
ಕೆಜಿಎಫ್: ಅಕ್ರಮವಾಗಿ ಸಿಲಿಂಡರ್ ರೀಫಿಲ್ಲಿಂಗ್ ಮಾಡುತ್ತಿದ್ದ ವ್ಯಾಪಾರಿಯೊಬ್ಬರನ್ನು ಬಂಧಿಸಿರುವ ಆ್ಯಂಡರ್‌ಸನ್‌ಪೇಟೆ ಠಾಣೆ ಪೊಲೀಸರು, ಅಂಗಡಿಯಲ್ಲಿದ್ದ ಗ್ಯಾಸ್ ರೀಫಿಲ್ಲಿಂಗ್‌ಗೆ ಬಳಸುತ್ತಿದ್ದ ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ.
ಆ್ಯಂಡರ್‌ಸನ್‌ಪೇಟೆಯ ಕಾರೋನೇಷನ್ ಟೌನ್‌ನಲ್ಲಿ ಅಕ್ರಮವಾಗಿ ಸಿಲಿಂಡರ್ ರೀಫಿಲ್ಲಿಂಗ್ ಮಾಡುತ್ತಿದ್ದ ಪಾಷ ಜಾನ್ (62) ಬಂಧಿತ ಆರೋಪಿ. ಎರಡು ಸಿಲಿಂಡರ್, ಗ್ಯಾಸ್ ರೀಫಿಲ್ಲಿಂಗ್ ಸ್ಟಾಂಡ್, ವಿದ್ಯುತ್ ತೂಕದ ಯಂತ್ರ, ಪೈಪ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ನಿರೀಕ್ಷಕ ರಘು ಈ ಕಾರ್ಯಾಚರಣೆಯಲ್ಲಿದ್ದರು.
ಜೂಜಾಟ: ಆ್ಯಂಡರ್‌ಸನ್‌ಪೇಟೆ ಮಾರುಕಟ್ಟೆಯಲ್ಲಿ ಜೂಜಾಟ ಆಡಿಸುತ್ತಿದ್ದ ಲೂರ್ದ್ ನಗರ ನಿವಾಸಿಗಳಾದ ಆಂತೋಣಿ (37) ಮತ್ತು ಅರುಣ್‌ಕುಮಾರ್ (28) ಅವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ₹2,100 ನಗದು ಮತ್ತು ಜೂಜಾಟಕ್ಕೆ ಬಳಸಿದ್ದ ಪುಸ್ತಕವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮದ್ಯ ವಶ: ತಾಲ್ಲೂಕಿನ ಬಳ್ಳೆಗೆರೆ ಗ್ರಾಮದ ಬಳಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಬಳ್ಳೆಗೆರೆ ನಿವಾಸಿ ಮಂಜುನಾಥ್ ಎಂಬಾತನನ್ನು ಆ್ಯಂಡರ್‌ಸನ್‌ಪೇಟೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಳಿ ಇದ್ದ ₹2,800 ಮೌಲ್ಯದ ಮದ್ಯದ ಪಾಕೆಟ್‌ಗಳು ಮತ್ತು ₹1,570 ನಗದು ವಶಕ್ಕೆ ಪಡೆಯಲಾಗಿದೆ.
ಕಾರ್ಯಾಚರಣೆಯಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ನವೀನ್, ಸಬ್ ಇನ್‌ಸ್ಪೆಕ್ಟರ್ ಮಂಜುನಾಥ್, ಎಎಸ್‌ಐ ಅಣ್ಣಪ್ಪ, ಸಿಬ್ಬಂದಿ ರಾಜೇಂದ್ರ, ಗೋಪಿ, ರಮೇಶ್ ಜಂಬಗಿ, ಸಂಪತ್ ಕುಮಾರ್, ಮನೋಹರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.