ಕೋಲಾರ: ಕೋಲಾರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ (ಕೋಮುಲ್) ಆಡಳಿತ ಮಂಡಳಿ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ ಗಿಟ್ಟಿಸಿಕೊಳ್ಳಲು ಕಾಂಗ್ರೆಸ್, ಜೆಡಿಎಸ್–ಬಿಜೆಪಿ ಮೈತ್ರಿಕೂಟದಲ್ಲಿ ಕಸರತ್ತುಗಳು ನಡೆಯುತ್ತಿವೆ.
ಕೋಲಾರ ಈಶಾನ್ಯ ಕ್ಷೇತ್ರದಲ್ಲಿ ಸ್ಪರ್ಧೆ ವಿಚಾರವಾಗಿ ಜೆಡಿಎಸ್‌ನಲ್ಲಿ ಭಿನ್ನಮತ, ಗೊಂದಲ ಉಂಟಾಗಿದೆ. ಭಾನುವಾರ ಸಿಎಂಆರ್ ಶ್ರೀನಾಥ್ ನಿವಾಸದಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿದೆ. ಒಂದು ಗುಂಪು ಮಾಜಿ ನಿರ್ದೇಶಕ ವಡಗೂರು ಡಿ.ವಿ.ಹರೀಶ್ ಪರ ನಿಂತರೆ, ಮತ್ತೊಂದು ಗುಂಪು ಬ್ಯಾಲಹಳ್ಳಿ ಶಂಕರೇಗೌಡ ಪರ ಬ್ಯಾಟ್ ಬೀಸಿದೆ.
ಶ್ರೀನಿವಾಸಪುರ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಬೆಂಬಲಿಗರು ಈ ಬಾರಿ ಹೋಳೂರು ಹೋಬಳಿಗೆ ಪ್ರಾತಿನಿಧ್ಯ ಬೇಕೆಂದು ಪಟ್ಟು ಹಿಡಿದಿದ್ದಾರೆ. ಆದರೆ, ಸಂಸದ ಮಲ್ಲೇಶ್ ಬಾಬು, ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಹಾಗೂ ಸಿಎಂಆರ್ ಶ್ರೀನಾಥ್ ಹುತ್ತೂರು ಹೋಬಳಿಯ ಹರೀಶ್ ಪರ ನಿಂತಿದ್ದಾರೆ.
ಈ ಸಂದರ್ಭದಲ್ಲಿ ಹೋಳೂರು ಹೋಬಳಿ ಜೆಡಿಎಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಕಳೆದ ಬಾರಿ ಹುತ್ತೂರು ಹೋಬಳಿಗೆ ಅವಕಾಶ ನೀಡಿದ್ದೀರಿ. ಈ ಬಾರಿ ಹೋಳೂರು ಹೋಬಳಿಗೆ ಕೊಡಿ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ವೆಂಕಟಶಿವಾರೆಡ್ಡಿ ಗೆಲ್ಲಿಸಲು ಈ ಭಾಗದ ಮುಖಂಡರು, ಕಾರ್ಯಕರ್ತರು ಬಹಳಷ್ಟು ಕಷ್ಟಪಟ್ಟಿದ್ದಾರೆ’ ಎಂದಿದ್ದಾರೆ.
ಶಾಸಕ ವೆಂಕಟಶಿವಾರೆಡ್ಡಿ ಅವರ ಕೂಡ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಬ್ಯಾಲಹಳ್ಳಿ ಶಂಕರೇಗೌಡರನ್ನು ಅಭ್ಯರ್ಥಿಯನ್ನಾಗಿ ಮಾಡಲು ಹೋಳೂರು ಹೋಬಳಿಗೆ ಅವಕಾಶ ಗಿಟ್ಟಿಸಿಕೊಡಲು ಪ್ರಯತ್ನಿಸಿದ್ದಾರೆ. ಆದರೆ, ಮತ್ತೊಂದು ಗುಂಪು ಅದಕ್ಕೆ ಒಪ್ಪಲಿಲ್ಲ. ಕೊನೆಗೆ ಶಾಸಕರು ಗೆಲ್ಲುವ ಅಭ್ಯರ್ಥಿಗೆ ಕೊಡಿ ಎಂದು ಕೈತೊಳೆದುಕೊಂಡಿದ್ದಾರೆ. ಇದರಿಂದ ಹೋಳೂರು ಹೋಬಳಿ ಮುಖಂಡರು ಶಾಸಕರ ವಿರುದ್ಧವೇ ಸಿಟ್ಟಿಗೆದಿದ್ದಾರೆ. ಕೆಲವರು ಸಭೆಯಿಂದ ಹೊರನಡೆದರೆ, ಕೆಲವರು ಸಭೆಗೆ ಬಂದಿರಲಿಲ್ಲ.
