ADVERTISEMENT

ಅನುದಾನದ ಕೊರತೆ: ಆಧುನಿಕ ಡ್ರೈವಿಂಗ್‌ ಟೆಸ್ಟ್‌ ಟ್ರಾಕ್‌ ಕಾರ್ಯಾರಂಭಕ್ಕೆ ವಿಘ್ನ

ಎಆರ್‌ಟಿಒ ಕಚೇರಿ ಕಾಮಗಾರಿ ವಿಳಂಬ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2025, 8:03 IST
Last Updated 24 ಮಾರ್ಚ್ 2025, 8:03 IST
ಕೆಜಿಎಫ್‌ ಬೆಮಲ್‌ ನಗರದ ಬಳಿ ಸಿದ್ದಪಡಿಸಲಾಗುತ್ತಿರುವ ಆಧುನಿಕ  ಟೆಸ್ಟ್‌ ಡ್ರೈವಿಂಗ್‌ ಟ್ರಾಕ್‌.
ಕೆಜಿಎಫ್‌ ಬೆಮಲ್‌ ನಗರದ ಬಳಿ ಸಿದ್ದಪಡಿಸಲಾಗುತ್ತಿರುವ ಆಧುನಿಕ  ಟೆಸ್ಟ್‌ ಡ್ರೈವಿಂಗ್‌ ಟ್ರಾಕ್‌.   

ಕೆಜಿಎಫ್‌: ಚಾಲನಾ ಪರವಾನಗಿ ಪಡೆಯಲು ಸಾರಿಗೆ ಇಲಾಖೆ ನಿಗದಿ ಪಡಿಸಿರುವ ಪರೀಕ್ಷಾ ವಿಧಾನಗಳನ್ನು ಆಧುನಿಕ ತಂತ್ರಜ್ಞಾನದ ಮೂಲಕ ನಿರ್ಧರಿಸಲು ಬೆಮಲ್‌ ನಗರದಲ್ಲಿ ಸಾರಿಗೆ ಇಲಾಖೆ ನಿರ್ಮಾಣ ಮಾಡುತ್ತಿರುವ ಡ್ರೈವಿಂಗ್‌ ಟೆಸ್ಟ್‌ ಟ್ರಾಕ್‌ ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಲು ಹಲವಾರು ವಿಘ್ನಗಳು ಎದುರಾಗಿವೆ.

ಸುಮಾರು ನಾಲ್ಕು ದಶಕಗಳ ಕಾಲ ಮಳೆ ಬಂದರೆ ಸೋರುವ ಕಚೇರಿಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದ ಸಹಾಯಕ ಸಾರಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಬಹುದಿನಗಳ ಬೇಡಿಕೆಯಾದ ಹೊಸ ಕಟ್ಟಡಕ್ಕೆ ಬಳುವಳಿಯಾಗಿ ಆಧುನಿಕ ಟೆಸ್ಟ್‌ ಟ್ರಾಕ್‌ ಕೂಡ ಸೇರ್ಪಡೆಯಾಗುತ್ತಿದೆ. ಆದರೆ ಅನುದಾನದ ಕೊರತೆಯಿಂದಾಗಿ ಕಟ್ಟಡ ಕಾಮಗಾರಿ ನಿಧಾನವಾಗುತ್ತಿದೆ. ಗುತ್ತಿಗೆದಾರರಿಗೆ ಬರಬೇಕಾದ ಬೃಹತ್‌ ಬಾಕಿ ಹಣ ಇನ್ನೂ ಬಿಡುಗಡೆಯಾಗದ ಕಾರಣ ಕಾಮಗಾರಿ ವಿಳಂಬ ಆಗುತ್ತಿದೆ ಎಂದು ಹೇಳಲಾಗುತ್ತಿದೆ.

ಸಹಾಯಕ ಪ್ರಾದೇಶಿಕಸಾರಿಗೆ ಅಧಿಕಾರಿಗಳ ಕಚೇರಿ ನಿರ್ಮಾಣ ಕಾರ್ಯ 2023 ರ ಮಾರ್ಚ್‌ ತಿಂಗಳಲ್ಲಿ ಪ್ರಾರಂಭವಾಯಿತು. ಹನ್ನೆರಡು ತಿಂಗಳ ಕಾಲಾವಧಿ ನಿಗದಿ ಪಡಿಸಲಾಗಿತ್ತು. ಆದರೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗದ ಕಾರಣ ಗುತ್ತಿಗೆದಾರರು ನಿರ್ಮಾಣ ಕಾರ್ಯಕ್ಕೆ ಕೊಂಚ ಕಾಲ ತಡೆ ಹಾಕಿದ್ದರು. ಸುಮಾರು ₹2.50 ಕೋಟಿ ಹಣ ಬಾಕಿ ಇರುವುದರಿಂದ ಕಾಮಗಾರಿ ಪೂರ್ಣಗೊಳಿಸಲು ಅವರು ನಿರಾಕರಿಸಿದ್ದರು. ಹಿರಿಯ ಅಧಿಕಾರಿಗಳು ಅವರ ಮನವೊಲಿಸಿ, ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ.

