಪ್ರತಿ ಕುಟುಂಬಕ್ಕೆ ತಿಂಗಳಿಗೆ ₹ 7 ಸಾವಿರ ಸಿಗುತ್ತಿದೆ. ಹೆಣ್ಣುಮಕ್ಕಳೇ ನಿಜವಾದ ಫಲಾನುಭವಿಗಳು ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ
ಗ್ಯಾರಂಟಿ ಯೋಜನೆಗಳು ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿ ಪರಿಣಾಮ ಬೀರಿವೆ. ಅದರಲ್ಲಿಯೂ ಮಹಿಳೆಯರಿಗೆ ಹೆಚ್ಚಿನ ಅನುಕೂಲ ಆಗಿದೆ. ಹೆಣ್ಣು ಮಕ್ಕಳಿಗೆ ಹೆಚ್ಚಿನ ಶಕ್ತಿ ತುಂಬಿದೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಲ್ಲ ಎಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳು ಇಡೀ ದೇಶದಲ್ಲಿಯೇ ಮಾದರಿಯಾಗಿವೆ. ನಮ್ಮದು ನುಡಿದಂತೆ ನಡೆಯುತ್ತಿರುವ ಸರ್ಕಾರಬೈರತಿ ಸುರೇಶ್, ಜಿಲ್ಲಾ ಉಸ್ತುವಾರಿ ಸಚಿವ
ಫಲಾನುಭವಿಗಳು ಮೃತರಾದ ಬಳಿಕವೂ ಗ್ಯಾರಂಟಿ ಯೋಜನೆಗಳು ಹೋಗುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಇದನ್ನು ಪರಿಶೀಲನೆ ನಡೆಸಬೇಕುಎಚ್.ಎಂ.ರೇವಣ್ಣ, ಅಧ್ಯಕ್ಷ, ರಾಜ್ಯ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.