ADVERTISEMENT

ಕೆಜಿಎಫ್ ಹೊಸ ತಾಲ್ಲೂಕು: ರೈತರಿಗೆ ತಪ್ಪದ ಸಂಕಷ್ಟ

ಬಂಗಾರಪೇಟೆಯಲ್ಲಿಯೇ ಉಳಿದ ಮುಖ್ಯ ಕಚೇರಿಗಳು

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 7:42 IST
Last Updated 15 ಜುಲೈ 2024, 7:42 IST
ಕೆಜಿಎಫ್ ತಾಲ್ಲೂಕು ಆಡಳಿತ ಸೌಧ
ಕೆಜಿಎಫ್ ತಾಲ್ಲೂಕು ಆಡಳಿತ ಸೌಧ   

ಕೆಜಿಎಫ್: ಐದು ವರ್ಷಗಳ ಹಿಂದೆ ಬಂಗಾರಪೇಟೆ ತಾಲ್ಲೂಕಿನಿಂದ ಬೇರ್ಪಟ್ಟು ಕೆಜಿಎಫ್ ಹೊಸ ತಾಲ್ಲೂಕಾಗಿ ರೂಪುಗೊಂಡಿದೆ. ಆದರೆ, ಅಲ್ಲಿಂದ ಕೊಂಡಿ ಕಳಚಿಕೊಂಡ ಮೇಲೂ ಇನ್ನೂ ಬಂಗಾರಪೇಟೆಯಲ್ಲೇ ಹಲವು ಇಲಾಖೆಗಳು ಉಳಿದಿವೆ. ಹಾಗಾಗಿ, ಸಾರ್ವಜನಿಕರು ವಿಶೇಷವಾಗಿ ರೈತರು ತೊಂದರೆ ಎದುರಿಸುವಂತಾಗಿದೆ.

ಕೆಜಿಎಫ್ ತಾಲ್ಲೂಕು ಆಗಿ ರೂಪುಗೊಂಡ ಸುದ್ದಿ ಜನರಲ್ಲಿ ಸಂತಸ ಮೂಡಿತ್ತು. ಏಕೆಂದರೆ ರೈತರು ತಮ್ಮ ದಾಖಲೆಗಳಿಗಾಗಿ ಗಡಿಭಾಗದ ಬಂಗಾರಪೇಟೆಗೆ ಹೋಗಬೇಕಿತ್ತು. ಕೆಜಿಎಫ್ ತಾಲ್ಲೂಕು ಆದರೆ ತಮಗೆ ಬೇಕಾದ ದಾಖಲೆಗಳು ಇಲ್ಲೇ ದೊರಕುತ್ತವೆ, ಬೇಕಾದ ಅಧಿಕಾರಿಗಳು ಲಭ್ಯವಾಗುತ್ತಾರೆ ಎಂಬ ಸಂತಸ ಅವರದ್ದಾಗಿತ್ತು. ಆದರೆ, ಕೆಲ ಇಲಾಖೆಗಳು ಮಾತ್ರ ಕೆಜಿಎಫ್ ತಾಲ್ಲೂಕಿಗೆ ವರ್ಗಾವಣೆಯಾಗಿ ಉಳಿದ ಇಲಾಖೆಗಳು ಇನ್ನೂ ಬಂಗಾರಪೇಟೆಯಲ್ಲಿಯೇ ಉಳಿದವು. ಹಾಗಾಗಿ, ರೈತರ ಕಷ್ಟ ತಪ್ಪಲಿಲ್ಲ.

