ADVERTISEMENT

ಕೋಲಾರ | ಕೆ.ಸಿ.ವ್ಯಾಲಿ 2ನೇ ಹಂತದ ಯೋಜನೆ: ತಾಲ್ಲೂಕಿನ 30 ಕೆರೆಗಳಿಗೆ ನೀರು

ಕೆ.ಓಂಕಾರ ಮೂರ್ತಿ
Published 4 ಸೆಪ್ಟೆಂಬರ್ 2025, 6:37 IST
Last Updated 4 ಸೆಪ್ಟೆಂಬರ್ 2025, 6:37 IST
<div class="paragraphs"><p>ಕೆ.ಸಿ.ವ್ಯಾಲಿ ನೀರು</p></div>

ಕೆ.ಸಿ.ವ್ಯಾಲಿ ನೀರು

   

ಕೋಲಾರ: ಕೆ.ಸಿ.ವ್ಯಾಲಿ ಎರಡನೇ ಹಂತದಡಿ ಬೆಂಗಳೂರಿನ ಸಂಸ್ಕರಿಸಿದ ತ್ಯಾಜ್ಯ ನೀರನ್ನು ತಾಲ್ಲೂಕಿನ 30 ಕೆರೆಗಳಿಗೆ ತುಂಬಿಸುವ ಯೋಜನೆ ಹಾಗೂ ಪಂಪ್‌ಹೌಸ್‌ಗೆ ಗುರುವಾರ ಬೆಳಿಗ್ಗೆ 10.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.

ತಾಲ್ಲೂಕಿನ ಲಕ್ಷ್ಮಿಸಾಗರದಲ್ಲಿ ಪಂಪ್‌ಹೌಸ್‌ ಇದ್ದು, ಮುಖ್ಯಮಂತ್ರಿ ಅಧಿಕೃತ ನಿವಾಸ ಕಾವೇರಿಯಿಂದ ಅವರು ವರ್ಚುವಲ್‌ ವೇದಿಕೆಯಲ್ಲಿ ಉದ್ಘಾಟನೆ ಮಾಡಲಿದ್ದಾರೆ.

ADVERTISEMENT

ಯೋಜನೆಯ ಐದನೇ ಪಂಪಿಂಗ್‌ ಕೇಂದ್ರವಾದ ಲಕ್ಷ್ಮಿಸಾಗರದ ಪಂಪ್‌ಹೌಸ್‌ನಿಂದ 5.28 ದಶ ಲಕ್ಷ ಲೀಟರ್‌ ನೀರನ್ನು ಪಂಪ್‌ ಮಾಡಿ 11 ಕೆರೆ ತುಂಬಿಸುವುದು, 1 ದಶ ಲಕ್ಷ ಲೀಟರ್‌ ನೀರನ್ನು ಏರು ಕೊಳವೆ ಮಾರ್ಗದ ಮೂಲಕ ಹರಿಸಿ 4 ಕೆರೆ ತುಂಬಿಸುವುದು, 4.95 ದಶ ಲಕ್ಷ ಲೀಟರ್‌ ನೀರನ್ನು ಗುರುತ್ವಾಕರ್ಷಣೆಯ ಮೂಲಕ ಹರಿಸಿ 15 ಕೆರೆ ತುಂಬಿಸಲಾಗುತ್ತದೆ. ಒಟ್ಟು 30 ಕೆರೆಗಳಿಗೆ 11.23 ದಶ ಲಕ್ಷ ಲೀಟರ್‌ ನೀರು ಹರಿಸಲಾಗುತ್ತದೆ.

ಜಿಲ್ಲಾಡಳಿತ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಆಶ್ರಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಣ್ಣ ನೀರಾವರಿ ಸಚಿವ ಎನ್‌.ಎಸ್‌.ಬೋಸರಾಜ್‌, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌, ಶಾಸಕ ಕೊತ್ತೂರು ಮಂಜುನಾಥ್‌, ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌, ಸಂಸದ ಎಂ.ಮಲ್ಲೇಶ್‌ ಬಾಬು ಹಾಗೂ ಜಿಲ್ಲಾಧಿಕಾರಿ ಎಂ.ಆರ್‌.ರವಿ ಪಾಲ್ಗೊಳ್ಳಲಿದ್ದಾರೆ.

ತಾಲ್ಲೂಕಿನ ನರಸಾಪುರ ಹೋಬಳಿಯ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಷ್ಮಿಸಾಗರ ಗ್ರಾಮದ ಮೊದಲನೇ ಪಂಪ್ ಹೌಸ್ ಹತ್ತಿರ ಎಲ್ಇಡಿ ಸ್ಕ್ರೀನ್‌ನಲ್ಲಿ ನೇರ ಪ್ರಸಾರಕ್ಕೆ ಏರ್ಪಡು ಮಾಡಲಾಗಿದೆ. ಕೋಲಾರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಜನರು ಬರುವಂತೆ ಶಾಸಕ ಕೊತ್ತೂರು ಮಂಜುನಾಥ್‌ ಕೋರಿದ್ದಾರೆ.

