
ಕೆಜಿಎಫ್: ವಿಶ್ವವಿಖ್ಯಾತ ಚಿನ್ನದ ಗಣಿ (ಬಿಜಿಎಂಎಲ್) ಮುಚ್ಚಿ ಇಂದಿಗೆ (ಮಾರ್ಚ್ 1) ಕಾಲು ಶತಮಾನವಾಗಿದೆ. ಅಂದಿನಿಂದಲೂ ಇಂದಿನವರೆಗೂ ಗಣಿ ಪ್ರಾರಂಭ, ಕಾರ್ಮಿಕರ ಹಳೆ ಬಾಕಿ ಇತ್ಯರ್ಥ ಹಾಗೂ ಕಾಲೊನಿಗಳ ಅಭಿವೃದ್ಧಿ ಬಗ್ಗೆ ಚರ್ಚೆಗಳಾಗುತ್ತಿದೆಯೇ ವಿನಃ ಇತ್ಯರ್ಥವಾಗಿಲ್ಲ.
ಗಣಿ ಮುಚ್ಚಿನ ನಂತರ ಉಂಟಾದ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳು ಮಾತ್ರ ಇನ್ನೂ ಜೀವಂತವಾಗಿಯೇ ಇದೆ. ನಗರದ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿನ್ನದ ನಿಕ್ಷೇಪಗಳ ಜತೆಗೆ ಪೆಂಡಾಲಿಯಂ ಲೋಹ ಕೂಡ ಸಿಗುತ್ತದೆ ಎಂಬ ನಿರೀಕ್ಷೆಯಡಿ ಈಚೆಗೆ ಎಂಇಸಿಎಲ್ ಶೋಧ ನಡೆಸಿತು. ಅದರ ವರದಿ ಇನ್ನೂ ಅಧಿಕೃತವಾಗಿ ಹೊರಬಂದಿಲ್ಲ. ಚಿನ್ನ ತೆಗೆಯುವ ಕಾರ್ಯ ನಡೆಯುತ್ತದೆಯೇ ಇಲ್ಲವೇ ಎಂಬುದರ ಬಗ್ಗೆ ಕೂಡ ಇನ್ನೂ ಸ್ಪಷ್ಟನೆ ಇಲ್ಲ.
ಸೈನೈಡ್ ಗುಡ್ಡದಿಂದ ಚಿನ್ನ ತೆಗೆಯುವ ಸಲುವಾಗಿ ಜಾಗತಿಕ ಟೆಂಡರ್ ಕರೆಯುವ ಬಗ್ಗೆ ಮಾತ್ರ ಚರ್ಚೆ ನಡೆಯುತ್ತಿದೆ. ಅದೂ ಕೂಡ ಇನ್ನೂ ಚಾಲನೆಗೆ ಬಂದಿಲ್ಲ. 1880ರಲ್ಲಿ ಜಾನ್ ಟೇಲರ್ ತಮ್ಮ ಕಂಪನಿ ಮೂಲಕ ಆಧುನಿಕ ಗಣಿಗಾರಿಕೆಯನ್ನು ಪ್ರಾರಂಭಿಸಿ ಚಿನ್ನವನ್ನು ಉತ್ಪಾದನೆ ಮಾಡಲು ಪ್ರಯತ್ನಿಸಿದ ನಂತರ ಸುಮಾರು 125 ವರ್ಷಗಳ ಕಾಲ ಸುಮಾರು 800 ಟನ್ ಚಿನ್ನವನ್ನು ರಾಷ್ಟ್ರಕ್ಕೆ ನೀಡಿದ ಬಿಜಿಎಂಎಲ್ ಅನ್ನು 12ನೇ ಜೂನ್ 2000ರಂದು ಮುಚ್ಚಲು ಆದೇಶ ನೀಡಿತು.
ನಂತರ ಕಾರ್ಮಿಕ ಇಲಾಖೆ ಮಾರ್ಚ್ 1ರಿಂದ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲು ತೀರ್ಮಾನಿಸಿತು. ಕಾರ್ಮಿಕರಿಗೆ ವಿಶೇಷ ಭತ್ಯೆ ನೀಡಿ ಕೆಲಸದಿಂದ ವಜಾ ಮಾಡಲಾಯಿತು. ಅಂದಿನಿಂದ ನೂರಾರು ಹೋರಾಟಗಳು ಗಣಿಗಾರಿಕೆ ಪುನರುಜ್ಜೀವನಕ್ಕೆ ನಡೆದರೂ, ಪ್ರಯೋಜನವಾಗಿಲ್ಲ. 2006ರಲ್ಲಿ ಕೇಂದ್ರ ಸರ್ಕಾರ ಗಣಿ ಆಸ್ತಿಯನ್ನು ಜಾಗತಿಕ ಟೆಂಡರ್ ಮೂಲಕ ಹರಾಜು ಹಾಕಲು ಒಪ್ಪಿಗೆ ಸೂಚಿಸಿತು. ಆದರೆ, ಕಾರ್ಮಿಕ ಸಂಘಟನೆಗಳು ನ್ಯಾಯಾಲಯದ ಮೊರೆ ಹೋಗಿದ್ದರಿಂದ ಸರ್ಕಾರ ಮಟ್ಟದಲ್ಲಿ ಯಾವುದೇ ಕೆಲಸ ನಡೆಯಲಿಲ್ಲ. 2013ರಲ್ಲಿ ಸುಪ್ರೀಂ ಕೋರ್ಟ್ ಕೆಂದ್ರ ಸರ್ಕಾರದ ಸಂಪುಟ ಸಭೆ ತೆಗೆದುಕೊಂಡಿದ್ದ ನಿರ್ಣಯವನ್ನು ಎತ್ತಿ ಹಿಡಿಯಿತು.
