ADVERTISEMENT

ಕೆಜಿಎಫ್: ನಗರಸಭೆ ನಿರ್ಲಕ್ಷ್ಯದಿಂದ ಬಿಡಾಡಿ ದನಗಳ ತಾಣವಾದ ಪೈಲಟ್ಸ್‌ ಸರ್ಕಲ್

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 7:00 IST
Last Updated 19 ಜನವರಿ 2026, 7:00 IST
ಕೆಜಿಎಫ್‌ ಫೈಲೈಟ್ಸ್‌ ವೃತ್ತವನ್ನು ಸುತ್ತುವರೆದಿರುವ ಬಿಡಾಡಿ ದನಗಳು
ಕೆಜಿಎಫ್‌ ಫೈಲೈಟ್ಸ್‌ ವೃತ್ತವನ್ನು ಸುತ್ತುವರೆದಿರುವ ಬಿಡಾಡಿ ದನಗಳು   

ಕೆಜಿಎಫ್‌: ನಗರ ಪ್ರಮುಖ ವೃತ್ತವಾದ ಪೈಲೈಟ್ಸ್‌ ವೃತ್ತವನ್ನು ಈಚೆಗೆ ನಗರಸಭೆ ಸುಮಾರು ₹10 ಲಕ್ಷ ವೆಚ್ಚದಲ್ಲಿ ಆಧುನೀಕರಿಸಿದರೂ, ವೃತ್ತದ ಸುತ್ತಮುತ್ತಲಿನ ಪರಿಸರ ವೃತ್ತದ ಅಂದವನ್ನು ಹಾಳು ಮಾಡಿದೆ.

ಫೈಲೈಟ್ಸ್‌ ಸರ್ಕಲ್‌ ಎಂದೇ ಖ್ಯಾತಿಯಾಗಿರುವ ವೃತ್ತವು ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಕೆನಡೀಸ್‌, ಸ್ವರ್ಣ ಭವನ, ಎಸ್‌ಪಿ ಕಚೇರಿ. ರಾಬರ್ಟಸನ್‌ಪೇಟೆ ಮತ್ತು ಬಂಗಾರಪೇಟೆ ಈ ಐದು ರಸ್ತೆಗಳಿಗೆ ಹೋಗಬೇಕಾದರೆ ಈ ವೃತ್ತದ ಮೂಲಕವೇ ಹಾದು ಹೋಗಬೇಕು. ಈ ಸರ್ಕಲ್‌ ಪಶ್ಚಿಮಕ್ಕೆ ಬ್ರಿಟಿಷರೂ ಸೇರಿದಂತೆ ಇತರ ಯೂರೋಪಿಯನ್ನರು ವಾಸವಿದ್ದ ಬಂಗಲೆಗಳಿವೆ. ಪೂರ್ವಕ್ಕೆ ಕಾರ್ಮಿಕರ ಕಾಲೊನಿ  ನಿರ್ಮಾಣವಾಗಿದ್ದವು. ಬ್ರಿಟಷ್‌ ಅಧಿಕಾರಿಗಳಿಗೆ ಸೀಮಿತವಾಗಿದ್ದ ಬಿಜಿಎಂಎಲ್‌ ಶಾಲೆ ಕೂಡ ಅನತಿ ದೂರದಲ್ಲಿದೆ. ಯೂರೋಪಿಯನ್ನರ ಪ್ರದೇಶಕ್ಕೆ ಫೈಲೈಟ್ಸ್‌ ವೃತ್ತವೇ ಹೆಬ್ಬಾಗಿಲಾಗಿತ್ತು. ಬ್ರಿಟಿಷರ ಮನೆಯಲ್ಲಿ ಕೆಲಸ ಮಾಡುವವರನ್ನು ಬಿಟ್ಟು ಇತರರು ಈ ಪ್ರದೇಶಗಳಲ್ಲಿ ಅಡ್ಡಾಡುವಂತಿರಲಿಲ್ಲ ಎಂಬುದು ಹಿರಿಯರ ಮಾತಾಗಿದೆ. ‌‌

ವೃತ್ತದ ಪ್ರಾಮುಖ್ಯತೆಯನ್ನು ಮನಗಂಡು ನಗರಸಭೆ ಈಚೆಗೆ ಸುಮಾರು ₹10 ಲಕ್ಷ ವೆಚ್ಚದಲ್ಲಿ ಐ ಲವ್‌ ಕೆಜಿಎಫ್‌ ಎಂಬ ವಿದ್ಯುತ್‌ ನಾಮಫಲಕವನ್ನು ಹಾಕಿತ್ತು. ಅದು ಸಾಕಷ್ಟು ಪ್ರಸಿದ್ಧಿಯನ್ನು ಪಡೆಯಿತು. ಆದರೆ, ಸುತ್ತಮುತ್ತಲಿನ ವಾತಾವರಣವನ್ನು ಸರಿಪಡಿಸದೆ, ಕೇವಲ ನಾಮಫಲಕ ಹಾಕಲಾಗಿದೆ ಎಂಬ ಟೀಕೆಗಳು ಸಾರ್ವಜನಿಕವಾಗಿ ಕೇಳಿ ಬರುತ್ತಿವೆ.