ಕೋಲಾರ ಈಶಾನ್ಯ ಕ್ಷೇತ್ರಕ್ಕೆ ಮತ್ತೆ ವಡಗೂರು ಹರೀಶ್ ಹೆಸರು ಅಂತಿಮಗೊಳ್ಳುವ ಸಾಧ್ಯತೆ ಇದ್ದು, ಪಕ್ಷದ ವರಿಷ್ಠರ ಒಪ್ಪಿಗೆ ಪಡೆದು ಒಂದೆರಡು ದಿನಗಳಲ್ಲಿ ಘೋಷಿಸಲಿದ್ದಾರೆ.
ಈ ಕ್ಷೇತ್ರದಲ್ಲಿ 73 ಮತದಾರರಿದ್ದಾರೆ. ಹೋಳೂರು ಹೋಬಳಿಯಲ್ಲಿ ಸುಮಾರು 30 ಮತದಾರರಿದ್ದು, ಚುನಾವಣೆ ಕುತೂಹಲ ಮೂಡಿಸಿದೆ.
ಇನ್ನು ಮುಳಬಾಗಿಲು ಪೂರ್ವ ಕ್ಷೇತ್ರಕ್ಕೆ ಮಾಜಿ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್ ಹಾಗೂ ಪಶ್ಚಿಮ ಕ್ಷೇತ್ರಕ್ಕೆ ಬಿ.ವಿ.ಶಾಮೇಗೌಡ ಅವರನ್ನು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನಾಗಿ ಶಾಸಕ ಸಮೃದ್ಧಿ ಮಂಜುನಾಥ್ ಸಮ್ಮುಖದಲ್ಲಿ ಅಂತಿಮಗೊಳಿಸಲಾಗಿದೆ. ಪಕ್ಷದಲ್ಲಿ ಯಾವುದೇ ಒಡಕಿಲ್ಲ ಎಂದಿರುವ ಸಮೃದ್ಧಿ ಮಂಜುನಾಥ್, ಮೋಸ ಮಾಡಿದರೆ ಮುಲಾಜಿಲ್ಲದೆ ಗೇಟ್ ಪಾಸ್ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇತ್ತ ಡಿಸಿಸಿ ಬ್ಯಾಂಕ್‌ನ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಂತೆ ಕಾಂಗ್ರೆಸ್‌ನಲ್ಲಿ ಬಣ ಜಗಳ ಕೋಮುಲ್ ಚುನಾವಣೆಯಲ್ಲೂ ಮುಂದುವರಿದಿದೆ. ಕೆಲ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೇ ಎದುರಾಳಿಯಾಗುವ ಸಾಧ್ಯತೆ ಇದೆ.
ಕ್ಷೇತ್ರ ಮರುವಿಂಗಡಣೆ ವಿಚಾರವಾಗಿ ಆರಂಭದಲ್ಲೇ ಆಕ್ರೋಶದ ಧ್ವನಿ ಎತ್ತಿದ್ದ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರ ಕೋಪ ಇನ್ನೂ ತಣ್ಣಗಾಗಿಲ್ಲ. ಕೊನೆಯಲ್ಲಿ ಹೋರಾಟದ ಮೂಲಕ ಡೆಲಿಗೇಟ್ ಪಡೆದುಕೊಂಡಿರುವ ಅವರು ಬಂಗಾರಪೇಟೆ ಕ್ಷೇತ್ರದ ಅಭ್ಯರ್ಥಿ ಆಗಿದ್ದಾರೆ.
