ADVERTISEMENT

ಕೆಜಿಎಫ್‌: ಬ್ರಿಟಿಷ್‌ ಕಾಲದ ಅಂಚೆ ಕಚೇರಿಗಳಿಗೆ ಬೀಗ

110 ವರ್ಷಗಳ ಇತಿಹಾಸ ಇರುವ ಚಾಂಪಿಯನ್‌ ರೀಫ್ಸ್‌, ಉಳಿಸಲು ಸಂಘಟನೆಗಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 7:24 IST
Last Updated 9 ಜನವರಿ 2026, 7:24 IST
ಕೆಜಿಎಫ್‌ ಚಾಂಪಿಯನ್‌ ರೀಫ್ಸ್‌ನಲ್ಲಿರುವ ಶತಮಾನ ಕಂಡ ಅಂಚೆ ಕಚೇರಿ 
ಕೆಜಿಎಫ್‌ ಚಾಂಪಿಯನ್‌ ರೀಫ್ಸ್‌ನಲ್ಲಿರುವ ಶತಮಾನ ಕಂಡ ಅಂಚೆ ಕಚೇರಿ    

ಕೆಜಿಎಫ್‌: ಸುಮಾರು 110 ವರ್ಷಗಳ ಇತಿಹಾಸ ಇರುವ ಚಾಂಪಿಯನ್‌ ರೀಫ್ಸ್‌ ಸೇರಿದಂತೆ ನಗರದ ಹಲವು ಪೋಸ್ಟ್‌ ಆಫೀಸ್‌ಗಳು ಕೆಲವೇ ದಿನಗಳಲ್ಲಿ ಬಾಗಿಲು ಹಾಕಲಿವೆ. ಈ ಸಂಬಂಧವಾಗಿ ಅಂಚೆ ಕಚೇರಿಗಳನ್ನು ಉಳಿಸುವಂತೆ ಸರ್ಕಾರದ ಮೇಲೆ ವಿವಿಧ ಸಂಘಟನೆಗಳು ಒತ್ತಡ ಹೇರಿವೆ.

ಚಾಂಪಿಯನ್‌ ರೀಫ್ಸ್‌ ಅಂಚೆ ಕಚೇರಿಯನ್ನು ಊರಿಗಾಂ ಪೋಸ್ಟ್‌ ಆಫೀಸ್‌ನೊಂದಿಗೆ ವಿಲೀನ ಮಾಡಲಾಗುವುದು. ಅದೇ ರೀತಿ ಕೋರಮಂಡಲ್‌ ಮತ್ತು ಬೆಮಲ್‌ ನಗರದಲ್ಲಿರುವ ಅಂಚೆ ಕಚೇರಿಗಳನ್ನು ಕೂಡ ಬೇರೆ ಪೋಸ್ಟ್‌ ಆಫೀಸ್‌ನೊಂದಿಗೆ ವಿಲೀನ ಮಾಡಲಾಗುವುದೆಂದು ಅಂಚೆ ಕಚೇರಿ ಮೂಲಗಳು ತಿಳಿಸಿವೆ.

