ADVERTISEMENT

ನ್ಯಾಯಾಲಯದಲ್ಲಿ ಭ್ರಷ್ಟತೆ-ವಿಳಂಬ ಇಲ್ಲವೇ?: ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ

‘ಪರಿಷತ್‌ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ಗೆದ್ದವರು ನಮ್ಮ ಸದಸ್ಯರಿಗೇ ಹಣ ಕೊಟ್ಟರು’

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2022, 13:41 IST
Last Updated 12 ಅಕ್ಟೋಬರ್ 2022, 13:41 IST
ವಿಧಾನಸಭೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ
ವಿಧಾನಸಭೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ   

ಕೋಲಾರ: ‘ಆದರ್ಶ, ಮೌಲ್ಯ ಕುಸಿತಗೊಂಡಿರುವುದು ಶಾಸಕಾಂಗದಲ್ಲಿ ಮಾತ್ರವೇ? ನ್ಯಾಯಾಂಗ ವ್ಯವಸ್ಥೆ ಏನು ಆದರ್ಶದ ತುತ್ತತುದಿಯಲ್ಲಿದೆಯೇ? ನ್ಯಾಯಾಲಯಗಳಲ್ಲಿ ನಿರ್ಣಯ ಸಿಗುತ್ತೇ ಹೊರತೂ ನ್ಯಾಯ ಸಿಗುತ್ತಿಲ್ಲ’ ಎಂದು ವಿಧಾನಸಭೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ ಬುಧವಾರ ಇಲ್ಲಿ ಆಯೋಜಿಸಿದ್ದ ‘ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಾರ್ಯಾಂಗ ವ್ಯವಸ್ಥೆಗೆ ಜಡತ್ವ ಹಿಡಿದು ಹೋಗಿದೆ. ಅವರು ಒಂದು ಕಡತಕ್ಕೆ ಕೊಕ್ಕೆ ಹಾಕಿ ಕಳುಹಿಸಿದರೆ ಯಾವ ರೀತಿ ತಿರುಗಿ ಬರುತ್ತದೆ ಎಂಬುದು ನಮಗೇಗೂ ಗೊತ್ತಿಲ್ಲವೇ? ಜನಜೀವನದ ಕಷ್ಟ ಸುಖಕ್ಕೆ ಸ್ಪಂದಿಸುವ ಮಾನವೀಯತೆ, ಭಾವನೆ ಇಲ್ಲದೆ ಕೇವಲ ಸರ್ಕಾರದ ಸುತ್ತೋಲೆ ಪಾಲಿಸುವವರನ್ನು ನಾವು ನೋಡಿಲ್ಲವೇ’ ಎಂದು ಕೇಳಿದರು.

‘ಇನ್ನು ಪತ್ರಿಕಾ ರಂಗ ಹೇಗಿದೆ? ಯಾವ ಪತ್ರಿಕೆಯಲ್ಲಿ ಯಾವ ಸುದ್ದಿ ಬಂದಿದೆ ಎಂಬುದನ್ನು ನನಗೆ ತೋರಿಸಿ. ಅದು ಏಕೆ ಬಂದಿದೆ ಎಂಬುದನ್ನು ನಾನು ಹೇಳುತ್ತೇನೆ. ಯಾವ ಸುದ್ದಿ ಬಂದಿಲ್ಲವೆಂದು ಹೇಳಿ, ಏಕೆ ಪ್ರಕಟಿಸಿಲ್ಲ ಎಂಬುದನ್ನೂ ಹೇಳುತ್ತೇನೆ’ ಎಂದರು.