ADVERTISEMENT

ಈಚೆಗೆ ನಗರಕ್ಕೆ ಭೇಟಿ ನೀಡಿದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಕಚೇರಿಯ ಕಾಮಗಾರಿಗೆ ಹಣ ಬಜೆಟ್‌ನಲ್ಲಿ ನಿಗದಿಯಾಗಿದೆ. ತ್ರೈಮಾಸಿಕ ಅನುದಾನ ಬಿಡುಗಡೆಯಾಗಲಿದೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಒಂದು ವರ್ಷದ ಕಾಮಗಾರಿ ಎರಡು ವರ್ಷ ದಾಟಿದೆ. ಪೂರ್ಣ ಹಣ ಮಂಜೂರಾಗದ ಹೊರೆತು ನೂತನ ಕಟ್ಟಡದ ಕೀಯನ್ನು ಗುತ್ತಿಗೆದಾರರು ಸಾರಿಗೆ ಇಲಾಖೆಗೆ ನೀಡುವ ಬಗ್ಗೆ ಕೂಡ ಅನುಮಾನ ಇದೆ ಎಂದು ಮೂಲಗಳು ತಿಳಿಸಿವೆ.

ಸೀಜರ್‌ ಯಾರ್ಡ್‌ ನಿರ್ಮಾಣ: ರಸ್ತೆಯಲ್ಲಿ ಸಂಚರಿಸುವ ಅನಧಿಕೃತ ವಾಹನಗಳನ್ನು ಸಾರಿಗೆ ಅಧಿಕಾರಿಗಳು ವಶಪಡಿಸಿಕೊಳ್ಳುತ್ತಾರೆ. ನಂತರ ಅವುಗಳನ್ನು ಸಮೀಪದ ಪೊಲೀಸ್‌ ಠಾಣೆಯ ಸಮೀಪದಲ್ಲಿ ಇರಿಸಿ ಹೋಗುತ್ತಾರೆ. ಸಾರಿಗೆ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡ ವಾಹನಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಪೊಲೀಸ್‌ ಇಲಾಖೆಗೆ ಏಕೆ ಎಂದು ಪೊಲೀಸ್‌ ಅಧಿಕಾರಿಗಳು ಸದಾ ಅಪಸ್ವರ ಎತ್ತುತ್ತಾರೆ. ಆದ್ದರಿಂದ ವಶಪಡಿಸಿಕೊಂಡ ವಾಹನಗಳನ್ನು ಸಾರಿಗೆ ಇಲಾಖೆಯ ಅಧೀನದಲ್ಲಿಯೇ ಇಟ್ಟುಕೊಳ್ಳಲು ಸುಮಾರು ಎರಡೂವರೆ ಎಕರೆ ಪ್ರದೇಶದಲ್ಲಿ ಸೀಜರ್‌ ಯಾರ್ಡ್‌ ನಿರ್ಮಿಸಲಾಗುತ್ತಿದೆ ಎಂದು ಕಟ್ಟಡದ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡಿರುವ ಕಾರ್ಯಪಾಲಕ ಎಂಜಿನಿಯರ್‌ ಸೋಮಶೇಖರ್‌ ಮಾಹಿತಿ ನೀಡಿದ್ದಾರೆ.

ನಿರ್ಮಾಣ ಹಂತದಲ್ಲಿರುವ ಎಆರ್ ಟಿಒ ಕಚೇರಿ
ನೂತನ ಎಲೆಕ್ಟ್ರಾನಿಕ್‌ ಟ್ರಾಕ್‌ ನಿಂದಾಗಿ ಅರ್ಹರು ಉತ್ತೀರ್ಣರಾಗುತ್ತಾರೆ. ವಾಹನ ಚಾಲನೆ ಗೊತ್ತಿದ್ದವರು ಮಾತ್ರ ಪ್ರಮಾಣ ಪತ್ರ ಪಡೆಯಲು ಸಾಧ್ಯ.
–ರಾಜ್‌ಕುಮಾರ್‌, ಆಟೋ ಚಾಲಕರ ಸಂಘದ ಅಧ್ಯಕ್ಷ

