ADVERTISEMENT

ರಾಜ್ಯದಲ್ಲಿ ಪರಿಣತ ವೈದ್ಯರ ಅವಶ್ಯವಿದೆ: ಡಾ.ಆರ್.ವಿಶಾಲ್‌

ಆರ್‌.ಎಲ್‌.ಜಾಲಪ್ಪ ಜನ್ಮ ಶತಮಾನೋತ್ಸವ, ಗಣ್ಯರಿಂದ ಸ್ಮರಣೆ–ಗುಣಗಾನ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 4:51 IST
Last Updated 20 ಅಕ್ಟೋಬರ್ 2025, 4:51 IST
<div class="paragraphs"><p>ಕೋಲಾರದಲ್ಲಿ ಭಾನುವಾರ ನಡೆದ ಆರ್‌.ಎಲ್‌.ಜಾಲಪ್ಪ ಜನ್ಮ ಶತಮಾನೋತ್ಸವದಲ್ಲಿ ಡಾ.ಆರ್‌.ಎನ್‌.ಶ್ರೀನಾಥನ್‌ ಹಾಗೂ&nbsp;ಡಾ.ಆರ್.ವಿಶಾಲ್‌ ಅವರನ್ನು ಸನ್ಮಾನಿಸಲಾಯಿತು. ಡಾ.ಬಿ.ವೆಂಗಮ್ಮ, ಡಾ.ಡಿ.ವಿ.ಎಲ್.ಎನ್ ಪ್ರಸಾದ್, ಡಾ.ಸಿ.ಮುನಿನಾರಾಯಣ, ಡಾ.ಜೆ.ಕೃಷ್ಣ, ಡಾ.ಕೆ.ಪ್ರಭಾಕರ್‌, ಡಾ.ಜಿ.ಮಂಜುನಾಥ್‌, ಡಾ.ಕೆ.ದಿನೇಶ್‌, ಡಾ.ಎಂ.ಜಿ.ರಾಜ್‌ ಕುಮಾರ್‌ ಪಾಲ್ಗೊಂಡಿದ್ದರು</p></div>

ಕೋಲಾರದಲ್ಲಿ ಭಾನುವಾರ ನಡೆದ ಆರ್‌.ಎಲ್‌.ಜಾಲಪ್ಪ ಜನ್ಮ ಶತಮಾನೋತ್ಸವದಲ್ಲಿ ಡಾ.ಆರ್‌.ಎನ್‌.ಶ್ರೀನಾಥನ್‌ ಹಾಗೂ ಡಾ.ಆರ್.ವಿಶಾಲ್‌ ಅವರನ್ನು ಸನ್ಮಾನಿಸಲಾಯಿತು. ಡಾ.ಬಿ.ವೆಂಗಮ್ಮ, ಡಾ.ಡಿ.ವಿ.ಎಲ್.ಎನ್ ಪ್ರಸಾದ್, ಡಾ.ಸಿ.ಮುನಿನಾರಾಯಣ, ಡಾ.ಜೆ.ಕೃಷ್ಣ, ಡಾ.ಕೆ.ಪ್ರಭಾಕರ್‌, ಡಾ.ಜಿ.ಮಂಜುನಾಥ್‌, ಡಾ.ಕೆ.ದಿನೇಶ್‌, ಡಾ.ಎಂ.ಜಿ.ರಾಜ್‌ ಕುಮಾರ್‌ ಪಾಲ್ಗೊಂಡಿದ್ದರು

   

ಕೋಲಾರ: ರಾಜ್ಯದಲ್ಲಿ ವೈದ್ಯರಿಗೇನೂ ಕೊರತೆ ಇಲ್ಲ. ಆದರೆ, ಪರಿಣತ ಹಾಗೂ ನುರಿತ ವೈದ್ಯರ (ಸ್ಪೆಷಲಿಸ್ಟ್‌ ಹಾಗೂ ಸೂಪರ್‌ ಸ್ಪೆಷಲಿಸ್ಟ್‌) ಅವಶ್ಯವಿದೆ ಎಂದು ರಾಜ್ಯ ಸರ್ಕಾರದ ಹಣಕಾಸು ಇಲಾಖೆಯ ಕಾರ್ಯದರ್ಶಿ ಡಾ.ಆರ್.ವಿಶಾಲ್‌ ಹೇಳಿದರು.