ADVERTISEMENT

‘ರಾಜಕೀಯ ವ್ಯಕ್ತಿಗಳು ಸರಿಯಾದರೆ ಎಲ್ಲವೂ ಸರಿ ಹೋಗಲಿದೆ ಎಂಬುದಾಗಿ ನೀವು ನಮ್ಮತ್ತ ಬೊಟ್ಟು ಮಾಡಿ ತೋರಿಸುತ್ತೀರಿ. ಜವಾಬ್ದಾರಿ, ಮಹತ್ವ ನಮ್ಮ ಮೇಲೆ ಹೆಚ್ಚು ಇರುವುದು ನಿಜ. ಅದರ ಅರಿವೂ ನಮಗಿದ್ದು, ಸರಿ ಮಾಡಿಕೊಳ್ಳಲು ಪ್ರಯತ್ನ ನಡೆಯುತ್ತಿದೆ. ನಾವು ಮಾತ್ರ ಸರಿ ಹೋದರೆ ವ್ಯವಸ್ಥೆ ಸಂಪೂರ್ಣ ಸರಿ ಹೋಗುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ದೇಶದ ಅಖಂಡತೆ, ಏಕತೆ, ಸಮಗ್ರತೆಗೆ ಧಕ್ಕೆಯಾದರೆ ತಮಗೇನೂ ಆಗಿಲ್ಲ ಎನ್ನುವವರು ಇದ್ದಾರೆ. ಭಾರತದ ವಿರೋಧಿ ಶಕ್ತಿಗಳು ಬೆಳೆಯುತ್ತಿದ್ದರೆ ಅದರ‌ ಜೊತೆ ಕೈಜೋಡಿಸುವ ಮನಸ್ಥಿತಿಗಳು ಇವೆ. ಅದು ನಕ್ಸಲರು ಆಗಿರಬಹುದು, ಪಿಎಫ್‌ಐನಂಥ ಸಂಘಟನೆ ಇರಬಹುದು’ ಎಂದು ಆರೋಪಿಸಿದರು.

‘ಡಿಸೆಂಬರ್‌ನಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಚುನಾವಣೆ ನಡೆಯಿತು. ನಂತರ ವಿಧಾನ ಪರಿಷತ್‌ಗೆ ವಿವಿಧ ಚುನಾವಣೆ ನಡೆದವು. ನಮ್ಮ ಪಕ್ಷದಿಂದ ಗೆದ್ದವರು ನಮ್ಮ ಸದಸ್ಯರಿಗೇ ಹಣ ಕೊಟ್ಟಿದ್ದಾರೆ. ಯಾರು ಯಾರಿಗೆ ಎಷ್ಟು ಕೊಟ್ಟರು ಎಂಬುದು ಗೊತ್ತಿಲ್ಲವೇ? ಮೂರೂ ಪಕ್ಷಗಳದ್ದು ಇದೇ ಕಥೆ. ಸ್ವಲ್ಪ ಹೆಚ್ಚು ಕಡಿಮೆ ಇರಬಹುದು ಅಷ್ಟೆ. ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಮತ ಚಲಾಯಿಸಲು ಪದವೀಧರರು ರೊಕ್ಕ ಪಡೆದಿಲ್ಲವೇ’ ಎಂದು ಪ್ರಶ್ನಿಸಿದರು.

‘ಸಹಕಾರ ಸಂಘದಿಂದ ಹಿಡಿದು ಸಂಸತ್ತಿನವರೆಗೆ ಎಲ್ಲಾ ಚುನಾವಣೆಗಳಲ್ಲಿ ಹಣ ಬಲ, ಜಾತಿ ಬಲ, ಮದ್ಯ, ತೋಳ್ಬಲವೇ ಪ್ರಧಾನ್ಯ ಪಡೆದು, ನ್ಯಾಯಸಮ್ಮತ ಚುನಾವಣಾ ವ್ಯವಸ್ಥೆ ದೂರವಾಗುವ ಆತಂಕದ ಸಂದರ್ಭದಲ್ಲಿ, ಯುವಜನತೆಯು ‘ನನ್ನ ಮತ ಮಾರಾಟಕ್ಕಿಲ್ಲ’ ಎಂಬ ದೊಡ್ಡ ಆಂದೋಲನ ರೂಪಿಸಬೇಕಿದೆ’ ಎಂದು ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.