ADVERTISEMENT

ಕೆಜಿಎಫ್‌: ಎಸ್‌ಎಸ್‌ಎಲ್‌ಸಿಯಲ್ಲಿ ಅಷ್ಟೂ ಮಕ್ಕಳು ಅನುತ್ತೀರ್ಣ!

ಅಸ್ವಿತ್ವ ಉಳಿಸಿಕೊಳ್ಳಲು ಬಿಜಿಎಂಎಲ್‌ ಶಾಲೆ ಹೆಣಗಾಟ

ಪ್ರಜಾವಾಣಿ ವಿಶೇಷ
Published 8 ಮೇ 2025, 5:14 IST
Last Updated 8 ಮೇ 2025, 5:14 IST
ಕೆಜಿಎಫ್‌ ಊರಿಗಾಂನಲ್ಲಿರುವ ಬಿಜಿಎಂಎಲ್‌ ಪ್ರೌಢಶಾಲೆ
ಕೆಜಿಎಫ್‌ ಊರಿಗಾಂನಲ್ಲಿರುವ ಬಿಜಿಎಂಎಲ್‌ ಪ್ರೌಢಶಾಲೆ   

ಕೆಜಿಎಫ್‌: ಒಂದು ಕಾಲದಲ್ಲಿ ಭಾರತೀಯ ವಿದ್ಯಾರ್ಥಿಗಳು ಶಾಲೆಯ ಆವರಣದೊಳಗೆ ಬರಲು ಕೂಡ ಅವಕಾಶ ನೀಡದ ಪಾರ್ಕಿನ್‌ಸನ್‌ ಮೆಮೊರಿಯಲ್‌ ಮತ್ತು ಲಿಂಡ್ಸೆ ಮೆಮೊರಿಯಲ್‌ ಪ್ರೌಢಶಾಲೆ (ಬಿಜಿಎಂಎಲ್‌) ಈಗ ತನ್ನ ಅಸ್ವಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುವಂತಹ ದಯನೀಯ ಸ್ಥಿತಿಗೆ ಬಂದು ತಲುಪಿದೆ.

ಈಚೆಗೆ ಬಂದ ಎಸ್‌ಎಸ್‌ಎಲ್‌ಸಿ ಫಲಿತಾಂಶದಿಂದ ಶಾಲೆಯನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ 38 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ ಎಲ್ಲರೂ ಅನುತ್ತೀರ್ಣರಾಗಿದ್ದಾರೆ. ಎಲ್ಲಾ ಮಕ್ಕಳೂ ಹಿಂದಿಯಲ್ಲಿ ಶೂನ್ಯ ಅಂಕಗಳನ್ನು ಗಳಿಸಿದ್ದಾರೆ. ಮುಂಬರುವ ಶೈಕ್ಷಣಿಕ ಸಾಲಿನಲ್ಲಿ 28 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿದ್ದು, ಅವರ ಭವಿಷ್ಯ ಹೇಗೆ ಎಂಬ ಚಿಂತೆ ಶಿಕ್ಷಕರನ್ನು ಮತ್ತು ಪೋಷಕರನ್ನು ಕಾಡುತ್ತಿದೆ.

ಬಿಜಿಎಂಎಲ್‌ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೆಲ್ಲರೂ ಪರಿಶಿಷ್ಟ ಜಾತಿಗೆ ಸೇರಿದವರು. ಪ್ರಾಥಮಿಕ ಶಾಲೆಯಲ್ಲಿ 80 ಮತ್ತು ಪ್ರೌಢಶಾಲೆಯಲ್ಲಿ 80 ವಿದ್ಯಾರ್ಥಿಗಳು ಇದ್ದಾರೆ. ಪ್ರಾಥಮಿಕ ಶಾಲೆಯಲ್ಲಿ 2020ರಿಂದ ಕೇವಲ ಒಬ್ಬ ಶಿಕ್ಷಕನಿದ್ದರೆ, ಹಳೇ ವಿದ್ಯಾರ್ಥಿ ಸಂಘ ಕೆಲ ಕಾಲ ಅತಿಥಿ ಶಿಕ್ಷಕರನ್ನು ನೀಡಿತ್ತು. ನಂತರ ವಿವಾದ ಉಂಟಾಗಿ ಅದು ತನ್ನ ಸೇವೆಯನ್ನು ಸ್ಥಗಿತಗೊಳಿಸಿತು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೇರೆ ಶಾಲೆಯಿಂದ ಶಿಕ್ಷಕರನ್ನು ನಿಯೋಜಿಸಿದರೂ, ಅವರು ಪ್ರಭಾವ ಬೀರಿ ತಮ್ಮ ನಿಯೋಜನೆಯನ್ನು ರದ್ದುಗೊಳಿಸಿಕೊಂಡಿದ್ದರು. ಕೊನೆಗೂ ಕಳೆದ ಸಾಲಿನಲ್ಲಿ ಮೂವರು ಶಿಕ್ಷಕರು ನಿಯೋಜನೆಯಲ್ಲಿ ಪ್ರೌಢಶಾಲೆಗೆ ಬಂದಿದ್ದರು. ಆದರೆ ವಿಜ್ಞಾನ ಮತ್ತು ಹಿಂದಿಗೆ ಶಿಕ್ಷಕರೇ ಇರಲಿಲ್ಲ. ಹಿಂದಿ ಕಲಿಸುವ ಶಿಕ್ಷಕರಿಲ್ಲದ ಕಾರಣ ಎಲ್ಲ ವಿದ್ಯಾರ್ಥಿಗಳೂ ಹಿಂದಿಯಲ್ಲಿ ಅನುತ್ತೀರ್ಣರಾಗಿದ್ದಾರೆ. ಹಿಂದಿ ಶಿಕ್ಷಕರಿದ್ದಿದ್ದರೆ ಫಲಿತಾಂಶ ಸುಧಾರಿಸುತ್ತಿತ್ತು ಎಂದು ಮುಖ್ಯ ಶಿಕ್ಷಕ ಮಾಲತೇಶ್‌ ಹೇಳುತ್ತಾರೆ.