ರಾಜ್ಯ ಸರ್ಕಾರ 2018ರ ಅಕ್ಟೋಬರ್‌ನಲ್ಲಿ ಕೆಜಿಎಫ್ ಅನ್ನು ಹೊಸ ತಾಲ್ಲೂಕು ಆಗಿ ಘೋಷಿಸಿ ಆದೇಶ ಹೊರಡಿಸಿತು. ಇಲ್ಲಿನ ರಾಬರ್ಟನ್‌ಸನ್ ಪೇಟೆಯಲ್ಲಿ ಕೆಲ ಮೂಲಸೌಕರ್ಯ ಕಲ್ಪಿಸಿ, ಸುಮಾರು ₹ 10 ಕೋಟಿ ವೆಚ್ಚದಲ್ಲಿ ತಾಲ್ಲೂಕು ಆಡಳಿತ ಸೌಧವನ್ನೂ ನಿರ್ಮಿಸಲಾಯಿತು. ತಾಲ್ಲೂಕು ರಚನೆಯಾಗಿ ನಾಲ್ಕು ವರ್ಷದ ಬಳಿಕ ಅಂದರೆ ಕಳೆದ ವರ್ಷವಷ್ಟೇ ಅಂದಿನ ಕಂದಾಯ ಸಚಿವ ಆರ್. ಅಶೋಕ ಅವರಿಂದ ಆಡಳಿತ ಸೌಧಕ್ಕೆ ಉದ್ಘಾಟನೆ ಭಾಗ್ಯ ದೊರೆಯಿತು. ಅಂತೆಯೇ ಸಬ್ ರಿಜಿಸ್ಟ್ರಾರ್ ಕಚೇರಿ ಸೇರಿದಂತೆ ಎಲ್ಲ ಕಚೇರಿಗಳನ್ನೂ ಆಡಳಿತ ಸೌಧಕ್ಕೆ ವರ್ಗಾಯಿಸುವಂತೆ ಶಾಸಕಿ ರೂಪಕಲಾ ಮನವಿ ಮಾಡಿದ್ದರು.

ADVERTISEMENT

ಇದಕ್ಕೆ ಸ್ಪಂದನೆ ಎಂಬಂತೆ ಈಚೆಗಷ್ಟೇ ತಾಲ್ಲೂಕಿಗೆ ಸಬ್ ರಿಜಿಸ್ಟ್ರಾರ್ ಮತ್ತು ಲೋಕೋಪಯೋಗಿ ಇಲಾಖೆ ಕಚೇರಿ ಬಂದವು.  ಇದರ ಜತೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಅಬಕಾರಿ ಇಲಾಖೆ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ಕಂದಾಯ ಇಲಾಖೆಗಳೂ ಇಲ್ಲಿಗೆ ವರ್ಗಾವಣೆಯಾದವು. ಆದರೆ,  ರೈತರಿಗೆ ದಾಖಲೆ ಒದಗಿಸುವ ದಾಖಲೆ ವಿಭಾಗ ಮಾತ್ರ ಪೂರ್ಣಪ್ರಮಾಣದಲ್ಲಿ ಕೆಜಿಎಫ್ ತಾಲ್ಲೂಕಿಗೆ ವರ್ಗಾವಣೆಯಾಗಲಿಲ್ಲ.

ಹಾಗಾಗಿ ಕೆಲ ದಾಖಲೆಗಳು ಕೆಜಿಎಫ್‌ನಲ್ಲೂ  ಮತ್ತೆ ಕೆಲ ದಾಖಲೆಗಳು ಬಂಗಾರಪೇಟೆ ಕಚೇರಿಯಲ್ಲೂ ಉಳಿಯುವಂತಾಗಿದೆ. ತಮಗೆ ಬೇಕಾದ ದಾಖಲೆಗಳನ್ನು ಕೇಳಲು ರೈತರು ಕಂದಾಯ ಇಲಾಖೆಗೆ ತೆರಳಿದರೆ, ಇನ್ನೂ ಬಂದಿಲ್ಲ ಎಂದು ಬಂಗಾರಪೇಟೆಗೆ ಕಳಿಸುತ್ತಾರೆ. ಅಲ್ಲಿಗೆ (ಬಂಗಾರಪೇಟೆ) ಹೋಗಿ ಕೇಳಿದರೆ ಕೆಜಿಎಫ್‌ಗೆ ಕಳುಹಿಸಲಾಗಿದೆ ಎಂದು ಅಲ್ಲಿನ ಸಿಬ್ಬಂದಿ ವಾಪಸ್ ಕಳುಹಿಸುತ್ತಾರೆ. ಅತ್ತಲಿಂದ ಇತ್ತ, ಇತ್ತಲಿಂದ ಅತ್ತ ತಿರುಗಾಡಿ ರೈತರು ಹೈರಾಣಾಗುತ್ತಿದ್ದಾರೆ.