ಎಆರ್‌ಟಿಒ ಕಚೇರಿಗೆ ಅಂತಿಮ ರೂಪ

ಸುಮಾರು ₹9 ಕೋಟಿ ವೆಚ್ಚದಲ್ಲಿ ಬೆಮಲ್‌ ನಗರದ ಕ್ರೀಡಾ ಸಂಕೀರ್ಣದ ಸಮೀಪದಲ್ಲಿ ನಿರ್ಮಾಣವಾಗುತ್ತಿರುವ ಎಆರ್‌ಟಿಒ ಕಚೇರಿಗೆ ಅಂತಿಮ ರೂಪ ನೀಡಲಾಗುತ್ತಿದೆ. ಅದರ ಜೊತೆಗೆ ಟ್ರಾಕ್‌ ಕೂಡ ನಿರ್ಮಾಣವಾಗುತ್ತಿದೆ. ದ್ವಿಚಕ್ರ ವಾಹನಗಳಿಗೆ ಎಂಟು ಮಾದರಿಯ ಟ್ರಾಕ್‌ ಗಳು ನಾಲ್ಕು ಚಕ್ರ ವಾಹನಗಳಿಗೆ ಕೂಡ ವಿಭಿನ್ನ ರೀತಿಯ ಟ್ರಾಕ್‌ ಗಳನ್ನು ಸಿದ್ಧಪಡಿಸಲಾಗಿದೆ. ಇಳಿಜಾರು ರೀತಿಯ ಟ್ರಾಕ್‌ ನಲ್ಲಿ ಸೆನ್ಸರ್‌ ಕೂಡ ಅಳವಡಿಸಲಾಗುತ್ತಿದೆ. ನಾಲ್ಕು ಚಕ್ರ ವಾಹನ ಸವಾರರು ಪರೀಕ್ಷೆಗೆ ಒಳಪಡುವಾಗ ಇಳಿಜಾರಿನ ಟ್ರಾಕ್‌ ನಲ್ಲಿ ನಿಧಾನವಾಗಿ ಹೋಗಬೇಕು. ಇಳಿಜಾರಿನಲ್ಲಿ ವಾಹನ ನಿಲ್ಲಿಸಿದಾಗ ಹಿಮ್ಮುಖವಾಗಿ ಚಲಿಸಿದರೆ ಸೆನ್ಸರ್‌ ಅದನ್ನು ಗಮನಿಸಿ ದಾಖಲಿಸುತ್ತದೆ. ಎಷ್ಟು ಪ್ರಮಾಣದಲ್ಲಿ ವಾಹನ ಹಿಂದಕ್ಕೆ ಚಲಿಸುತ್ತದೆಯೋ ಅಷ್ಟು ಅಂಕಗಳು ಕಡಿತಗೊಳ್ಳುತ್ತದೆ. ನಿರ್ಧಿಷ್ಟ ಅಂಕಗಳನ್ನು ಪಡೆಯದೆ ಇದ್ದರೆ ಸ್ವಯಂಚಾಲಿತವಾಗಿ ಸವಾರರ ಪರೀಕ್ಷೆಯಲ್ಲಿ ಅನುತ್ತೀರ್ಣನಾಗುತ್ತಾನೆ. ಇದರಲ್ಲಿ ಯಾವುದೇ ಶಿಫಾರಸ್ಸು ಮಾಡಲು ಸಾಧ್ಯವಿಲ್ಲ ಎಂದು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ನಯಾಜ್‌ ಪಾಷ ಹೇಳುತ್ತಾರೆ.

ದ್ವಿಚಕ್ರ ವಾಹನ ಸವಾರರು ಕೂಡ ಕಠಿಣವಾದ ಪರೀಕ್ಷೆಗೆ ಒಳಪಡಬೇಕಾಗುತ್ತದೆ. ವಾಹನ ಓಡಿಸಲು ಅಸಮರ್ಥರಾದರೆ ಚಾಲನಾ ಪರವಾನಿಗಿ ಪಡೆಯಲು ಅನರ್ಹರಾಗಿರುತ್ತಾರೆ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಇಂತಹ ಅತ್ಯಾಧುನಿಕ ಪರೀಕ್ಷಾ ಟ್ರಾಕ್‌ ಸಿದ್ದಪಡಿಸಲಾಗಿದೆ. ಇದು ಇಲಾಖೆಯ ಮಾರ್ಗಸೂಚಿಗೆ ಅನುಗುಣವಾಗಿದೆ ಎಂದು ಅವರು ವಿವರಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.