ADVERTISEMENT

ಕೆಜಿಎಫ್‌ | ಹದಗೆಟ್ಟ ರಸ್ತೆ: ಹೈರಾಣಾದ ಸವಾರರು

ಸತತ ಮಳೆಯಿಂದ ರಸ್ತೆ ತುಂಬಾ ಗುಂಡಿಗಳು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 7:38 IST
Last Updated 19 ನವೆಂಬರ್ 2025, 7:38 IST
ಕೆಜಿಎಫ್‌ ಬೆಮಲ್‌ ಕಾರ್ಖಾನೆ ಮುಂಭಾಗದಲ್ಲಿ ಹೊಸದಾಗಿ ಹಾಕಿರುವ ರಸ್ತೆ ಹಾಳಾಗಿರುವುದು
ಕೆಜಿಎಫ್‌ ಬೆಮಲ್‌ ಕಾರ್ಖಾನೆ ಮುಂಭಾಗದಲ್ಲಿ ಹೊಸದಾಗಿ ಹಾಕಿರುವ ರಸ್ತೆ ಹಾಳಾಗಿರುವುದು   

ಕೆಜಿಎಫ್‌: ತಾಲ್ಲೂಕಿನಲ್ಲಿ ಈಚೆಗೆ ಬಿದ್ದ ಸತತ ಮಳೆಯಿಂದಾಗಿ ಲೋಕೋಪಯೋಗಿ ಇಲಾಖೆ ಮತ್ತು ಜಿಲ್ಲಾ ಪಂಚಾಯತ್‌ ಇಲಾಖೆ ನಿರ್ವಹಣೆ ಮಾಡಿದ ಬಹುತೇಕ ರಸ್ತೆಗಳು ಹಾಳಾಗಿವೆ.

ಎರಡೂ ಇಲಾಖೆಗಳು ಕೇವಲ ಒಂದೆರಡು ವರ್ಷಗಳ ಹಿಂದೆ ನಿರ್ಮಿಸಿದ ರಸ್ತೆಗಳಲ್ಲಿ ಹೊಂಡಗಳು ಬಿದ್ದಿವೆ. ರಸ್ತೆ ಬದಿಯ ಅಂಚಿನಲ್ಲಿ ಬಿರುಕು ಬಿಟ್ಟಿದೆ. ರಸ್ತೆಯ ಮೇಲೆ ಹಿಂದೆ ಹಾಕಿದ್ದ ರಸ್ತೆಯ ಕುರುಹುಗಳು ಎದ್ದು ಕಾಣುತ್ತಿವೆ. ಈಗ ಹಾಕುವ ರಸ್ತೆಗಳಿಗಿಂತ ಹಿಂದೆ ನಿರ್ಮಿಸಿದ ರಸ್ತೆಗಳೇ ಎಷ್ಟೋ ಉತ್ತಮವಾಗಿವೆ. ಒಂದು ಮಳೆ ಬಂದರೆ ಸಾಕು ಹೊಸ ರಸ್ತೆಗಳು ಹಳೆ ರಸ್ತೆಗಳಾಗಿ ಮಾರ್ಪಡುತ್ತವೆ. ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರು ಕಣ್ಣಲ್ಲಿ ಕಣ್ಣಿಟ್ಟು ರಸ್ತೆಯ ಗುಂಡಿ ದಾಟಿಕೊಂಡು ಹೋಗಬೇಕಾದ ಅನಿವಾರ್ಯತೆ ಎದುರಾಗುತ್ತೆ ಎಂಬುದು ಸಾರ್ವಜನಿಕರ ಮಾತಾಗಿದೆ.

ಬೆಮಲ್‌ನಿಂದ ಊರಿಗಾಂ ಮಾರ್ಗವಾಗಿ ರಾಬರ್ಟಸನ್‌ಪೇಟೆ ತಲುಪುವ ರಸ್ತೆಯನ್ನು ಇತ್ತೀಚಿಗೆ ನಿರ್ಮಿಸಲಾಗಿದೆ. ರಸ್ತೆ ನಿರ್ಮಾಣವಾದ ಕೆಲವೇ ದಿನಗಳಲ್ಲಿ ಅಲ್ಲಲ್ಲಿ ಹೊಂಡಗಳು ಬಿದ್ದಿದ್ದವು. ಅವುಗಳನ್ನು ಇಲಾಖೆ ಸರಿಮಾಡಿತು. ಆದರೆ, ಈಗ ರಸ್ತೆಯ ಬಹುಭಾಗದಲ್ಲಿ ಹೊಂಡಗಳು ಕಾಣಸಿಗುತ್ತಿವೆ. ರಸ್ತೆಯಲ್ಲಿ ಡಾಂಬರು ಬಿರುಕು ಬಿಟ್ಟಿರುವುದು ಕಂಡು ಬರುತ್ತಿದೆ. ಬಂಗಾರಪೇಟೆಯಿಂದ ಕೆಜಿಎಫ್‌ಗೆ ಬರುವ ಮಾರ್ಗ ಇದಾಗಿದ್ದು, ಪ್ರತಿನಿತ್ಯ ಹೆಚ್ಚಿನ ವಾಹನ ದಟ್ಟಣೆ ಇರುತ್ತದೆ. ಮಳೆ ಇಲ್ಲದೆ ಇದ್ದಾಗ, ಹೊಂಡಗಳು ವಾಹನ ಸವಾರರಿಗೆ ಕಾಣುತ್ತದೆ. ಮಳೆ ಬಂದಾಗ, ಹೊಂಡದಲ್ಲಿ ನೀರು ತುಂಬಿ ಹೊಂಡಗಳು ಕಾಣುವುದೇ ಇಲ್ಲ. ಇದರಿಂದಾಗಿ ವಾಹನ ಸವಾರರು ಬಿದ್ದು ಗಾಯಗೊಂಡಿರುವ ಘಟನೆಗಳು ನಡೆದಿವೆ. ಹೊಂಡ ತಪ್ಪಿಸಲು ಹೋಗಿ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆಯುವ ಸಂಭವ ಕೂಡ ಹೆಚ್ಚಾಗಿದೆ.