ADVERTISEMENT

ಮೊದಲು ಫೈಲೈಟ್ಸ್‌ ವೃತ್ತವನ್ನು ಕೇಂದ್ರ ಸರ್ಕಾರಿ ಸ್ವಾಮ್ಯದ ಬೆಮಲ್‌ ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸಿತ್ತು. ಎರಡು ಕಡೆ ಸುಂದರವಾದ ಉದ್ಯಾನ, ಬ್ಯಾರಿಕೇಡ್‌, ಪ್ರಯಾಣಿಕರು ಕುಳಿತುಕೊಳ್ಳಲು ಆಧುನಿಕ ಶೈಲಿಯ ಬಸ್‌ ನಿಲ್ದಾಣವನ್ನು ಕಟ್ಟಿತ್ತು. ಹಗಲು ರಾತ್ರಿ ಒಬ್ಬ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಿತ್ತು. ಆಗ ವೃತ್ತ ಈಗಿನಷ್ಟು ಸುಂದರವಾಗಿರದಿದ್ದರೂ, ಸುತ್ತಲಿನ ಪರಿಸರ ಉತ್ತಮವಾಗಿತ್ತು.  ಆಹ್ಲಾದಕರ ವಾತಾವರಣವನ್ನು ಅನುಭವಿಸಲು ಸುತ್ತಮುತ್ತಲಿನ ನಿವಾಸಿಗಳು ಸಹ ಬರುತ್ತಿದ್ದರು. ಆದರೆ, ಬೆಮಲ್‌ ಆರ್ಥಿಕ ವೆಚ್ಚವನ್ನು ಕಡಿಮೆ ಮಾಡಿಕೊಳ್ಳುವ ದೃಷ್ಟಿಯಿಂದ ನಿಧಾನವಾಗಿ ವೃತ್ತದ ಉಸ್ತುವಾರಿಯಿಂದ ಕೈತೊಳೆದುಕೊಂಡಿತು. ನಗರಸಭೆಯೇ ಎಲ್ಲವನ್ನೂ ನಿರ್ವಹಿಸುತ್ತದೆ ಎಂದು ಬೆಮಲ್‌ ಅಧಿಕಾರಿಗಳು ಹೇಳಿದ್ದರು.

ಅಂದ ಕಳೆದುಕೊಂಡಿರುವ ಬಸ್‌ ನಿಲ್ದಾಣ

ಆದರೆ, ನಗರಸಭೆ ಸೂಕ್ತ ಉಸ್ತುವಾರಿ ವಹಿಸದೆ ಇರುವುದರಿಂದ ಉದ್ಯಾನ ಇಂದು ಪೊದೆ ಮತ್ತು ಮುಳ್ಳುಗಳಿಂದ ತುಂಬಿದೆ. ಬಸ್‌ ನಿಲ್ದಾಣ ಅಂದ ಕಳೆದುಕೊಂಡಿದೆ. ನಿಲ್ದಾಣದಲ್ಲಿ ಕುಳಿತುಕೊಳ್ಳಲು ಹಾಕಿದ್ದ ಗ್ರಾನೈಟ್‌ ಕಲ್ಲುಗಳನ್ನು ಕಳ್ಳರು ಅಪಹರಣ ಮಾಡಿದ್ದಾರೆ. ಬಿಜಿಎಂಎಲ್‌ ಕಾರ್ಮಿಕನ ಪುತ್ಥಳಿ ಕೂಡ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ವೃತ್ತದ ಸುತ್ತಲೂ ಇರುವ ಲೋಕೋಪಯೋಗಿ ಇಲಾಖೆಯ ರಸ್ತೆಗಳು ಹಳ್ಳದಿಂದ ತುಂಬಿದೆ. ಸದಾ ಬಿಡಾಡಿ ದನಗಳು ರಸ್ತೆಗಳನ್ನು ಅತಿಕ್ರಮಿಸಿಕೊಂಡಿರುತ್ತವೆ. ಉತ್ತಮವಾದ ಸರ್ಕಲ್‌ ಹೇಗೆ ಅಧಿಕಾರಿಗಳ ಆಸಡ್ಡೆಗೆ ಒಳಗಾಗಿದೆ ಎಂಬುದಕ್ಕೆ ಫೈಲೈಟ್ಸ್‌ ವೃತ್ತವೇ ಉದಾಹರಣೆ.

ಮುಳ್ಳು ಪೊದೆಗಳಿಂದ ಆವೃತಗೊಂಡ ಉದ್ಯಾನ
ಬಡಾವಣೆ ಹಿರಿಯರು ಸಂಜೆ ಸ್ನೇಹಿತರ ಜೊತೆ ಬಂದು ಹರಟೆ ಹೊಡೆಯುತ್ತಿದ್ದರು. ಅವರೊಂದಿಗೆ ಮೊಮ್ಮಕ್ಕಳು ಕೂಡ ಬರುತ್ತಿದ್ದರು. ಈಗ ಯಾವುದೂ ಇಲ್ಲ. ದೀಪ ಹಾಕಿದರೆ ಸಾಲದು ಪಾರ್ಕ್‌ ಕೂಡ ಅಭಿವೃದ್ಧಿಪಡಿಸಬೇಕು.
ರಾಮಚಂದ್ರನ್‌ ನಿವಾಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.