ಆದರೆ, ನಷ್ಟದಲ್ಲಿರುವ ಕೇಂದ್ರ ಸರ್ಕಾರಿ ಉದ್ಯಮವನ್ನು ಪುನಃ ಆರಂಭಿಸಬೇಕಾದರೆ ಬೇಕಾದ ರಾಜಕೀಯ ಒತ್ತಡ ಅಥವ ಲಾಬಿ ಸಾಧ್ಯವಾಗಲಿಲ್ಲ. 2015ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಮೈನ್ಸ್ ಮತ್ತು ಮಿನರಲ್ ತಿದ್ದುಪಡಿ ಕಾಯಿದೆಯಡಿ ಈಗ ಚಿನ್ನದ ಉದ್ಯಮ ರಾಜ್ಯ ಸರ್ಕಾರದ ಸುಪರ್ದಿಗೆ ಬಂದಿದೆ. ರಾಜ್ಯ ಸರ್ಕಾರ ಚಿನ್ನದ ಗಣಿಯನ್ನು ಅರಂಭಿಸುತ್ತದೆಯೇ ಇಲ್ಲವೇ ಎಂಬುದರ ಬಗ್ಗೆ ಕೂಡ ಸ್ಪಷ್ಟನೆ ಇಲ್ಲ.
ಚಿನ್ನದ ಗಣಿ ಪುನರಾರಂಭದ ಆಸೆ ಕ್ಷೀಣಿಸುತ್ತಿರುವ ಇಂದಿನ ಸಂದರ್ಭದಲ್ಲಿ ಗಣಿಗೆ ಸೇರಿದ 12 ಸಾವಿರ ಎಕರೆ ಜಮೀನನ್ನು ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳಲು ಅಣಿಯಾಗುತ್ತಿದೆ. ರಾಜ್ಯ ಸರ್ಕಾರ ಕೆಐಎಡಿಬಿ ಮೂಲಕ ಕೈಗಾರಿಕೆ ಪ್ರದೇಶವನ್ನು ಪ್ರಾರಂಭಿಸಲು ಹೊರಟಿದೆ. ಆದರೆ, ಅದು ಇನ್ನೂ ಶೈಶಾವಸ್ಥೆಯಲ್ಲಿಯೇ ಇದೆ. ಇದುವರೆಗೂ ಟೆಂಡರ್ ಪ್ರಕ್ರಿಯೆ ನಡೆದು, ಕೈಗಾರಿಕೆ ಪ್ರಾಂಗಣ ಪ್ರಾರಂಭವಾಗುವ ಸೂಚನೆ ಕೂಡ ಇಲ್ಲ.
ಈ ಮಧ್ಯೆ ಚಿನ್ನದ ಗಣಿಗೆ ಸೇರಿದ ಪ್ರದೇಶದಲ್ಲಿ ರೈಲ್ವೆ ಬೋಗಿ ಸರ್ವಿಸ್ ಕೇಂದ್ರವನ್ನು ಸ್ಥಾಪಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಸಂಸದ ಮಲ್ಲೇಶಬಾಬು ಈಚೆಗೆ ಘೋಷಣೆ ಮಾಡಿದ್ದಾರೆ. ಒಟ್ಟಾರೆ ಸಾವಿರಾರು ವಿದ್ಯಾವಂತ ಯುವಕರು ಪ್ರತಿನಿತ್ಯ ಬೆಂಗಳೂರಿಗೆ ರೈಲಿನಲ್ಲಿ ಹೋಗಿ ಜೀವನ ಮಾಡುತ್ತಿರುವುದು ಸದಾ ರಾಜಕೀಯ ನಾಯಕರು ಎತ್ತುತ್ತಿರುವ ಪ್ರಶ್ನೆಯಾಗಿದೆ. ಆದರೆ, ಇಲ್ಲಿಯೇ ಪರ್ಯಾಯ ಉದ್ಯೋಗ ಸೃಷ್ಟಿ, ತಮಗೆ ಬರಬೇಕಾದ ಬಾಕಿ ಹಣದ ವಸೂಲಿ, ತಾವು ವಾಸ ಮಾಡುತ್ತಿರುವ ಮನೆಗಳನ್ನು ತಮ್ಮ ಹೆಸರಿಗೆ ಇಖಾತೆ ಮಾಡಿಕೊಡುವುದು ಸೇರಿದಂತೆ ಗಣಿ ಕಾರ್ಮಿಕರ ಬೇಡಿಕೆ ಇನ್ನೂ ಈಡೇರಲೇ ಇಲ್ಲ.
1880 ಜಾನ್ ಟೇಲರ ಕಂಪನಿ ಸ್ಥಾಪನೆ 1952ರಲ್ಲಿ ಮೈಸೂರು ಸರ್ಕಾರದಿಂದ ಚಿನ್ನದ ಗಣಿ ಖರೀದಿ 1969ರಲ್ಲಿ ಗಣಿ ಕೇಂದ್ರ ಸರ್ಕಾರದ ಸುಪರ್ದಿಗೆ 12.109 ಎಕರೆ ಜಮೀನು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.