1915ರಲ್ಲಿ ಪ್ರಾರಂಭವಾದ ಚಾಂಪಿಯನ್‌ ರೀಫ್ಸ್‌ ಅಂಚೆ ಕಚೇರಿ ಪ್ರಸ್ತುತ ಸುಮಾರು 3000 ಖಾತೆಗಳನ್ನು ಹೊಂದಿದೆ. ಮೈನಿಂಗ್‌ ಪ್ರದೇಶದ ಜನರಿಗೆ ಅದರಲ್ಲಿಯೂ ಸರ್ಕಾರದ ಮಾಸಾಶನ ಪಡೆಯುವುವವರಿಗೆ ಹತ್ತಿರದಲ್ಲಿದೆ. ಅಲ್ಲದೆ, ಬ್ರಿಟಿಷರ ಕಾಲದಲ್ಲಿ ಅಸ್ತಿತ್ವಕ್ಕೆ ಬಂದ ಅಂಚೆ ಕಚೇರಿಯಲ್ಲಿ ಗತಕಾಲದ ವೈಭವವನ್ನು ಸಾರುವ ಅನೇಕ ದಾಖಲೆಗಳು ಇನ್ನೂ ಇವೆ. ಪಾರಂಪರಿಕ ಅಂಚೆ ಕಚೇರಿಯನ್ನಾಗಿ ಮತ್ತು ಸ್ಥಳೀಯ ಜನರಿಗೆ ಅನುಕೂಲವಾಗುವಂತೆ ಅಂಚೆ ಕಚೇರಿ ಉಳಿಸಿಕೊಳ್ಳಬೇಕು ಎಂದು ಈಗಾಗಲೇ ವಿವಿಧ ಸಂಘಟನೆಗಳು ಅಂಚೆ ಇಲಾಖೆ ಮತ್ತು ರಾಜ್ಯ ಸರ್ಕಾರದ ಮೇಲೆ ಕೂಡ ಒತ್ತಡ ಹೇರಿವೆ.

ADVERTISEMENT

ಮಾರಿಕುಪ್ಪಂ, ಚಾಂಪಿಯನ್‌ ರೀಫ್ಸ್‌ ಮತ್ತು ಊರಿಗಾಂ ಅಂಚೆ ಕಚೇರಿಗಳು ತುಂಬಾ ಹತ್ತಿರದಲ್ಲಿವೆ. ಇವೆಲ್ಲವೂ ನಾನ್‌ ಡೆಲವರಿ ಅಂಚೆ ಕಚೇರಿಯಾಗಿ ಕೆಲಸ ನಿರ್ವಹಿಸುತ್ತಿವೆ. ಹಣಕ್ಕೆ ಸಂಬಂಧಿಸಿದ ಎಲ್ಲ ವ್ಯವಹಾರ ನೋಡಿಕೊಳ್ಳಲಾಗುತ್ತಿದೆ. ಹಿರಿಯ ನಾಗರಿಕರು ತಮ್ಮ ಉಳಿತಾಯದ ಹಣ ಇಡಲು ಈ ಕಚೇರಿಯನ್ನೇ ಉಪಯೋಗಿಸಿಕೊಳ್ಳುತ್ತಿದ್ದಾರೆ. ಜತೆಗೆ ಮೈನಿಂಗ್‌ ಕಾರ್ಮಿಕನ ಚಿತ್ರ ಇರುವ ಪಿಕ್ಟೋರಿಯಲ್‌ ಸ್ಟಾಂಪ್‌ ಇಂಪ್ರೆಷನ್‌ ಹಾಕಲಾಗುತ್ತಿದೆ. ಕೋಲಾರ ಅಂಚೆ ವಿಭಾಗದಲ್ಲಿ ಚಿಕ್ಕಬಳ್ಳಾಪುರದ ನಂದಿ ಮತ್ತು ಬಿಜಿಎಂಎಲ್‌ ಕಾರ್ಮಿಕನ ಚಿತ್ರ ಇರುವ ಸ್ಟಾಂಪ್‌ ಇಂಪ್ರೆಷನ್‌ ಬಹಳ ಜನಪ್ರಿಯವಾಗಿದೆ. ಅಂಚೆ ಚೀಟಿ ಸಂಗ್ರಹಕಾರರು ಈ ಕಚೇರಿಗೆ ಹುಡುಕಿಕೊಂಡು ಬಂದು ಇಂಪ್ರೆಷನ್‌ ಹಾಕಿಸಿಕೊಂಡು ಹೋಗುತ್ತಿದ್ದಾರೆ. ಈ ಸೇವೆ ಇಲ್ಲಿ ಉಚಿತವಾಗಿ ನೀಡಲಾಗುತ್ತಿದೆ.

