ADVERTISEMENT

ಸೀಮೆಎಣ್ಣೆ ಬಳಕೆ ಮುಕ್ತ ಜಿಲ್ಲೆಗೆ ದಿಟ್ಟ ಹೆಜ್ಜೆ

ಅಡುಗೆ ಅನಿಲ ಸಂಪರ್ಕದ ಪಡಿತರ ಕುಟುಂಬಗಳಿಗೆ ಸೀಮೆಎಣ್ಣೆ ವಿತರಣೆ ಸ್ಥಗಿತ

ಜೆ.ಆರ್.ಗಿರೀಶ್
Published 10 ಡಿಸೆಂಬರ್ 2019, 19:45 IST
Last Updated 10 ಡಿಸೆಂಬರ್ 2019, 19:45 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ಕೋಲಾರ: ವಾಯುಮಾಲಿನ್ಯ ತಡೆಗೆ ದಿಟ್ಟ ಹೆಜ್ಜೆಯಿಟ್ಟಿರುವ ಜಿಲ್ಲಾಡಳಿತವು ಜಿಲ್ಲೆಯನ್ನು ಸೀಮೆಎಣ್ಣೆ ಬಳಕೆ ಮುಕ್ತ ಜಿಲ್ಲೆಯಾಗಿ ಮಾಡಿದ್ದು, ಅಡುಗೆ ಅನಿಲ ಸಂಪರ್ಕ (ಗ್ಯಾಸ್‌) ಸಂಪರ್ಕ ಹೊಂದಿರುವ ಪಡಿತರ ಕುಟುಂಬಗಳಿಗೆ ಸೀಮೆಎಣ್ಣೆ ವಿತರಣೆ ಸ್ಥಗಿತಗೊಳಿಸಿದೆ.

ಗ್ಯಾಸ್‌ ಸಂಪರ್ಕ ಹೊಂದಿರುವ ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್‌) ಕುಟುಂಬಗಳು ಹಾಗೂ ಅಂತ್ಯೋದಯ ಪಡಿತರ (ಎಎವೈ) ಕುಟುಂಬಗಳು ಅಡುಗೆ ಉದ್ದೇಶಕ್ಕಾಗಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಗೆ ಕೋರಿಕೆ ಸಲ್ಲಿಸಿ ರಿಯಾಯಿತಿ (ಸಬ್ಸಿಡಿ) ದರದಲ್ಲಿ ಸೀಮೆಎಣ್ಣೆ ಪಡೆಯುತ್ತಿದ್ದವು.

ಇಲಾಖೆಯು ಈ ಕುಟುಂಬಗಳಿಗೆ ಸಬ್ಸಿಡಿ ದರದಲ್ಲಿ ತಿಂಗಳಿಗೆ 3 ಲೀಟರ್‌ ಸೀಮೆಎಣ್ಣೆ ವಿತರಿಸುತ್ತಿತ್ತು. ಕೋಲಾರ ತಾಲ್ಲೂಕಿನ ನಗರ ಪ್ರದೇಶ ಹೊರತುಪಡಿಸಿ ಜಿಲ್ಲೆಯ ಗ್ರಾಮೀಣ ಭಾಗದ ಪಡಿತರ ಕುಟುಂಬಗಳು ಸೀಮೆಎಣ್ಣೆ ಪಡೆಯುತ್ತಿದ್ದವು.

ADVERTISEMENT

ಇಲಾಖೆಯು ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌, ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಹಾಗೂ ಹಿಂದೂಸ್ಥಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ನಿಂದ ಮುಕ್ತ ಮಾರುಕಟ್ಟೆ ದರದಲ್ಲೇ ಸೀಮೆಎಣ್ಣೆ ಖರೀದಿಸಿ ಪಡಿತರ ಕುಟುಂಬಗಳಿಗೆ ಹಂಚಿಕೆ ಮಾಡುತ್ತಿತ್ತು. ಕೆಲ ಪಡಿತರ ಕುಟುಂಬಗಳು ಅವಶ್ಯಕತೆ ಇಲ್ಲದಿದ್ದರೂ ಸಬ್ಸಿಡಿ ಸೀಮೆಎಣ್ಣೆ ಪಡೆದು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದವು.