ನಗರ ಹೊರವಲಯದ ಟಮಕದಲ್ಲಿರುವ ಸಂಸ್ಥೆಯ ರಜತ ಮಹೋತ್ಸವ ಸಭಾಂಗಣದಲ್ಲಿ ಶ್ರೀ ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ, ಆರ್.ಎಲ್.ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಭಾನುವಾರ ನಡೆದ ಆರ್‌.ಎಲ್‌.ಜಾಲಪ್ಪ ಜನ್ಮ ಶತಮಾನೋತ್ಸವ ಮತ್ತು 12ನೇ ‘ಆಸ್ಪತ್ರೆಯ ದಿನ'ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

ರಾಜ್ಯದಲ್ಲಿ ಎರಡೂವರೆ ಸಾವಿರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಅಗತ್ಯಕ್ಕಿಂತ 700 ಆಸ್ಪತ್ರೆಗಳು ಹೆಚ್ಚಿವೆ. 800 ಮಂದಿಗೆ ಒಬ್ಬ ವೈದ್ಯ ಇರಬೇಕು. ಆದರೆ, ನಮ್ಮಲ್ಲಿ 400 ಮಂದಿಗೆ ಒಬ್ಬ ವೈದ್ಯರಿದ್ದಾರೆ. ಸದ್ಯದಲ್ಲೇ 300 ಮಂದಿಗೆ ಒಬ್ಬ ವೈದ್ಯರು ಇರುವಂಥ ಕಾಲಘಟ್ಟಕ್ಕೆ ತಲುಪುತ್ತಿದ್ದೇವೆ. ಹೀಗಾಗಿ, ನಮ್ಮಲ್ಲಿ ಹೆಚ್ಚು ವೈದ್ಯರ ಅಗತ್ಯವಿಲ್ಲ. ಹೆಚ್ಚಿನ ಎಂಬಿಬಿಎಸ್‌ ಸೀಟುಗಳೂ ಬೇಕಿಲ್ಲ. ಬದಲಾಗಿ ವೈದ್ಯಕೀಯ ವಿಭಾಗದಲ್ಲೇ ಪರಿಣತ ಕೋರ್ಸ್‌ಗಳಿಗೆ ಒತ್ತು ನೀಡಬೇಕಿದೆ ಎಂದು ಅಭಿಪ್ರಾಯಪಟ್ಟರು.

ಮಕ್ಕಳ ಜನನ ಪ್ರಮಾಣವೂ ಕಡಿಮೆ ಆಗುತ್ತಿದೆ. ಪ್ರತಿ ವರ್ಷ ಒಂದು ಲಕ್ಷ ಕಡಿಮೆ ಮಕ್ಕಳು ಜನಿಸುತ್ತಿವೆ. ಇದರಿಂದ ರಾಜ್ಯದ ಜನಸಂಖ್ಯೆಯೂ ಕಡಿಮೆ ಆಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಿದೆ ಎಂದು ಹೇಳಿದರು.

ತಾಲ್ಲೂಕು, ಜಿಲ್ಲಾ ಮಟ್ಟದ ಆಸ್ಪತ್ರೆಗಳನ್ನು ಬಲಪಡಿಸಬೇಕಿದೆ. ಉಚಿತವಾಗಿ ಪರೀಕ್ಷೆ ನಡೆಯಬೇಕಿದೆ. ರೋಗ ಬರುವುದನ್ನು ತಡೆಯುವ ತಪಾಸಣೆ ಹಾಗೂ ಪ್ರಕ್ರಿಯೆಗಳು ಹೆಚ್ಚಬೇಕಿದೆ. ಕೆಲವೇ ವರ್ಷಗಳಲ್ಲಿ ಹೃದಯ ಸಂಬಂಧಿ ಸಮಸ್ಯೆಗೆ ರಾಜ್ಯದಲ್ಲಿ ಅತ್ಯುತ್ತಮ ಸೌಲಭ್ಯ ಹಾಗೂ ವ್ಯವಸ್ಥೆ ಜಾರಿಗೆ ಬರಲಿದೆ ಎಂದರು.

