ADVERTISEMENT

ಕೆಜಿಎಫ್‌: ನಗರಸಭೆ ಬಿಲ್‌ ಪಾವತಿಯಲ್ಲಿ ಅವ್ಯವಹಾರ ಆರೋಪ

ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಟೀಕೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 7:52 IST
Last Updated 25 ಅಕ್ಟೋಬರ್ 2025, 7:52 IST
ಕೆಜಿಎಫ್‌ ನಗರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ಜಯಪಾಲ್‌ ಮಾತನಾಡಿದರು 
ಕೆಜಿಎಫ್‌ ನಗರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ಜಯಪಾಲ್‌ ಮಾತನಾಡಿದರು    

ಕೆಜಿಎಫ್‌: ರಾಬರ್ಟಸನ್‌ಪೇಟೆ ನಗರಸಭೆಯಲ್ಲಿ ನಡೆದಿರುವ ಬಿಲ್‌ ಪಾವತಿ ವ್ಯವಹಾರಕ್ಕೆ ನಡೆದ ಚರ್ಚೆಯಲ್ಲಿ ಆರ್‌ಪಿಐ, ಸಿಪಿಎಂ, ಕಾಂಗ್ರೆಸ್‌ ಸದಸ್ಯರು, ನಗರಸಭೆ ಅಧ್ಯಕ್ಷೆ ಮತ್ತು ಅಧಿಕಾರಿಗಳ ವಿರುದ್ಧ ತೀವ್ರ ಟೀಕೆ ಮಾಡಿದ ಘಟನೆ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ನಡೆಯಿತು.

ನಗರಸಭೆಯಲ್ಲಿ ನಡೆದಿರುವ ಬಹುತೇಕ ಆರ್ಥಿಕ ವ್ಯವಹಾರಗಳ ಪೈಕಿ ಹೆಚ್ಚಿನ ಬಿಲ್‌ಗಳನ್ನು ಭರತ್‌ ಎಂಟರ್‌ಪ್ರೈಸಸ್‌ ಮತ್ತು ಕಿಸಾನ್‌ ಎಂಟರ್‌ ಪ್ರೈಸಸ್‌ಗಳಿಗೆ ಲಕ್ಷಾಂತರ ರೂಪಾಯಿ ನೀಡಲಾಗಿದೆ. ಭರತ್‌ ಎಂಟರ್‌ಪ್ರೈಸಸ್‌ ಬೀದಿ ದೀಪಗಳ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುತ್ತಿಲ್ಲ. ಅವರು ನಗರಸಭೆಯ ನಿಯಂತ್ರಣದಲ್ಲಿ ಇಲ್ಲ. ಅವರು ನಗರಸಭೆಯನ್ನು ನಿಯಂತ್ರಿಸುತ್ತಿದ್ದಾರೆ. ವಾರ್ಡ್‌ಗಳಲ್ಲಿ ಸೊಳ್ಳೆಗಳ ಕಾಟ ಜಾಸ್ತಿಯಾಗಿದೆ. ರೋಗದಿಂದ ಸಾಯುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಆದರೆ, ಸೊಳ್ಳೆ ನಿವಾರಕ ಕ್ರಮಗಳನ್ನು ಕೈಗೊಂಡಿಲ್ಲ. ಔಷಧಗಳ ಖರೀದಿ ಮಾತ್ರ ಪ್ರತಿ ತಿಂಗಳು ನಡೆಯುತ್ತಿದೆ. ನಗರಸಭೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಮಾಜಿ ಶಾಸಕ ಎಸ್‌.ರಾಜೇಂದ್ರನ್‌, ಸಿಪಿಎಂನ ಕೆ.ತಂಗರಾಜ್‌ ಮತ್ತು ಕಾಂಗ್ರೆಸ್‌ನ ಜಯಪಾಲ್‌ ಚರ್ಚೆಯಲ್ಲಿ ಆರೋಪಿಸಿದರು.

ಬೆಮಲ್‌ನಿಂದ ಬಂದ ₹14 ಕೋಟಿ ಮತ್ತು ಬಿಜಿಎಂಎಲ್‌ನಿಂದ ಬಂದ ₹4.9 ಕೋಟಿ ಹಣದ ಬಹುಪಾಲನ್ನು ಭರತ್‌ ಭರತ್‌ ಎಂಟರ್‌ಪ್ರೈಸಸ್‌ಗೆ ಕೊಟ್ಟಿದ್ದೀರಿ. ಅವರು ನಗರದಲ್ಲಿ ದೀಪದ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಎಸ್‌ಪಿ ಕಚೇರಿಯಿಂದ ಲೋಕೋಪಯೋಗಿ ಅತಿಥಿ ಗೃಹದವರೆಗೂ ಬೀದಿ ದೀಪಗಳೇ ಇಲ್ಲ. ಮೈನಿಂಗ್‌ ಪ್ರದೇಶದ ಬಹುತೇಕ ಜಾಗ ಕತ್ತಲಲ್ಲಿ ಮುಳುಗಿದೆ ಎಂದು ತಂಗರಾಜ್‌ ದೂರಿದರು.