ADVERTISEMENT

ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಶಿಕ್ಷಕರೇ ಇಲ್ಲದ ಕಾರಣ ಆ ಮಕ್ಕಳು ಹೆಚ್ಚಿನ ಸಮಯ ಆಟಗಳಲ್ಲಿಯೇ ಕಳೆಯುತ್ತಾರೆ. ಅದೇ ವಿದ್ಯಾರ್ಥಿಗಳು  ಪ್ರೌಢಶಾಲೆಗೆ ಬಂದಾಗ ಅದೇ ಅಭ್ಯಾಸ ಮುಂದುವರಿಸುವುದು ಕಂಡುಬರುತ್ತದೆ. ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಿಲ್ಲದ ಕಾರಣ ಏನೂ ಕಲಿಯದೇ ಬರುವ ಮಕ್ಕಳಿಗೆ ಪ್ರೌಢಶಾಲಯಲ್ಲಿ ಕಲಿಸುವುದು ಕಷ್ಟ. ಆದರೆ, ಇದೇ ಮಕ್ಕಳು ಕ್ರೀಡೆಯಲ್ಲಿ ಚೆನ್ನಾಗಿದ್ದಾರೆ. ಅದರಲ್ಲಿಯೂ ಫುಟ್‌ಬಾಲ್‌ನಲ್ಲಿ ವಿದ್ಯಾರ್ಥಿಗಳು ನಿಪುಣರಾಗಿದ್ದಾರೆ. ಶಾಲೆಯ ಕಾರ್ತಿಕ್‌ ಮತ್ತು ದಿನೇಶ್‌ ರಾಷ್ಟ್ರ ಮಟ್ಟದ ಫುಟ್‌ಬಾಲ್‌ ಪಂದ್ಯಾವಳಿಯಲ್ಲಿ ಪ್ರತಿನಿಧಿಸಿದ್ದರು. ಬಾಲಕಿಯರು ವಿಭಾಗೀಯ ಮಟ್ಟದಲ್ಲಿ ಆಡಿದ್ದರು. ಆದರೆ ವಿದ್ಯಾಭ್ಯಾಸದಲ್ಲಿ ಎಲ್ಲರೂ ವಿಫಲರಾಗಿರುವುದು ಸೌಲಭ್ಯ ಹಾಗೂ ಶಿಕ್ಷಕರ ಕೊರತೆ ಮತ್ತು ಪೋಷಕರ ಆಸಡ್ಡೆ ಕಾರಣ ಎಂದು ಇಲ್ಲಿನ ಜನರು ಹೇಳುತ್ತಾರೆ.

ಸರ್ಕಾರ ಬಿಜಿಎಂಎಲ್‌ ಪ್ರೌಢಶಾಲೆಯನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಪ್ರಕ್ರಿಯೆಯನ್ನು ಅರಂಭಿಸಿದೆ. ಅನುದಾನಿತ ಶಾಲೆ ಸಂಪೂರ್ಣವಾಗಿ ಸರ್ಕಾರಿ ಶಾಲೆಯಾಗಿ ಪರಿವರ್ತನೆಯಾದರೆ ಪ್ರಗತಿ ಸಾಧ್ಯ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಜೂನ್‌ನಲ್ಲಿ ಪ್ರಾರಂಭವಾಗುವ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಪೂರ್ಣ ಪ್ರಮಾಣದಲ್ಲಿ ಶಿಕ್ಷಣ ಇಲಾಖೆ ಶಿಕ್ಷಕರನ್ನು ಒದಗಿಸದೆ ಇದ್ದಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ವಂಚನೆ ಮಾಡಿದಂತಾಗುತ್ತದೆ. ಗಣಿ ಮುಚ್ಚಿದ್ದರಿಂದ ಬಡ ಕಾರ್ಮಿಕ ಕುಟುಂಬಗಳು ಬಿಜಿಎಂಎಲ್‌ ಶಾಲೆಯನ್ನು ಆಶ್ರಯಿಸಿವೆ. ಶಿಕ್ಷಣ ಇಲಾಖೆ, ಜನಪ್ರತಿನಿಧಿಗಳು ಗಮನ ಹರಿಸಬೇಕು.
–ಅನ್ವರಸನ್‌, ದಲಿತ ಮುಖಂಡ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.