ಜಾಲಪ್ಪ ಸಾರ್ವಜನಿಕ ಜೀವನದಲ್ಲಿ ಅಪಾರ‌ ಸೇವೆ‌ ಮಾಡಿದ್ದಾರೆ. ಅವರ ಸೇವೆಯನ್ನು ಯುವ ಪೀಳಿಗೆ ಮುಂದುವರಿಸಬೇಕು. ಪ್ರತಿ ಪೀಳಿಗೆಯಲ್ಲಿ ಒಂದು ಬದಲಾವಣೆ ಇರುತ್ತದೆ. ಹಿಂದಿನ ಪೀಳಿಗೆಯು ಕಾಯಕವೇ ಕೈಲಾಸ ಎಂದು ಭಾವಿಸಿದ್ದರೆ, ಈಗಿನ ಪೀಳಿಗೆಯು ಬರೀ ಸಂಪತ್ತು ಗಳಿಸುವತ್ತ ವಾಲಿದೆ. ಖುಷಿ ‌ಪಡುವಂಥ ಕೆಲಸ ‌ಮಾಡಿ ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ ಪ್ರತಿ ವೈದ್ಯಕೀಯ ಕಾಲೇಜಿನಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಬರಲಿವೆ. ತಲಾ ₹ 350 ಕೋಟಿ ವೆಚ್ಚದಲ್ಲಿ 18 ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ನಿರ್ವಹಣೆಗೆ ₹ 60 ಕೋಟಿ ಅನುದಾನ ಇಡಲಾಗಿದೆ. ಐದು ವರ್ಷಗಳಲ್ಲಿ ಈ ಯೋಜನೆ ಕಾರ್ಯಗತವಾಗಲಿದೆ ಎಂದರು.

ಶ್ರೀ ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಮುಖ್ಯ ಆಡಳಿತಾಧಿಕಾರಿ ಡಾ.ಡಿ.ವಿ.ಎಲ್‌.ಎನ್.ಪ್ರಸಾದ್‌ ಮಾತನಾಡಿ, ‘100ನೇ ಜನ್ಮ ದಿನ ಆಚರಣೆ ಬರೀ ಸಂಭ್ರಮ ‌ಅಲ್ಲ, ಗ್ರಾಮೀಣ ಭಾಗದ ಆರೋಗ್ಯ ಕುರಿತು ದೃಷ್ಟಿಕೋನ ಹೊಂದಿದ ನಾಯಕನ ಸ್ಮರಣೆ‌ ಕೂಡ. ಜಾಲಪ್ಪ ಅವರ ಕನಸನ್ನು ನನಸಾಗಿಸುವುದು ನಮ್ಮೆಲ್ಲರ ಕರ್ತವ್ಯ. ನೈತಿಕತೆಯಿಂದ‌ ಕಾರ್ಯನಿರ್ವಹಿಸಬೇಕು ಎಂದರು.

ಕಾಲೇಜಿನ ದೇಹರಚನೆ, ನರ ವಿಜ್ಞಾನ ವಿಭಾಗದ ನಿವೃತ್ತ ಡೀನ್‌ ಡಾ.ಆರ್‌.ಎನ್‌.ಶ್ರೀನಾಥನ್‌ ಮಾತನಾಡಿದರು. ಜಾಲಪ್ಪ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಜೆ.ಕೃಷ್ಣಪ್ಪ ಆಸ್ಪತ್ರೆ ಸೌಲಭ್ಯಗಳ ಕುರಿತು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಕುಲಪತಿ ಡಾ.ಬಿ.ವೆಂಗಮ್ಮ ಮಾತನಾಡಿದರು. ಹಲವರು ಈ ಸಂದರ್ಭದಲ್ಲಿ ಜಾಲಪ್ಪ ಅವರ ಸೇವೆಯನ್ನು ಸ್ಮರಿಸಿದರು.

ಶ್ರೀ ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಕುಲಸಚಿವ ಡಾ.ಸಿ.ಮುನಿನಾರಾಯಣ, ಪ್ರಾಂಶುಪಾಲ ಡಾ.ಕೆ.ಪ್ರಭಾಕರ್, ಡಾ.ಜಿ.ಮಂಜುನಾಥ್,‌ ಡಾ.ಅರವಿಂದ ನಟರಾಜನ್, ಡಾ.ಕೆ.ದಿನೇಶ್, ಡಾ.ಎಂ.ಜಿ.ರಾಜ್‌ ಕುಮಾರ್, ಡಾ.ಎಂ.ಎಸ್‌.ವಿನುತಾ ಶಂಕರ್‌, ಡಾ.ವೆಂಕಟರಮಣ,‌ ಡಾ.ಜೀನತ್, ಅಧ್ಯಾಪಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.