ಈಚೆಗೆ ಎಸ್.ಎನ್.ರೆಸಾರ್ಟ್‌ನಲ್ಲಿ ನಡೆದ ಸಭೆಯಲ್ಲಿ ಕೆಜಿಎಫ್ ತಾಲ್ಲೂಕಿಗೆ ಸಂಬಂಧಿಸಿದ ಡೆಲಿಗೇಟ್‌ಗಳನ್ನು ಆಹ್ವಾನಿಸಿದ್ದರು. ಆ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಮಾಜಿ ನಿರ್ದೇಶಕ ಜಯಸಿಂಹ ಕೃಷ್ಣಪ್ಪ ವಿರುದ್ಧ ಸ್ಪರ್ಧಿಸಲಿರುವ ಆ.ಮು.ಲಕ್ಷ್ಮಿನಾರಾಯಣ ಅವರನ್ನು ಬೆಂಬಲಿಸಲು ಹೇಳಿರುವುದು ಕುತೂಹಲ ಮೂಡಿಸಿದೆ. ಜಯಸಿಂಹ ಕೃಷ್ಣಪ್ಪ ಅವರು ಶಾಸಕ ಕೆ.ವೈ.ನಂಜೇಗೌಡ ಬೆಂಬಲಿಗ ಕೂಡ. ಹೀಗಾಗಿ, ಬಣಗಳ ನಡುವೆ ಮತ್ತೊಂದು ಸುತ್ತಿನ ಜಟಾಪಟಿಗೆ ವೇದಿಕೆ ಸಜ್ಜಾಗುತ್ತಿದೆ.
ಲಕೋಟೆ ಕಳಿಸಿರುವ ಎಚ್‌ಡಿಕೆ!
ಜೆಡಿಎಸ್ ವರಿಷ್ಠ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮುಚ್ಚಿದ ಲಕೋಟೆಯಲ್ಲಿ ಪತ್ರವೊಂದನ್ನು ಪಕ್ಷದ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಅವರಿಗೆ ಕಳಿಸಿಕೊಟ್ಟಿದ್ದಾರೆ. ಆ ಪತ್ರದಲ್ಲಿ ಕೋಮುಲ್ ಚುನಾವಣೆಗೆ ಸಂಬಂಧಿಸಿದಂತೆ ಯಾವ ಕ್ಷೇತ್ರದಲ್ಲಿ ಯಾರಿಗೆ ಅವಕಾಶ ಕಲ್ಪಿಸಿಕೊಡಬೇಕೆಂಬ ಮಾಹಿತಿ ಇದೆ. ಅದನ್ನು ಸ್ಥಳೀಯ ಜೆಡಿಎಸ್ ಮುಖಂಡರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸುವ ನಿರೀಕ್ಷೆ ಇದೆ.
ಕಾಂಗ್ರೆಸ್ ಬೆಂಬಲಿತರ ಪಟ್ಟಿ ಸಿದ್ಧ
ಕೋಮುಲ್ ಚುಕ್ಕಾಣಿ ಹಿಡಿಯಲು ಮತ್ತೊಮ್ಮೆ ಪ್ರಯತ್ನ ನಡೆಸಿರುವ ಕಾಂಗ್ರೆಸ್‌ನಲ್ಲಿ ಬೆಂಬಲಿತ ಅಭ್ಯರ್ಥಿಗಳ ಪಟ್ಟಿ ಬಹುತೇಕ ಅಂತಿಮಗೊಂಡಿದೆ. ಕೋಲಾರ ಈಶಾನ್ಯ ಕ್ಷೇತ್ರಕ್ಕೆ ಸೀಸಂದ್ರ ಗೋಪಾಲಗೌಡ ಕೋಲಾರ ವೇಮಗಲ್ ಕ್ಷೇತ್ರಕ್ಕೆ ಚಂಜಿಮಲೆ ರಮೇಶ್ ಹೆಸರು ಅಂತಿಮವಾಗಿದೆ. ಕೋಲಾರ ನೈರುತ್ಯ ಕ್ಷೇತ್ರಕ್ಕೆ ನಾಗನಾಳ ಸೋಮಣ್ಣ ಅವರನ್ನು ಇಳಿಸಲು ಮಾತುಕತೆ ನಡೆಯುತ್ತಿದೆ. ಮಾಲೂರಿನ ಎರಡು ಕ್ಷೇತ್ರಗಳಿಂದ ಕೋಚಿಮುಲ್ ಮಾಜಿ ಅಧ್ಯಕ್ಷ ಶಾಸಕ ಕೆ.ವೈ.