ADVERTISEMENT

ಹುಲ್ಲು ಮಾರುಕಟ್ಟೆಯನ್ನು ತೆರವುಗೊಳಿಸುತ್ತಿರುವ ಬಗ್ಗೆ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆಯಿತು. ಸದಸ್ಯರ ಗಮನಕ್ಕೆ ಬಾರದೆ ತೆರವು ಕಾರ್ಯಕ್ರಮ ನಡೆಯುತ್ತಿದೆ. ಅಲ್ಲಿನ ವರ್ತಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ಕಟ್ಟಡ ಒಡೆದ ಮಣ್ಣನ್ನು ಕೂಡ ಮಾರಾಟ ಮಾಡಲಾಗುತ್ತಿದೆ. ಯೋಜನಾ ವರದಿಯನ್ನು ತಯಾರು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಅದರ ಮಾಹಿತಿಯನ್ನು ಕೂಡ ನಗರಸಭೆ ಸದಸ್ಯರಿಗೆ ನೀಡುತ್ತಿಲ್ಲ. ಎಲ್ಲವೂ ಕದ್ದುಮುಚ್ಚಿ ನಡೆಯುತ್ತಿದೆ ಎಂದು ಹಲವು ಸದಸ್ಯರು ದೂರಿದರು.

ಸರ್ಕಾರಿ ಸ್ವತ್ತು ಕಾಪಾಡುವುದು ನಗರಸಭೆ ಕರ್ತವ್ಯ. ಸಭೆ ನಡೆಯುವುದು ಸ್ವಲ್ಪ ತಡವಾಗಿದ್ದರಿಂದ ಒತ್ತುವರಿ ತೆರವು ಮಾಡಲಾಗುತ್ತಿದೆ. ಸಾವಿರಾರು ಜನರಿಗೆ ಅನುಕೂಲವಾಗುತ್ತದೆ. ಎಲ್ಲರೂ ಸಹಕಾರ ಕೊಡಬೇಕೆಂದು ಆಯುಕ್ತ ಆಂಜನೇಯ ಮನವಿ ಮಾಡಿದರು.

ಹುಲ್ಲು ಮಾರುಕಟ್ಟೆಯಲ್ಲಿ ಬೋಗಸ್‌ ಆಗಿದೆ. ವರ್ತಕರ ಬಳಿ ಇರುವ ಹತ್ತು ಸಾವಿರದ ರಸೀತಿ ಕೂಡ ಬೋಗಸ್‌ ಆಗಿದೆ. ಅಲ್ಲಿ ವರ್ತಕರು ಯಾರೂ ಇಲ್ಲ. ಪಾರ್ಕಿಂಗ್‌ ವ್ಯವಸ್ಥೆಗಾಗಿ ತೆರವುಗೊಳಿಸಲಾಗುತ್ತಿದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ವಳ್ಳಲ್‌ ಮುನಿಸ್ವಾಮಿ ತಿಳಿಸಿದರು.

ಹಸು ಮಾಂಸ ಅಂಗಡಿ ಮುಚ್ಚಿಸಿರುವ ವಿಚಾರವಾಗಿ ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. 120 ವರ್ಷದಿಂದ ಇರುವ ಅಂಗಡಿಯನ್ನು ಮುಚ್ಚಿಸಿದರೆ ಹೇಗೆ ಎಂದು ವಾಗ್ವಾದ ನಡೆಸಿದರು. ಸದಸ್ಯರಿಗೆ ಉತ್ತರಿಸಿದ ಆಯುಕ್ತ ಹಸು ಮಾಂಸದ ಅಂಗಡಿಗಳನ್ನು ನಾವು ಮುಚ್ಚಿಸಿಲ್ಲ. ಅದು ಮುಚ್ಚುವಲ್ಲಿ ನಗರಸಭೆ ಪಾತ್ರ ಏನೂ ಇಲ್ಲ ಎಂದು ಹೇಳಿದರು.

