ADVERTISEMENT

ಕೆಜಿಎಫ್‌ ಬಸ್ ನಿಲ್ದಾಣ ದುರ್ನಾತ ತಾಣ

ಕುಡುಕರ ಕಾಟ– ನಿಲ್ದಾಣದೆಲ್ಲೆಡೆ ಗಲೀಜು–ಹರಿದು ಬರುವ ಚರಂಡಿ ನೀರು

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2024, 7:27 IST
Last Updated 19 ಫೆಬ್ರುವರಿ 2024, 7:27 IST
ಬಸ್ ನಿಲ್ದಾಣದಲ್ಲಿ ಎಲೆ ಅಡಿಕೆ ಉಗಿದು ರಸ್ತೆ ಮತ್ತು ಗೋಡೆ ಅಂದಗೆಡಿಸಿರುವುದು
ಬಸ್ ನಿಲ್ದಾಣದಲ್ಲಿ ಎಲೆ ಅಡಿಕೆ ಉಗಿದು ರಸ್ತೆ ಮತ್ತು ಗೋಡೆ ಅಂದಗೆಡಿಸಿರುವುದು   

ಕೆಜಿಎಫ್: ಎಲ್ಲೆಡೆ ಕಾಣುವ ಕಸಕಡ್ಡಿ, ತ್ಯಾಜ್ಯದ ರಾಶಿ. ಚರಂಡಿಯಿಂದ ಬಸ್ ನಿಲ್ದಾಣದ ಒಳಗೆ ಹರಿಯುತ್ತಿರುವ ಕೊಳಚೆ ನೀರು. ಇವೆಲ್ಲವೂ ನಗರದ ಕೇಂದ್ರ ಭಾಗದಲ್ಲಿರುವ ಬಸ್ ನಿಲ್ದಾಣದ ಸಾಕ್ಷಾತ್ ನೋಟ.

ನಗರಸಭೆ ಬಸ್ ನಿಲ್ದಾಣ ಮೂಲತಃ ಖಾಸಗಿ ಬಸ್ ನಿಲ್ದಾಣವಾದರೂ ಕೆಎಸ್ಆರ್‌ಟಿಸಿ ಬಸ್‌ಗಳು ಕೂಡ ಇದೇ ಕೇಂದ್ರದಿಂದ ಪ್ರಯಾಣವನ್ನು ಆರಂಭಿಸುತ್ತವೆ. ಆಂಧ್ರಪ್ರದೇಶ ಮತ್ತು ತಮಿಳುನಾಡಿಗೆ ಸೇರಿದ ಬಸ್‌ಗಳು ಕೂಡ ಇಲ್ಲಿಂದಲೇ ಶುರುವಾಗುತ್ತವೆ.

ಪ್ರತಿನಿತ್ಯ ಸುಮಾರು 90ಕ್ಕೂ ಹೆಚ್ಚು ಖಾಸಗಿ ಬಸ್‌ಗಳು ಸಂಚಾರ ಮಾಡುತ್ತವೆ. ಬಸ್ ಪ್ರಯಾಣಿಕರನ್ನು ನಂಬಿಕೊಂಡು ನಿಲ್ದಾಣದ ಸುತ್ತ ನೂರಾರು ಅಂಗಡಿಗಳು ತಲೆಎತ್ತಿವೆ. ಸಾವಿರಾರು ಜನ ಬಸ್ ನಿಲ್ದಾಣದ ಮೇಲೆ ಆಶ್ರಿತರಾಗಿದ್ದಾರೆ.

ADVERTISEMENT

ಬಸ್ ನಿಲ್ದಾಣದಲ್ಲಿ ಇರುವ ಬಹುತೇಕ ಅಂಗಡಿಗಳು ನಗರಸಭೆಗೆ ಸೇರಿವೆ. ಕೆಲವೆಡೆ ಅಕ್ರಮವಾಗಿ ಹುಟ್ಟಿಕೊಂಡಿರುವ ಅನಧಿಕೃತ ಅಂಗಡಿಗಳು ಕೂಡ ಇವೆ. ಅವುಗಳ ಬಾಡಿಗೆ ಅನಧಿಕೃತ ವ್ಯಕ್ತಿಗಳ ಕೈಗೆ ಪ್ರತಿ ತಿಂಗಳು ಹೋಗುತ್ತಿದೆ. ಪ್ರತಿ ಖಾಸಗಿ ಬಸ್‌ನಿಂದಲೂ ನಗರಸಭೆ ತೆರಿಗೆ ವಸೂಲಿ ಮಾಡುತ್ತದೆ. ನಗರಸಭೆಗೆ ಇಷ್ಟೊಂದು ಆದಾಯ ತರುವ ಬಸ್ ನಿಲ್ದಾಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಜನೋಪಯೋಗಿಯಾಗಿರಬೇಕು ಎಂಬ ಕಲ್ಪನೆ ನಗರಸಭೆ ಅಧಿಕಾರಿಗಳಿಗೆ ಇಲ್ಲ ಎಂದು ಬಸ್ ನಿಲ್ದಾಣದ ಅಂಗಡಿ ಮಾಲೀಕರು ಮತ್ತು ಪ್ರಯಾಣಿಕರು ದೂರುತ್ತಾರೆ.

