
ಬಂಧನ (ಸಾಂದರ್ಭಿಕ ಚಿತ್ರ)
ಕೆಜಿಎಫ್: ನಂದಿನಿ ಸೇರಿದಂತೆ ಹಲವು ಬ್ರಾಂಡ್ ಕಂಪನಿಗಳ ಕಲಬೆರಕೆ ಹಾಲನ್ನು ತಯಾರಿಸುತ್ತಿದ್ದ ಎಂಟು ಮಂದಿಯನ್ನು ಆಂಡರಸನ್‌ಪೇಟೆ ಪೊಲೀಸರು ಬುಧವಾರ ರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿಸಿ, ಕಲಬೆರೆಕೆಗೆ ಉಪಯೋಗಿಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಆಂಧ್ರ ಮೂಲದವರಾದ ವೆಂಕಟೇಶಪ್ಪ (50), ಬಾಲಾಜಿ (35), ದಿಲೀಪ್ (25), ಬಾಲರಾಜ್ (33), ಮನೋಹರ್ (28), ಕಾರ್ತಿಕ್ (29), ಮನೋಜ್ (22) ಮತ್ತು ಮಂಜುನಾಥ್ (55) ಬಂಧಿತ ಆರೋಪಿಗಳು.
ದಾಳಿ ವೇಳೆ 500 ಗ್ರಾಂ ನಂದಿನ ಹಾಲಿನ ಪುಡಿಯ 350 ಪಾಕೆಟ್, ಒಂದು ಕೆಜಿ ತೂಕದ 40 ಪಾಕೆಟ್, ಮಿಲೆಟ್ ಮಿಲ್ಕ್ ಲಡ್ಡು 12 ಪಾಕೆಟ್, 500 ಗ್ರಾಂ ಸಾಮರ್ಥ್ಯದ 7 ಬೆಲ್ಲದ ಪಾಕೆಟ್, 900 ಪಾಕೆಟ್ ಪಾಮ್ ಆಯಿಲ್, ಎರಡು ಮಿಕ್ಸಿ, 38 ಲೀಟರ್ ಸಾಮರ್ಥ್ಯದ 51 ಹಾಲಿನ ಕ್ಯಾನ್, ಹಾಲು ಸರಬರಾಜು ಮಾಡುತ್ತಿದ್ದ ನಾಲ್ಕು ಚಕ್ರದ ಎರಡು ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ನಗರದ ಹೊರವಲಯದ ಬಳ್ಳಗೆರೆ ಗ್ರಾಮದ ತೋಟದ ಮನೆಯಲ್ಲಿ ಅಕ್ರಮವಾಗಿ ನಕಲಿ ಹಾಲು ತಯಾರು ಮಾಡಲಾಗುತ್ತಿದೆ ಎಂಬ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದರು. ಹಾಲಿನ ಪುಡಿ, ಪಾಮ್ ಆಯಿಲ್ ಹಾಗೂ ರಾಸಾಯನಿಕ ವಸ್ತುಗಳನ್ನು ಉಪಯೋಗಿಸಿಕೊಂಡು ಹಾಲು ತಯಾರು ಮಾಡಲಾಗುತ್ತಿತ್ತು. ಒಂದು ಲೀಟರ್ ಮಿಶ್ರಣದಿಂದ ಇಪ್ಪತ್ತು ಲೀಟರ್ ಹಾಲು ತಯಾರು ಮಾಡಲಾಗುತ್ತಿತ್ತು. ಹೀಗೆ ತಯಾರು ಮಾಡಿದ ಹಾಲನ್ನು ಬೇತಮಂಗಲ ಸೇರಿದಂತೆ ಇತರ ಪ್ರದೇಶದ ಡೈರಿಗಳಿಗೆ ಸರಬರಾಜು ಮಾಡಲಾಗುತ್ತಿತ್ತು ಎಂದು ತಿಳಿಸಿದರು.
ಸ್ಥಳದಲ್ಲಿ ನಂದಿನಿ ಸಂಸ್ಥೆ ಹೊರಗಡೆ ಮಾರಾಟ ಮಾಡದ ಹಾಲಿನ ಪೌಡರ್ ಹಾಗೂ ಅಂಗನವಾಡಿ ಕೇಂದ್ರಕ್ಕೆ ನೀಡಲಾಗುವ ಪೌಷ್ಠಿಕ ಆಹಾರದ ಪಾಕೆಟ್‌ಗಳು ಆರೋಪಿಗಳ ಬಳಿಗೆ ಹೇಗೆ ಬಂದಿತು. ಇದರಲ್ಲಿ ಯಾರಾದರೂ ಸರ್ಕಾರಿ ನೌಕರರು ಶಾಮೀಲಾಗಿದ್ದಾರೆಯೇ ಎಂಬುದರ ಬಗ್ಗೆ ಕೂಡ ತನಿಖೆ ನಡೆಸಲಾಗುತ್ತಿದೆ ಎಂದರು.
ಡಿವೈಎಸ್‌ಪಿ ಲಕ್ಷ್ಮಯ್ಯ, ಸರ್ಕಲ್ ಇನ್‌ಸ್ಪೆಕ್ಟರ್‌ಗಳಾದ ಪಿ.ಎಂ.ನವೀನ್, ಮಾರ್ಕೊಂಡಯ್ಯ, ಸಬ್ ಇನ್‌ಸ್ಪೆಕ್ಟರ್‌ಗಳಾದ ಮಂಜುನಾಥ್, ಅಣ್ಣಪ್ಪ, ಸಿಬ್ಬಂದಿಗಳಾದ ರಾಜೇಂದ್ರ, ವೇಣುಗೋಪಾಲ್, ಲೋಕೇಶ್, ಗೋಪಿ, ರಮೇಶ್, ಈರಪ್ಪ ಜಂಬಗಿ, ರವಿಕುಮಾರ್, ಮನೋಹರ್ ಅವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.