ಬಸ್‌ ನಿಲ್ದಾಣದಲ್ಲಿ ಮದ್ಯದ ಅಂಗಡಿಗಳಿಗೆ ಹೇಗೆ ಅನುಮತಿ ನೀಡಲಾಗಿದೆ. ಕೂಡಲೇ ಅವುಗಳಿಗೆ ನೀಡಿದ ಅನುಮತಿಯನ್ನು ರದ್ದುಗೊಳಿಸಬೇಕು. ನಗರಸಭೆಯ ಎನ್‌ಒಸಿ ಇಲ್ಲದೆ ಅಬಕಾರಿ ಇಲಾಖೆ ಹೇಗೆ ಮದ್ಯದ ಅಂಗಡಿಗೆ ಅನುಮತಿ ನೀಡಲು ಸಾಧ್ಯ ಎಂದು ಎಸ್.ರಾಜೇಂದ್ರನ್‌ ಪ್ರಶ್ನಿಸಿದರು.

ಬಸ್‌ ನಿಲ್ದಾಣದಲ್ಲಿರುವ ಮದ್ಯದ ಅಂಗಡಿಗಳ ಲೈಸೆನ್ಸ್‌ ರದ್ದು ಮಾಡಲು ಜಿಲ್ಲಾಧಿಕಾರಿಗಳು ಅಬಕಾರಿ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಲೈಸೆನ್ಸ್‌ ರದ್ದು ಮಾಡಲು ನಗರಸಭೆಯಿಂದ ಕೂಡ ಅಬಕಾರಿ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದರು.

ನಗರಸಭೆಯ ಬಸ್‌ ನಿಲ್ದಾಣವನ್ನು ನವೀಕರಣ ಮಾಡಲು ಯೋಜನಾ ವರದಿಯನ್ನು ತಯಾರು ಮಾಡಲಾಗುತ್ತಿದೆ. ಅತ್ಯಾಧುನಿಕ ಬಸ್‌ ನಿಲ್ದಾಣ ನಿರ್ಮಾಣವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ನಗರಸಭೆ ಆವರಣದಲ್ಲಿರುವ ಅಂಬೇಡ್ಕರ್‌ ಪ್ರತಿಮೆಯನ್ನು ದುರಸ್ತಿ ಮಾಡಿ ಎಂದು ಸದಸ್ಯ ಕರುಣಾಕರ ಆಗ್ರಹಿಸಿದರು. ಬೀದಿ ನಾಯಿಗಳನ್ನು ನಿಯಂತ್ರಿಸಬೇಕು ಎಂದು ಪ್ರವೀಣ್‌ ಒತ್ತಾಯಿಸಿದರು. ವಾರ್ಡ್‌ಗಳಿಗೆ ಹೆಚ್ಚಿನ ಪೌರಕಾರ್ಮಿಕರನ್ನು ನೇಮಿಸಬೇಕು ಎಂದು ಮೋನಿಷಾ ಒತ್ತಾಯಿಸಿದರು.

ನಗರಸಭೆ ಅಧ್ಯಕ್ಷ ಇಂದಿರಾಗಾಂಧಿ, ಎಇಇ ಕೆ.ಗಂಗಾಧರ್‌ ಇದ್ದರು.

Cut-off box - ಶಾಸಕಿ ಮೇಲೆ ಅಸಮಾಧಾನ ನಗರಸಭೆಯಲ್ಲಿ ಲೂಟಿ ನಡೆಯುತ್ತಿದೆ. ಬಹುತೇಕ ನಗರಸಭೆ ಸದಸ್ಯರು ಧ್ವನಿ ಎತ್ತುತ್ತಿಲ್ಲ. ಇಂತಹವರನ್ನು ಜನ ಮುಂದಿನ ಚುನಾವಣೆಯಲ್ಲಿ ತಿರಸ್ಕರಿಸಬೇಕು. ಈ ನಗರಸಭೆಯನ್ನು ಸೂಪರ್‌ ಸೀಡ್‌ ಮಾಡಬೇಕು. ಆದರೆ ಶಾಸಕಿ ಈ ಕೆಲಸ ಮಾಡುವುದಿಲ್ಲ. ನಗರಸಭೆಯ ಸಭೆಯನ್ನು ಲೈವ್‌ ಪ್ರಚಾರ ಮಾಡಬೇಕು. ಇದರಿಂದ ಜನರಿಗೆ ನಗರಸಭೆಯ ಕಾರ್ಯವೈಖರಿ ಅರ್ಥವಾಗುತ್ತದೆ. ಈ ಸಂಬಂಧ ನನ್ನ ಕೋರಿಕೆಯನ್ನು ಮಾನ್ಯಮಾಡಿಲ್ಲ ಎಂದು ಮಾಜಿ ಶಾಸಕ ಎಸ್‌.ರಾಜೇಂದ್ರನ್‌ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.