ಬಸ್ ನಿಲ್ದಾಣದ ಕಾಮರಾಜ ಪುತ್ಥಳಿ ಬಳಿ ಚರಂಡಿಯನ್ನು ಒತ್ತುವರಿ ಮಾಡಿಕೊಂಡು ಅಂಗಡಿಯನ್ನು ಅನಧಿಕೃತವಾಗಿ ನಿರ್ಮಿಸಲಾಗಿದೆ. ಪಕ್ಕದ ಹೋಟೆಲ್ ತ್ಯಾಜ್ಯ ಇದೇ ಚರಂಡಿಯಲ್ಲಿ ಹರಿಯಬೇಕು. ತ್ಯಾಜ್ಯ ತುಂಬಿಕೊಂಡು ಚರಂಡಿಯಲ್ಲಿ ನೀರು ಹರಿದು ಹೋಗದೆ ಇಡೀ ಬಸ್ ನಿಲ್ದಾಣ ದುರ್ನಾತ ಬೀರುತ್ತಿದೆ. 

ದೂರು ಬಂದರೆ ಮಾತ್ರ ನಗರಸಭೆ ಸಿಬ್ಬಂದಿ ಚರಂಡಿಯನ್ನು ತಾತ್ಕಾಲಿಕವಾಗಿ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಾರೆ. ಆದರೆ, ಶಾಶ್ವತ ಪರಿಹಾರ ರೂಪಿಸುವ ಗೋಜಿಗೆ ಹೋಗುತ್ತಿಲ್ಲ ಎಂಬುದು ಸಾರ್ವಜನಿಕರ ದೂರು.

ಬಸ್ ನಿಲ್ದಾಣದಲ್ಲಿ ಹಾಕಿರುವ ಬಹುತೇಕ ಆಸನಗಳು ಬಿರುಕು ಬಿಟ್ಟಿವೆ. ಅದರಲ್ಲಿ ಗಲೀಜು ತುಂಬಿ ಅದರಲ್ಲಿ ಕುಳಿತುಕೊಳ್ಳಲು ಕೂಡ ಸಾಧ್ಯವಿಲ್ಲ. ಮಾದಕ ವಸ್ತುಗಳ ಸೇವನೆ ಮಾಡುವವರು, ಮದ್ಯಪ್ರಿಯರು ಸದಾ ಇಲ್ಲಿಯೇ ಠಿಕಾಣಿ ಹೂಡುತ್ತಾರೆ.

ಇದನ್ನು ಪ್ರಶ್ನಿಸಿದರೆ ಅಂಗಡಿ ಮಾಲೀಕರ ಮೇಲೆ ದೌರ್ಜನ್ಯ ಎಸಗುತ್ತಾರೆ ಎಂದು ಬಸ್ ನಿಲ್ದಾಣದ ಅಂಗಡಿ ಮಾಲೀಕರು ಅವಲತ್ತುಕೊಳ್ಳುತ್ತಾರೆ.

ಬಸ್ ನಿಲ್ದಾಣದಲ್ಲಿ ಎಲೆ ಅಡಿಕೆ ಉಗಿದು ರಸ್ತೆ ಮತ್ತು ಗೋಡೆ ಅಂದಗೆಡಿಸಿರುವುದು

ಈ ಹಿಂದೆ ವಳ್ಳಲ್ ಮುನಿಸ್ವಾಮಿ ನಗರಸಭೆ ಅಧ್ಯಕ್ಷರಾಗಿದ್ದಾಗ ಬಸ್ ನಿಲ್ದಾಣಕ್ಕೆ ಒಂದು ರೂಪ ಕೊಟ್ಟಿದ್ದರು. ಅನಧಿಕೃತ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿತ್ತು. ಕಾವಲುಗಾರರನ್ನು ನಿಯೋಜಿಸಲಾಗಿತ್ತು. ಆದರೆ, ಅವರ ಅಧ್ಯಕ್ಷ ಅವಧಿ ಮುಗಿದ ನಂತರ ಕಾವಲುಗಾರರನ್ನು ತೆಗೆಯಲಾಯಿತು. ಈಗ ದ್ವಿಚಕ್ರ ವಾಹನ ಮತ್ತು ಕಾರುಗಳ ಸ್ಟಾಂಡ್ ಆಗಿ ಕೂಡ ಬಸ್ ನಿಲ್ದಾಣ ಪರಿವರ್ತನೆಯಾಗಿದೆ.