ADVERTISEMENT

ನಗರ ಪ್ರದೇಶದಲ್ಲಿ ಇಂತಹ ದೃಶ್ಯಗಳು ಕಂಡು ಬಂದರೆ, ಗ್ರಾಮೀಣ ಭಾಗದಲ್ಲಿಯೂ ಪರಿಸ್ಥಿತಿ ಇನ್ನೂ ಆತಂಕಕಾರಿಯಾಗಿದೆ. ಉದಾಹರಣೆಗೆ ಆಂಧ್ರಪ್ರದೇಶವನ್ನು ಸಂಪರ್ಕಿಸುವ ಕ್ಯಾಸಂಬಳ್ಳಿ-ಮಡಿವಾಳ- ತೂಕಲ್‌ ರಸ್ತೆಯನ್ನು ಈಚೆಗೆ ನಿರ್ಮಾಣ ಮಾಡಲಾಗಿತ್ತು. ಪ್ರಸ್ತುತ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ರಸ್ತೆಯ ಗುಣಮಟ್ಟ ಚೆನ್ನಾಗಿಲ್ಲ. ರಸ್ತೆ ನಿರ್ಮಾಣ ಮಾಡುವಾಗಲೇ ಅಧಿಕಾರಿಗಳ ಗಮನಕ್ಕೆ ಗುಣಮಟ್ಟದ ಬಗ್ಗೆ ತಿಳಿಸಲಾಗಿತ್ತು. ಆದರೂ, ಅವರು ಕ್ರಮ ಕೈಗೊಂಡಿರಲಿಲ್ಲ. ಇದರಿಂದಾಗಿ ರಸ್ತೆ ಹದಗೆಡಲು ಸಾಧ್ಯವಾಗಿದೆ ಎಂಬುದು ಮಡಿವಾಳ ಗ್ರಾಮದ ರಾಜಪ್ಪ ಅವರ ಮಾತಾಗಿದೆ.

ಕೆಜಿಎಫ್‌ ತಾಲ್ಲೂಕು ಆಂಧ್ರ ಮತ್ತು ತಮಿಳುನಾಡಿನ ಗಡಿಯನ್ನು ಹಂಚಿಕೊಳ್ಳುತ್ತದೆ. ಗಡಿ ಭಾಗದವರೆವಿಗೂ ಕಳಪೆ ಗುಣಮಟ್ಟದ ರಸ್ತೆಯನ್ನು ಕಾಣಬಹುದು. ಗಡಿ ದಾಟಿದ ನಂತರ ಗುಣಮಟ್ಟದ ರಸ್ತೆಗಳನ್ನು ಎರಡೂ ರಾಜ್ಯಗಳು ಕಾಪಾಡಿಕೊಂಡು ಬರುತ್ತಿವೆ. ಅವರ ಬದ್ಧತೆ ನಮ್ಮ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಏಕೆ ಇಲ್ಲ ಎಂದು ಗಡಿಗ್ರಾಮದ ಲಕ್ಷ್ಮಯ್ಯ ಹೇಳುತ್ತಾರೆ.

ಮಳೆಗಾಲವಾಗಿದ್ದರಿಂದ ಕೆಲವೆಡೆ ರಸ್ತೆಗಳಲ್ಲಿ ಹಳ್ಳ ಬಿದ್ದಿವೆ. ಅವುಗಳನ್ನು ದುರಸ್ತಿ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ರಸ್ತೆ ಬದಿಯಲ್ಲಿ ಬೆಳೆದಿರುವ ಗಿಡಗಳನ್ನು ಮಳೆಗಾಲ ನಿಂತ ಮೇಲೆ ತೆಗೆಯಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಊರಿಗಾಂ ಫೈಲೈಟ್ಸ್‌ ಬಳಿ ದೊಡ್ಡದಾದ ಹೊಂಡ
ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ತೂಕಲ್‌ ರಸ್ತೆಯ ದುಸ್ಥಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.