ಬಿಜಿಎಂಎಲ್‌ ನಡೆಯುತ್ತಿದ್ದಾಗ ಈ ಭಾಗದ ಪೋಸ್ಟ್‌ ಆಫೀಸ್‌ನಲ್ಲಿ ಹೆಚ್ಚಿನ ವಹಿವಾಟು ನಡೆಯುತ್ತಿತ್ತು. ಈಗ ಚಿನ್ನದ ಗಣಿ ಮುಚ್ಚಿದ ಮೇಲೆ ವಹಿವಾಟು ಕಡಿಮೆಯಾಗಿದೆ. ಅಲ್ಲದೆ, ಒಂದೇ ರಸ್ತೆಯಲ್ಲಿ ಮೂರು ಅಂಚೆ ಕಚೇರಿಗಳು ಇವೆ. ಇದರಿಂದ ಮಾನವ ಸಮಯ ವ್ಯರ್ಥವಾಗುತ್ತಿದೆ. ಶಿಡ್ಲಘಟ್ಟದಲ್ಲಿ ಹೆಚ್ಚಿನ ವಹಿವಾಟು ಇದ್ದು, ಅಲ್ಲಿ ಸಿಬ್ಬಂದಿ ಕೊರತೆ ಇದೆ. ಅಲ್ಲಿಗೆ ಸಿಬ್ಬಂದಿಯನ್ನು ವರ್ಗಾಯಿಸುವ ಇರಾದೆಯನ್ನು ಅಂಚೆ ಇಲಾಖೆ ಹಿರಿಯ ಅಧಿಕಾರಿಗಳು ಹೊಂದಿದ್ದಾರೆ. ಇದರ ಜೊತೆಗೆ ಬಂಗಾರಪೇಟೆ ಎಪಿಎಂಸಿ ಅಂಚೆ ಕಚೇರಿಯನ್ನು ಕೂಡ ಮುಚ್ಚಲಾಗುವುದು ಎಂದು ಅಂಚೆ ಕಚೇರಿ ಮೂಲಗಳು ತಿಳಿಸಿವೆ.

ಬೆಮಲ್‌ ಕಚೇರಿ ಮುಚ್ಚಬೇಡಿ

ಬೆಮಲ್‌ ಭಾರತ್‌ ನಗರದಲ್ಲಿರುವ ಅಂಚೆ ಕಚೇರಿ ಬೆಮಲ್‌ ನಿವೃತ್ತ ಉದ್ಯೋಗಿಗಳಿಗೆ ಅನುಕೂಲವಾಗುತ್ತಿತ್ತು. ಅದನ್ನು ಈಗ ಮುಚ್ಚಲಾಗುತ್ತಿದೆ. ಈಗ ನಿವೃತ್ತ ಉದ್ಯೋಗಿಗಳು ಬಂಗಾರಪೇಟೆ ಇಲ್ಲವೇ ಕೆಜಿಎಫ್‌ ನಗರಕ್ಕೆ ಹೋಗುವ ಸಂದರ್ಭ ಬಂದಿದೆ. ಬೆಮಲ್‌ ಅಂಚೆ ಕಚೇರಿಯಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಖಾತೆದಾರರು ಇದ್ದಾರೆ. ಅವರೆಲ್ಲರಿಗೂ ಅನಾನುಕೂಲವಾಗಲಿದೆ. ಅಂಚೆ ಕಚೇರಿಯನ್ನು ಮುಚ್ಚದಂತೆ ಶಾಸಕರು ಮತ್ತು ಸಂಸದರು ಪ್ರಯತ್ನಿಸಬೇಕು ಎಂದು ಬೆಮಲ್‌ ನಗರದ ನಿವೃತ್ತ ಕಾರ್ಮಿಕ ಮುಖಂಡ ಲಕ್ಷ್ಮಣಕುಮಾರ್‌ ಒತ್ತಾಯಿಸಿದ್ದಾರೆ.