ಕಾರ್ಯ ನಿರ್ವಹಿಸದ ಕುಡಿಯುವ ನೀರಿನ ಘಟಕ

ಪ್ರತಿ ಬಸ್‌ಗೆ ನಾವು ತೆರಿಗೆ ಕೊಡುತ್ತೇವೆ. ಅದರೆ, ಬಸ್‌ಗಳನ್ನು ಸರಿಯಾಗಿ ನಿಲ್ಲಿಸಲು ಹಿಂದಕ್ಕೆ ತೆಗೆಯಲು ಸರಿಯಾದ ವ್ಯವಸ್ಥೆ ಇಲ್ಲ. ಪ್ರಯಾಣಿಕರು ಹತ್ತುವ ಸ್ಥಳ ಸದಾ ಗಲೀಜಿನಿಂದ ತುಂಬಿರುತ್ತದೆ ಎಂದು ಬಸ್ ನಿರ್ವಾಹಕರು ಹೇಳುತ್ತಾರೆ.

ಬಸ್ ನಿಲ್ದಾಣದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಬಾಗಿಲು ಮುಚ್ಚಿದೆ. ಸಾವಿರಾರು ಜನ ದಿನನಿತ್ಯ ಪ್ರಯಾಣ ಮಾಡುವ ಸ್ಥಳದಲ್ಲಿ ಘಟಕವನ್ನು ದುರಸ್ತಿ ಮಾಡಬೇಕೆಂಬ ಪ್ರಜ್ಞೆ ಅಧಿಕಾರಿಗಳಿಗೆ ಇಲ್ಲ ಎಂದು ನಾಗರಿಕರು ಟೀಕಿಸುತ್ತಾರೆ.

ಮದ್ಯದ ಬಾಟಲಿಯನ್ನು ಕಸದ ತ್ಯಾಜ್ಯಕ್ಕೆ ತಳ್ಳುತ್ತಿರುವ ಮಹಿಳೆ

ಬಸ್ ನಿಲ್ದಾಣದಲ್ಲಿ ಸುಮ್ಮನೆ ಕಾಲ ಕಳೆಯಲು ಬರುವ ವ್ಯಕ್ತಿಗಳನ್ನು ನಿಗ್ರಹಿಸಲು ಮೊದಲು ಪೊಲೀಸ್ ಬೀಟ್ ಇತ್ತು. ಈಗ ಅದನ್ನು ಕೂಡ ನಿಲ್ಲಿಸಲಾಗಿದೆ. ಕುಡುಕರ ಸಂಖ್ಯೆ ಮತ್ತು ಪೋಲಿ ಹುಡುಗರ ಸಂಖ್ಯೆ ಕೂಡ ಜಾಸ್ತಿಯಾಗಿದೆ ಎಂಬ ದೂರುಗಳು ಕೇಳಿ ಬಂದಿವೆ.

ಬಸ್ ನಿಲ್ದಾಣದಲ್ಲಿ ಹರಿಯುತ್ತಿರುವ ತ್ಯಾಜ್ಯದ ನೀರು
ಬೇಸಿಗೆ ಬಂದಿದೆ. ಈಗಲಾದರೂ ಶುದ್ಧ ಕುಡಿಯುವ ನೀರಿನ ಘಟಕವನ್ನು ದುರಸ್ತಿ ಮಾಡಬೇಕು
ಕುಟ್ಟಿ, ವ್ಯಾಪಾರಿ
ಹೊಸ ಯೋಜನೆಗೆ ಪ್ರಸ್ತಾವ
ಬಸ್ ನಿಲ್ದಾಣದಲ್ಲಿ ಹಿಂದೆ ಹಾಕಿರುವ ಚರಂಡಿ ಪೈಪ್‌ಗಳು ಸಣ್ಣ ಪ್ರಮಾಣದ್ದಾಗಿದೆ. ಅದರಲ್ಲಿ ನೀರು ಸರಾಗವಾಗಿ ಹರಿದುಹೋಗಲು ಸಾಧ್ಯವಾಗುತ್ತಿಲ್ಲ. ಈಗ ಐಡಿಎಸ್ಎಂಟಿ ಯೋಜನೆಯಲ್ಲಿ ₹2 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಯೋಜನೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಬಸ್ ನಿಲ್ದಾಣದಲ್ಲಿ ಹೊಸದಾಗಿ ಶೌಚಾಲಯ ನಿರ್ಮಾಣ ಕೂಡ ಪ್ರಸ್ತಾವದಲ್ಲಿದೆ ಎಂದು ನಗರಸಭೆ ಆಯುಕ್ತ ಪವನ್‌ ಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.