ನಂಜೇಗೌಡ ಮಲಪನಹಳ್ಳಿ ಶ್ರೀನಿವಾಸ್ ಮುಳಬಾಗಿಲಿನ ಎರಡು ಕ್ಷೇತ್ರಗಳಿಂದ ಸರ್ವಜ್ಞಗೌಡ (ಪಶ್ಚಿಮ) ರಾಜೇಂದ್ರಗೌಡ (ಪೂರ್ವ) ಸ್ಪರ್ಧಿಸಲಿದ್ದಾರೆ. ಶ್ರೀನಿವಾಸಪುರದ ಒಂದು ಕ್ಷೇತ್ರಕ್ಕೆ ಮಾಜಿ ನಿರ್ದೇಶಕ ಹನುಮೇಶ್ ಹೆಸರು ಅಂತಿಮಗೊಂಡಿದ್ದು ಮತ್ತೊಂದು ಕ್ಷೇತ್ರದಿಂದ ಕೆ.ಕೆ.ಮಂಜು ಕಣಕ್ಕಿಳಿಯುವ ಸಾಧ್ಯತೆ ಇದೆ. ಕೆಜಿಎಫ್ ಕ್ಷೇತ್ರಕ್ಕೆ ಮಾಜಿ ನಿರ್ದೇಶಕ ಜಯಸಿಂಹ ಕೃಷ್ಣಪ್ಪ ಅಂತಿಮವಾಗಿದೆ. ಈ ಕ್ಷೇತ್ರದಿಂದ ಆ.ಮು.ಲಕ್ಷ್ಮಿನಾರಾಯಣ ಕೂಡ ಸ್ಪರ್ಧಿಸುವ ಸಾಧ್ಯತೆ ಇದೆ. ಹೋರಾಟ ನಡೆಸಿ ಈಚೆಗಷ್ಟೇ ಡೆಲಿಗೇಟ್ ಪಡೆದುಕೊಂಡಿರುವ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಬಂಗಾರಪೇಟೆ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಮಹಿಳಾ ಎರಡು ಕ್ಷೇತ್ರಗಳಲ್ಲಿ ಒಂದು ಕಡೆ ಮಾಜಿ ನಿರ್ದೇಶಕಿ ಮತ್ತೊಂದು ಕಡೆ ಇನ್ನೂ ಹೆಸರು ಅಂತಿಮಗೊಂಡಿಲ್ಲ.
ಜೂನ್ 25ಕ್ಕೆ ಚುನಾವಣೆ
ಕೊಲಾರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಕ್ಕೆ (ಕೋಮುಲ್) ಚುನಾವಣೆ ನಿಗದಿಯಾಗಿದ್ದು ಜೂನ್ 25ರಂದು ಮತದಾನ ನಡೆಯಲಿದೆ. ಅಂದು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು ನಂತರ ಮತ ಎಣಿಕೆ ನಡೆದು ಫಲಿತಾಂಶ ಘೋಷಿಸಲಾಗುತ್ತದೆ. ಕೋಮುಲ್‌ನಲ್ಲಿ 982 ಅರ್ಹ ಮತದಾರರು ಇದ್ದಾರೆ. 13 ನಿರ್ದೇಶಕರ ಕ್ಷೇತ್ರ ನಿಗದಿಪಡಿಸಲಾಗಿದೆ. ಇದರಲ್ಲಿ ಇಬ್ಬರು ಮಹಿಳಾ ನಿರ್ದೇಶಕರ ಆಯ್ಕೆ ನಡೆಯಲಿದೆ. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಹಾಲು ಸಹಕಾರ ಸಂಘಗಳ ಒಕ್ಕೂಟವು (ಕೋಚಿಮುಲ್) ವಿಭಜನೆಯಾಗಿ ಚಿಕ್ಕಬಳ್ಳಾಪುರ ಒಕ್ಕೂಟವು ಪ್ರತ್ಯೇಕಗೊಂಡಿತು. ಆನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.