ಪ್ರಮುಖವಾಗಿ ಬೇಕಾಗಿದ್ದ ಸರ್ವೆ ಇಲಾಖೆ ಇನ್ನೂ ಬಂಗಾರಪೇಟೆಯಲ್ಲಿಯೇ ಇದೆ. ಅದೇ ರೀತಿ ಸಮಾಜ ಕಲ್ಯಾಣ ಇಲಾಖೆ ಕೂಡ ಬೇರ್ಪಡೆಯಾಗಿಲ್ಲ. ಎರಡೂ ತಾಲ್ಲೂಕುಗಳಿಗೂ ಸೇರಿ  ಸಮಾಜ ಕಲ್ಯಾಣ ಇಲಾಖೆಗೆ ಒಬ್ಬರೇ ಅಧಿಕಾರಿ ಇದ್ದಾರೆ. ತೋಟಗಾರಿಕೆ ಇಲಾಖೆಗೆ ಇನ್ನೂ ಜಾಗ ಹುಡುಕಲು ಸಾಧ್ಯವಾಗಿಲ್ಲ. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು ಬಂಗಾರಪೇಟೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ಇಲಾಖೆ ವರ್ಗಾವಣೆಯೇನೂ ಆಗಿದೆ. ಆದರೆ ರೆಗ್ಯುಲರ್ ವಿಭಾಗ ಮಾತ್ರ ಇನ್ನೂ ಬಂಗಾರಪೇಟೆಯಲ್ಲಿಯೇ ಇದೆ. ತಾಲ್ಲೂಕಿನ ಗಡಿಭಾಗದಲ್ಲಿ ಆಗಾಗ್ಗೆ ಉಂಟಾಗುವ ಆನೆಗಳ ಹಾವಳಿ ಬಗ್ಗೆ ಮಾಹಿತಿ ನೀಡಿಲು ರೈತರು ಗಡಿ ಭಾಗದಿಂದ ಬಂಗಾರಪೇಟೆಗೆ ಹೋಗಿ ದೂರು ಸಲ್ಲಿಸಬೇಕಾಗಿದೆ. ಸಿಟಿ ಸರ್ವೆ ಇಲಾಖೆ ಕೂಡ ಹೊಸ ತಾಲ್ಲೂಕಿಗೆ ವರ್ಗಾವಣೆಯಾಗಿಲ್ಲ.

ಎಲ್ಲಕ್ಕಿಂತಲೂ ಮಿಗಿಲಾಗಿ ಇಡಿ ಗ್ರಾಮೀಣ ಭಾಗದಲ್ಲಿ ನರೇಗಾ ಸೇರಿದಂತೆ ಕಾಮಗಾರಿಗಳನ್ನು ಮಾಡುವ ಜಿಲ್ಲಾ ಪಂಚಾಯಿತಿಯ ಉಪ ವಿಭಾಗ ಕೂಡ ಕೆಜಿಎಫ್ ತಾಲ್ಲೂಕಿಗೆ ಬಂದಿಲ್ಲ. ರೇಷ್ಮೆ ಇಲಾಖೆ ಕೂಡ ತಾಲ್ಲೂಕಿನಲ್ಲಿ ಇಲ್ಲ. ಕೆಜಿಎಫ್ ಹೊಸ ತಾಲ್ಲೂಕು ಆಗಿ ರಚನೆಯಾದರೂ, ಜನರ ಗೋಳು ಮಾತ್ರ ತಪ್ಪಲಿಲ್ಲ.

ಕೆಜಿಎಫ್‌ ತಾಲ್ಲೂಕಿನಲ್ಲಿ ನಿರ್ಮಾಣವಾಗಿ ಎರಡು ವರ್ಷವಾದರೂ ಉದ್ಘಾಟನೆಯಾಗದ ರೈತ ಸಂಪರ್ಕ ಕೇಂದ್ರ
ರೇಷ್ಮೆ ಸಹಾಯಕ ನಿರ್ದೇಶಕರ ಕಚೇರಿ ನಾಮಫಲಕ ಮಾತ್ರ ಇದೆ. ಕಚೇರಿ ಇನ್ನೂ ಬಂದಿಲ್ಲ
ಬೇರೆ ಇಲಾಖೆಗಳನ್ನು ಕೂಡಲೇ ವರ್ಗಾವಣೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ.
ನಾಗವೇಣಿ ತಹಶೀಲ್ದಾರ್
ಜಮೀನು ದಾಖಲೆ ಪಡೆಯಲು ಇನ್ನೂ ಬಂಗಾರಪೇಟೆ ಕೆಜಿಎಫ್‌ಗೆ ಸುತ್ತಾಡಬೇಕಾಗಿದೆ. ರೈತರಿಗೆ ಬೇಕಾದ ಇಲಾಖೆಯೇ ಬಂದಿಲ್ಲ.
ಶ್ರೀನಿವಾಸ್ ರೈತ ಕ್ಯಾಸಂಬಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.