‘ಎರಡನೇ ಹಂತದ ಯೋಜನೆಯಡಿ 9 ಪಂಪಿಂಗ್‌ ಸ್ಟೇಷನ್‌ಗಳ ಪೈಕಿ ಒಂದನ್ನು ವೆಟ್‌ ರನ್‌ ಮತ್ತು ಎರಡು ಪಂಪ್‌ಹೌಸ್‌ಗಳನ್ನು ಡ್ರೈ ರನ್‌ ಮಾಡಿ ಪ್ರಾಯೋಗಿಕವಾಗಿ ಚಾಲನೆ ಮಾಡಲಾಗಿರುತ್ತದೆ. ಇನ್ನುಳಿದ ಪಂಪ್‌ಹೌಸ್‌ಗಳನ್ನು ಡಿಸೆಂಬರ್‌ನೊಳಗೆ ಪ್ರಾಯೋಗಿಕ ಚಾಲನೆ ಮಾಡಲು ಉದ್ದೇಶಿಸಲಾಗಿದೆ’ ಎಂದು ಸಣ್ಣ ನೀರಾವರಿ ಇಲಾಖೆ ಹೆಚ್ಚುವರಿ ಪ್ರಭಾರ ಕಾರ್ಯಪಾಲಕ ಎಂಜಿನಿಯರ್‌ ವಿಷ್ಣು ಕಾಮತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಂಗಳೂರು ನಗರದ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ಹರಿಸಲಾಗುತ್ತಿದೆ. ಮೂರನೇ ಹಂತದಲ್ಲಿ ಶುದ್ಧೀಕರಿಸಿ ಕೆರೆಗಳಿಗೆ ನೀರು ಹರಿಸಬೇಕೆಂದು ಹೋರಾಟಗಾರರು ಆಗ್ರಹಿಸುತ್ತಿದ್ದಾರೆ. 

ದಿನಂಪ್ರತಿ 290 ಎಂಎಲ್‌ಡಿ!
ದಿನಂಪ್ರತಿ 290 ಎಂಎಲ್‌ಡಿ! ಕೋರಮಂಗಲ ಚಲಘಟ್ಟ (ಕೆ.ಸಿ.ವ್ಯಾಲಿ) ಸಂಸ್ಕರಣಾ ಘಟಕಗಳಿಂದ ಜಿಲ್ಲೆಗೆ 440 ಎಂಎಲ್‌ಡಿ ನೀರು ಹರಿಸುವ ಯೋಜನೆ ಇದಾಗಿದೆ. ಈಗ ದಿನಂಪ್ರತಿ ಸರಾಸರಿ 290 ಎಂಎಲ್‌ಡಿ ಮಾತ್ರ ನೀರು ಲಭ್ಯವಾಗುತ್ತಿದೆ. ಮೊದಲ ಹಂತದಲ್ಲಿ 126 ಕೆರೆಗಳ ಜೊತೆಗೆ ಹೆಚ್ಚುವರಿಯಾಗಿ 12 ಕೆರೆಗಳು ಹಾಗೂ ಹೊಸಕೋಟೆ ತಾಲ್ಲೂಕಿನ 5 ಕೆರೆಗಳನ್ನು (ಅಟ್ಟೂರು ಬ್ಲೀಡರ್‌ ಪಾಯಿಂಟ್‌ನಿಂದ) ತುಂಬಿಸುವ ಯೋಜನೆಯಾಗಿದೆ. ಈವರೆಗೆ ಒಟ್ಟು 143 ಕೆರೆಗಳಿಗೆ (12 ಟಿಎಂಸಿ ಅಡಿ ನೀರು) ಮತ್ತು 133 ಚೆಕ್‌ ಡ್ಯಾಂಗಳಿಗೆ (1.20 ಟಿಎಂಸಿ ಅಡಿ ನೀರು) ನೀರು ತುಂಬಿಸಲಾಗಿದೆ. ಇದು ₹ 1342 ಮೊತ್ತದ ಕೋಟಿ ಯೋಜನೆಯಾಗಿದೆ.
2ನೇ ಹಂತದಲ್ಲಿ 272 ಕೆರೆ ಭರ್ತಿ
2ನೇ ಹಂತದಲ್ಲಿ 272 ಕೆರೆ ಭರ್ತಿ ಕೆ.ಸಿ.ವ್ಯಾಲಿ ಎರಡನೇ ಹಂತದಲ್ಲಿ 9 ಕಡೆ ಪಂಪ್‌ಹೌಸ್‌ ನಿರ್ಮಿಸಿ 272 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಹೊಂದಲಾಗಿದೆ. ಕೋಲಾರ ಜಿಲ್ಲೆಯ 222 ಕೆರೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ 50 ಕೆರೆಗಳಿಗೆ ಅವುಗಳ ಸಂಗ್ರಹಣಾ ಸಾಮರ್ಥ್ಯದ ಶೇ 50ರಷ್ಟು ನೀರು ಹರಿಸಲು ಯೋಜಿಸಲಾಗಿದೆ. ₹ 446‌.23 ಕೋಟಿ ವೆಚ್ಚದಲ್ಲಿ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.