ಆರ್ಥಿಕ ಹೊರೆ: ಮುಕ್ತ ಮಾರುಕಟ್ಟೆಯಲ್ಲಿ ಸೀಮೆಎಣ್ಣೆ ಬೆಲೆ ಲೀಟರ್‌ಗೆ ₹ 55.60 ಪೈಸೆಯಿದೆ. ಆದರೆ, ಇಲಾಖೆಯು ಗ್ಯಾಸ್‌ ಸಂಪರ್ಕವಿಲ್ಲದ ಪಡಿತರ ಕುಟುಂಬಗಳಿಗೆ ಪ್ರತಿ ಲೀಟರ್‌ಗೆ ₹ 20.60 ಪೈಸೆ ಸಬ್ಸಿಡಿ ನೀಡಿ ₹ 35ರ ದರದಲ್ಲಿ ಸೀಮೆಎಣ್ಣೆ ವಿತರಣೆ ಮಾಡುತ್ತಿತ್ತು. ಜಿಲ್ಲೆಯಲ್ಲಿ ಜುಲೈ ಅಂತ್ಯಕ್ಕೆ 1,02,617 ಪಡಿತರ ಕುಟುಂಬಗಳು ಗ್ಯಾಸ್‌ ಸಂಪರ್ಕವಿದ್ದರೂ ಸಬ್ಸಿಡಿಯಲ್ಲಿ ಸೀಮೆಎಣ್ಣೆ ಪಡೆಯುತ್ತಿದ್ದವು.

ಸೀಮೆಎಣ್ಣೆ ಸಬ್ಸಿಡಿಯು ಇಲಾಖೆಗೆ ಆರ್ಥಿಕ ಹೊರೆಯಾಗಿ ಪರಿಣಮಿಸಿತ್ತು. ಮತ್ತೊಂದೆಡೆ ಸೀಮೆಎಣ್ಣೆ ಬಳಕೆಯಿಂದ ವಾಯುಮಾಲಿನ್ಯ ಹೆಚ್ಚಿತ್ತು. ಹೀಗಾಗಿ ಸಬ್ಸಿಡಿ ಹೊರೆ ತಗ್ಗಿಸಲು ಮತ್ತು ವಾಯುಮಾಲಿನ್ಯ ತಡೆಗಾಗಿ ನಾಲ್ಕು ತಿಂಗಳಿಂದ ವಿಶೇಷ ಕಾರ್ಯಾಚರಣೆ ನಡೆಸಿದ ಇಲಾಖೆಯು ಗ್ಯಾಸ್‌ ಸಂಪರ್ಕ ಹೊಂದಿರುವ 41,792 ಪಡಿತರ ಕುಟುಂಬಗಳು ಸೀಮೆಎಣ್ಣೆ ಪಡೆಯುತ್ತಿದ್ದುದ್ದನ್ನು ಪತ್ತೆ ಮಾಡಿದೆ.

ಸುಳ್ಳು ಮಾಹಿತಿ: ಪಡಿತರ ಕುಟುಂಬಗಳು ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಉಜ್ವಲ ಯೋಜನೆ ಹಾಗೂ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ಗ್ಯಾಸ್‌ ಸೌಲಭ್ಯ ಪಡೆದಿದ್ದರೂ ಇಲಾಖೆಗೆ ಸುಳ್ಳು ಮಾಹಿತಿ ಕೊಟ್ಟು ಸೀಮೆಎಣ್ಣೆಯ ಫಲಾನುಭವಿಗಳಾಗಿದ್ದವು. ಇಲಾಖೆಯು ಇದೀಗ ಈ ಕುಟುಂಬಗಳನ್ನು ಗ್ಯಾಸ್‌ ಸೇವೆಯುಳ್ಳ ಪಡಿತರ ಕುಟುಂಬಗಳಾಗಿ ಪರಿವರ್ತಿಸಿದೆ.

ರಾಜ್ಯದ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದಾವಣಗೆರೆ, ಹಾಸನ, ಮಂಡ್ಯ, ಶಿವಮೊಗ್ಗ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಗ್ಯಾಸ್‌ ಸೌಲಭ್ಯ ಪಡೆದಿರುವ ಪಡಿತರ ಕುಟುಂಬಗಳಿಗೆ ಈಗಾಗಲೇ ಸೀಮೆಎಣ್ಣೆ ಸ್ಥಗಿತಗೊಳಿಸಲಾಗಿದೆ. ಅದೇ ರೀತಿ ಜಿಲ್ಲೆಯಲ್ಲೂ ಸೀಮೆಎಣ್ಣೆ ವಿತರಣೆ ನಿಲ್ಲಿಸಲಾಗಿದೆ. ಇದರಿಂದ ಇಲಾಖೆಗೆ ಆರ್ಥಿಕ ಹೊರೆ ತಗ್ಗಿದೆ ಹಾಗೂ ಕಾಳಸಂತೆಯಲ್ಲಿ ಸೀಮೆಎಣ್ಣೆ ಮಾರಾಟಕ್ಕೆ ಕಡಿವಾಣ ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.